ಭಾರತಕ್ಕಿಂತ ಮೊದಲು ಬ್ರಿಟನ್ ನಲ್ಲಿ ತೆರೆ ಕಾಣುವಳೇ ಪದ್ಮಾವತಿ?

ಡಿಜಿಟಲ್ ಕನ್ನಡ ಟೀಮ್:

ಪದ್ಮಾವತಿ ಚಿತ್ರದ ವಿವಾದ ಸದ್ಯ ದೇಶದ ಗಮನವನ್ನು ತನ್ನತ್ತ ಸೆಳೆದುಕೊಂಡಿದೆ. ಈ ಚಿತ್ರದಲ್ಲಿ ರಜಪೂತರ ರಾಣಿ ಪದ್ಮಾವತಿಯ ಇತಿಹಾಸವನ್ನು ತಿರುಚಲಾಗಿದ್ದು, ಇದರಿಂದ ರಜಪೂತರ ಭಾವನೆಗೆ ಧಕ್ಕೆಯಾಗಲಿದೆ ಎಂದು ಆರೋಪಿಸಿ, ಹರ್ಯಾಣ, ಪಂಜಾಬ್, ಮಧ್ಯಪ್ರದೇಶ ಹಾಗೂ ಕರ್ನಾಟಕ ಸೇರಿದಂತೆ ಹಲವೆಡೆಗಳಲ್ಲಿ ಪ್ರತಿಭಟನೆ ಹಾಗೂ ವಿರೋಧ ವ್ಯಕ್ತವಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಪದ್ಮಾವತಿ ಚಿತ್ರ ಭಾರತಕ್ಕಿಂತ ಮೊದಲು ಬ್ರಿಟನ್ನಿನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಾಗುತ್ತಿದೆ.

ಭಾರತೀಯ ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ಪ್ರಮಾಣ ಪತ್ರ ನೀಡಲು ನಿರಾಕರಿಸಿರುವ ಬೆನ್ನಲ್ಲೇ ಪದ್ಮಾವತಿ ಚಿತ್ರ ಬ್ರಿಟನ್ ಸೆನ್ಸಾರ್ ಮಂಡಳಿಯ ಗ್ರೀನ್ ಸಿಗ್ನಲ್ ಪಡೆದಿದೆ. ಇನ್ನು ಈ ಚಿತ್ರದಲ್ಲಿ ಯಾವುದೇ ದೃಶ್ಯಕ್ಕೆ ಕತ್ತರಿ ಹಾಕಲು ಬ್ರಿಟನ್ ಸೆನ್ಸಾರ್ ಮಂಡಳಿ ಸೂಚಿಸಿಲ್ಲ. ಹೀಗಾಗಿ ಇಡೀ ಚಿತ್ರ ಸಂಪೂರ್ಣವಾಗಿ ತೆರೆ ಕಾಣಲು ಸಜ್ಜಾಗಿದೆ. ಡಿಸೆಂಬರ್ 1ರಂದು ಬಿಡುಗಡೆಯಾಗಲು ಅಲ್ಲಿನ ಸೆನ್ಸಾರ್ ಮಂಡಳಿ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಭಾರತಕ್ಕಿಂತ ಮೊದಲು ಪದ್ಮಾವತಿ ಚಿತ್ರ ಬ್ರಿಟನ್ನಿನಲ್ಲಿ ತೆರೆಕಾಣುವುದು ಬಹುತೇಕ ಖಚಿತವಾಗಿದೆ.

ಈ ಚಿತ್ರದಲ್ಲಿ ರಾಣಿ ಪದ್ಮಾವತಿ (ದೀಪಿಕಾ ಪಡುಕೋಣೆ) ಹಾಗೂ ಅಲ್ಲಾವುದ್ದೀನ್ ಖಿಲ್ಜಿ (ರಣವೀರ್ ಸಿಂಗ್) ನಡುವಣ ಪ್ರಣಯದ ಕನಸಿನ ಪ್ರಸಂಗವಿದ್ದು, ಇದು ರಾಣಿ ಪದ್ಮಾವತಿ ಅವರಿಗೆ ಮಾಡುವ ಅಪಮಾನ ಎಂಬುದು ಕೆಲವು ಬಲಪಂಥೀಯ ಸಂಘಟನೆಯ ವಾದ. ಈ ಕುರಿತಾಗಿ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ‘ಈ ಚಿತ್ರದಲ್ಲಿ ಪದ್ಮಾವತಿ ಹಾಗೂ ಅಲ್ಲಾವುದ್ದೀನ್ ಖಿಲ್ಜಿ ನಡುವಣ ಪ್ರಣಯ ಪ್ರಸಂಗವಾಗಲಿ ಅಥವಾ ಗೀತೆಯಾಗಲಿ ಇಲ್ಲ’ ಎಂದು ಸ್ಪಷ್ಟನೆ ನೀಡಿದ್ದರೂ ಚಿತ್ರದ ಬಿಡುಗಡೆಗೆ ವಿರೋಧ ಮಾತ್ರ ಮುಕ್ತಾಯವಾಗಿಲ್ಲ.

ಒಟ್ಟಿನಲ್ಲಿ ಭಾರತದಲ್ಲಿ ತೀವ್ರ ವಿರೋಧ ಎದುರಿಸುತ್ತಿರೋ ಪದ್ಮಾವತಿಗೆ ಬ್ರಿಟನ್ನಿನಲ್ಲಿ ಸ್ವಾಗತ ಸಿಕ್ಕಿದ್ದು, ಚಿತ್ರ ಬಿಡುಗಡೆಯಾದ ಮೇಲೆ ಚಿತ್ರದಲ್ಲಿ ನಿಜವಾಗಿಯೂ ಇತಿಹಾಸವನ್ನು ತಿರುಚಲಾಗಿದೆಯೇ? ರಜಪೂತರ ಭಾವನೆಗೆ ಧಕ್ಕೆ ಮಾಡಲಾಗಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

ಬ್ರಿಟನ್ ಸೆನ್ಸಾರ್ ಮಂಡಳಿ ನೀಡಿರುವ ಪ್ರಮಾಣ ಪತ್ರದ ವಿವರ ಹೀಗಿದೆ…

Leave a Reply