ಜಾಗತಿಕ ಉಗ್ರರ ಪಟ್ಟಿಯಿಂದ ಹೆಸರು ಕೈಬಿಡಲು ವಿಶ್ವಸಂಸ್ಥೆಗೆ ಉಗ್ರ ಹಫೀಜ್ ಅರ್ಜಿ, ಅವಕಾಶ ನೀಡುತ್ತಾ ಭಾರತ-ಅಮೆರಿಕ?

ಡಿಜಿಟಲ್ ಕನ್ನಡ ಟೀಮ್:

ಮುಂಬೈ ದಾಳಿ ರೂವಾರಿ ಹಾಗೂ ಜಮಾತ್ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಕಳೆದ ಬುಧವಾರವಷ್ಟೇ ಗೃಹ ಬಂಧನದಿಂದ ಬಿಡುಗಡೆಯಾಗಿ ಸ್ವತಂತ್ರನಾಗಿದ್ದಾನೆ. ಈಗ ಜಾಗತಿಕ ಉಗ್ರರ ಪಟ್ಟಿಯಿಂದ ತನ್ನ ಹೆಸರನ್ನು ಕೈಬಿಡುವಂತೆ ವಿಶ್ವಸಂಸ್ಥೆಗೆ ಅರ್ಜಿ ಹಾಕಿದ್ದು, ತಾನೊಬ್ಬ ಸಾಚ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾನೆ.

ಸದ್ಯ ಪಾಕಿಸ್ತಾನ ರಾಜಕೀಯಕ್ಕೆ ಪ್ರವೇಶಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿರುವ ಹಫೀಜ್ ಸಯೀದ್, ಮಿಲ್ಲಿ ಮುಸ್ಲೀಂ ಲೀಗ್ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾನೆ. ಆದರೆ ವಿಶ್ವಸಂಸ್ಥೆಯಲ್ಲಿ ಜಾಗತಿಕ ಭಯೋತ್ಪಾದಕರ ಪಟ್ಟಿಯಲ್ಲಿ ಈತನ ಹೆಸರಿರುವುದರಿಂದ ಅನೇಕ ದೇಶಗಳು ಈತನ ರಾಜಕೀಯ ಪ್ರವೇಶವನ್ನು ಖಂಡಿಸುತ್ತಿವೆ. ಜತಗೆ ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡವನ್ನೂ ಹೇರುತ್ತಿವೆ. ಪರಿಣಾಮ ಪಾಕಿಸ್ತಾನ ಸರ್ಕಾರ ಈತನ ಮಿಲ್ಲಿ ಮುಸ್ಲಿಂ ಲೀಗ್ ಸಂಘಟನೆಯನ್ನು ರಾಜಕೀಯ ಪಕ್ಷವನ್ನಾಗಿ ನೋಂದಾಯಿಸಿಕೊಳ್ಳಲು ಹಿಂಜರಿಯುತ್ತಿದೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ವಿಶ್ವಸಂಸ್ಥೆಯಲ್ಲಿ ಜಾಗತಿಕ ಭಯೋತ್ಪಾದಕರ ಪಟ್ಟಿಯಿಂದ ಹೊರಬರಬೇಕಾದ ಸವಾಲು ಹಫೀಜ್ ಸಯೀದ್ ಮುಂದಿದೆ. ಇದೇ ಕಾರಣಕ್ಕಾಗಿ ಹಫೀಜ್ ಸಯೀದ್ ಲಾಹೋರ್ ಮೂಲದ ಮಿರ್ಜಾ ಅಂಡ್ ಮಿರ್ಜಾ ಕಾನೂನು ಕಂಪನಿಯ ಮೂಲಕ ವಿಶ್ವಸಂಸ್ಥೆಗೆ ತನ್ನ ಅರ್ಜಿ ಸಲ್ಲಿಸಿದ್ದಾನೆ.

2008ರ ನವೆಂಬರ್ 26ರಂದು ಮುಂಬೈ ದಾಳಿ ನಂತರ ವಿಶ್ವಸಂಸ್ಥೆ ಹಫೀಜ್ ಸಯೀದ್ ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಿತು. ಇದಕ್ಕೂ ಮುಂಚಿತವಾಗಿ ಜಾಗತಿಕ ಭಯೋತ್ಪಾದಕ ಸಂಘಟನೆಯಾಗಿರುವ ಲಷ್ಕರ್ ಇ ತೊಯ್ಬಾ ಹಾಗೂ ಅಲ್ ಖೈದಾ ಜತೆ ಸಂಪರ್ಕ ಹೊಂದಿದ್ದಾನೆ ಎಂಬ ಕಾರಣಕ್ಕೆ ಅಮೆರಿಕ 2008ರ ಮೇ ತಿಂಗಳಲ್ಲಿ ಹಫೀದ್ ಸಯೀದ್ ನನ್ನು ಜಾಗತಿಕ ಭಯೋತ್ಪಾಕದ ಎಂದು ಅಮೆರಿಕ ಘೋಷಣೆ ಮಾಡಿತ್ತು. ಉಗ್ರ ಹಫೀಜ್ ಸಯೀದ್ ಬಿಡುಗಡೆಯನ್ನು ಕೇವಲ ಭಾರತ ಮಾತ್ರವಲ್ಲದೇ ಅಮೆರಿಕ ಕೂಡ ತೀವ್ರವಾಗಿ ಖಂಡಿಸಿದೆ. ಹೀಗಿರುವಾಗ ಹಫೀಜ್ ಸಯೀದ್ ನ ಈ ಅರ್ಜಿ ಸಾಕಷ್ಟು ಕುತೂಹಲ ಮೂಡಿಸಿದೆ. ಅಲ್ಲದೆ ಹಫೀದ್ ಸಯೀದ್ ತನ್ನ ಹೆಸರನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಯಿಂದ ತೆಗೆಯುವಲ್ಲಿ ಯಶಸ್ವಿಯಾಗುವನೆ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಹಫೀದ್ ಸಯೀದ್ ನ ಈ ಅರ್ಜಿ ವಿಶ್ವಸಂಸ್ಥೆಯ ಸಮಿತಿಗೆ ತಲುಪುವ ಪ್ರಕ್ರಿಯೆ ಪೂರ್ಣಗೊಳ್ಳಲು ಆರು ತಿಂಗಳ ಕಾಲಾವಕಾಶ ಬೇಕಿದೆ. ಈ ಕುರಿತು ಯಾವುದೇ ಅರ್ಜಿ ಬಂದರೂ ಅದು ವಿಶ್ವಸಂಸ್ಥೆಯ ಸಮಿತಿಯ ಮುಂದೆ ಹೋಗುತ್ತದೆ. ಆ ಸಮಿತಿ ಅರ್ಜಿಯನ್ನು ಪುರಸ್ಕರಿಸಿದರೆ, ಕಾರ್ಯದರ್ಶಿ ಇಲಾಖೆ ಆ ಅರ್ಜಿದಾರನ ರಾಷ್ಟ್ರಕ್ಕೆ ಸೂಚನೆ ನೀಡಲಿದೆ. ನಂತರ ಈ ಪ್ರಕ್ರಿಯೆ ಆರಂಭವಾದ ಮೇಲೆ ಅರ್ಜಿದಾರನ ಹೆಸರನ್ನು ನಿಗದಿತ ಅವಧಿಗಳ ಕಾಲ ಜಾಗತಿಕ ಭಯೋತ್ಪಾದಕರ ಪಟ್ಟಿಯಿಂದ ತೆಗೆದು ಹಾಕಲಾಗುವುದು. ಆದರೆ ಈ ಪ್ರಕ್ರಿಯೆಗೆ ಅಲ್ ಖೈದಾ ನಿಷೇಧ ಸಮಿತಿಯ 15 ಸದಸ್ಯ ರಾಷ್ಟ್ರಗಳು ಅಥವಾ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಐದು ಶಾಶ್ವತ ಸದಸ್ಯ ರಾಷ್ಟ್ರಗಳಿಂದ ಯಾವುದೇ ವಿರೋಧ ವ್ಯಕ್ತವಾಗುವಂತಿಲ್ಲ. ಹೀಗಾಗಿ ಹಫೀಜ್ ಸಯೀದ್ ಅರ್ಜಿಯ ವಿಚಾರದಲ್ಲಿ ಅಮೆರಿಕ ಪ್ರಮುಖ ಪಾತ್ರ ವಹಿಸಲಿದೆ. ಈಗಾಗಲೇ ಅಮೆರಿಕ ಹಫೀಜ್ ಸಯೀದ್ ಬಿಡುಗಡೆಗೆ ಕೆಂಡಾಮಂಡಲವಾಗಿದೆ. ಇನ್ನು ವಿಶ್ವಸಂಸ್ಥೆ ಭದ್ರತಾ ಸಮಿತಿಯ ಶಾಶ್ವತ ಸದಸ್ಯ ರಾಷ್ಟ್ರಗಳಲ್ಲಿ ಒಂದಾಗಿರುವ ಅಮೆರಿಕ ಜಾಗತಿಕ ಭಯೋತ್ಪಾದಕರ ಪಟ್ಟಿಯಿಂದ ಹಫೀಜ್ ಹೆಸರು ತೆಗೆದುಹಾಕಲು ಒಪ್ಪಿಗೆ ನೀಡಲಿದೆಯೇ ಎಂಬುದೇ ದೊಡ್ಡ ಪ್ರಶ್ನೆ. ಇನ್ನು ಹಫೀಜ್ ಸಯೀದ್ ಬಿಡುಗಡೆಯಿಂದ ಕುದಿಯುತ್ತಿರುವ ಭಾರತ ತನ್ನ ರಾಜತಾಂತ್ರಿಕತೆಯ ಪ್ರಭಾವ ಬಳಸಿಕೊಂಡು ಹಫೀಜ್ ಅರ್ಜಿಗೆ ಬ್ರೇಕ್ ಹಾಕುವ ಸಾಧ್ಯತೆ ಹೆಚ್ಚಾಗಿದೆ.

ಈ ರೀತಿಯಾಗಿ ಅರ್ಜಿ ಹಾಕಿ ಜಾಗತಿಕ ಭಯೋತ್ಪಾದಕರ ಪಟ್ಟಿಯಲ್ಲಿರುವ ಹೆಸರನ್ನು ತೆಗೆದುಹಾಕಲು ಸಾಧ್ಯವಿದೆಯೇ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡುವುದು ಸಹಜ. ಈ ಬಗ್ಗೆ ನೋಡುವುದಾದರೆ, 2010 ಇಲ್ಲಿಯವರೆಗೂ ಭಯೋತ್ಪಾದಕರ ಪಟ್ಟಿಯಿಂದ ಹೆಸರು ಕೈ ಬಿಡುವಂತೆ ಒಟ್ಟು 78 ಅರ್ಜಿಗಳು ಸಲ್ಲಿಕೆಯಾಗಿವೆ. ಆ ಪೈಕಿ ವಿಶ್ವಸಂಸ್ಥೆ 56 ಅರ್ಜಿಗಳನ್ನು ಪುರಸ್ಕರಿಸಿ ಹೆಸರನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಯಿಂದ ಕೈಬಿಡಲಾಗಿದ್ದು, ಕೇವಲ 17 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಹೀಗಾಗಿ ಹಫೀಜ್ ಸಯೀದ್ ಸಹ ತನ್ನ ಹೆಸರನ್ನು ಈ ಪಟ್ಟಿಯಿಂದ ತೆಗೆದು ಹಾಕಿ ನಂತರ ರಾಜಕೀಯಕ್ಕೆ ಪ್ರವೇಶಿಸಿ ಪಾಕಿಸ್ತಾನದ ಸಂಪೂರ್ಣ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ.

Leave a Reply