ಟೀಂ ಇಂಡಿಯಾ ಕೋಚ್ ಆಗಲು ಇಚ್ಛಿಸಿದ್ರಂತೆ ಗಂಗೂಲಿ, ವೃತ್ತಿ ಜೀವನದ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ದಾದಾ!

ಡಿಜಿಟಲ್ ಕನ್ನಡ ಟೀಮ್:

ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಭಾರತ ಕ್ರಿಕೆಟ್ ತಂಡದ ಕೋಚ್ ಆಗುವ ಆಸೆ ಹೊಂದಿದ್ದರಂತೆ. ಆದರೆ 2015ರಲ್ಲಿ ಜಗಮೋಹನ್ ದಾಲ್ಮಿಯಾ ಅವರ ಮನವಿ ಮೇರೆಗೆ ಗಂಗೂಲಿ ಕ್ರಿಕೆಟ್ ಆಡಳಿತದತ್ತ ಗಮನ ಹರಿಸಿದ ಗಂಗೂಲಿ, ನಂತರ ದಾಲ್ಮಿಯಾ ಅವರ ನಿಧನದ ನಂತರ ಸಂಪೂರ್ಣವಾಗಿ ಬಂಗಾಳ ಕ್ರಿಕೆಟ್ ಸಂಸ್ಥೆಯ ಜವಾಬ್ದಾರಿ ಹೊತ್ತುಕೊಳ್ಳಬೇಕಾಯಿತು.

ತಮ್ಮ ಜೀವನದ ಹಾದಿಯನ್ನು ಮೆಲುಕು ಹಾಕಿರುವ ಸೌರವ್ ಗಂಗೂಲಿ ಈ ಕುರಿತಾಗಿ ಹೇಳಿದಿಷ್ಟು… ‘ನಿಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವೋ ಅದನ್ನು ಮಾಡಬೇಕು. ಅದರ ಫಲಿತಾಂಶದ ಬಗ್ಗೆ ಯೋಚಿಸಬಾರದು. ನಮ್ಮ ಜೀವನ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದು ನಮಗೆ ಗೊತ್ತಿರುವುದಿಲ್ಲ. 1999ರಲ್ಲಿ ನಾನು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ನಾನು ತಂಡದ ಉಪನಾಯಕನೂ ಆಗಿರಲಿಲ್ಲ. ಸಚಿನ್ ತಂಡೂಲ್ಕರ್ ತಂಡದ ನಾಯಕರಾಗಿದ್ದರು. ಆದರೆ ಮೂರು ಪಂದ್ಯಗಳ ನಂತರ ನಾನು ತಂಡದ ನಾಯಕನಾಗಿಬಿಟ್ಟೆ.

ನಾನು ಕ್ರಿಕೆಟ್ ಆಡಳಿತ ಮಂಡಳಿಗೆ ಸೇರಿಕೊಂಡ ಸಂದರ್ಭದಲ್ಲಿ ಟೀಂ ಇಂಡಿಯಾ ಕೋಚ್ ಆಗಬೇಕು ಎಂಬ ಆಸೆ ಇಟ್ಟುಕೊಂಡಿದ್ದೆ. ಆದರೆ ದಾಲ್ಮಿಯಾ ಅವರು ಕರೆದು ಆರು ತಿಂಗಳ ಕಾಲ ಕ್ರಿಕೆಟ್ ಆಡಳಿತ ಮಂಡಳಿ ಜವಾಬ್ದಾರಿ ಹೊತ್ತುಕೊಳ್ಳುವಂತೆ ಹೇಳಿದರು. ಅವರು ತೀರಿಕೊಳ್ಳುತ್ತಿದ್ದಂತೆ ನಾನು ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷನಾದೆ. ಕೆಲವರು ಒಂದು ರಾಜ್ಯದ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಲು 20 ವರ್ಷ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ನನಗೆ ಅನಿರೀಕ್ಷಿತವಾಗಿ ಈ ಹುದ್ದೆ ಸಿಕ್ಕಿತು.

2008ರಲ್ಲಿ ನಾನು ನಿವೃತ್ತಿ ಘೋಷಿಸುವ ಸಂದರ್ಭದಲ್ಲಿ ಸಚಿನ್ ನನ್ನ ಬಳಿಗೆ ಬಂದು ಈಗಲೇ ಈ ನಿರ್ಧಾರ ಏಕೆ ತೆಗೆದುಕೊಳ್ಳುತ್ತಿದ್ದೀಯಾ ಎಂದು ಕೇಳಿದರು. ನಾನು ಸಾಕಷ್ಟು ಸಮಯದಿಂದ ಕ್ರಿಕೆಟ್ ಆಡಿದ್ದೇನೆ. ನನಗೆ ಸಾಕಾಗಿದೆ ಎಂದು ಉತ್ತರಿಸಿದೆ. ಆ ಸಂದರ್ಭದಲ್ಲಿ ನನಗೆ ತಂಡದ ಕ್ರೀಡೆಗಿಂತ ವಾಯಕ್ತಿಕ ಕ್ರೀಡೆ ಉತ್ತಮ ಎನಿಸಿತು.

ವೈಯಕ್ತಿಕ ಕ್ರೀಡೆಯಲ್ಲಿ ನಿನ್ನ ಆಟಕ್ಕೆ ನೀನೇ ನಿಯಮ ಹಾಕಿಕೊಳ್ಳಬಹುದು. ಬೇರೆಯವರ ಮೇಲೆ ಅವಲಂಬಿತವಾಗುವ ಅಗತ್ಯವಿರುವುದಿಲ್ಲ. ಹೀಗಾಗಿ ಲಿಯಾಂಡರ್ ಪೇಸ್ ಉದಾಹರಣೆಯನ್ನು ಆಗಾಗ್ಗೆ ನೀಡುತ್ತಿರುತ್ತೇನೆ. ತಂಡದ ಕ್ರೀಡೆಯಲ್ಲಿ ಆಟಗಾರರನ್ನು ಕೈಬಿಡುವುದು ಮತ್ತೆ ಸೇರಿಸಿಕೊಳ್ಳುವುದು ಸಾಮಾನ್ಯ. ಡಿಗೊ ಮರಡೋನಾ, ರಾಹುಲ್ ದ್ರಾವಿಡ್ ರಂತಹ ಖ್ಯಾತ ಆಟಗಾರರು ಇನ್ನು ಕೆಲ ಕಾಲ ಆಡುವ ಸಾಮರ್ಥ್ಯ ಹೊಂದಿದ್ದರೂ ಬೇರೆಯವರಿಗಾಗಿ ತಮ್ಮ ಸ್ಥಾನ ಬಿಟ್ಟುಕೊಟ್ಟರು.

1995 ರಿಂದ 2006ರವರೆಗೆ ಭಾರತೀಯ ಕ್ರಿಕೆಟ್ ತಂಡದ ಪ್ರದರ್ಶನ ಏರುತ್ತಲೇ ಸಾಗಿತ್ತು. ನಾನು ಒಂದೇ ಒಂದು ಸರಣಿಯನ್ನು ತಪ್ಪಿಸಿಕೊಂಡಿರಲಿಲ್ಲ. ಈ ಅವಧಿಯಲ್ಲಿ 6 ವರ್ಷಗಳ ಕಾಲ ಟೀಂ ಇಂಡಿಯಾ ನಾಯಕನೂ ಆಗಿದ್ದೆ. ಆದರೆ 2006ರ ನಂತರ ನಾನು ತಂಡದ ನಾಯಕ ಸ್ಥಾನವಿರಲಿ, ತಂಡದಲ್ಲಿ ಆಟಗಾರನಾಗಿಯೂ ನನಗೆ ಸ್ಥಾನವಿರಲಿಲ್ಲ. ತಂಡದ ನಾಯಕ ಸ್ಥಾನದಿಂದ ಇಳಿದ ನಂತರ ಆಟಗಾರನಾಗಿ ಇರಲು ಸೂಕ್ತ ಅವಕಾಶ ನೀಡಲಿಲ್ಲ. ಈ ವಿಚಾರದಲ್ಲಿ ಟೀಂ ಇಂಡಿಯಾದ ಈಗಿನ ನಾಯಕ ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ನಡುವಣ ಸಂಬಂಧ ಎಲ್ಲರಿಗೂ ಮಾದರಿಯಾಗಿದೆ. ಧೋನಿ ತಂಡದ ನಾಯಕನಾಗಿ ಉಳಿದಿಲ್ಲ. ಆದರೆ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡ ನಂತರ ಕೊಹ್ಲಿ, ಧೋನಿಯನ್ನು ಬೆಂಬಲಿಸುವ ರೀತಿ ಅತ್ಯುತ್ತಮವಾಗಿದೆ.’

Leave a Reply