ರಾಷ್ಟ್ರಗೀತೆಗೆ ಎದ್ದು ನಿಲ್ಲಲ್ಲ ಎನ್ನುವವರಿಗೆ ಭಾರತೀಯ ಮಹಿಳಾ ಶೂಟರ್ ಹೀನಾ ಸಿಧು ಕೊಟ್ರು ಖಡಕ್ ಸಂದೇಶ

ಡಿಜಿಟಲ್ ಕನ್ನಡ ಟೀಮ್:

ಸದ್ಯ ದೇಶದೆಲ್ಲೆಡೆ ರಾಷ್ಟ್ರಗೀತೆ ಹಾಡುವಾಗ ಎದ್ದು ನಿಲ್ಲುವ ಬಗ್ಗೆ ಪರ ವಿರೋಧದ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಅದರಲ್ಲೂ ಅಸಾವುದ್ದೀನ್ ಒವೈಸಿಯಂತಹ ಕೆಲವು ರಾಜಕೀಯ ನಾಯಕರು ರಾಷ್ಟ್ರಗೀತೆಗೆ ಎದ್ದು ನಿಲ್ಲುವುದು ಕಡ್ಡಾಯವಾಗಬಾರದು. ಅದು ವೈಯಕ್ತಿಕ ನಿರ್ಧಾರಕ್ಕೆ ಬಿಡಬೇಕು ಎಂದು ರಾಷ್ಟ್ರಗೀತೆ ವಿರೋಧಿ ಕೂಗು ಹಾಕುತ್ತಿದ್ದಾರೆ. ರಾಷ್ಟ್ರಗೀತೆ ವಿರುದ್ಧದ ಈ ಕೂಗಿಗೆ ಅರ್ಜುನ ಪ್ರಶಸ್ತಿ ವಿಜೇತ ಮಹಿಳಾ ಶೂಟರ್ ಹೀನಾ ಸಿಧು ತಕ್ಕ ಉತ್ತರವನ್ನೇ ಕೊಟ್ಟಿದ್ದಾರೆ.

ಟ್ವಿಟರ್ ನಲ್ಲಿ ಹೀನಾ ಸಿಧು ಈ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು ಅದು ಹೀಗಿದೆ…

‘ರಾಷ್ಟ್ರಗೀತೆಗೆ ಎದ್ದು ನಿಂತು ಗೌರವ ಸೂಚಿಸಬೇಕಿಲ್ಲ ಎನ್ನುವುದರ ಅರ್ಥ, ರಾಷ್ಟ್ರಗೀತೆ ಹಾಡುವಾಗ ನೀವು ನಿಮ್ಮ ಪಾಡಿಗೆ ಪಾಪ್ ಕಾರ್ನ್ ತಿನ್ನುತ್ತಾ, ಮಾತನಾಡುತ್ತಾ, ಹರಟುತ್ತಾ, ದೂರವಾಣಿ ಕರೆಯಲ್ಲಿ ಮುಳುಗಬಹುದು ಎಂದು. ಈ ಮಾತುಗಳು ಕೇಳಿ ಬರುತ್ತಿರುವ ಸಂದರ್ಭದಲ್ಲಿ ನಾನು ಕ್ರೀಡಾಪಟುವಾಗಿದ್ದೇನೆ ಎಂಬ ಹೆಮ್ಮೆಯಾಗುತ್ತಿದೆ. ಕಾರಣ, ರಾಷ್ಟ್ರಗೀತೆ ಮೊಳಗದೇ ನಾವು ಪದಕ ಸ್ವೀಕರಿಸುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.’

ಹೀನಾ ಸಿಧು ಅವರ ಈ ಮಾತಿನಲ್ಲಿ ರಾಷ್ಟ್ರಗೀತೆ ಹಾಗೂ ಅದಕ್ಕೆ ನಾವು ಗೌರವ ಸೂಚಿಸಬೇಕು ಎಂಬುದಷ್ಟೇ ಅಲ್ಲ. ರಾಷ್ಟ್ರಗೀತೆ ನಮ್ಮೆಲ್ಲರಿಗೂ ಹೆಮ್ಮೆಯಾಗಬೇಕು ಎಂಬ ಸಂದೇಶ ರವಾನಿಸಿದ್ದಾರೆ.

ಸಿಧು ಅವರ ಈ ಟ್ವೀಟ್ ಗೆ ಮತ್ತೊಬ್ಬ ಮಹಿಳಾ ಶೂಟರ್ ಪ್ರಗ್ಯಾ ರಾಥೋರ್ ಬೆಂಬಲ ಸೂಚಿಸಿದ್ದು, ‘ರಾಷ್ಟ್ರಗೀತೆ ಎಂದೆಂದಿಗೂ ಹೆಮ್ಮೆಯ ಭಾಗವಾಗಿರಬೇಕು. ಈಗಲೂ ರಾಷ್ಟ್ರಗೀತೆ ಕೇಳಿದರೆ ನನಗೆ ರೋಮಾಂಚನವಾಗುತ್ತದೆ. ಆದರೆ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡುವುದರಲ್ಲಿ ನನಗೆ ಯಾವುದೇ ಹೆಮ್ಮೆ ಕಾಣುತ್ತಿಲ್ಲ. ರಾಷ್ಟ್ರಗೀತೆಗೆ ಎದ್ದು ನಿಲ್ಲುವುದಿಲ್ಲ ಎಂಬ ಆಯ್ಕೆ ಇರಬಾರದು. ಆದರೆ ರಾಷ್ಟ್ರಗೀತೆಯನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಹಾಡಿ ಅದರ ಘನತೆಯನ್ನು ಉಳಿಸಿಕೊಳ್ಳಬೇಕು’ ಎಂದಿದ್ದಾರೆ.

ಪ್ರಾಗ್ಯಾ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಸಿಧು ಹೇಳಿದಿಷ್ಟು… ‘ನಿಜ, ಮೊದಲು ಸುಪ್ರೀಂ ಕೋರ್ಟ್ ದೇಶಭಕ್ತಿಯನ್ನು ಮನರಂಜನೆ ಜತೆ ಬೆರೆಸಿತು. ಆದರೆ ಈಗ ಕೆಲವರು ರಾಷ್ಟ್ರಗೀತೆಗೆ ಗೌರವ ಸೂಚಿಸುವುದು ವೈಯಕ್ತಿಕ ನಿರ್ಧಾರ ಎಂಬ ವಾದ ಮಂಡಿಸುತ್ತಿದ್ದಾರೆ. ರಾಷ್ಟ್ರಗೀತೆಗೆ ಗೌರವ ಸಲ್ಲಿಸುವುದು ವೈಯಕ್ತಿಕ ನಿರ್ಧಾರವಾದರೆ, ಅದನ್ನು ಚಿತ್ರಮಂದಿರಗಳಲ್ಲಿ ಹಾಡುವುದಾದರೂ ಏಕೆ? ಒಂದು ವೇಳೆ ರಾಷ್ಟ್ರಗೀತೆ ಹಾಡುವುದಾದರೆ ಎಲ್ಲರೂ ಎದ್ದು ನಿಲ್ಲಬೇಕು. ಇಲ್ಲವೆ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ನಿಲ್ಲಿಸಬೇಕು.’

ವಿಶ್ವ ಶೂಟಿಂಗ್ ಶ್ರೇಯಾಂಕದಲ್ಲಿ ಮೊದಲ ಸ್ಥಾನ ಪಡೆದ ಪ್ರಥಮ ಭಾರತೀಯ ಮಹಿಳಾ ಶೂಟರ್ ಆಗಿರುವ ಹೀನಾ ಸಿಧು ಅವರ ಮಾತುಗಳು ಒವೈಸಿ ಅವರ ತಲೆಗೆ ಹೋಗುತ್ತದೆಯೇ ಎಂಬುದನ್ನು ಕಾದುನೋಡಬೇಕು.

Leave a Reply