ಗೋಹತ್ಯೆ ನಿಷೇಧಕ್ಕೆ ವ್ಯಾಪಕ ವಿರೋಧ, ತಿದ್ದುಪಡಿಗೆ ಮನಸ್ಸು ಮಾಡಿದೆ ಕೇಂದ್ರ ಸರ್ಕಾರ

ಡಿಜಿಟಲ್ ಕನ್ನಡ ಟೀಮ್:

ಕಳೆದ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ ಗೋ ಹತ್ಯೆ ನಿಷೇಧಕ್ಕೆ ಸಂಬಂಧಿಸಿದಂತೆ ಹೊರಡಿಸಿದ ಸೂಚನೆಯಲ್ಲಿ ಈಗ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಭಾರತದಾದ್ಯಂತ ಗೋವುಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡಬಾರದು ಎಂಬ ಸೂಚನೆಗೆ ಅನೇಕ ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿವಿಧ ರಾಜ್ಯಗಳಲ್ಲಿನ ಪ್ರತಿಕ್ರಿಯೆಗಳನ್ನು ಪಡೆದ ಮೇಲೆ ಕೇಂದ್ರ ಸರ್ಕಾರ ಈ ಸೂಚನೆಗೆ ತಿದ್ದುಪಡಿ ತರುವುದೇ ಅಥವಾ ಸೂಚನೆಯನ್ನು ಹಿಂಪಡೆಯುವುದೇ ಎಂಬ ಕುತೂಹಲ ಮೂಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು ‘ಈ ಸೂಚನೆಗೆ ಸಂಬಂಧಿಸಿದಂತೆ ನಾವು ಕಾನೂನು ಸಚಿವಾಲಯಕ್ಕೆ ಕಡತಗಳನ್ನು ರವಾನಿಸಿದ್ದು, ಈ ಸೂಚನೆಯನ್ನು ಹಿಂಪಡೆಯುವ ಕುರಿತಾಗಿಯೂ ಮಾಹಿತಿ ನೀಡಿದ್ದೇವೆ’ ಎಂದು ಹೇಳಿದ್ದಾರೆ. ಗೋವುಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡುವುದನ್ನು ನಿಷೇಧಿಸಿರುವುದಕ್ಕೆ ವಿವಿಧ ವಲಯಗಳಿಂದ ಟೀಕೆಗಳು ಎದುರಾಗಿದ್ದವು. ಕೇಂದ್ರ ಸರ್ಕಾರ ಸೈದ್ದಾಂತಿಕ ನೆಲೆಗಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. ಜನರ ಆಹಾರ ಪದ್ಧತಿಯನ್ನು ಬಲವಂತವಾಗಿ ಬದಲಾಯಿಸಲು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಗೋ ಹತ್ಯೆ ನಿಷೇಧದ ಪರಿಣಾಮ ಕೇವಲ ಒಂದು ಸಮುದಾಯದ ಜನರಿಗೆ ಹಾಗೂ ಅವರ ಆಹಾರ ಪದ್ಧತಿ ಮೇಲೆ ಮಾತ್ರ ಪರಿಣಾಮ ಬೀರಿಲ್ಲ. ರೈತರಿಗೂ ಸರ್ಕಾರದ ಈ ನಿರ್ಧಾರ ಹೊರೆಯಾಗಿತ್ತು. ವಯಸ್ಸಾದ ಹಸುಗಳನ್ನು ಸಾಕಲು ರೈತರಿಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ರೈತರು ಈ ನಿರ್ಧಾರವನ್ನು ತೀವ್ರ ವಿರೋಧಿಸಿದ್ದರು. ಅಷ್ಟೇ ಅಲ್ಲದೆ ವಿಶ್ವದಲ್ಲೇ ಅತಿ ಹೆಚ್ಚು ಮಾಂಸ ಉತ್ಪನ್ನ ರಾಷ್ಟ್ರವಾಗಿರುವ ಭಾರತಕ್ಕೆ ಈ ನಿರ್ಧಾರದಿಂತ ಸ್ವಲ್ಪ ಪ್ರಮಾಣದಲ್ಲಿ ಹೊಡೆತ ಬೀಳುವ ಸಾಧ್ಯತೆಯೂ ಇದೆ. ಭಾರತದ ಮಾಂಸ ರಫ್ತಿನಲ್ಲಿ ಹೆಚ್ಚಾಗಿ ಎಮ್ಮೆ ಮಾಂಸವಿದ್ದರೆ ಕಡಿಮೆ ಪ್ರಮಾಣದಲ್ಲಿ ಗೋಮಾಂಸ ಸೇರಿದೆ. ಭಾರತ ಪ್ರತಿವರ್ಷ ಮಾಂಸ ರಫ್ತಿನಿಂದಲೇ  ₹ 1 ಲಕ್ಷ ಕೋಟಿಯಷ್ಟು ವ್ಯವಹಾರ ನಡೆಸುತ್ತಿದೆ. ಸರ್ಕಾರದ ಈ ನಿರ್ಧಾರ ಈ ಕ್ಷೇತ್ರದ ಮೇಲೂ ಪರಿಣಾಮ ಬೀರಿತ್ತು.

ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಸೂಚನೆಯಲ್ಲಿ ಮಾರ್ಪಾಡು ಮಾಡಲು ನಿರ್ಧರಿಸಿದೆ. ಇನ್ನು ಈ ತಿದ್ದುಪಡಿ ಕುರಿತಾಗಿ ಕೇಂದ್ರ ಪರಿಸರ ಸಚಿವ ಹರ್ಷ ವರ್ಧನ್ ಸೆಪ್ಟೆಂಬರ್ ನಲ್ಲೇ ಸುಳಿವು ನೀಡಿದ್ದರು. ‘ಕಸಾಯಿಖಾನೆಗಳ ಮೇಲೆ ಪರಿಣಾಮ ಬೀರಬೇಕೆನ್ನುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿಲ್ಲ. ಅದೇ ರೀತಿ ರೈತರಿಗೆ ಹೊರೆ ಮಾಡುವ ಅಥವಾ ಜನರ ಆಹಾರ ಪದ್ಧತಿ ಬದಲಾಯಿಸುವ ಉದ್ದೇಶವನ್ನೂ ಹೊಂದಿಲ್ಲ. ಪ್ರಾಣಿಗಳ ಮೇಲಿನ ಕ್ರೂರತೆಗೆ ಸಂಬಂಧಿಸಿದಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸರ್ಕಾರದ ಸೂಚನೆಗೆ ಸಾರ್ವಜನಿಕರಿಂದ ಬರುವ ಪ್ರತಿಕ್ರಿಯೆ ಆಧಾರದ ಮೇಲೆ ಹೊಸ ಕಾನೂನು ಚೌಕಟ್ಟು ರೂಪಿಸಲಾಗುವುದು’ ಎಂದಿದ್ದರು. ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಅನೇಕ ರಾಷ್ಟ್ರಗಳಲ್ಲಿ ಗೋ ಹತ್ಯೆ ನಿಷೇಧಕ್ಕೆ ಸಂಬಂಧಿಸಿದಂತೆ ವ್ಯಾಪಕ ವಿರೋಧವೂ ವ್ಯಕ್ತವಾಗಿವೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಸೂಚನೆಗೆ ತಿದ್ದುಪಡಿ ತರುವುದೇ ಅಥವಾ ಸೂಚನೆಯನ್ನೇ ಹಿಂಪಡೆಯುವುದೇ ಎಂಬುದನ್ನು ಕಾದು ನೋಡಬೇಕು.

Leave a Reply