ವಿಶ್ವ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್: ಮೀರಾಭಾಯ್ ಚಾನುಗೆ ಚಿನ್ನ, ರೋಮಾಂಚನ ಹುಟ್ಟಿಸಲಿದೆ ಈಕೆಯ ಸಾಧನೆಯ ಹಾದಿ

ಡಿಜಿಟಲ್ ಕನ್ನಡ ಟೀಮ್:

ಸುದೀರ್ಘ ಎರಡು ದಶಕಗಳ ನಂತರ ಭಾರತದ ಮಹಿಳಾ ವೇಟ್ ಲಿಫ್ಟರ್ ವಿಶ್ವ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಸಾಧನೆ ಮಾಡಿರೋದು ಮಣಿಪುರ ಮೂಲದ ಸೈಖೋಮ್ ಮೀರಾಭಾಯ್ ಚಾನು.

ಹೌದು, 1994 ಹಾಗೂ 1995ರಲ್ಲಿ ಕರ್ಣಮ್ ಮಲ್ಲೇಶ್ವರಿ ಅವರು ವಿಶ್ವ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಬಳಿಕ ಈವರೆಗೂ ಯಾವೊಬ್ಬ ವೇಟ್ ಲಿಫ್ಟರ್ ಈ ಸಾಧನೆ ಮಾಡಿರಲಿಲ್ಲ. ಸದ್ಯ ಅಮೆರಿಕದಲ್ಲಿ ನಡೆಯುತ್ತಿರುವ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ 48 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ ಚಾನು, ಅತ್ಯುತ್ತಮ ಪ್ರದರ್ಶನ ನೀಡಿದರು. ಸ್ನ್ಯಾಚ್ ಸುತ್ತಿನಲ್ಲಿ 85 ಕೆಜಿ, ಕ್ಲೀನ್ ಹಾಗೂ ಜೆರ್ಕ್ ಸುತ್ತಿನಲ್ಲಿ 109 ಕೆಜಿ ಎತ್ತಿದ ಚಾನು ಒಟ್ಟಾರೆಯಾಗಿ 194 ಕೆಜಿ ಎತ್ತುವ ಮೂಲಕ ಅಗ್ರಸ್ಥಾನಿಯಾಗಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಪೋಡಿಯಂ ಮೇಲೆ ನಿಂತು ಚಿನ್ನದ ಪದಕ ಧರಿಸಿ ರಾಷ್ಟ್ರಗೀತೆ ಮೊಳಗುತ್ತಿರುವಾಗ ಚಾನು ಹೆಮ್ಮೆಯಿಂದ ಕಣ್ಣೀರು ಹಾಕಿದರು. ರಾಷ್ಟ್ರಗೀತೆ ಕುರಿತಂತೆ ಚರ್ಚೆಯಾಗುತ್ತಿರುವ ಈ ಹೊತ್ತಲ್ಲಿ ಈ ದೃಶ್ಯ ಕ್ರೀಡಾಪಟುಗಳು ರಾಷ್ಟ್ರ ಧ್ವಜ ಹಾಗೂ ರಾಷ್ಟ್ರಗೀತೆಗೆ ನೀಡುವ ಮಹತ್ವಕ್ಕೆ ಸಾಕ್ಷಿಯಾಯಿತು. ಅಲ್ಲದೆ ಇತ್ತೀಚೆಗೆ ಮಹಿಳಾ ಶೂಟರ್ ಹೀನಾ ಸಿಧು ನೀಡಿದ ಹೇಳಿಕೆ ಕೂಡ ನೆನಪಿಸುವಂತೆ ಮಾಡಿತು.

ಅಂದಹಾಗೆ ದೂರದ ಮಣಿಪುರ ಜಿಲ್ಲೆಯ ಒಂದು ಗ್ರಾಮದಲ್ಲಿ ಹುಟ್ಟಿದ ಮೀರಾಭಾಯ್ ಚಾನು, ಅಮೆರಿಕದಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದಿರೋದು ಸಾಮಾನ್ಯ ಸಾಧನೆಯಲ್ಲ. ಆಕೆಯ ಈವರೆಗಿನ ಹಾದಿ ನಾವು ಅಂದುಕೊಂಡಷ್ಟು ಸುಲಭದ್ದಾಗಿಲ್ಲ. ಒಂದು ಸಮಯದಲ್ಲಿ ಒಂದು ಲೋಟ ಹಾಲು ಕುಡಿಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದ ಚಾನು ಇಂದು ಭಾರತದ ಕೀರ್ತಿಯನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ. ಆಕೆಯ ಈವರೆಗೂ ನಡೆದು ಬಂದ ಹಾದಿ ಹೇಗಿತ್ತು ನೋಡೋಣ ಬನ್ನಿ…

ಚಾನು ಹುಟ್ಟಿದ್ದು ಮಣಿಪುರದ ಪೂರ್ವ ಇಂಪಾಲ್ ಪ್ರದೇಶದ ಒಂದು ಗ್ರಾಮದಲ್ಲಿ. 1994ರ ಆಗಸ್ಟ್ 8 ರಂದು ಜನಿಸಿದ ಈಕೆ 2007 ರಿಂದ ವೇಟ್ ಲಿಫ್ಟಿಂಗ್ ಅಭ್ಯಾಸ ಆರಂಭಿಸಿದರು. ತಮ್ಮ ಗ್ರಾಮದಲ್ಲಿ ವೇಟ್ ಲಿಫ್ಟಿಂಗ್ ತರಬೇತಿ ಕೇಂದ್ರವಿಲ್ಲದ ಪರಿಣಾಮ ಚಾನು 60 ಕಿ.ಮೀ ಪ್ರಯಾಣ ಮಾಡಿ ಇಂಪಾಲದಲ್ಲಿರುವ ಖುಮನ್ ಲಂಪಕ್ ಕ್ರೀಡಾ ಸಂಕೀರ್ಣದಲ್ಲಿ ಅಭ್ಯಾಸ ಮಾಡಬೇಕಾಯಿತು.

ಚಾನು ವೇಟ್ ಲಿಂಫ್ಟಿಂಗ್ ನಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಹಾಗೂ ಈವರೆಗಿನ ಸಾಧನೆ ಮಾಡಲು ಸ್ಫೂರ್ತಿಯಾಗಿದ್ದು ಭಾರತದ ಮಹಿಳಾ ವೇಟ್ ಲಿಫ್ಟರ್ ಕುಂಜರಾಣಿ ದೇವಿ. 2004ರ ಒಲಿಂಪಿಕ್ಸ್ ನಲ್ಲಿ ಕುಂಜರಾಣಿ ದೇವಿ ನಾಲ್ಕನೇ ಸ್ಥಾನ ಹಾಗೂ 2006ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದಿದ್ದರು. ಕುಂಜರಾಣಿ ಅವರು ತೂಕ ಎತ್ತುವುದನ್ನು ನೋಡಿ ಅಶ್ಚರ್ಯಗೊಂಡ ಮೀರಾಭಾಯ್ ಚಾನು ತಾನು ಸಹ ಆಕೆಯಂತೆ ವೇಟ್ ಲಿಫ್ಟರ್ ಆಗಬೇಕೆಂಬ ಕನಸು ಕಟ್ಟಿಕೊಂಡಳು. ಅಲ್ಲದೆ ಕುಂಜರಾಣಿ ದೇವಿ ಅವರನ್ನು ತನ್ನ ಸ್ಫೂರ್ತಿಯನ್ನಾಗಿಟ್ಟುಕೊಂಡರು. ನಂತರ ಚಾನು ವೇಟ್ ಲಿಫ್ಟಿಂಗ್ ಅನ್ನು ಒಂದು ವೃತ್ತಿಯನ್ನಾಗಿ ನೋಡಲಿಲ್ಲ ಬದಲಿಗೆ ವೇಟ್ ಲಿಫ್ಟಿಂಗ್ ತನ್ನ ಜೀವನ ಎನ್ನುವಷ್ಟರಮಟ್ಟಿಗೆ ಈ ಕ್ರೀಡೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಳು. ‘ಯಾವುದೇ ಕ್ರೀಡಾಪಟು ಒಂದು ಕ್ರೀಡೆಯನ್ನು ಕೇವಲ ವೃತ್ತಿ ಎಂದು ನೋಡದೇ ತನ್ನ ಜೀವನವೆಂದು ಪರಿಗಣಿಸುತ್ತಾರೋ ಅವರು ನಿಜವಾಗಿಯೂ ಸಾಧನೆ ಮಾಡುತ್ತಾರೆ’ ಎಂಬುದು ಈಕೆಯ ಅಭಿಪ್ರಾಯ.

ಚಾನು ವೇಟ್ ಲಿಫ್ಟಿಂಗ್ ಅಭ್ಯಾಸ ಮಾಡುವುದಾಗಿ ತನ್ನ ಆಸೆ ಹೇಳಿಕೊಂಡಾಗ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದರೂ ಅವರ ಪೋಷಕರು  ಹೆಚ್ಚು ವಿರೋಧ ಮಾಡದೇ ಒಪ್ಪಿಕೊಂಡರು. ಆರಂಭದಲ್ಲಿ ವೇಟ್ ಲಿಫ್ಟಿಂಗ್ ಅಭ್ಯಾಸಕ್ಕಾಗಿ ನಿತ್ಯ 60 ಕಿ.ಮೀ ಪ್ರಯಾಣ ಮಾಡುತ್ತಿದ್ದ ಚಾನು, ನಂತರ ಇಂಪಾಲದಲ್ಲೇ ಉಳಿಯಬೇಕಾಯಿತು. ಆಸಂದರ್ಭದಲ್ಲಿ ಆಕೆಯನ್ನು ಇಂಪಾಲಗೆ ಕಳುಹಿಸಲು ಆಕೆಯ ಪೋಷಕರು ಪರದಾಟ ನಡೆಸಿದರು. ಈ ಸಂದರ್ಭದಲ್ಲಿ ಆಕೆಯ ಪೋಷಕರು ಒಂದು ಷರತ್ತನ್ನು ಮುಂದಿಟ್ಟರು. ಅದೇನೆಂದರೆ 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಅರ್ಹತೆ ಪಡೆಯದಿದ್ದರೆ ವೇಟ್ ಲಿಫ್ಟಿಂಗ್ ಅನ್ನು ಬಿಟ್ಟು ಬಿಡಬೇಕು ಎಂಬ ಷರತ್ತಿನೊಂದಿಗೆ ಚಾನುಳನ್ನು ಇಂಪಾಲಗೆ ಕಳುಹಿಸಿದರು.

ಇಂಪಾಲಗೆ ತೆರಳಿದ ಚಾನುವಿಗೆ ಕೋಚ್ ಗಳು ಆಹಾರ ಪದ್ಧತಿಯ ಪಟ್ಟಿಯನ್ನು ಪೂರ್ಣಗೊಳಿಸುವುದು ಸವಾಲಾಯಿತು. ಮೊದಲೇ ಬಡತನದಲ್ಲಿದ್ದ ಈಕೆ ಕೋಚ್ ಗಳು ನೀಡಿದ ಡಯೆಟ್ ಪಟ್ಟಿಯನ್ನು ಪಾಲಿಯಲು ಸಾಧ್ಯವಾಗಲಿಲ್ಲ. ಪ್ರತಿನಿತ್ಯ ಕೋಳಿ ಹಾಗೂ ಹಾಲಿನ ಸೇವನೆ ಕಡ್ಡಾಯವಾಗಿತ್ತು. ಆದರೆ ನಿತ್ಯ ಒಂದು ಲೋಟ ಹಾಲು ಕುಡಿಯುವುದು ಚಾನುಗೆ ಕಷ್ಟವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಕೆಲ ತಿಂಗಳು ಚಾನು ಡಯೆಟ್ ಇಲ್ಲದೆ ಇತರೆ ಆಹಾರವನ್ನು ತಿಂದುಕೊಂಡೇ ತರಬೇತಿ ಪಡೆಯಬೇಕಾಯಿತು. 14ನೇ ವಯಸ್ಸಿಗೆ ಇಂಪಾಲಗೆ ಆಗಮಿಸಿದ ಚಾನು, ಕೇವಲ ಆರು ತಿಂಗಳಲ್ಲಿ ಕೋಚ್ ಗಳ ಗಮನ ಸೆಳೆದಳು. 2009ರಿಂದ 2013ರ ಅವಧಿಯಲ್ಲಿ ಕಿರಿಯರ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಚಾನು, ಪದಕಗಳನ್ನು ಬಾಚುತ್ತಲೇ ಹೋದಳು. 2013ರ ನಂತರ ಹಿರಿಯರ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಆರಂಭಿಸಿದ ಚಾನು ನಿಜವಾದ ಪೈಪೋಟಿ ಎಂದರೆ ಏನು ಎಂಬುದರ ಅರಿವಾಯಿತು.

ಶ್ರದ್ಧೆ ಹಾಗೂ ಸತತ ಪರಿಶ್ರಮದ ಫಲವಾಗಿ ಚಾನು 2014ರ ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಪಡೆದು ಎಲ್ಲರ ಗಮನ ಸೆಳೆದಳು. ಇದೇ ಪ್ರದರ್ಶನ ಮುಂದುವರಿಸಿ ಚಾನು 2016ರ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೂ ಅರ್ಹತೆ ಪಡೆದುಕೊಂಡು ಪೋಷಕರು ಹಾಕಿದ್ದ ಷರತ್ತನ್ನು ಪಾಲಿಸಿದಳು. ಅಲ್ಲದೆ ಚಾನು ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ತಂದುಕೊಡುವ ನಿರೀಕ್ಷೆಯೂ ಆಗಿದ್ದರು. ಆದರೆ ಈ ಒಲಿಂಪಿಕ್ಸ್ ನಲ್ಲಿ ಚಾನು ಮೂರೂ ವಿಭಾಗದಲ್ಲೂ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿ ನಿರಾಸೆ ಮೂಡಿಸಿದರು. ಈ ಸೋಲಿನಿಂದ ಕುಗ್ಗದ ಚಾನು ಮತ್ತೆ ಪರಿಶ್ರಮ ಮುಂದುವರಿಸಿದಳು. ಆಕೆಯ ಪರಿಶ್ರಮದ ಫಲವೇ ಇಂದು ವಿಶ್ವ ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾಳೆ.

Leave a Reply