ಪರಮೇಶ್ವರ ಹೆಡೆಮುರಿ ಕಟ್ಟಲು ಸಿದ್ರಾಮಯ್ಯ ನಿರ್ಧಾರ!

ಡಿಜಿಟಲ್ ಕನ್ನಡ ಟೀಮ್:

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ ನಡುವಣ ‘ಅಧಿಕಾರ ಪ್ರತಿಷ್ಠೆ ಕಿತ್ತಾಟ’ ಉತ್ತುಂಗಕ್ಕೇರಿದೆ. ರಾಜ್ಯ ಸರಕಾರದ ಸಾಧನೆಗಳ ಪ್ರಚಾರ ಕಾರ್ಯಕ್ರಮಕ್ಕೆ ಪರಮೇಶ್ವರ ಅವರನ್ನು ಕರೆಯುವುದಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರು ಪರಮೇಶ್ವರ್ ಅವರಿಗೆ ಟಾಂಗ್ ನೀಡಿದ್ದಾರೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶುರುವಾಗಿರುವ ಬಿಜೆಪಿಯ ಪರಿವರ್ತನಾ ಯಾತ್ರೆ ಹಾಗೂ ಜೆಡಿಎಸ್ಸಿನ ವಿಕಾಸ ಯಾತ್ರೆಗೆ ಪರ್ಯಾಯವಾಗಿ ಸಿದ್ದರಾಮಯ್ಯನವರು ಕೂಡ ಜನಾರ್ಶೀವಾದ ಯಾತ್ರೆ ನಡೆಸಲು ನಿರ್ಧರಿಸಿದ್ದಾರೆ. ರಾಜ್ಯ ಸರಕಾರ ನಾಲ್ಕೂವರೇ ವರ್ಷಗಳಲ್ಲಿ ಮಾಡಿರುವ ಸಾಧನೆಗಳನ್ನು ವಿವರಿಸಿ, ಚುನಾವಣೆಯಲ್ಲಿ ಮತ್ತೆ ತಮ್ಮನ್ನು ಆರ್ಶೀವದಿಸಿ ಎಂದು ಕೇಳಿಕೊಳ್ಳುವುದು ಈ ಯಾತ್ರೆ ಹಿಂದಿನ ಉದ್ದೇಶ. ಇದರ ಜತೆಗೆ ತಮ್ಮ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ, ಮುಂದಿನ ಬಾರಿಯೂ ತಾವೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದರು.

ಇದು ಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವ ಪರಮೇಶ್ವರ ಅವರನ್ನು ಸಹಜವಾಗಿಯೇ ಕೆರಳಿಸಿದೆ. ಹೀಗಾಗಿ ಸಿದ್ದರಾಮಯ್ಯ ಸಾಧನೆ ಪ್ರತಿಬಿಂಬಿಸುವ ಈ ಕಾರ್ಯಕ್ರಮದಿಂದ ದೂರ ಉಳಿಯಬೇಕೆಂದು ನಿರ್ಣಯಿಸಿದ ಅವರು, ಪಕ್ಷದಿಂದ ಜನಾರ್ಶೀವಾದ ಯಾತ್ರೆ ಮಾಡಿದರೆ ಮಾತ್ರ ತಾವು ಪಾಲ್ಗೊಳ್ಳುವುದಾಗಿಯೂ, ಒಂದೊಮ್ಮೆ ಸರಕಾರದಿಂದ ಕಾರ್ಯಕ್ರಮ ಮಾಡಿದರೆ ಭಾಗವಹಿಸುವುದಿಲ್ಲ ಎಂದು ಯಾತ್ರೆ ಬಗ್ಗೆ ಸಿದ್ದರಾಮಯ್ಯ ಹೇಳಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದರು. ಇದು ಸಿದ್ದರಾಮಯ್ಯ ಅವರಿಗೆ ಮುಜುಗರ ತಂದಿತ್ತು. ಇದೀಗ ಸರಕಾರದ ಪ್ರಚಾರ ಕಾರ್ಯಕ್ರಮಗಳಿಗೆ ಪರಮೇಶ್ವರ ಅವರನ್ನು ಕರೆಯುವುದಿಲ್ಲ, ಆದರೆ ಪಕ್ಷದಿಂದ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲೂ ತಾವು ಭಾಗವಹಿಸುವುದಾಗಿ ಹೇಳುವ ಮೂಲಕ ಪರಮೇಶ್ವರ ಅವರನ್ನು ಜನಾರ್ಶೀವಾದ ಯಾರ್ತೆಯಿಂದ ದೂರ ಇಡುವ ಹಾಗೂ ಪಕ್ಷ ಪ್ರಚಾರ ಕಾರ್ಯಕ್ರಮಗಳಲ್ಲಿ ಪ್ರಚಾರ ಪಾಲು ಪಡೆಯುವ ತಂತ್ರ ಮೆರೆದಿದ್ದಾರೆ. ಇದು ಪರಮೇಶ್ವರ ಹಾಗೂ ಸಿದ್ದರಾಮಯ್ಯ ನಡುವಣ ರಾಜಕೀಯ ಉರಿಗೆ ಮತ್ತಷ್ಟು ತುಪ್ಪ ಸುರಿದಿದೆ.

Leave a Reply