ಪ್ರಜ್ವಲ್ ನೇಮಕ ಗೌಡರ ಕುಟುಂಬ ರಾಜಕಾರಣ ವಿಸ್ತರಣೆ ಪ್ರತೀಕ!

ಡಿಜಿಟಲ್ ಕನ್ನಡ ಟೀಮ್:

ಸಮೀಪಿಸುತ್ತಿರುವ ವಿಧಾನಸಭೆ ಚುನಾವಣೆ ರಾಜ್ಯ ರಾಜಕಾರಣದಲ್ಲಿ ರೋಚಕ ವಿದ್ಯಮಾನಗಳಿಗೆ ಪ್ರೇರಕವಾಗಿದೆ. ಒಂದೆಡೆ ಪಕ್ಷ-ಪಕ್ಷಗಳ ನಡುವಣ ಕಣಸಮರ ಗಮನ ಸೆಳೆಯುತ್ತಿದ್ದರೆ ಇನ್ನೊಂದೆಡೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ರಾಜಕಾರಣ ರಂಗುಬಿರಂಗು ಪಡೆದಿದೆ.

ದೇವೇಗೌಡರ ಕುಟುಂಬದಲ್ಲಿ ರಾಜಕಾರಣ ಪಾರುಪತ್ಯೆಗೆ ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ. ರೇವಣ್ಣ ನಡುವೆ ಒಳಕುಟುಂಬ ಪೈಪೋಟಿ ಏರ್ಪಟ್ಟಿತ್ತು. ಒಂದೆಡೆ ರೇವಣ್ಣ ಪತ್ನಿ ಭವಾನಿ ರೇವಣ್ಣ ಮತ್ತು ಪುತ್ರ ಪ್ರಜ್ವಲ್ ಇನ್ನೊಂದೆಡೆ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಮುಂಬರುವ ವಿಧಾನಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ‘ನಮ್ಮ ಕುಟುಂಬದಿಂದ ಇಬ್ಬರು ಮಾತ್ರ (ಕುಮಾರಸ್ವಾಮಿ ಮತ್ತು ರೇವಣ್ಣ) ವಿಧಾನಸಭೆ ಚುನಾವಣೆ ಕಣಕ್ಕೆ ಇಳಿಯುತ್ತಾರೆ’ ಎಂದು ಗೌಡರು ಮತ್ತು ಕುಮಾರಸ್ವಾಮಿ ಪದೇ ಪದೇ ಹೇಳಿದರೂ ಭವಾನಿ, ಪ್ರಜ್ವಲ್ ಮತ್ತು ಅನಿತಾ ಕುಮಾರಸ್ವಾಮಿ ನಡೆ-ನುಡಿ ಮುಂದೆ ಆ ಮಾತು ಕಿಮ್ಮತ್ತು ಕಳೆದುಕೊಂಡಿತ್ತು. ಅದರ ಮಧ್ಯೆ, ಪ್ರಜ್ವಲ್ ರೇವಣ್ಣ ಬೇರೆ ಜೆಡಿಎಸ್ ನಲ್ಲಿ ಸೂಟ್ಕೇಸ್ ಮತ್ತು ಬಕೆಟ್ ಸಂಸ್ಕೃತಿ ತುಂಬಿ ತುಳುಕುತ್ತಿದೆ ಎಂದು ಹೇಳಿದ್ದನ್ನು ಪಕ್ಷದ ಅನ್ಯ ಮುಖಂಡರಿರಲಿ ಗೌಡರ ಕುಟುಂಬಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಿಕ್ಕಾಪಟ್ಟೆ ಕಸಿವಿಸಿ ಅನುಭವಿಸಬೇಕಾಯಿತು. ಪ್ರಜ್ವಲ್ ರೇವಣ್ಣ ಅವರನ್ನು ಕರೆದು ಗೌಡರು ಎಷ್ಟೇ ಬುದ್ಧಿ ಹೇಳಿದರೂ ಈ ಯುವಕನಲ್ಲಿದ್ದ ರಾಜಕೀಯ ಮಹತ್ವಾಕಾಂಕ್ಷೆ ಎದಿರು ಅದು ನಿಲ್ಲಲಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಕುಟುಂಬದ ಒಳಗೆ ಮತ್ತು ಹೊರಗೆ ಪ್ರಜ್ವಲ್ ಸಿಡಿಸುತ್ತಿದ್ದ ಬೆಳ್ಳುಳ್ಳಿ ಪಟಾಕಿಗೆ ಜೆಡಿಎಸ್ ಮುಖಂಡರು ಮುಜುಗರದ ಮುದ್ದೆಯಾಗುತ್ತಿದ್ದರು. ‘ಪ್ರಜ್ವಲ್ ಇದೇ ರೀತಿ ಟೀಕೆ ಮುಂದುವರಿಸಿದರೆ ಶಿಸ್ತುಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಗೌಡರು ಹೇಳಿದ್ದರೂ ಮೊಮ್ಮಗನ ಮೇಲಿನ ಪ್ರೀತಿ ಮುಂದೆ ಅದು ಬರೀ ಹುಸಿಮಾತಾಗಿತ್ತಷ್ಟೇ!

ಹಾಗೆಂದು ಗೌಡರಿಗೆ ಪ್ರಜ್ವಲ್ ಚುನಾವಣೆ ರಾಜಕೀಯಕ್ಕೆ ಬರುವುದು ಇಷ್ಟವಿಲ್ಲ ಎಂದೇನೂ ಅಲ್ಲ. ಆದರೆ ಈಗಾಗಲೇ ತಾವೂ ಸೇರಿದಂತೆ ಕುಟುಂಬದ ನಾಲ್ವರು ಚುನಾವಣೆ ರಾಜಕೀಯದಲ್ಲಿರುವಾಗ ಮತ್ತಿಬ್ಬರು ಅಂದರೆ ಭವಾನಿ ಮತ್ತು ಪ್ರಜ್ವಲ್ ಅವರಿಗೂ ಟಿಕೆಟ್ ನೀಡಿದರೆ ಪಕ್ಷದ ಒಳಗೆ ಮತ್ತು ಹೊರಗೆ ಉತ್ತರದಾಯಿಗಳಾಗುವುದು ಕಷ್ಟ. ಈಗಾಗಲೇ ಜೆಡಿಎಸ್ ನಿಂದ ಹೊರನಡೆದಿರುವ ಏಳು ಮಂದಿ ಶಾಸಕರು ಗೌಡರ ಕುಟುಂಬ ರಾಜಕಾರಣವನ್ನೇ ದೂಷಿಸಿದ್ದಾರೆ. ಹೀಗಿರುವಾಗ ಏಕಾಏಕಿ ಪ್ರಜ್ವಲ್ ಗೆ ಮಣೆ ಹಾಕಿದರೆ ಮತ್ತಷ್ಟು ಟೀಕೆಗಳಿಗೆ ಆಹಾರವಾಗಬಹುದು ಎಂಬ ಪ್ರಜ್ಞೆಯಿಂದ ಗೌಡರು ವಿಳಂಬ ನೀತಿ ಅನುಸರಿಸುತ್ತಾ ಬಂದಿದ್ದರು. ಆದರೆ ಇದೀಗ ಪ್ರಜ್ವಲ್ ಅವರನ್ನೇ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡುವ ಮೂಲಕ ಗೌಡರು ಆ ಎಲ್ಲ ಎಡರುತೊಡರುಗಳಿಗೆ ತಾವೇ ಪರಿಹಾರ ಕೊಟ್ಟಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಪ್ರಜ್ವಲ್ ಹಾಸನದ ಬೇಲೂರು ಅಥವಾ ಬೆಂಗಳೂರಿನ ರಾಜರಾಜೇಶ್ವರಿ ನಗರ, ರೇವಣ್ಣ ಹೊಳೆನರಸೀಪುರ, ಕುಮಾರಸ್ವಾಮಿ ರಾಮನಗರ (ಕ್ಷೇತ್ರ ಬದಲಾದರೂ ಆಗಬಹುದು), ಅನಿತಾ ಕುಮಾರಸ್ವಾಮಿ ಚನ್ನಪಟ್ಟಣದಿಂದ ಕಣಕ್ಕೆ ಇಳಿಯುವುದು ಬಹುತೇಕ ಖಾತರಿಯಾಗಿದೆ. ಭವಾನಿ ರೇವಣ್ಣ ಮತ್ತು ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಕೂಡ ಆಕಾಂಕ್ಷಿಗಳಾಗಿದ್ದರೂ ಅದಿನ್ನು ಬರೀ ಚರ್ಚೆ ಹಂತಕ್ಕಷ್ಟೇ ಸೀಮಿತವಾಗಿದೆ. ಆದರೆ ಒಂದಂತೂ ಸ್ಪಷ್ಟ. ಗೌಡರು ಮತ್ತು ಕುಮಾರಸ್ವಾಮಿ ಹೇಳಿರುವಂತೆ ಅವರ ಕುಟುಂಬದಿಂದ ಚುನಾವಣೆ ಕಣಕ್ಕೆ ಇಳಿಯುವವರ ಸಂಖ್ಯೆ ಎರಡಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಕನಿಷ್ಟ ನಾಲ್ಕು ಮಂದಿಯಾದರೂ ಕಣದಲ್ಲಿರುತ್ತಾರೆ. ಅದೃಷ್ಟ ಬಾಯ್ಬಿಟ್ಟರೆ ಈ ಸಂಖ್ಯೆ ಮತ್ತಷ್ಟು ಹೆಚ್ಚಬಹುದು!

Leave a Reply