ಧರ್ಮ ಸಂಸತ್‌ ನ ‘ಅಸ್ಪೃಶ್ಯತೆ ನಿವಾರಣೆ’ ಬರೀ ಮಾತಾಗದಿರಲಿ!

ಹಿಂದೂ ಧರ್ಮದ ಎಲ್ಲ ಜಾತಿಯ ಜನರಿಗೆ ಎಲ್ಲ ದೇಗುಲಗಳು ಹಾಗೂ ಹಿಂದೂ ಧರ್ಮಿಯರ ಮನೆಗಳಲ್ಲಿ ಮುಕ್ತ ಪ್ರವೇಶ ಅವಕಾಶ ಕಲ್ಪಿಸುವುದು, ಜಾತಿಗೊಂದು ಸ್ಮಶಾನ ಬಳಕೆ ನಿಲ್ಲಿಸಿ ಇನ್ನು ಮುಂದೆ ಎಲ್ಲ ಊರುಗಳಲ್ಲಿ ಸಮಸ್ತ ಹಿಂದೂಗಳಿಗೆ ಒಂದೇ ಸ್ಮಶಾನ ವ್ಯವಸ್ಥೆ ಸೇರಿದಂತೆ ಅಸ್ಪೃಶ್ಯತೆ ನಿವಾರಣೆಗೆ ಹತ್ತು ನಿರ್ಣಯಗಳನ್ನು ಅಂಗೀಕರಿಸುವ ಮೂಲಕ ಉಡುಪಿ  ಧರ್ಮ ಸಂಸತ್ ಎಲ್ಲರ ಹುಬ್ಬೇರಿಸಿದೆ. ಎಲ್ಲ ಜನಾಂಗದವರನ್ನು ಅದರಲ್ಲೂ ವಿಶೇಷವಾಗಿ ಈ ದೇಶದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟಿರುವ ಪರಿಶಿಷ್ಟರನ್ನು ಹಿಂದೂ ಸಮಾಜದ ಮುಖ್ಯವಾಹಿನಿಗೆ ತರುವುದು ಇದರ ಹಿಂದಿರುವ ಉದ್ದೇಶ.

ನಿಜ, ಅಸ್ಪಶ್ಯತೆ ಎಂಬುದು ಹಿಂದೂ ಸಮಾಜದ ಬಹುದೊಡ್ಡ ದೌರ್ಬಲ್ಯ. ಮೇಲು-ಕೀಳು ಎಂಬ ಭಾವನೆ ತುಂಬಿರುವ ಜಾತೀಯತೆ ಭಾವ ಈ ದೇಶವನ್ನು ಸಾಗಬೇಕಾದ ವೇಗದಲ್ಲಿ ಹೋಗಲು ಬಿಟ್ಟಿಲ್ಲ. ಜಾತಿ ಕದನಗಳು, ವರ್ಗ ಸಂಘರ್ಷಗಳು ಹಿಂದೂ ಸಮಾಜದ ಉಸಿರುಗಟ್ಟಿಸಿವೆ. ಒಂದೊಂದೇ ಜಾತಿ, ಸಮುದಾಯ ಹಿಂದೂ ಧರ್ಮದಿಂದ ಪ್ರತ್ಯೇಕವಾಗಲು ತವಕಿಸುತ್ತಿವೆ. ತಮ್ಮದೇ ಆದ ಸ್ವತಂತ್ರ್ಯ ಧರ್ಮ ರಚನೆಗೆ ಹೋರಾಟದ ಹಾದಿ ಹಿಡಿದಿವೆ. ಒಂದೊಂದು ಜಾತಿ ಕಳಚಿಕೊಂಡಂತೆ ಹಿಂದೂ ಧರ್ಮದ ಬೇರು ಸಡಿಲಾಗುತ್ತಾ ಹೋಗುತ್ತದೆ. ಒಂದೊಂದೇ ಬೇರುಗಳು ಕಳಚುತ್ತಾ ಹೋದಂತೆಲ್ಲ ಬುಡ ಭದ್ರವಾಗಿರುವುದಿಲ್ಲ. ಈಗಾಗಲೇ ಹಿಂದೂ ಧರ್ಮದ ಮೇಲೆ ಅನ್ಯಧರ್ಮಗಳ ಸವಾರಿ ಎಗ್ಗಿಲ್ಲದೆ ನಡೆದಿದೆ. ಇನ್ನು ಬುಡ ಕಳಚಿಕೊಂಡ ಮೇಲೆ ಕೇಳಬೇಕೇ? ಈ ನೆಲದಲ್ಲಿ ತಮ್ಮ ನೆಲೆಯನ್ನು ಮತ್ತಷ್ಟು ಗಟ್ಟಿಮಾಡಿಕೊಳ್ಳುತ್ತವೆ. ಅವು ಗಟ್ಟಿಯಾಗುತ್ತಾ, ಈ ನೆಲದ ಮೂಲ ಸಮಾಜ ಟೊಳ್ಳಾಗುತ್ತಾ ಹೋದಂತೆ ಮುಂದೊಂದು ದಿನ ಹಿಂದೂ ಧರ್ಮಿಯರೇ ಅಲ್ಪಸಂಖ್ಯಾತರಾಗಿ ಮಾರ್ಪಡುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಇದುವೇ ಉಡುಪಿ ಧರ್ಮ ಸಂಸತ್ ನಿರ್ಣಯದ ಹಿಂದೆ ಅಡಗಿರುವ ನಿಜವಾದ ಆತಂಕ!

ಕರ್ನಾಟಕದಲ್ಲಿ ಪ್ರಬಲ ಸಮುದಾಯವಾದ ಲಿಂಗಾಯತರು ಈಗ ಸ್ವತಂತ್ರ ಧರ್ಮಕ್ಕಾಗಿ ಗಟ್ಟಿ ಹೋರಾಟ ನಡೆಸುತ್ತಿದ್ದಾರೆ. ಜತೆಗೆ ಈ ಹೋರಾಟ ಲಿಂಗಾಯತ ಮತ್ತು ವೀರಶೈವ ಎಂದು ಸಮುದಾಯವನ್ನು ವಿಭಜನೆ ಮಾಡಿಟ್ಟಿದೆ. 1989 ರಲ್ಲಿ ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಸ್ಥಾನದಿಂದ ಅಗೌರವವಾಗಿ ಕೆಳಗಿಳಿಸಿದ ತರುವಾಯ ಕಾಂಗ್ರೆಸ್ಸಿನಿಂದ ವಿಮುಖರಾಗಿದ್ದ ಲಿಂಗಾಯತರು ಅಂತಿಮವಾಗಿ ಬಿಜೆಪಿ ಮತ್ತು ಅದರ ನಾಯಕ ಯಡಿಯೂರಪ್ಪ ಅವರಲ್ಲಿ ಪರ್ಯಾಯ ರಾಜಕೀಯ ಶಕ್ತಿ ಕಂಡುಕೊಂಡಿದ್ದರು. ಆದರೆ ಇದೀಗ ಅಧಿಕಾರರೂಢ ಕಾಂಗ್ರೆಸ್ ಬೆಂಬಲಿತ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಹಿಂದುತ್ವ, ಹಿಂದೂವಾದ ಪ್ರತಿಪಾದಕ ಬಿಜೆಪಿಯನ್ನು ಪೇಚಿಗೆ ಸಿಕ್ಕಿಸಿದೆ. ಈ ಹೋರಾಟಕ್ಕೆ ಬಿಜೆಪಿ ರಾಜ್ಯ ಮುಖಂಡರು ಹಾಗೂ ರಾಷ್ಟ್ರೀಯ ಮುಖಂಡರ ಸಹಮತವಿಲ್ಲ. ಪೇಜಾವರ ಮಠದ ಕ್ಷೀ ವಿಶ್ವೇಶ ತೀರ್ಥರು ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ತಮ್ಮ ಬೆಂಬಲ ಇಲ್ಲ ಎಂದು ಬಹಿರಂಗವಾಗಿಯೇ ಹೇಳಿ, ಸಮುದಾಯ ಮುಖಂಡರ ಟೀಕೆಗೆ ಗುರಿಯಾಗಿದ್ದರು. ಇವತ್ತು ಲಿಂಗಾಯತರು ಪ್ರತ್ಯೇಕ ಧರ್ಮ ಬೇಕೇನ್ನುತ್ತಿದ್ದಾರೆ. ನಾಳೆ ದಲಿತರು, ಒಕ್ಕಲಿಗರು, ಕುರುಬರು, ನಾಯಕರು, ನೇಕಾರರು ಹೀಗೆ ಯಾರೂ ಬೇಕಾದರೂ ಕೇಳಬಹುದು. ಹೀಗೆ ಪ್ರತಿಯೊಬ್ಬರು ಪ್ರತ್ಯೇಕ ಧರ್ಮ ಕೇಳುತ್ತಾ ಹೋದರೆ ಇವರೆಲ್ಲರೂ ಭಾಗವಾಗಿರುವ ಹಿಂದೂ ಧರ್ಮ, ಹಿಂದೂ ಸಮಾಜದ ಸ್ಥಿತಿ ಏನಾಗಬಹುದು? ಎಂಬ ಭೀತಿಯೂ ಹಿಂದೂ ಧಾರ್ಮಿಕ ಮುಖಂಡರನ್ನು ಕಾಡಿದೆ. ಇನ್ನೊಂದೆಡೆ ‘ಅಹಿಂದ’ ಪ್ರತಿಪಾದನೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತರು, ಹಿಂದುಳಿದ ವರ್ಗದವರನ್ನು ಹಿಂದುತ್ವವಾದದಿಂದ ಪ್ರತ್ಯೇಕಿಸಿ, ಕಾಂಗ್ರೆಸ್‌ನತ್ತ ಸೆಳೆಯುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಸಂಪುಟ ಸಹೋದ್ಯೋಗಿಗಳಾದ ಎಂ.ಬಿ. ಪಾಟೀಲ್, ವಿನಯ್ ಕುಲಕರ್ಣಿ ನೇತೃತ್ವದ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಬೆಂಬಲಿಸುವ ಮೂಲಕ ಲಿಂಗಾಯತ ಮತಬ್ಯಾಂಕಿಗೆ ಕೈಹಾಕಿದ್ದಾರೆ. ಈ ಎಲ್ಲವೂ ಧರ್ಮ ಸಂಸತ್ ಅಸ್ಪಶ್ಯತೆ ನಿವಾರಣೆ ಕಾರ್ಯಸೂಚಿ ಕೈಗೆತ್ತಿಕೊಳ್ಳುವಂತೆ ಮಾಡಿದೆ. ಒಟ್ಟು ಜನಸಂಖ್ಯೆಯ ಶೇಕಡಾ 33 ರಷ್ಟಿರುವ ದಲಿತರನ್ನು ಹಿಂದೂ ಸಮಾಜದ ತೆಕ್ಕೆಗೆ ತೆಗೆದುಕೊಂಡರೆ ಎದುರಾಳಿಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸಬಹುದು ಎಂಬುದು ಅದರ ನಿಲುವು.

ಬದಲಾವಣೆ ಎಂಬುದು ನಿರಂತರ ಪ್ರಕ್ರಿಯೆ. ಹಾಗೆಂದು ಯಾವುದೋ ಕಾಲದಲ್ಲಿ ಆಗಬೇಕಿದ್ದ ಬದಲಾವಣೆ ಇನ್ಯಾವುದೋ ಕಾಲದಲ್ಲಾದರೆ ವಿಚಾರದ ಮಹತ್ವವವನ್ನು ಈ ಅಂತರ ನುಂಗಿ ಹಾಕಿರುತ್ತದೆ. ಒಂದಷ್ಟು ಅನಾಹುತಗಳಿಗೂ ಆಸ್ಪದ ಕೊಟ್ಟಿರುತ್ತದೆ. ಕಾಲಗರ್ಭ ಹುದುಗಿಸಿಕೊಂಡ ಸಮಸ್ಯೆ, ಸಂಕಷ್ಟಗಳನ್ನು ಪರಿತಾಪ, ಪಶ್ಚಾತ್ತಾಪಗಳಿಂದ ಸರಿಪಡಿಸಲು ಆಗುವುದಿಲ್ಲ. ಏಕೆಂದರೆ ಅಷ್ಟೊತ್ತಿಗೆ ಮತ್ತೊಂದು ಹೊಸ ಬದಲಾವಣೆಗೆ ಕಾಲ ತೆರೆದುಕೊಂಡಿರುತ್ತದೆ. ಹಿಂದಾಗಬೇಕಿದ್ದ ಬದಲಾವಣೆಯನ್ನು ಮುಂದಾಗಬೇಕಾದ ಬದಲಾವಣೆ ತುಕ್ಕು ಹಿಡಿಸಿರುತ್ತದೆ. ಹೀಗಾಗಿ ಬದಲಾವಣೆ ಎಂಬುದು ಸಕಾಲದಲ್ಲಿ ಆಗಬೇಕು. ಆಗಷ್ಟೇ ಸುಗಮ ಮಾರ್ಗದಲ್ಲಿ ಸಮಾಜ ಪರಿಭ್ರಮಣೆ ಸಾಧ್ಯ.

ಹಾಗೆಂದು ತಡವಾಯಿತು ಎಂಬ ಕಾರಣಕ್ಕೆ ಬದಲಾವಣೆ ಆಗಲೇಬಾರದು ಎಂದೇನೂ ಇಲ್ಲ. ಏನೂ ಆಗಲೇ ಇಲ್ಲ ಎಂಬುದಕ್ಕಿಂತ ವಿಳಂಬವಾದರೂ ಏನಾದರೂ ಆಗುತ್ತಿದೆಯಲ್ಲ ಎಂಬ ಭಾವ ಪರಿವರ್ತನೆ ಸೂತ್ರ ಹಿಡಿದವರ ಬಗ್ಗೆ ಒಂದಷ್ಟು ಸಮಾಧಾನ ತರುತ್ತದೆ. ವಿಳಂಬ ಎಂಬುದು ಬದಲಾವಣೆಯ ಗಹನತೆ, ಪ್ರಖರತೆ ಹಾಗೂ ಗುರಿ ಮುಟ್ಟುವ ಹಾದಿಯಲ್ಲಿ ಒಂದಷ್ಟು ಏರುಪೇರುಗಳನ್ನು ದಾಖಲಿಸಬಹುದು. ಆದರೂ ‘ಕೆಟ್ಟ ಮೇಲೆ ಬುದ್ಧಿ ಬಂತು, ಅಟ್ಟಿದ ಮೇಲೆ ಒಲೆ ಉರಿಯಿತು’ ಎಂಬ ಗಾದೆ ಮಾತಿನಂತೆ ಅವರ ವರ್ತನೆಯಲ್ಲಿನ ಪರಿವರ್ತನೆ ಅವರನ್ನು ಅನುಮಾನದಿಂದ ನೋಡುತ್ತಿದ್ದ ಕಣ್ಣುಗಳಿಗೂ ಕೊಂಚ ಮಟ್ಟಿನ ಸಮಾಧಾನ ತರಬಹುದು. ಈ ಸಮಾಧಾನ ತರುವ ಕಾಯಕಕ್ಕೆ ಧರ್ಮ ಸಂಸತ್‌ನಲ್ಲಿ ಪಾಲ್ಗೊಂಡಿರುವ ಹಿಂದೂ ಧಾರ್ಮಿಕ ಮುಖಂಡರು ಕೈ ಹಾಕಿದ್ದಾರೆ.

ಅವರ ಉದ್ದೇಶವೇನೋ ಉತ್ತಮವಾಗಿದೆ. ಆದರೆ ಅನುಷ್ಠಾನದ ವಿಚಾರ ಬಂದಾಗ ಮತ್ತದೇ ಅನುಮಾನಗಳು ಉದ್ದೇಶದ ಸುತ್ತ ತಿರುಗುತ್ತವೆ. ಇದು ಬೇರೆಯವರನ್ನು ಮಾತ್ರ ಕಾಡುತ್ತಿಲ್ಲ. ಹಿಂದೂ ಧರ್ಮದ ಪರಂಪರೆ ಮುನ್ನಡೆಸುವ ಸೂತ್ರ ಕೈಯಲ್ಲಿಡಿದ,  ನಿರ್ಣಯಗಳ ಅಂಗೀಕಾರಕ್ಕೆ ಸಾಕ್ಷಿಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಚಾಲಕ ಮೋಹನ ಭಾಗವತ್ ಅವರನ್ನೂ ಸಹ. ಇದು ಅವರು ಧರ್ಮ ಸಂಸತ್ ಉದ್ಘಾಟನಾ ಸಮಾರಂಭದ ದಿಕ್ಸೂಚಿ ಭಾಷಣದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳ ಅವಲೋಕನ ಮಾಡಿದಾಗ ಮನನವಾಗುತ್ತದೆ. ‘ಸಾಮಾಜಿಕ ಸಮಾನತೆ ಮತ್ತು ಸಾಮಾರಸ್ಯದ ಬಗ್ಗೆ ಬರೀ ಮಾತನಾಡಿದರೆ ಸಾಲದು. ಅದಕ್ಕೆ ಮೊದಲು ಅಸ್ಪಶ್ಯತೆ ನಿವಾರಣೆ ಕೆಲಸವನ್ನು ನಮ್ಮ ಮನೆಗಳಿಂದಲೇ ಆರಂಭಿಸಬೇಕು. ಮನಸ್ಸು, ವಚನ ಮತ್ತು ಕರ್ಮದಲ್ಲಿ ಅದನ್ನು ಜಾರಿಗೆ ತರಬೇಕು. ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವಂತಾಗಬೇಕು. ಅಸ್ಪಶ್ಯತೆ ಮತ್ತು ಸಾಮಾಜಿಕ ಅಸಮಾನತೆ ಮತಾಂತರಗಳಿಗೆ ಮೂಲ ಕಾರಣ. ಕೆಳಸ್ತರದವರಿಗೆ ಜತೆಯಲಿರುವ ಭರವಸೆ ಖಾತರಿಪಡಿಸಿದರೆ ಮಾತ್ರ ಅದನ್ನು ತಡೆಯಲು ಸಾಧ್ಯ’ ಎಂಬ ಮೋಹನ ಭಾಗವತ್ ಅವರ ಮಾತುಗಳಲ್ಲಿ ಮಾತು ಮತ್ತು ಕೃತಿ ನಡುವೆ ಇರುವ ಅಜಗಜಾಂತರದ ಅನಾವರಣವಾಗಿದೆ.

ಹೌದು, ಹನ್ನೆರಡು ವರ್ಷಗಳ ಹಿಂದೆ ಮಧ್ಯಪ್ರದೇಶದಲ್ಲಿ ನಡೆದ ಧರ್ಮ ಸಂಸತ್‌ನಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥರಾಗಿದ್ದ ಸುದರ್ಶನ್ ಅವರು ಇದೇ ತೆರನ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ದೇಶದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟಿರುವ ಪರಿಶಿಷ್ಟರನ್ನು ಹಿಂದೂ ಸಮಾಜದ ಮುಖ್ಯವಾಹಿನಿಗೆ ತರದಿದ್ದರೆ, ನೀವು ಹಿಂದೂ ಧರ್ಮದ ಅವಿಭಾಜ್ಯ ಅಂಗ ಎಂದು ಸಾರದಿದ್ದರೆ, ಮನವರಿಕೆ ಮಾಡಿಕೊಡದಿದ್ದರೆ ಇಲ್ಲಿ ಬಲಿಷ್ಠ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯವಿಲ್ಲ. ಅವರನ್ನು ಒಳಗೊಳ್ಳದೆ ಪ್ರಬಲ ಹಿಂದೂ ಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಈಗ ಹನ್ನೆರಡು ವರ್ಷಗಳ ನಂತರ ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸತ್‌ನಲ್ಲೂ ಮತ್ತದೇ ಮಾತು ಕೇಳಿ ಬರುತ್ತಿದೆ. ವ್ಯಕ್ತಿಗಳು ಬೇರೆ-ಬೇರೆ ಅಷ್ಟೇ. ಅವತ್ತು ಸುದರ್ಶನ್ ಮಾತಾಡಿದ್ದರು. ಇವತ್ತು ಮೋಹನ ಭಾಗವತ್ ಹೇಳುತ್ತಿದ್ದಾರೆ. ವಿಷಯ ಮಾತ್ರ ಒಂದೇ. ಸುದರ್ಶನ್ ಅವರು ಹೇಳಿದಾಗಲೇ ಅನುಷ್ಠಾನ ಪ್ರಕ್ರಿಯೆ ಚಾಲ್ತಿಗೆ ಬಂದಿದ್ದರೆ ಅವತ್ತು ಮೋಹನ ಭಾಗವತ್ ಅವರು ಪುನರುಚ್ಛರಿಸುವ ಪ್ರಮೇಯ ಬರುತ್ತಿರಲಿಲ್ಲ. ಅದಕ್ಕೇ ಹೇಳಿದ್ದು ಉದ್ದೇಶ ಮನಸ್ಸು ಮತ್ತು ಮಾತಿನಲ್ಲಿದ್ದರೆ ಸಾಲದು, ಅನುಷ್ಠಾನಕ್ಕೆ ಬರಬೇಕು. ಅನುಷ್ಠಾನಕ್ಕೆ ಅದಾಗದೇ ಬರುವುದಿಲ್ಲ, ಅದನ್ನು ತರಬೇಕು. ಇಲ್ಲದಿದ್ದರೆ ಇನ್ನು ಹನ್ನೆರಡು ವರ್ಷವಾದರೂ ಧರ್ಮ ಸಂಸತ್‌ನಲ್ಲಿ ಇದೇ ಮಾತು ಕೇಳಿ ಬರುತ್ತಿರುತ್ತದೆ!

ಇದಕ್ಕೆ ಇನ್ನೂ ಒಂದು ಉದಾಹರಣೆ ಕೊಡುವುದಾದರೆ ವಿಶ್ವ ಹಿಂದೂ ಪರಿಷತ್ ಉಡುಪಿಯಲ್ಲಿ ಈಗ ನಡೆಸುತ್ತಿರುವ ಧರ್ಮ ಸಂಸತ್ ಪ್ರಧಾನ ವೇದಿಕೆಗೆ ನಿವೃತ್ತಿ ಐಎಎಸ್ ಅಧಿಕಾರಿ ಆರ್. ಭರಣಯ್ಯ ಅವರ ಹೆಸರು ಇಡಲಾಗಿದೆ. ಪರಿಶಿಷ್ಟ ಸಮುದಾಯದ ಭರಣಯ್ಯ 1969 ರಲ್ಲಿ ಇದೇ ಉಡುಪಿಯಲ್ಲಿ ನಡೆದಿದ್ದ ವಿಹಿಂಪ ಪ್ರಾಂತೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದಲ್ಲಿ ಆಗ ನಡೆದಿದ್ದ ಅಸ್ಪಶ್ಯತೆ ನಿವಾರಣೆ ಕುರಿತ ಚರ್ಚೆಗೆ ಭರಣಯ್ಯ ಪ್ರಶಂಸೆ ವ್ಯಕ್ತಪಡಿಸಿದ್ದರು ಎಂದು ಈಗ ಅವರದೇ ಹೆಸರಿನ ವೇದಿಕೆ ಮುಂಭಾಗ ಇರಿಸಿರುವ ಫಲಕದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲಿಗೆ ಸಂಘ ಪರಿವಾರದ ಮುಖ್ಯ ಅಂಗಗಳಲ್ಲಿ ಒಂದಾಗಿರುವ ವಿಹಿಂಪ ಅಸ್ಪಶ್ಯತೆ ನಿವಾರಣೆ ಕುರಿತು ಚರ್ಚೆ, ಪರಿಹಾರೋಪಾಯ ಹುಡುಕಾಟ ಆರಂಭಿಸಿ 48 ವರ್ಷಗಳೇ ಸಂದವು. ಸರಿಸುಮಾರು ಅರ್ಧ ಶತಮಾನ. ಆದರೂ ಪರಿಹಾರ ಸಿಕ್ಕಿಲ್ಲ. ಅದೀಗಲೂ ಚರ್ಚೆಯ ಸ್ವರೂಪದಲ್ಲೇ ಇದೆ. ಇದಕ್ಕೆ ಕಾರಣ ಮಾತು ಮತ್ತು ಕೃತಿ ನಡುವಣ ವ್ಯತ್ಯಾಸ. ಅನುಷ್ಠಾನಕ್ಕೆ ತರುವ ಮನಸ್ಸು ಮತ್ತು ಬದ್ಧತೆಯ ಕೊರತೆ.

ಇಲ್ಲಿ ಇನ್ನೂ ಒಂದು ವಿಚಾರ. ಭರಣಯ್ಯ ಅವತ್ತು ಐಎಎಸ್ ಅಧಿಕಾರಿಯಾದುದು ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ವಿರಚಿತವಾದ ಭಾರತೀಯ ಸಂವಿಧಾನ ಕಲ್ಪಿಸಿಕೊಟ್ಟ  ಪ್ರಜಾಪ್ರಭುತ್ವ ವ್ಯವಸ್ಥೆ ಕಲ್ಪಿಸಿಕೊಟ್ಟ ಮೀಸಲು ಸೌಲಭ್ಯದಿಂದ. ಆದರೆ ಅಂಬೇಡ್ಕರ್ ಸ್ವಂತ ಶಕ್ತಿಯಿಂದ ‘ಭಾರತೀಯ ಸಂವಿಧಾನ ಶಿಲ್ಪಿ’ ಎಂದು ಕರೆಯಿಸಿಕೊಳ್ಳುವ ಎತ್ತರಕ್ಕೆ ಬೆಳೆದವರು. ಉಡುಪಿ ಧರ್ಮ ಸಂಸತ್ ನಡೆಯುತ್ತಿರುವ ಸಮಯಕ್ಕೆ ಸರಿಯಾಗಿ ಕಾಕತಾಳೀಯವೆಂಬಂತೆ ‘ಸಂವಿಧಾನ ದಿನ’ ಬಂದಿದೆ. ಸಂವಿಧಾನ ದಿನ ಎಂದರೆ ಅಂಬೇಡ್ಕರ್ ದಿನ. ಅಸ್ಪಶ್ಯತೆ ನಿವಾರಣೆ ಮೂಲೋದ್ದೇಶದ ಧರ್ಮ ಸಂಸತ್ ವೇದಿಕೆಗೆ ಅಂಬೇಡ್ಕರ್ ಹೆಸರಿಟ್ಟಿದ್ದರೆ, ಅವರ ಭಾವಚಿತ್ರ ಬಳಸಿಕೊಂಡಿದ್ದರೆ ಇನ್ನಷ್ಟು ಅರ್ಥಪೂರ್ಣವಾಗಿರುತ್ತಿತ್ತು. ಘನತೆ, ಗೌರವ ಮತ್ತಷ್ಟು ಹೆಚ್ಚುತ್ತಿತ್ತು. ಅದರರ್ಥ ಭರಣಯ್ಯ ಹೆಸರಿಡಬಾರದಿತ್ತು ಎಂದೇನೂ ಅಲ್ಲ. ಅಂಬೇಡ್ಕರ್ ಹೆಸರು ಸಕಾಲಿಕವಾಗಿರುತ್ತಿತ್ತು, ಧರ್ಮ ಸಂಸತ್ ಉದ್ದೇಶಕ್ಕೆ ಸಂಯೋಜನೆ ಆಗುತ್ತಿತ್ತು. ದೇಶದ ಎಲ್ಲೆಡೆ ಸಂವಿಧಾನ ದಿನ ಆಚರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನ ದಿನ ಆಚರಣೆ ನಿಮಿತ್ತದ ಕೇಂದ್ರ ಸರಕಾರೀ ಜಾಹೀರಾತುಗಳಲ್ಲಿ ಅಂಬೇಡ್ಕರ್ ಅವರ ದೊಡ್ಡ ಆಕಾರದ ಭಾವಚಿತ್ರ, ಅದಕ್ಕಿಂಥ ಚಿಕ್ಕದಾದ ತಮ್ಮ ಚಿತ್ರ ಬಳಸಿ ದೊಡ್ಡತನ ಮೆರೆದ್ದಾರೆ. ಆ ದೊಡ್ಡತನ ಧರ್ಮ ಸಂಸತ್‌ಗೂ ಮಾದರಿ ಆಗಬಹುದಿತ್ತು!

ಹೋಗಲಿ ಈ ವಿಚಾರ ಪಕ್ಕಕ್ಕಿಡೋಣ. ಧರ್ಮ ಸಂಸತ್ ನೇತೃತ್ವ ವಹಿಸಿರುವ ವಿಹಿಂಪ ಸ್ಥಾಪಕರಲ್ಲಿ ಒಬ್ಬರು, ಈಗಲೂ ಕೇಂದ್ರೀಯ ಮಾರ್ಗದರ್ಶನ ಮಂಡಳಿ ಸದಸ್ಯರೂ ಆಗಿರುವ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳು ಸಂವಿಧಾನ ರಚನೆ ಕುರಿತಂತೆ ಅನಗತ್ಯ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಅಗತ್ಯವಿರಲಿಲ್ಲ. ಸಂವಿಧಾನದಲ್ಲಿ ಒಂದಷ್ಟು ಮಾರ್ಪಾಡುಗಳಾಗಬೇಕಿದೆ. ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ. ಸಂವಿಧಾನ ರಚನೆಯ ಸಮಿತಿಯಲ್ಲಿ ಅವರೂ ಒಬ್ಬರಾಗಿದ್ದರು, ಅಧ್ಯಕ್ಷ ಸ್ಥಾನ ವಹಿಸಿದ್ದರು ಎಂದು ಶ್ರೀಗಳು ಹೇಳಿರುವುದು ದಲಿತ ಸಂಘಟನೆಗಳ ಪ್ರತಿಭಟನೆಗೆ ಕಾರಣವಾಗಿದೆ. ಅಸ್ಪಶ್ಯತೆ ನಿವಾರಣೆ, ದಲಿತರನ್ನು ಹಿಂದೂ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಉದ್ದೇಶದ ಧರ್ಮ ಸಂಸತ್ ಸಂದರ್ಭದಲ್ಲೇ ಶ್ರೀಗಳಿಗೆ ಇದೆಲ್ಲ ಯಾಕೆ ಬೇಕಿತ್ತು? ಒಂದೆಡೆ ದಲಿತರನ್ನು ಎಲ್ಲೆಡೆ ಒಳಗೊಳ್ಳುವ ಮಾತಾಡುತ್ತಾ, ಅವರ ಊರು-ಕೇರಿಗಳಿಗೆ ಭೇಟಿ ನೀಡಿ, ಅವರಲ್ಲಿ ವಿಶ್ವಾಸ

ತುಂಬಲು ಯತ್ನಿಸುತ್ತಿರುವ ಶ್ರೀಗಳು ಇನ್ನೊಂದೆಡೆ

ದಲಿತರ ಆರಾಧ್ಯದೈವ ಅಂಬೇಡ್ಕರ್ ಅವರ ಹೆಸರನ್ನು ಪ್ರಸ್ತಾಪ ಮಾಡುವ ಅಗತ್ಯವಾದರೂ ಏನಿತ್ತು?ಈ ಹೇಳಿಕೆ ಕೊಟ್ಟಿದ್ದರಿಂದ ಸಾಧಿಸಿದ್ದು ಏನೂ ಇಲ್ಲ. ಈ ಹೇಳಿಕೆ ಕೊಡದಿದ್ದರೆ ಕಳೆದುಕೊಳ್ಳುತ್ತಿದ್ದುದೂ ಏನೂ ಇಲ್ಲ. ಈಗ ದಕ್ಕಿದ್ದು ಬರೀ ವಿವಾದ ಮಾತ್ರ! ಅಂದರೆ ಯಾವುದೇ ಒಂದು ಉದ್ದೇಶ, ಕಾರ್ಯಸೂಚಿ ಇಟ್ಟುಕೊಂಡಾಗ ಅದರ ಅನುಷ್ಠಾನದಲ್ಲಿ ಪ್ರಾಮಾಣಿಕತೆ, ಕಾರ್ಯತತ್ಪರತೆ ಕೂಡ ಪ್ರತಿಬಿಂಬಿತವಾಗಬೇಕು. ಅಂದುಕೊಳ್ಳುವುದು ಒಂದು, ಆಚರಣೆಯಲ್ಲಿ ಮತ್ತೊಂದು ಎಂದಾಗಬಾರದು. ಧರ್ಮ ಸಂಸತ್ ಅನ್ವೇಷಿಸಿರುವಂತೆ ಅದು ಪ್ರತಿಪಾದಿಸುವ ಹಿಂದೂ ಧರ್ಮದ ಬುಡಕ್ಕೆ ಆಂತರಿಕ ಮತ್ತು ಬಾಹ್ಯ ಶಕ್ತಿಗಳಿಂದ ಬೆದರಿಕೆ ಎದುರಾಗಿರುವಾಗ ಪ್ರತಿ ನಡೆಯಲ್ಲೂ ಸಂಯಮ, ವಿಚಾರ ತತ್ಪರತೆ ಮತ್ತು ನಿಖರತೆ ಬಹುಮುಖ್ಯವಾಗುತ್ತದೆ. ಇಲ್ಲದಿದ್ದರೆ ಕಾರ್ಯಸೂಚಿ ಕಾಲದ ಜತೆ ಹೀಗೇ ಲೀನವಾಗುತ್ತಾ ಹೋಗುತ್ತಿರುತ್ತದೆ.

ಲಗೋರಿ: ಮಾತು ಬರುತ್ತದೆ, ಹೋಗುತ್ತದೆ. ಸಾಮಾಜಿಕ ಸಾಮರಸ್ಯ ಸ್ಥಾಪನೆ ಮಾತು ಕೂಡ!

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply