ಗುಜರಾತ್ ಚುನಾವಣೆ: ರೈತರ ಸಾಲ ಮನ್ನಾದಿಂದ ಉಚಿತ ಕಾಲೇಜು ಶಿಕ್ಷಣ, ಜನರಿಗೆ ಕಾಂಗ್ರೆಸ್ ನೀಡ್ತಿದೆ ಭರ್ಜರಿ ಭರವಸೆ

ಡಿಜಿಟಲ್ ಕನ್ನಡ ಟೀಮ್:

ಸದ್ಯ ಗುಜರಾತ್ ವಿಧಾನಸಭಾ ಚುನಾವಣೆ ದೇಶದ ಗಮನವನ್ನೇ ತನ್ನತ್ತ ಸೆಳೆದುಕೊಂಡಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೂ ಪ್ರತಿಷ್ಠೆಯ ಕಣವೂ ಆಗಿದೆ. ಪರಿಣಾಮ ಗುಜರಾತಿನಲ್ಲಿ ಆರೋಪ ಪ್ರತ್ಯಾರೋಪಗಳ ಪರ್ವವೇ ನಡೆಯುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತಿನ ಜನರ ಮುಂದೆ ಭರವಸೆಗಳ ಭಂಡಾರವನ್ನೇ ಇಟ್ಟಿದ್ದಾರೆ.

ಸದ್ಯ ಗುಜರಾತಿನಲ್ಲಿ ಚುನಾವಣಾ ಪ್ರಚಾರದಲ್ಲಿ ಮುಳುಗಿರುವ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಾ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರಿಗೆ ಸಿಗೋ ಅನುಕೂಲಗಳೇನು ಎಂಬುದನ್ನು ವಿವರಿಸಿದ್ದಾರೆ. ಹಾಗಾದರೆ ರಾಹುಲ್ ಗಾಂಧಿ ನೀಡಿರುವ ಭರವಸೆಗಳೇನು ನೋಡೋಣ ಬನ್ನಿ…

‘ಪ್ರಧಾನಿ ಮೋದಿ ಅವರು ತಮ್ಮ ಸ್ನೇಹಿತರಾದ ಐದರಿಂದ ಹತ್ತು ಉದ್ದಿಮೆದಾರರ ₹ 1.24 ಲಕ್ಷ ಕೋಟಿಯಷ್ಟು ಸಾಲ ಮನ್ನಾ ಮಾಡಿದ್ದಾರೆ. ಆದರೆ ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿದರೆ ಮೋದಿ ಹಾಗೂ ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಇದು ನಮ್ಮ ನೀತಿಯಲ್ಲ ಎಂದು ಹೇಳುತ್ತಾರೆ.

ಮೋದಿ ಅವರು 22 ವರ್ಷಗಳಿಂದ ರೈತರ ಕುರಿತಾಗಿ ಮಾತನಾಡುತ್ತಿದ್ದಾರೆ. ಆದರೂ ನಿಮಗೆ ಏನೂ ಸಿಕ್ಕಿಲ್ಲ. ನಿಮ್ಮ ಜಮೀನನ್ನು ಕಿತ್ತುಕೊಳ್ಳಲಾಗಿದೆ. ನಿಮಗೆ ಸಿಗಬೇಕಿದ್ದ ನೀರನ್ನು ಕೈಗಾರಿಕೆಗಳಿಗೆ ತಿರುಗಿಸಲಾಗಿದೆ. ನಿಮಗೆ ಬೆಳೆ ವಿಮೆಯೂ ಸಿಕ್ಕಿಲ್ಲ. ಹೀಗೆ ನಿರಂತರವಾಗಿ ಸಂಕಷ್ಟ ಎದುರಿಸುತ್ತಿರುವ ನಿಮಗೆ ಒಂದು ಭರವಸೆ ನೀಡುತ್ತೇನೆ.

ಗುಜರಾತಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಹತ್ತು ದಿನಗಳಲ್ಲಿ ರೈತರಿಗಾಗಿ ಹೊಸ ನೀತಿ ರಚಿಸುತ್ತೇವೆ. ಅಲ್ಲದೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇವೆ. ಅನೇಕ ಜನರು ತಮ್ಮ ಮಕ್ಕಳನ್ನು ಇಂಜಿನಿಯರ್ ಹಾಗೂ ಡಾಕ್ಟರ್ ಮಾಡಬೇಕೆಂಬ ಕನಸು ಕಟ್ಟಿಕೊಂಡಿರುತ್ತಾರೆ. ಅವರ ಕನಸು ನನಸಾಗಿಸಲು ₹ 10 ರಿಂದ 15 ಲಕ್ಷ ಬೇಕಾಗುತ್ತದೆ. ಹೀಗಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸರ್ಕಾರಿ ಕಾಲೇಜುಗಳಲ್ಲಿ ಉಚಿತ ಶಿಕ್ಷಣ ನೀಡುವುದರ ಜತೆಗೆ ಇತರೆ ಕಾಲೇಜುಗಳಲ್ಲಿನ ಶುಲ್ಕ ಶೇ.80 ರಷ್ಟು ಕಡಿಮೆ ಮಾಡಲಿದ್ದೇವೆ.

ನೀವು ರಟಿದಾರ್, ರೈತರು ಅಥವಾ ದಲಿತರಾಗಿದ್ದು, ಸರ್ಕಾರವನ್ನು ಪ್ರಶ್ನಿಸಿದರೆ ನಿಮ್ಮ ವಿರುದ್ಧ ದಾಳಿ ಮಾಡುತ್ತಾರೆ. ಆದರೆ ಅವರ ಆತ್ಮೀಯರಾದ ಐದರಿಂದ ಹತ್ತು ಉದ್ದಿಮೆದಾರರು ನಿಮ್ಮ ಜಮೀನು, ವಿದ್ಯುತ್, ನೀರು ಬೇಕು  ಎಂದು ಕೇಳಿದರೆ ಮೋದಿ ಅವರು ತಕ್ಷಣವೇ ಅನುಕೂಲ ಮಾಡಿಕೊಡುತ್ತಾರೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದ ವಿಜಯ್ ರುಪಾನಿ ಅವರು ಕೇವಲ ರಬ್ಬರ್ ಸ್ಟಾಂಪ್ ಇದ್ದಂತೆ. ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪರೋಕ್ಷವಾಗಿ ನಿಯಂತ್ರಿಸುತ್ತಿದ್ದರು.

ಗುಜರಾತಿನ ವಿಮಾ ಕಂಪನಿಗಳಿಗೆ ನೀವು ₹ 20,740 ಕೋಟಿ ನೀಡಿದ್ದೀರಿ. ನಿಮಗೆ ಮರಳಿ ಬಂದಿರುವುದು ಕೇವಲ ₹ 4,700 ಕೋಟಿ ಮಾತ್ರ. ಉಳಿದ ₹ 15 ಸಾವಿರ ಕೋಟಿ ಹಣ ಕಂಪನಿಗಳ ಪಾಲಾಗಿವೆ. ಇದನ್ನು ಮೋದಿ ಅವರು ತಮ್ಮ ಭಾಷಣಗಳಲ್ಲಿ ಹೇಳುವುದಿಲ್ಲ. ಅವರು ಕೇವಲ ರೈತರ ಸಾವಿನಲ್ಲಿ ತಮ್ಮ ಲಾಭ ನೋಡುತ್ತಾರೆ.’

Leave a Reply