ನೈಸ್ ಹಗರಣ: ಖೇಣಿಗೆ ಸರ್ಕಾರದ ಸಹಕಾರ ಸಿಕ್ತಿದೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ

ಡಿಜಿಟಲ್ ಕನ್ನಡ ಟೀಮ್:

ನೈಸ್ ರಸ್ತೆಗೆ ಸಂಬಂಧಿಸಿದಂತೆ ಹಗರಣ ನಡೆದಿದೆ ಎಂಬ ಆರೋಪ ಸುಮಾರು ಒಂದು ದಶಕದಿಂದ ಕೇಳಿ ಬರುತ್ತಲೇ ಇದೆ. ಆದರೆ ಈ ಪ್ರಕರಣದಲ್ಲಿ ನೈಸ್ ಕಂಪನಿ ಮುಖ್ಯಸ್ಥ ಅಶೋಕ್ ಖೇಣಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವ ಸೂಚನೆ ಸದ್ಯಕ್ಕೆ ಕಾಣುತ್ತಿಲ್ಲ. ಹೀಗಾಗಿ ‘ಈ ವಿಚಾರದಲ್ಲಿ ಅಶೋಕ್ ಖೇಣಿಗೆ ಸರ್ಕಾರದ ಸಹಕಾರ ಸಿಕ್ಕಿದೆ’ ಎಂದು ಆರೋಪಿಸಿದ್ದಾರೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ.

ಕುಮಾರಸ್ವಾಮಿ ಅವರ ಈ ಗಂಭೀರ ಆರೋಪಕ್ಕೆ ಕಾರಣವೂ ಇದೆ. ಅದೇನೆಂದರೆ, ಈ ಹಗರಣದ ತನಿಖೆಗೆ ಸಂಬಂಧಿಸಿದಂತೆ ಸದನ ಸಮಿತಿ ತನ್ನ ವರದಿ ನೀಡಿ ಒಂದು ವರ್ಷ ಪೂರ್ಣಗೊಂಡಿದೆ. ಆದರೂ ವಿಧಾನಸಭೆಯಲ್ಲಿ ಈ ವಿಚಾರವಾಗಿ ಯಾವುದೇ ಚರ್ಚೆಯೇ ಆಗಿಲ್ಲ. ಇನ್ನು ಕ್ರಮ ಕೈಗೊಳ್ಳುವ ಮಾತೆಲ್ಲಿ ಎಂದು ಹೆಚ್ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ ತಮ್ಮ ವಾದ ಮಂಡಿಸಿದ್ದು ಹೀಗೆ…

‘ಸದ್ಯ ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಕನ್ನಡವನ್ನು ಉಳಿಸಿ ಬೆಳೆಸುತ್ತೇನೆ ಎಂದು ಮುಖ್ಯಮಂತ್ರಿಗಳು ಸರ್ಕಾರದಿಂದ ಸುಮಾರು ₹ 8- 10 ಕೋಟಿ ಹಣವನ್ನು ಈ ಸಮ್ಮೇಳನಕ್ಕೆ ನೀಡಿದ್ದಾರೆ. ನೈಸ್ ಕಂಪನಿಯು ಯೋಜನೆಯ ಹೆಸರಿನಲ್ಲಿ ಹೇಗೆ ಲೂಟಿ ಮಾಡಿದೆ ಹಾಗೂ ಅದರ ಅಕ್ರಮಗಳ ಕುರಿತಂತೆ ಸದನ ಸಮಿತಿಯು ತನ್ನ ವರದಿ ಸಲ್ಲಿಕೆ ಮಾಡಿ ಒಂದು ವರ್ಷವೇ ಪೂರೈಸಿದೆ. ಈ ವರದಿಯನ್ನು ಕನ್ನಡದಲ್ಲಿ ಬರೆಯಲಾಗಿದೆ ಎಂದು ಹೇಳಿರುವ ಆ ಕಂಪನಿಯ ಮುಖ್ಯಸ್ಥ, ತನಗೆ ಕನ್ನಡ ಬರುವುದಿಲ್ಲ ಹೀಗಾಗಿ ವರದಿಯನ್ನು ಇಂಗ್ಲೀಷ್ ಭಾಷೆಗೆ ತರ್ಜುಮೆ ಮಾಡಿ ಕಳುಹಿಸಿ. ಆನಂತರ ಅದಕ್ಕೆ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾನೆ. ಆತನ ಮಾತಿಗೆ ತಲೆಬಾಗಿರುವ ಸರ್ಕಾರ ಆ ವರದಿಯನ್ನು ಇಂಗ್ಲೀಷ್ ಗೆ ಭಾಷಾಂತರ ಮಾಡಲು ಅನೇಕ ತಿಂಗಳು ಕಾಲಾವಧಿ ತೆಗೆದುಕೊಂಡಿದೆ. ಕನ್ನಡ ಮೇಲೆ ಅಪಾರ ಪ್ರೀತಿ ಹೊಂದಿರುವಂತೆ ಬಿಂಬಿಸಿಕೊಳ್ಳುವ ಸಿದ್ದರಾಮಯ್ಯನವರ ಸರ್ಕಾರ ಕನ್ನಡ ಭಾಷೆಯನ್ನು ಆ ವ್ಯಕ್ತಿಗೆ ಅಡ ಇಟ್ಟಿದ್ದಾರೆ. ಕನ್ನಡದಲ್ಲಿರುವ ವರದಿಯನ್ನು ಇಂಗ್ಲಿಷ್ ಗೆ ತರ್ಜುಮೆ ಮಾಡಿ ಕಳುಹಿಸಿದರೆ ಉತ್ತರಿಸುತ್ತೇನೆ ಎನ್ನುವ ವ್ಯಕ್ತಿಗೆ ಮಣೆ ಹಾಕುವ ಸರ್ಕಾರ ನಿಜವಾಗಿಯೂ ಕನ್ನಡವನ್ನು ಉಳಿಸುತ್ತಾ? ಟೋಲ್ ಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ನಿಲ್ಲಿಸಲು ಯೋಗತ್ಯೆ ಇಲ್ಲದ ಎಂದ ಮೇಲೆ ಸರ್ಕಾರವೂ ಸಹ ಅವರೊಂದಿಗೆ ಶಾಮೀಲಾಗಿದೆ ಎಂದು ಅರ್ಥ.’

ಇನ್ನು ಈ ಬಾರಿಯ ಬೆಳಗಾವಿಯ ಅಧಿವೇಶನದಲ್ಲೂ ನೈಸ್ ಅಕ್ರಮದ ಕುರಿತಾದ ಚರ್ಚೆಗೆ ಸೂಕ್ತ ಅವಕಾಶ ಮಾಡಿಕೊಡಲೇ ಇಲ್ಲ. ಅಧಿವೇಶನದ ಅಂತಿಮ ದಿನ ವಿನಯ್ ಕುಲಕರ್ಣಿ ಅವರ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಗಲಾಟೆ ನಡೆಸಿ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಈ ಎಲ್ಲ ಬೆಳವಣಿಗೆಗಳು ಅಶೋಕ್ ಖೇಣಿ ಅವರ ಪರವಾಗಿ ಸರ್ಕಾರ ನಿಂತಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ.

Leave a Reply