ಪದ್ಮಾವತಿ ಚಿತ್ರ ವಿರೋಧಿಸಿ ವ್ಯಕ್ತಿ ಆತ್ಮಹತ್ಯೆ? ಪ್ರತಿಭಟನೆ ಹೆಸರಿನಲ್ಲಿ ಹದಗೆಡುತ್ತಿದೆ ಸಮಾಜದ ಸ್ವಾಸ್ಥ್ಯ

ಡಿಜಿಟಲ್ ಕನ್ನಡ ಟೀಮ್:

ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ‘ಪದ್ಮಾವತಿ’ ಚಿತ್ರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ತಾರಕಕ್ಕೇರಿದೆ. ರಾಜಸ್ಥಾನದ ಜೈಪುರದಿಂದ 20 ಕಿ.ಮೀ ದೂರದಲ್ಲಿರುವ ನಹರ್ಘರ್ ಕೋಟೆಯಲ್ಲಿ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದ್ದು, ಪಕ್ಕದಲ್ಲೇ ಇದ್ದ ಕಲ್ಲು ಬಂಡೆಗಳ ಮೇಲೆ ಪದ್ಮಾವತಿ ಚಿತ್ರದ ವಿರೋಧವಾಗಿ ಬರೆಯಲಾಗಿದೆ. ಇದರೊಂದಿಗೆ ಪದ್ಮಾವತಿ ಚಿತ್ರದ ವಿರುದ್ಧದ ಪ್ರತಿಭಟನೆ ಮಿತಿ ಮೀರುತ್ತಿರುವುದು ಸ್ಪಷ್ಟವಾಗಿದೆ.

ಇಲ್ಲಿ ಎರಡು ಬಂಡೆ ಕಲ್ಲಿನ ಮೇಲೆ ಎರಡು ಸಾಲುಗಳನ್ನು ಬರೆಯಲಾಗಿದ್ದು, ಅವು ಹೀಗಿವೆ… ಮೊದಲನೆಯದು ‘ಪದ್ಮಾವತಿಗೆ ನಮ್ಮ ವಿರೋಧ’ ಎರಡನೆಯದು (ನಾವು ಕೇವಲ ಪ್ರತಿಕೃತಿಗಳನ್ನು ಮಾತ್ರ ಸುಡುವುದಿಲ್ಲ, ನಿಜಯಾಗಿಯು ಕೊಲ್ಲುತ್ತೇವೆ)

ಈ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದು, ‘ತಕ್ಷಣಕ್ಕೆ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂದು ಹೇಳಲು ಸಾಧ್ಯವಿಲ್ಲ. ಮೃತಪಟ್ಟ ವ್ಯಕ್ತಿಯನ್ನು ಚೇತನ್ ಎಂದು ಗುರುತಿಸಲಾಗಿದ್ದು, ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿಯಲಾಗಿದೆ. ಈತನ ಜೇಬಿನಲ್ಲಿ ಆಧಾರ್ ಕಾರ್ಡ್ ಸಹ ಸಿಕ್ಕಿದೆ’ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಲ್ಲಿ ಪ್ರಮುಖವಾಗಿ ಗಮನಹರಿಸಬೇಕಿರೋದು, ಬಂಡೆಗಳ ಮೇಲಿನ ಬರಹಕ್ಕೂ ಈತನ ಸಾವಿಗೂ ಸಂಬಂಧ ಇದೆಯೇ ಎಂದು. ನಾವು ಕೇವಲ ಪ್ರತಿಮೆಯನ್ನು ಸುಡುವುದಿಲ್ಲ, ಬದಲಿಗೆ ಕೊಲ್ಲಲು ಸಿದ್ಧ ಎಂದು ಬರೆಯುವಷ್ಟು ಆಕ್ರೋಶ ಹೊಂದಿರುವವನು, ಧೈರ್ಯವಂತನು ಆತ್ಮಹತ್ಯೆಗೆ ಮಾಡಿಕೊಳ್ಳಲು ಸಾಧ್ಯವೇ? ಒಂದು ವೇಳೆ ಆತ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಗೆ ತಲುಪಿದ್ದೇ ಆಗಿದ್ದರೆ ಆತ ಬೇರೆಯವರನ್ನು ಕೊಲ್ಲುತ್ತೇನೆ ಎಂದು ಬರೆಯುವ ಅಗತ್ಯವಿತ್ತೆ? ಬರೆಯಲು ಸಾಧ್ಯವೇ? ಎಂಬ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ. ಈ ಎಲ್ಲ ಅಂಶಗಳಿಂದ ಸಹಜವಾಗಿಯೇ ಈ ಸಾವಿನ ಪ್ರಕರಣದ ಸುತ್ತ ಅನುಮಾನದ ಹುತ್ತ ಬೆಳೆಯುತ್ತಿದೆ.

ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಆದರೆ ಒಂದು ಚಿತ್ರದಲ್ಲಿ ಏನಿದೆ ಏನಿಲ್ಲ ಎಂದು ತಿಳಿಯುವ ಮುನ್ನವೇ ರಾಣಿ ಪದ್ಮಾವತಿಗೆ ಅಪಮಾನ ಮಾಡಲಾಗಿದೆ ಎಂದು ಕಲ್ಪಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಲಿ, ಕೊಲೆ ಮಾಡುವುದಾಗಲಿ ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಇದು ಸಮಾಜದ ಸ್ವಾಸ್ಥ್ಯ ಹದಗೆಡುತ್ತಿರೋದಕ್ಕೆ ಸಾಕ್ಷಿಯಾಗಿದೆ.

 

Leave a Reply