ಮೋದಿಯನ್ನು ಲೇವಡಿ ಮಾಡಿದ್ದಕ್ಕೆ ಕ್ಷಮೆ ಕೇಳಿದ ಕಾಂಗ್ರೆಸ್!

ಡಿಜಿಟಲ್ ಕನ್ನಡ ಟೀಮ್:

ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಲೇವಡಿ ಮಾಡುವ ಮೆಮ್ ಗಳ ಸಂಖ್ಯೆ ಕಡಿಮೆ ಏನಿಲ್ಲ. ಅದರಲ್ಲೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಮೇಲೆ ಲೆಕ್ಕವಿಲ್ಲದಷ್ಟು ಮೆಮ್ ಗಳು ಹರಿದಾಡಿವೆ. ಆದರೆ ಯುವ ಕಾಂಗ್ರೆಸ್ ಆನ್ ಲೈನ್ ಮ್ಯಾಗಜೀನ್ ‘ಯುವ ದೇಶ್’ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಣಕಿಸಿ ಮೆಮ್ ಪ್ರಕಟಿಸಿದ್ದಕ್ಕೆ  ಯುವ ಕಾಂಗ್ರೆಸ್ ಈಗ ಕ್ಷಮೆ ಕೋರಿದೆ.

ರಾಹುಲ್ ಗಾಂಧಿ ಹಾಗೂ ಮನಮೋಹನ್ ಸಿಂಗ್ ವಿರುದ್ಧ ಲೇವಡಿ ಮಾಡಿದಾಗ ಮಾತನಾಡದವರು ಮೋದಿ ಅವರ ಮೇಲೆ ಮೆಮ್ ಮಾಡಿದಾಗ ಏಕೆ ವಿರೋಧಿಸುತ್ತಿದ್ದಾರೆ ಎಂಬ ಪ್ರಶ್ನೆ ಹುಟ್ಟಿಕೊಳ್ಳೋದು ಸಹಜ. ಇದಕ್ಕೆ ಕಾರಣವೂ ಇದೆ. ಅದೇನೆಂದರೆ ಇತ್ತೀಚೆಗೆ ಗುಜರಾತ್ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾವುದೇ ಅಣಕವಾಗಲಿ, ಲೇವಡಿಯಾಗಲಿ ಮಾಡುವುದಿಲ್ಲ ಎಂದಿದ್ದರು. ಈ ವೇಳೆ ಅವರು ಹೇಳಿದಿಷ್ಟು….

‘ಬಿಜೆಪಿಯ ಸುಳ್ಳುಗಳಿಗೆ ನಾವು ಸತ್ಯದ ಮೂಲಕ ಉತ್ತರಿಸುತ್ತೇವೆಯೇ ಹೊರತು ಕೋಪದಿಂದಲ್ಲ. ನೀವೆಲ್ಲರೂ ಕಾಂಗ್ರೆಸ್ ಕಾರ್ಯಕರ್ತರು. ಪಕ್ಷದ ಘನತೆಯನ್ನು ಕಾಪಾಡಬೇಕು. ನಾವು ನಿಜಾಂಶವನ್ನು ಜನರ ಮುಂದಿಡೋಣ. ಟ್ರಾಲ್ ಗಳನ್ನು ಎದುರಿಸೋಣ, ಆದರೆ ನಮ್ಮ ವ್ಯಾಪ್ತಿಯನ್ನು ದಾಟಿ ಹೋಗೋದು ಬೇಡ. ಮೋದಿ ಈ ದೇಶದ ಪ್ರಧಾನಿ ಅವರನ್ನು ನಾವು ಗೌರವಿಸಬೇಕು. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಅವರನ್ನು ಹೇಗೆ ಟ್ರಾಲ್ ಮೂಲಕ ಟೀಕಿಸಲಾಗಿತ್ತು ಎಂಬುದನ್ನು ನೋಡಿದ್ದೇವೆ. ಆದರೆ ನಾವು ಮೋದಿ ಅವರಿಗೆ ಆ ರೀತಿ ಮಾಡುವುದಿಲ್ಲ.’

ಈಗ ಕಾಂಗ್ರೆಸ್ ಪಕ್ಷದ ಒಂದು ಭಾಗವೇ ಆಗಿರುವ ಯುವ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಅವರ ಇಂಗ್ಲೀಷ್ ಮಾತನಾಡುವ ಶೈಲಿಯನ್ನು ಅಣಕಿಸಿ ‘ಚಾಯ್ ವಾಲಾ’ ಎಂಬ ಮೆಮ್ ಅನ್ನು ಯುವ ದೇಶ್ ನಲ್ಲಿ ಪ್ರಕಟಿಸಲಾಗಿತ್ತು. ಹೀಗಾಗಿ ಮೋದಿ ಅವರನ್ನು ಗೌರವಿಸುತ್ತೇವೆ ಎಂದು ಹೇಳಿ ಈಗ ಅವರ ವಿರುದ್ಧ ಮೆಮ್ ಮಾಡಿರುವುದನ್ನು ಬಿಜೆಪಿ ನಾಯಕರು ಪ್ರಶ್ನಿಸಿದರು. ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಟ್ವಿಟರ್ ಮೂಲಕ ‘ಯುವ ಕಾಂಗ್ರೆಸ್ ಪ್ರಕಟಿಸಿರುವ ಈ ಒಂದು ಮೆಮ್ ಬಡವರ ವಿರೋಧಿಯಾಗಿದೆ. ಇದು ಭಾರತದ ಬಡವರ ಕುರಿತಾಗಿ ಕಾಂಗ್ರೆಸ್ ಪಕ್ಷದ ಮನೋಭಾವವನ್ನು ತೋರಿಸುತ್ತದೆ. ಇದನ್ನು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರು ಬೆಂಬಲಿಸುತ್ತಾರಾ?’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದರು.

ಈ ಎಲ್ಲ ಬೆಳವಣಿಗೆಯ ನಂತರ ಭಾರತೀಯ ಯುವ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ. ಇನ್ನು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಟ್ವಿಟರ್ ಮೂಲಕ ಈ ಬೆಳವಣಿಗೆಯನ್ನು ಖಂಡಿಸಿದ್ದು ಹೀಗೆ… ‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಈ ರೀತಿಯಾದಂತಹ ಮೆಮ್ ಗಳನ್ನು ತೀವ್ರವಾಗಿ ಖಂಡಿಸುತ್ತದೆ. ಸಿದ್ಧಾಂತ, ನಿಲುವು, ಅಭಿಪ್ರಾಯಗಳಲ್ಲಿ ನಾವು ಎದುರಾಳಿಗಳ ಜತೆ ವ್ಯತ್ಯಾಸ ಹೊಂದಿರಬಹುದು. ಆದರೆ ರಾಜಕೀಯ ಎದುರಾಳಿಗಳ ವಿರುದ್ಧ ಈ ರೀತಿಯ ಕೀಳು ಮಟ್ಟದ ದಾಳಿಯನ್ನು ಬೆಂಬಲಿಸುವುದಿಲ್ಲ. ಪ್ರಧಾನಮಂತ್ರಿ ಹುದ್ದೆಗೆ ಹಾಗೂ ರಾಜಕೀಯ ಎದುರಾಳಿಗಳಿಗೆ ಸೂಕ್ತ ಗೌರವ ನೀಡುವುದು ಕಾಂಗ್ರೆಸ್ ಸಂಸ್ಕೃತಿ.’

ಈ ಬೆಳವಣಿಗೆಯನ್ನು ಸಮರ್ಥಿಸಿಕೊಳ್ಳದೇ ನೇರವಾಗಿ ಖಂಡಿಸುವ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಘನತೆಯನ್ನು ಹೆಚ್ಚಿಸಿಕೊಂಡಿದ್ದು, ಬಿಜೆಪಿಯನ್ನು ಬೆಂಬಲಿಸುತ್ತಾ ಮನಮೋಹನ್ ಸಿಂಗ್ ಅವರನ್ನು ಅಣಕಿಸಿದ್ದ ಕೆಲವು ವರ್ಗದ ಬೆಂಬಲಿಗರಿಗೂ ಮಾದರಿಯಾಗಿದೆ.

Leave a Reply