ಗಟ್ಟಿಯಾಗುತ್ತಿದೆ ಆಟಗಾರರ ವೇತನ ಹೆಚ್ಚಳದ ಕೂಗು, ಆದಾಯಕ್ಕೆ ತಕ್ಕಂತೆ ಸಂಭಾವನೆ ನೀಡುತ್ತಾ ಬಿಸಿಸಿಐ?

ಡಿಜಿಟಲ್ ಕನ್ನಡ ಟೀಮ್:

ಕಳೆದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಬಿಸಿಸಿಐ ಕ್ರಿಕೆಟ್ ಆಟಗಾರರ ಸಂಭಾವನೆಯನ್ನು ಶೇ.100ರಷ್ಟು ಹೆಚ್ಚಿಸಿತ್ತು. ಆದರೂ ಕ್ರಿಕೆಟ್ ಆಟಗಾರರ ಬೇಸರ ದೂರವಾಗಿಲ್ಲ. ಪರಿಣಾಮ ಮತ್ತೆ ಬಿಸಿಸಿಐಗೆ ಆಟಗಾರರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ನಾಯಕ ವಿರಾಟ್ ಹಾಗೂ ಮಾಜಿ ನಾಯಕ ಧೋನಿ ನೇತೃತ್ವದಲ್ಲಿ ಬಿಸಿಸಿಐಗೆ ಬೇಡಿಕೆ ಇಡಲಾಗಿದೆ.

ಕಳೆದ ಕೆಲ ತಿಂಗಳ ಹಿಂದೆ ಬಿಸಿಸಿಐ ಎ ಶ್ರೇಯಾಂಕದ ಒಪ್ಪಂದದ ಆಟಗಾರರಿಗೆ ₹ 1 ಕೋಟಿಯಿಂದ ₹2 ಕೋಟಿಗೆ, ಬಿ ಶ್ರೇಯಾಂಕಿತ ಒಪ್ಪಂದದ ಆಟಗಾರರಿಗೆ ₹50 ಲಕ್ಷದಿಂದ ₹ 1 ಕೋಟಿಗೆ ಹಾಗೂ ಸಿ ಶ್ರೇಯಾಂಕಿತ ಒಪ್ಪಂದದ ಆಟಗಾರರಿಗೆ ₹ 25 ಲಕ್ಷದಿಂದ ₹ 50 ಲಕ್ಷಕ್ಕೆ ವೇತನ ಹೆಚ್ಚಿಸಿತ್ತು. ಆದರೆ ಈ ವೇತನ ಹೆಚ್ಚಳ ಆಟಗಾರರಿಗೆ ತೃಪ್ತಿ ತರಲಿಲ್ಲ. ಕಾರಣ, ಎ ಶ್ರೇಯಾಂಕಿತ ಒಪ್ಪಂದದ ಆಟಗಾರರಿಗೆ ವಾರ್ಷಿಕವಾಗಿ ಕನಿಷ್ಠ ₹ 5 ಕೋಟಿ ಸಂಭಾವನೆ ನೀಡಬೇಕು ಎಂಬುದು ಆಟಗಾರರ ಬೇಡಿಕೆ. ಈ ಬೇಡಿಕೆಗೆ ಮಾಜಿ ಕೋಚ್ ಅನಿಲ್ ಕುಂಬ್ಳೆ ಸಹ ಬಿಸಿಸಿಐ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದರು.

ಆಟಗಾರರಿಗೆ ₹ 2 ಕೋಟಿ ಸಾಲುವುದಿಲ್ಲವೇ ಎಂಬ ಪ್ರಶ್ನೆ ಅನೇಕರಲ್ಲಿ ಮೂಡುವುದು ಸಹಜ. ಆರೆ ಇವರ ಬೇಡಿಕೆಗೆ ಕಾರಣವೂ ಇದೆ. ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ಆಟಗಾರರು ₹ 10 ಕೋಟಿಯಿಂದ ₹ 12 ಕೋಟಿವರೆಗೆ ಸಂಭಾವನೆ ಪಡೆಯುತ್ತಾರೆ. ಆದರೆ ಭಾರತದ ಅತ್ಯುತ್ತಮ ಆಟಗಾರ ಪಂದ್ಯದ ವೇತನ ಸೇರಿ ವರ್ಷಕ್ಕೆ ಪಡೆಯುವ ವೇತನ ಕೇವಲ 4-5 ಕೋಟಿ ಮಾತ್ರ.

ಒಂದೆಡೆ ಪ್ರತಿ ವರ್ಷ ಸಾವಿರಾರು ಕೋಟಿ ಆದಾಯ ಗಳಿಸುತ್ತಿರುವ ಬಿಸಿಸಿಐ, ಐಸಿಸಿಯ ಆದಾಯ ಹಂಚಿಕೆಯಲ್ಲೂ ಸಿಂಹಪಾಲು ಕೇಳುತ್ತಿದೆ. ಹೀಗೆ ಸಾವಿರಾರು ಕೋಟಿಗಟ್ಟಲೆ ಆದಾಯ ಗಳಿಸುತ್ತಿರುವಾಗ ಆಟಗಾರರ ವೇತನಕ್ಕೆ ಏಕೆ ಹಿಂದೇಟು ಹಾಕುತ್ತಿದೆ ಎಂಬುದು ಸದ್ಯದ ಪ್ರಶ್ನೆ. ಹೀಗಾಗಿ ಆಟಗಾರರ ಸಂಭಾವನೆ ಹೆಚ್ಚಿಸಿ, ಎ ಗುಂಪಿನ ಆಟಗಾರರಿಗೆ ₹ 5 ಕೋಟಿ, ಬಿ ಗುಂಪಿನ ಆಟಗಾರರಿಗೆ ₹ 3 ಕೋಟಿ ಹಾಗೂ ಸಿ ಗುಂಪಿನ ಆಟಗಾರರಿಗೆ ₹ 1.5 ಕೋಟಿ ಹಣ ನೀಡಬೇಕು ಎಂಬುದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೇಡಿಕೆ. ಈ ಬೇಡಿಕೆ ಸದ್ಯದಲ್ಲೇ ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಚರ್ಚೆಯಾಗಲಿದೆ.

2016-17ನೇ ಸಾಲಿನಲ್ಲಿ ಬಿಸಿಸಿಐ ಎಲ್ಲ ಹಂತದ ಆಟಗಾರರ ಸಂಭಾವನೆಗೆ ಮಾಡುತ್ತಿರುವ ವೆಚ್ಚ ₹ 509.13 ಕೋಟಿಯಷ್ಟಿದೆ. ಆದರೂ ಭಾರತೀಯ ಆಟಗಾರರು ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಆಟಗಾರರ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇನ್ನು ಶೇಕಡಾವಾರು ಪ್ರಮಾಣದಲ್ಲಿ ನೋಡುವುದಾದರೆ ಬಿಸಿಸಿಐನ ವಾರ್ಷಿಕ ಆದಾಯದಲ್ಲಿ ಕೇವಲ ಶೇ.8ರಷ್ಟು ಮಾತ್ರ ಆಟಗಾರರ ಸಂಭಾವನೆಗೆ ಖರ್ಚಾಗುತ್ತಿದೆ.

ಈ ವೇತನ ಬೇಡಿಕೆ ಹೆಚ್ಚಳದ ಹಿಂದೆ ಕೆಲವು ಪ್ರತಿಭಾವಂತ ಆಟಗಾರರ ಹಿತಾಸಕ್ತಿ ಅಡಗಿರುವುದನ್ನು ಮರೆಯುವಂತಿಲ್ಲ. ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ಚೇತೇಶ್ವರ ಪೂಜಾರ. ಹೌದು ಚೇತೇಶ್ವರ ಪೂಜಾರ ಭಾರತ ಟೆಸ್ಟ್ ತಂಡದ ಮ್ಯಾಚ್ ವಿನ್ನರ್ ಆಟಗಾರ. ಈತ ಐಪಿಎಲ್ ನಿಂದಲೂ ಉತ್ತಮ ಒಪ್ಪಂದ ಪಡೆದಿಲ್ಲ. ಇನ್ನು ಏಕದಿನ ಹಾಗೂ ಟಿ20 ತಂಡದಲ್ಲಿ ಸ್ಥಾನವೂ ಇಲ್ಲ. ಹೀಗಾಗಿ ಪೂಜಾರ ಕೇವಲ ಟೆಸ್ಟ್ ಕ್ರಿಕೆಟ್ ನಿಂದ ಬರುವ ವೇತನವನ್ನೇ ನೆಚ್ಚಿಕೊಳ್ಳಬೇಕು. ಇಂತಹ ಸಂದರ್ಭದಲ್ಲಿ ಇಂತಹ ಪ್ರತಿಭಾನ್ವಿತ ಆಟಗಾರರಿಗೆ ಕಡಿಮೆ ಸಂಭಾವನೆ ಸೂಕ್ತವಾಗುವುದಿಲ್ಲ. ಹೀಗಾಗಿ ಕೊಹ್ಲಿ ನೇತೃತ್ವದಲ್ಲಿ ಹುಟ್ಟುಕೊಂಡಿರುವ ವೇತನ ಹೆಚ್ಚಳ ಬೇಡಿಕೆಯನ್ನು ಬಿಸಿಸಿಐ ಪುರಸ್ಕರಿಸಬೇಕಾಗಿದೆ.

Leave a Reply