‘ನಾನು ಲಷ್ಕರ್ ಬೆಂಬಲಿಗ’ ಇದು ಕೇವಲ ಮುಷರಫ್ ಮಾತಲ್ಲ, ಪಾಕಿಸ್ತಾನದ ಒಟ್ಟಾರೆ ಮನಸ್ಥಿತಿ!

ಡಿಜಿಟಲ್ ಕನ್ನಡ ಟೀಮ್:

‘ನಾನು ಲಷ್ಕರ್ ಸಂಘಟನೆಯ ಬೆಂಬಲಿಗ. ಕಾಶ್ಮೀರದ ವಿಷಯದಲ್ಲಿ ಹಫೀಜ್ ಸಯೀದ್ ನ ಹೋರಾಟವನ್ನು ಶ್ಲಾಘಿಸುತ್ತೇನೆ ಹಾಗೂ ಆತನ ಜತೆಗೆ ನಿಲ್ಲುತ್ತೇನೆ…’ ಇದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಹಾಗೂ ಸರ್ವಾಧಿಕಾರಿ ಪರ್ವೇಜ್ ಮುಷರಫ್ ಹೇಳಿರುವ ಮಾತು. ಈತ ಹೇಳಿರುವುದರಲ್ಲಿ ಅಚ್ಚರಿ ಏನು ಇಲ್ಲ. ಕಾರಣ, ಭಾರತದ ವಿರುದ್ಧ ನೇರವಾಗಿ ಹೋರಾಡು ಬದಲು ಭಯೋತ್ಪಾದನೆಯ ವಿರುದ್ಧ ಹೋರಾಟ ಮಾಡುವುದು ಪಾಕಿಸ್ತಾನದ ಮನಸ್ಥಿತಿ ಎಂಬುದು ಈಗಾಗಲೇ ಅನೇಕ ಬಾರಿ ಸಾಬೀತಾಗಿದೆ. ಈಗ ಅದನ್ನು ಮುಷರಫ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ ಅಷ್ಟೆ.

ಹೌದು, ಕಾಶ್ಮೀರವನ್ನು ಭಾರತದಿಂದ ಕಸಿದುಕೊಳ್ಳಲು ಪಾಕಿಸ್ತಾನ ಅನೇಕ ವರ್ಷಗಳಿಂದ ಪ್ರಯತ್ನಿಸುತ್ತಲೇ ಇದೆ. ಆದರೆ ಭಾರತದ ವಿರುದ್ಧ ನಡೆದ ಅಷ್ಟೂ ಪ್ರಯತ್ನಗಳು ವಿಫಲವಾದವು. ಭಾರತೀಯ ಸೈನಿಕರು ಕೊಟ್ಟ ಏಟಿಗೆ ಪಾಕ್ ಸೇನೆ ಪತರುಗುಟ್ಟಿ ಹೋಯಿತು. ಹೀಗಾಗಿ ಭಾರತದ ವಿರುದ್ಧ ನೇರವಾಗಿ ದಾಳಿ ಮಾಡಲಾಗದೇ ಭಯೋತ್ಪಾದನೆಯ ಮೂಲಕ ಭಾರತವನ್ನು ಎದುರಿಸುವ ಪ್ರಯತ್ನ ಅನೇಕ ದಶಕಗಳಿಂದ ನಡೆಯುತ್ತಾ ಬಂದಿದೆ.

ಪಾಕಿಸ್ತಾನದ ಈ ನರಿ ಬುದ್ಧಿಗೆ ಪರ್ವೇಜ್ ಮುಷರಫ್ ನ ಇಬ್ಬಗೆಯ ನಿಲುವುಗಳೇ ಸಾಕ್ಷಿ. 2002ರಲ್ಲಿ ಪರ್ವೇಜ್ ಮುಷರಫ್ ಅಧಿಕಾರದ್ದಲ್ಲಿದ್ದಾಗಲೇ ಲಷ್ಕರ್ ಸಂಘಟನೆಯನ್ನು ನಿಷೇಧಿಸಿದ್ದ. ಆದರೆ ಈಗ ತಾನು ಲಷ್ಕರ್ ಸಂಘಟನೆಯ ಬೆಂಬಲಿಗ ಎಂದು ಹೇಳುತ್ತಿದ್ದಾನೆ. ತನ್ನ ಈ ನಿಲುವಿಗೆ ಸಮರ್ಥನೆಯನ್ನು ನೀಡುವ ಮುಷರಫ್ ಹೇಳಿರೋದಿಷ್ಟು…

‘ಆಗಿನ ಪರಿಸ್ಥಿತಿ ವಿಭಿನ್ನವಾಗಿತ್ತು. ಹೀಗಾಗಿ ನಾವು ಲಷ್ಕರ್ ಸಂಘಟನೆಯನ್ನು ನಿಷೇಧಿಸಬೇಕಾಯಿತು. ಆಗ ನಾವು ಶಾಂತಿಯುತ ಮಾರ್ಗದತ್ತ ಸಾಗುತ್ತಿದ್ದೆವು. ಅಲ್ಲದೆ ಮುಜಾಹಿದ್ (ಧಾರ್ಮಿಕ ಯುದ್ಧ) ನಿಯಂತ್ರಿಸಬೇಕಾದ ಅಗತ್ಯ ಇತ್ತು. ಅಲ್ಲದೆ ನನಗೆ ಹಫೀಜ್ ಸಯೀದ್ ಕುರಿತಾಗಿ ಹೆಚ್ಚು ಮಾಹಿತಿ ಇರಲಿಲ್ಲ. ಕಾಶ್ಮೀರದ ಹೋರಾಟದ ಕುರಿತಾಗಿ ಹಫೀಜ್ ಸಯೀದ್ ನಿಲುವುಗಳು ಮುಖ್ಯವಾಗಿವೆ. ಕಾಶ್ಮೀರದ ಹೋರಾಟಕ್ಕೆ ಯಾವಾಗಲೂ ಬೆಂಬಲ ನೀಡುತ್ತೇನೆ. ಕಾಶ್ಮೀರದಲ್ಲಿ ಭಾರತೀಯ ಸೇನೆಯನ್ನು ಮೆಟ್ಟಿನಿಲ್ಲಲು ಲಷ್ಕರ್ ಒಂದು ಶಕ್ತಿಶಾಲಿ ಪಡೆಯಾಗಿದೆ. ಹೀಗಾಗಿ ಭಾರತ ಅಮೆರಿಕದ ಜತೆ ಸೇರಿಕೊಂಡು ಲಷ್ಕರ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಬಿಂಬಿಸಿತು.’

ಮುಷರಫ್ ನ ಈ ಮಾತುಗಳಲ್ಲಿ ಪಾಕಿಸ್ತಾನ ಲಷ್ಕರ್ ಹಾಗೂ ಇತರೆ ಭಯೋತ್ಪಾದಕ ಸಂಘಟನೆಗಳನ್ನು ಕಾಶ್ಮೀರದ ಹೆಸರಿನಲ್ಲಿ ಹೇಗೆ ಪ್ರೀತಿಸುತ್ತಿದೆ, ಬೆಳೆಸುತ್ತಿದೆ ಹಾಗೂ ರಕ್ಷಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕಾಶ್ಮೀರದ ಹೋರಾಟದ ಹೆಸರಿನಲ್ಲಿ ಭಯೋತ್ಪಾದನೆಯನ್ನು ಹೇಗೆ ಪ್ರೋತ್ಸಾಹಿಸಲಾಗುತ್ತಿದೆ ಎಂಬುದನ್ನು ಮುಷರಫ್ ಮಾತುಗಳೇ ತಿಳಿಸುತ್ತವೆ. ಮುಷರಫ್ ಅಧಿಕಾರದಲ್ಲಿದ್ದಾಗ ಹೇಗೆ ಪ್ರಪಂಚದ ಕಣ್ಣಿಗೆ ಮಣ್ಣೆರಚಲು ಲಷ್ಕರ್ ಸಂಘಟನೆಯನ್ನು ನಿಷೇಧಿಸಿ ನಂತರ ಅದರ ಅಂಗ ಸಂಘಟನೆ ಜಮಾತ್ ಉದ್ ದವಾಗೆ ಅವಕಾಶ ನೀಡಲಾಯಿತು. ಆ ಮೂಲಕ ಗೌಪ್ಯವಾಗಿ ಲಷ್ಕರ್ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡಲಾಯಿತು. ಅದೇ ರೀತಿ ನಂತರ ಬಂದ ಸರ್ಕಾರಗಳು ಸಹ ತನ್ನ ನೆಲದಲ್ಲಿ ಉಗ್ರರಿಗೆ ಆಶ್ರಯ ನೀಡುತ್ತಲೇ ಬಂದಿದೆ. ಭಾರತದ ಗಡಿಯನ್ನು ಉಗ್ರರು ನುಸುಳಲು ಪಾಕಿಸ್ತಾನ ಸೇನೆಯ ರಕ್ಷಾ ಕವಚವಾಗಿ ನಿಂತಿರುವ ಉದಾಹರಣೆ ಸಾಕಷ್ಟು ಕಂಡಿದ್ದೇವೆ. ಜತೆಗೆ ಹಫೀದ್ ಸಯೀದ್ ರಕ್ಷಣೆಗೆ ಪಾಕಿಸ್ತಾನದ ಪ್ರಯತ್ನ ಹಾಗೂ ಆತನ ಬಿಡುಗಡೆಗಳೆಲ್ಲವೂ ಇದರ ಭಾಗವೇ ಆಗಿದೆ. ಹೀಗಾಗಿ ಮುಷರಫ್ ಬಾಯಲ್ಲಿ ಬಂದಿರುವ ಈ ಮಾತುಗಳು ಇಡೀ ಪಾಕಿಸ್ತಾನದ ರಾಜಕೀಯ ಮನಸ್ಥಿತಿಯನ್ನು ಬಟಾಬಯಲು ಮಾಡಿದೆ.

Leave a Reply