ಚಳಿಗಾಲದ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ, ಬೆಳಗಾವಿಯಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯಾಗಿದ್ದು ಕೇವಲ 5 ತಾಸು!

ಡಿಜಿಟಲ್ ಕನ್ನಡ ಟೀಮ್:

ವಿರೋಧ ಪಕ್ಷಗಳ ತೀವ್ರ ಕೋಲಾಹಲ, ಗದ್ದಲದ ಹಿನ್ನೆಲೆಯಲ್ಲಿ ಕಳೆದ 10 ದಿನಗಳಿಂದ ನಡೆದ ಈ ಬಾರಿಯ ಚಳಿಗಾಲದ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಈ ಬಾರಿ ಕಲಾಪದಲ್ಲಿ ಉತ್ತರ ಕರ್ನಾಟಕ ಜನರ ಸಮಸ್ಯೆ ಚರ್ಚೆಯಾಗುತ್ತದೆ, ಸೂಕ್ತ ಪರಹಾರ ಕಂಡುಕೊಳಅಳುವ ಸಾಧ್ಯತೆ ಇದೆ ಎಂದು ಕನಸುಕಟ್ಟಿದ್ದ ಜನರಿಗೆ ನಿರಾಸೆಯಾಗಿದೆ. ಕಾರಣ ಈ ಬಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಕುರಿತು ಚರ್ಚೆಯಾಗಿದ್ದು ಕೇವಲ 5 ತಾಸುಗಳು ಮಾತ್ರ.

ಈ ಅಧಿವೇಶನದಲ್ಲಿ ನೈಸ್ ಅಕ್ರಮ, ಇಂಧನ ಹಗರಣ, ಖಾಸಗಿ ಆಸ್ಪತ್ರೆಗಳ ನಿಯಂತ್ರಣ, ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ಸದನ ಸಮಿತಿಗಳ ವರದಿ ಸೇರಿದಂತೆ ಒಟ್ಟು 11 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡಲಾಯ್ತು. 10 ದಿನಗಳ ಅಧಿವೇಶನದಲ್ಲಿ ಸರಿಯಾಗಿ ಚರ್ಚೆಯಾಗಿದ್ದು 40 ಗಂಟೆ 45 ನಿಮಿಷಗಳು ಮಾತ್ರ. ಅಲ್ಲಿಗೆ ಪ್ರತಿನಿತ್ಯ 4 ಗಂಟೆ 4.5 ನಿಮಿಷ ಸರಾಸರಿಯಷ್ಟು ಚರ್ಚೆಯಾಗಿದೆ. ಇನ್ನು ಇದರಲ್ಲಿ ಉತ್ತರ ಕರ್ನಾಟಕದ ಜನರ ಸಮಸ್ಯೆ ಬಗ್ಗೆ ಚರ್ಚೆಯಾಗಿದ್ದು ಕೇವಲ 5 ಗಂಟೆ ಮಾತ್ರ.

ಅಧಿವೇಶನದ ಕಡೇಯ ದಿನವಾದ ಇಂದು ಕಲಾಪ ಆರಂಭವಾಗುತ್ತಿದ್ದಂತೆ ಸಚಿವ ವಿನಯ್ ಕುಲಕರ್ಣಿ ಮೇಲಿನ ಕೊಲೆ ಆರೋಪ ವಿಚಾರವನ್ನು ಬಿಜೆಪಿ ನಾಯಕರು ಮುಂದಿಟ್ಟರು. ಇದರಿಂದ ಸದನದಲ್ಲಿ ಗದ್ದಲ ಹೆಚ್ಚಾಗಿ ಅಂತಿಮ ದಿನ ಯಾವುದೇ ಪ್ರಮುಖ ವಿಷಯ ಚರ್ಚೆಯಾಗಲಿಲ್ಲ. ಪ್ರತಿಪಕ್ಷಗಳ ಗಲಾಟೆ ಹೆಚ್ಚಾದ ಪರಿಣಾಮ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಉತ್ತರ ಕರ್ನಾಟಕ ಜನರ ಅನೇಕ ವರ್ಷಗಳ ಹೋರಾಟವಾಗಿರುವ ಮಹದಾಯಿ ವಿಚಾರ ಚರ್ಚೆಗೆ ಬಂತಾದರೂ ಮುಂದಿನ ಒಂದು ತಿಂಗಳಲ್ಲಿ ಸಮಸ್ಯೆ ಬಗೆ ಹರಿಸುತ್ತೇವೆ ಎಂಬ ಬಿಜೆಪಿ ನಾಯಕರ ಭರವಸೆ ಉತ್ತರ ಕರ್ನಾಟಕ ಭಾಗದ ಜನರಿಗೆ ಈ ಅಧಿವೇಶನದಿಂದ ಸಿಕ್ಕ ಪ್ರಸಾದ.

ಇನ್ನು ಸಚಿವರು ಜನಪ್ರತಿನಿಧಿಗಳ ಗೈರು ಹೆಚ್ಚಾಗಿದ್ದು, ಅನೇಕ ವಿಚಾರಗಳ ಚರ್ಚೆ ಸಂದರ್ಭದಲ್ಲಿ ಅದಕ್ಕೆ ಸಂಬಂಧ ಪಟ್ಟ ಇಲಾಖೆಯ ಸಚಿವರು ಗೈರಾಗಿದ್ದು ಗಮನ ಸೆಳೆದಿತ್ತು.

Leave a Reply