ವಿವಾದ ಹಾಗೂ ಟೀಕೆಗಳಿಂದಲೇ ಹೆಚ್ಚು ಸುದ್ದಿಯಾಗ್ತಿದೆ 83ನೇ ಕನ್ನಡ ಸಾಹಿತ್ಯ ಸಮ್ಮೇಳನ

ಡಿಜಿಟಲ್ ಕನ್ನಡ ಟೀಮ್:

ಮೈಸೂರಿನಲ್ಲಿ ನಿನ್ನೆಯಿಂದ 83ನೇ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗಿದೆ. ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ, ಟೀಕೆ, ವಿವಾದಗಳಿಂದಾಗೆ ಹೆಚ್ಚು ಸುದ್ದಿಯಾಗುತ್ತಿರೋದು ಬೇಸರದ ಸಂಗತಿ.

ಈ ಬಾರಿಯ ಸಮ್ಮೇಳನದಲ್ಲಿ ಸಾಹಿತ್ಯ, ಸಂಸೃತಿ ಬೆಳವಣಿಗೆಯ ಕುರಿತು ಚರ್ಚೆಯಾಗುವ ಬದಲಿಗೆ ರಾಜಕೀಯ ಟೀಕಾ ಪ್ರಹಾರಕ್ಕೆ ವೇದಿಕೆಯಾಗಿದೆ. ಕನ್ನಡಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಧ್ವಜದ ಬೇಡಿಕೆ, ಕನ್ನಡವನ್ನು ಕಲಿಕಾ ಮಾಧ್ಯಮವನ್ನಾಗಿ ಮಾಡಲು ಸಂವಿಧಾನ ತಿದ್ದುಪಡಿ ತರಬೇಕು ಎಂಬ ಕೂಗುಗಳು ಕೇಳಿ ಬಂದಿದ್ದರೂ, ಇವುಗಳಿಗಿಂತ ಹೆಚ್ಚಾಗಿ ರಾಜಕೀಯ ಟೀಕೆಗಳು ಹಾಗೂ ಆಯೋಜಕರ ನಿರ್ಲಕ್ಷತನಕ್ಕೆ ಸಂಬಂಧಿಸಿದಂತೆ ಅಪಸ್ವರಗಳು ಕೇಳಿ ಬರುತ್ತಿವೆ. ಸಮ್ಮೇಳನದಲ್ಲಿ ಕನ್ನಡ ಹಾಗೂ ಸಾಹಿತ್ಯಕ್ಕಿಂತ ಹೆಚ್ಚು ಚರ್ಚೆಯಾದ ಇತರೆ ಅಂಶಗಳು ಹೀಗಿವೆ…

ನಿನ್ನೆ ಉದ್ಘಾಟನಾ ಸಮಾರಂಭದ ಭಾಷಣದ ವೇಳೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕೆಗಳು ಕೇಳಿ ಬಂದವು. ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮ ಕುರಿತು ಟೀಕೆಗಳು ವ್ಯಕ್ತವಾದವು. ಕೇಂದ್ರ ಸರ್ಕಾರ ಸಾಂಸ್ಕೃತಿಕ ಸರ್ವಾಧಿಕಾರ ಸ್ಥಾಪನೆಗೆ ಹಾಗೂ ಜಾತ್ಯಾತೀತ ಶಕ್ತಿಗಲ ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪ ಮಾಡಲಾಯಿತು. ಕೇವಲ ಕೇಂದ್ರ ಸರ್ಕಾರದ ಮೇಲಷ್ಟೇ ಅಲ್ಲ, ಕೆಲವು ಬರಹಗಾರರು ಸಿದ್ದರಾಮಯ್ಯ ಸಂಪುಟದಲ್ಲಿರುವ ಕೆಲವು ಸಚಿವರ ವಿರುದ್ಧವೂ ದಾಳಿ ಮಾಡಿದರು.

ಇನ್ನು ಸಮ್ಮೇಳನದ ಅದ್ಯಕ್ಷರಾದ ಪ್ರೊ. ಚಂದ್ರಶೇಖರ ಪಾಟೀಲ್, ಪ್ರೋ ಬರಗೂರು ರಾಮಚಂದ್ರಪ್ಪ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಸಾಹಿತಿ ಎಂ.ಎಂ ಕಲಬುರ್ಗಿ ಅವರ ಹತ್ಯೆ ವಿಚಾರವನ್ನು ಪ್ರಸ್ತಾಪಿಸಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು. ಕೆಲವರಂತೂ ಚುನಾವಣೆ ಸಮೀಪಿಸುತ್ತಿರವ ಹೊತ್ತಲ್ಲಿ ಜಾತ್ಯಾತೀತ ಪಕ್ಷಗಳಿಗೆ ಬೆಂಬಲ ನೀಡಬೇಕು ಎಂಬ ಹೇಳಿಕೆ ನೀಡಿದ್ದು, ಇದೊಂದು ಸಾಹಿತ್ಯ ಸಮ್ಮೇಳನವೋ ಅಥವಾ ಚುನಾವಣಾ ಪ್ರಚಾರದ ಸಮಾವೇಶವೊ ಎಂದು ತಿಳಿಯದಂತಾಗಿದೆ.

ನಿನ್ನೆ ಸಮ್ಮೇಲನಾಧ್ಯಕ್ಷರಾದ ಚಂಪಾ ಅವರು ಮೋದಿ ವಿರುದ್ಧ ಟೀಕೆ ಮಾಡಿ, ಪರೋಕ್ಷವಾಗಿ ಕಾಂಗ್ರೆಸ್ ಗೆ ಬೆಂಬಲ ನೀಡಿರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದ್ದು, ಇಂದು ಚಂಪಾ ಅವರ ವಿರುದ್ಧ ಭಿತ್ತಿ ಪತ್ರಗಳನ್ನು ಹಂಚುವ ಮೂಲಕ ಅವರನ್ನು ಟೀಕಿಸಲಾಗುತ್ತಿದೆ.

ಇನ್ನು ಆಯೋಜಕರ ನಿರ್ಲಕ್ಷದಿಂದ ನಿನ್ನೆ ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಸರಿಯಾಗಿ ಬಸ್ ಸಂಪರ್ಕಿಲ್ಲದೆ ಪರದಾಟ ನಡೆಸುವಂತಾಯಿತು, ಇನ್ನು ಊಟಕ್ಕೆ ಸಂಬಂಧಿಸಿದಂತೆ ಗೊಂದಲ ಏರ್ಪಟ್ಟು ಕೆಲವರು ಪ್ರತಿಭಟನೆ ನಡೆಸಿದರು. ಕಳ್ಳರ ಕೈಚಳಕ ಕೂಡ ನಡೆದಿದ್ದು, ಸುಮಾರು 90 ಸಾವಿರ ನಗದು ಎಟಿಎಂ ಕಾರ್ಡುಗಳ ಕಳ್ಳತನವಾಗಿದೆ.

ಇನ್ನು ಮೈಸೂರಿನಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಕ್ಕೆ ರಾಜಮನೆತನಕ್ಕೆ ಆಹ್ವಾನ ನೀಡದಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಇನ್ನು ಜಿಲ್ಲಾ ಸಾಹಿತ್ಯ ಭವನದ ಕಟ್ಟಡ ಹಾಳಾಗಿದ್ದರೂ ಅದನ್ನು ಸರಿಪಡಿಸದಿರುವುದು ಸಮ್ಮೇಳನದ ಆಯೋಜಕರ ಬೇಜವಾಬ್ದಾರಿಯನ್ನು ಎತ್ತಿ ಹಿಡಿದಿದೆ. ಹೀಗೆ ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಪ್ರೋತ್ಸಾಹ ನೀಡಲು ನಡೆಸಲಾಗುವ ಈ ಸಮ್ಮೇಳನದಲ್ಲಿ ಇತರೆ ವಿಚಾರಗಳು ಹೆಚ್ಚಾಗಿ ಸದ್ದು ಮಾಡುತ್ತಿರುವುದು ದುರಾದೃಷ್ಟಕರ ಬೆಳವಣಿಗೆ.

Leave a Reply