ಹಫೀಸ್ ಸಯೀದ್ ಬಿಡುಗಡೆಗೆ ಅಮೆರಿಕ ಆಕ್ರೋಶ: ಪಾಕಿಸ್ತಾನದ ನ್ಯಾಟೊಯೇತ್ತರ ಒಪ್ಪಂದ ರದ್ದು ಮಾಡಲು ಒತ್ತಾಯ

ಡಿಜಿಟಲ್ ಕನ್ನಡ ಟೀಮ್:

2008ರ ಮುಂಬೈ ದಾಳಿಯಾಗಿ ಇನ್ನೇನು ಒಂಬತ್ತು ವರ್ಷ ಪೂರ್ಣಗೊಳ್ಳುತ್ತಿದೆ. ಈ ಕರಾಳ ಸಮಯದಲ್ಲಿ ದಾಳಿಯ ಮಾಸ್ಟರ್ ಮೈಂಡ್ ಹಾಗೂ ನಿಷೇಧಿತ ಜಮಾತ್ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ನನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಬೇಕು ಎಂದು ನಿನ್ನೆ ಪಾಕಿಸ್ತಾನದ ನ್ಯಾಯಾಲಯ ತೀರ್ಪು ಕೊಟ್ಟಿದೆ. ಇದರೊಂದಿಗೆ ಪಾಕಿಸ್ತಾನ ಉಗ್ರರಿಗೆ ಯಾವ ರೀತಿ ರಕ್ಷಣೆ ನೀಡುತ್ತಿದೆ ಎಂಬುದು ಮತ್ತೊಮ್ಮೆ ಜಗತ್ತಿಗೆ ಗೊತ್ತಾಗಿದೆ.

ಹಫೀದ್ ಸಯೀದ್ ನನ್ನು ವಿಶ್ವಸಂಸ್ಥೆ ಹಾಗೂ ಅಮೆರಿಕ ಜಾಗತಿಕ ಭಯೋತ್ಪಾದಕ ಎಂದು ತೀರ್ಮಾನಿಸಿದೆ. ಈತನ ಬಿಡುಗಡೆ ಕೇವಲ ಭಾರತಕ್ಕೆ ಮಾತ್ರ ಕೋಪ ತಂದಿಲ್ಲ. ಈ ನಿರ್ಧಾರ ಅಮೆರಿಕ ಕಣ್ಣನ್ನೂ ಕೆಂಪಾಗಿಸಿದೆ. ಈತನ ತಲೆಗೆ ಅಮೆರಿಕ 10 ಮಿಲಿಯನ್ ಡಾಲರ್ ಅನ್ನು ಘೋಷಿಸಿದೆ. ಪಾಕಿಸ್ತಾನದ ಈ ನಿರ್ಧಾರದ ವಿರುದ್ಧ ಅಮೆರಿಕ ಅಸಮಾಧಾನ ವ್ಯಕ್ತಪಡಿಸಿದ್ದು, ಪಾಕಿಸ್ತಾನ ತನ್ನ ಮಾತನ್ನು ಕೇಳುತ್ತಿಲ್ಲ. ಹೀಗಾಗಿ ಅದಕ್ಕೆ ನೀಡಿದ್ದ ಸ್ಥಾನಮಾನ ಹಾಗೂ ಒಪ್ಪಂದಗಳನ್ನು ರದ್ದು ಮಾಡಿಕೊಳ್ಳಬೇಕು ಎಂದು ಮಿಲಿಟರಿ ಅಧಿಕಾರಿಗಳು ತಜ್ಞರು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅಮೆರಿಕ ಮಿಲಿಟರಿ ತಜ್ಞ ಬ್ರೂಸ್ ರೈಡಲ್, ’26/11 ದಾಳಿ ನಡೆದು ಒಂಬತ್ತು ವರ್ಷಗಳು ಪೂರ್ಣವಾಗುತ್ತಿದೆ. ಈ ದಾಳಿಯ ರೂವಾರಿ ಇನ್ನು ನ್ಯಾಯದಿಂದ ನುಣುಚಿಕೊಳ್ಳುತ್ತಿದ್ದಾನೆ. ಹೀಗಾಗಿ ಎಮೆರಿಕ ಪಾಕಿಸ್ತಾನಕ್ಕೆ ನೀಡಿರುವ ನಾನ್ ನ್ಯಾಟೊ ಆ್ಯಲಿ (ನ್ಯಾಟೋಯೇತ್ತರ ಒಪ್ಪಂದ) ಯನ್ನು ರದ್ದುಗೊಳಿಸುವ ಸಮಯ ಬಂದಿದೆ’ ಎಂದು ಎಚ್ಚರಿಸಿದ್ದಾರೆ.

ಇನ್ನು ಅಮೆರಿಕದ ಮಾಜಿ ಅಧಿಕಾರಿ ಅಲಿಸ್ಸಾ ಆ್ಯರೆಸ್ ಈ ಬಗ್ಗೆ ನೀಡಿರುವ ಹೇಳಿಕೆ ಹೀಗಿದೆ… ‘ಈತನ ಬಿಡುಗಡೆಯನ್ನು ಒಂದು ಪದದಲ್ಲಿ ಹೇಳುವುದಾದರೆ ಇದು ಅತ್ಯಂತ ಆಘಾತಕಾರಿ ಬೆಳವಣಿಗೆ. ಬಿಡುಗಡೆಯಾಗಿರುವ ಹಫೀಸ್ ಸಯೀದ್ ಮುಂದಿನ ದಿನಗಳಲ್ಲಿ ಸಾವಿರಾರು ಜನರನ್ನು ಸೇರಿಸಿ ಸಮಾವೇಶ ನಡೆಸುವುದನ್ನು ನಾವು ಮಾಧ್ಯಮಗಳ ಮೂಲಕ ಓದಲಿದ್ದೇವೆ. ವಿಶ್ವಸಂಸ್ಥೆಯ ಭದ್ರತಾ ಸಮಿತಿ ಜಾಗತಿಕ ಭಯೋತ್ಪಾದಕ ಎಂದು ನಿಗದಿ ಮಾಡಿರುವ ಉಗ್ರನನ್ನು ಈ ರೀತಿಯಾಗಿ ಬಿಡುಗಡೆ ಮಾಡಿರುವ ಪಾಕಿಸ್ತಾನ, ತಾನು ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದ್ದೇನೆ ಎಂದು ಹೇಳಿಕೊಳ್ಳುವ ಯೋಗ್ಯತೆ ಉಳಿಸಿಕೊಂಡಿಲ್ಲ.’

ಭಯೋತ್ಪಾದಕರಿಗೆ ರಕ್ಷಣೆ ನೀಡುವುದನ್ನು ನಿಲ್ಲಿಸಿ, ತನ್ನ ನೆಲದಲ್ಲಿರುವ ಉಗ್ರರ ವಿರುದ್ಧ ಹೋರಾಡಬೇಕು ಎಂದು ಅಮೆರಿಕ ಅನೇಕ ವರ್ಷಗಳಿಂದ ಪಾಕಿಸ್ತಾನಕ್ಕೆ ಹೇಳುತ್ತಲೇ ಬಂದಿದೆ. ಆದರೆ ಪಾಕಿಸ್ತಾನ ಮಾತ್ರ ಈ ಮಾತನ್ನು ಕಿವಿ ಮೇಲೆ ಹಾಕಿಕೊಂಡಂತೆ ಕಾಣುತ್ತಿಲ್ಲ. ತನ್ನ ಮಾತನ್ನು ಪಾಲಿಸದ ಪಾಕಿಸ್ತಾನದ ವಿರುದ್ಧ ಆಕ್ರೋಶ ಗೊಂಡಿರುವ ಅಮೆರಿಕ ಪಾಕಿಸ್ತಾನಕ್ಕೆ ನೀಡಿರುವ ನಾನ್ ನ್ಯಾಟೋ ಆ್ಯಲಿ ಸ್ಥಾನವನ್ನು ರದ್ದು ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಅಮೆರಿಕ ಪಾಕಿಸ್ತಾನಕ್ಕೆ ನೀಡಿರುವ ನ್ಯಾಟೋಯೇತ್ತರ ಒಪ್ಪಂದ ರದ್ದಾದರೆ ಪಾಕಿಸ್ತಾನಕ್ಕೆ ಆಗುವ ತೊಂದರೆ ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕೆ ಉತ್ತರ ಹೀಗಿದೆ…

ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (ನ್ಯಾಟೊ)ಯಿಂದ ಹೊರತಾಗಿರುವ ದೇಶಗಳು ಅಮೆರಿಕದೊಂದಿಗೆ ಕೈ ಜೋಡಿಸಿ ಕಾರ್ಯನಿರ್ವಹಿಸಲು ಒಪ್ಪಂದ ಮಾಡಿಕೊಂಡರೆ ಅವರಿಗೆ ನ್ಯಾಟೋಯೇತ್ತರ ಸ್ಥಾನಮಾನ ನೀಡಲಾಗುವುದು. ಈ ಸ್ಥಾನಮಾನ ಪಡೆದ ರಾಷ್ಟ್ರಗಳು ಅಮೆರಿಕ ಜತೆಗಿನ ಮಿಲಿಟರಿ ಒಪ್ಪಂದ ಮಾಡಿಕೊಂಡು ಆ ಮೂಲಕ ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿ ಮಾಡುವ ಅರ್ಹತೆ ಪಡೆದುಕೊಳ್ಳುತ್ತವೆ. ಅಲ್ಲದೆ ಶಸ್ತ್ರಾಸ್ತ್ರ ಖರೀದಿಯಲ್ಲಿ ವಿನಾಯಿತಿ, ಮಿಲಿಟರಿ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಆರ್ಥಿಕ ನೆರವು ನೀಡಲಾಗುವುದು.

ಈ ಒಪ್ಪಂದದಿಂದ ಈಗಾಗಲೇ ಪಾಕಿಸ್ತಾನ ಅಮೆರಿಕದಿಂದ ಅನೇಕ ಪ್ರಯೋಜನಗಳನ್ನು ಪಡೆದುಕೊಂಡಿದೆ. ಪಾಕಿಸ್ತಾನ ಭಯೋತ್ಪಾದಕರ ವಿರುದ್ಧ ಹೋರಾಡಲಿ ಅಂತಲೇ ಅಮೆರಿಕ ಅನೇಕ ಶಸ್ತ್ರಾಸ್ತ್ರ ಪೂರೈಕೆ ಮಾಡಿದೆ. ಅಮೆರಿಕದ ಈ ಎಲ್ಲ ಪ್ರಯತ್ನಗಳಿಗೆ ಪ್ರತಿಯಾಗಿ ಪಾಕಿಸ್ತಾನದಿಂದ ಸಿಕ್ಕಿರುವ ಪ್ರತಿಕ್ರಿಯೆ ಶೂನ್ಯ. ಪಾಕಿಸ್ತಾನ ಭಯೋತ್ಪಾದನೆಯ ವಿರುದ್ಧ ಹೋರಾಡುವ ಬದಲಿಗೆ ಭಯೋತ್ಪಾದನೆಗೆ ಆಶ್ರಯ ನೀಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಬೀತಾಗುತ್ತಲೇ ಇದೆ. ಇದು ಸಹಜವಾಗಿಯೇ ಅಮೆರಿಕಕ್ಕೆ ಎದೆ ಕುದಿಯುವಂತೆ ಮಾಡಿದೆ. ಅಮೆರಿಕ ತಾನು ನೀಡಿರುವ ನ್ಯಾಟೋಯೇತ್ತರ ಸ್ಥಾನಮಾನ ರದ್ದು ಗೊಳಿಸಿದರೆ, ಪಾಕಿಸ್ತಾನ ಮುಂದಿನ ದಿನಗಳಲ್ಲಿ ಅಮೆರಿಕದಿಂದ ಯಾವುದೇ ರೀತಿಯ ಮಿಲಿಟರಿ ಪ್ರಯೋಜನ ಪಡೆದುಕೊಳ್ಳಲು ಅರ್ಹವಾಗಿರುವುದಿಲ್ಲ.

ಹಫೀದ್ ಸಯೀದ್ ನಂತಹ ಉಗ್ರನಿಗೆ ಸೂಕ್ತ ಶಿಕ್ಷೆ ನೀಡಲಾಗದ ಪಾಕಿಸ್ತಾನವನ್ನು ನಂಬಿಕೊಂಡು ಅಮೆರಿಕ ಇನ್ನೆಷ್ಟು ದಿನ ಉಗ್ರರ ನಿಗ್ರಹಕ್ಕೆ ಕಾಯಲು ಸಾಧ್ಯ? ಹೀಗಾಗಿ ಅಮೆರಿಕ ಮಿಲಿಟರಿ ತಜ್ಞರು ಪಾಕಿಸ್ತಾನದ ನ್ಯಾಟೋಯೇತ್ತರ ಸ್ಥಾನಮಾನವನ್ನು ರದ್ದುಗೊಳಿಸಬೇಕು ಎಂದು ಒತ್ತಡ ಹೇರುತ್ತಿದ್ದಾರೆ.

Leave a Reply