ಚೀನಾಗೆ ತೊಡೆತಟ್ಟಲು 6 ಅಣ್ವಸ್ತ್ರ ಜಲಾಂತರ್ಗಾಮಿ ನಿರ್ಮಾಣಕ್ಕೆ ಭಾರತ ನಿರ್ಧಾರ, ಏನಿದರ ಮಹತ್ವ?

ಡಿಜಿಟಲ್ ಕನ್ನಡ ಟೀಮ್:

ಸದ್ಯ ಜಾಗತಿಕವಾಗಿ ಸಮುದ್ರ ಮಾರ್ಗಗಳ ಮೇಲೆ ನಿಯಂತ್ರಣ ಸಾಧಿಸಲು ಭಾರತ ಹಾಗೂ ಚೀನಾ ಹೇಗೆ ತೊಡೆ ತಟ್ಟಿ ನಿಂತಿವೆಯೋ ಅದೇ ರೀತಿ ಹಿಂದೂ ಮಹಾಸಾಗರದ ಮೇಲೂ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿವೆ. ಈ ಒಂದು ಚದುರಂಗದ ಆಟದಲ್ಲಿ ಪ್ರಮುಖ ಪಾತ್ರ ವಹಿಸೋದು ಎರಡೂ ದೇಶಗಳ ನೌಕಾ ಬಲ. ಹೀಗಾಗಿ ಚೀನಾವನ್ನು ಗಮನದಲ್ಲಿಟ್ಟುಕೊಂಡು ಭಾರತ ಆರು ಅಣ್ವಸ್ತ್ರ ಸಜ್ಜಿತ ಜಲಾಂತರ್ಗಾಮಿ ನಿರ್ಮಾಣ ಮಾಡಲು ನಿರ್ಧರಿಸಿದೆ.

ಈಗಾಗಲೇ ಚೀನಾ ಹಿಂದೂಮಹಾಸಾಗರದಲ್ಲಿ ತನ್ನ ಅಣ್ವಸ್ತ್ರ ಜಲಾಂತರ್ಗಾಮಿಗಳನ್ನು ನಿಯೋಜಿಸಲು ಮುಂದಾಗಿದ್ದು, ಮುಂದಿನ ವರ್ಷದ ವೇಳೆಗೆ ಇದು ಸಾಧ್ಯವಾಗಲಿದೆ. ಇದಕ್ಕೆ ಪ್ರತಿಯಾಗಿ ಭಾರತ ತನ್ನ ನೌಕ ಬಲದ ಮಿಲಿಟರಿ ತಾಲೀಮು ನಡೆಸಲು ನಿರ್ಧರಿಸಿದೆ. ಸದ್ಯ ಭಾರತ ದೊಡ್ಡ ಮಟ್ಟದ ಜಲಾಂತರ್ಗಾಮಿಯ ನಿರ್ಮಾಣದ ಯೋಜನೆ ಹೊಂದಿದ್ದು, ಅದರಲ್ಲಿ ಆರು ಅಣ್ವಸ್ತ್ರ ದಾಳಿಯ ಜಲಾಂತರ್ಗಾಮಿ, ನಾಲ್ಕು ಅಣ್ವಸ್ತ್ರ ಸಜ್ಜಿತ ಜಲಾಂತರ್ಗಾಮಿ ಮತ್ತು 18 ಡೀಸೇಲ್- ಎಲೆಕ್ಟ್ರಿಕಲ್ ಜಲಾಂತರ್ಗಾಮಿಯನ್ನು ನಿರ್ಮಾಣ ಮಾಡಲಿದೆ.

ಸದ್ಯ ಭಾರತೀಯ ನೌಕಾ ಪಡೆಯಲ್ಲಿರುವ ಜಲಾಂತರ್ಗಾಮಿಗಳನ್ನು ನೋಡುವುದಾದರೆ, 13 ಹಳೆ ಮಾದರಿಯ ಜಲಾಂತರ್ಗಾಮಿಗಳಿದ್ದು, ಆ ಪೈಕಿ ಒಂದು ಸ್ವದೇಶಿ ನಿರ್ಮಿತ ಜಲಾಂತರ್ಗಾಮಿಯಾಗಿದೆ. ಈ ಐಎನ್ಎಸ್ ಅರಿಹಂತ್ ಜಲಾಂತರ್ಗಾಮಿಯನ್ನು ಕಳೆದ ವರ್ಷ ಸೇನೆಗೆ ಅಪ್ರಿಸಲಾಯಿತು. ಇನ್ನು ಮತ್ತೊಂದು ಜಲಾಂತರ್ಗಾಮಿಯನ್ನು ರಷ್ಯಾದಿಂದ ಪಡೆದಿದ್ದು, ಈ ಐಎನ್ಎಸ್ ಚಕ್ರದಲ್ಲಿ ಅಣು ಅಸ್ತ್ರ ಇಲ್ಲ. ಹೀಗಾಗಿ ಭಾರತ ಅಣ್ವಸ್ತ್ರ ಸಜ್ಜಿತ ಜಲಾಂತರ್ಗಾಮಿ ನಿರ್ಮಾಣಕ್ಕೆ ಮುಂದಾಗಿದೆ. ಸದ್ಯ ವಿಶಾಖಪಟ್ಟಣದಲ್ಲಿ ₹ 90 ಸಾವಿರ ಕೋಟಿ ವೆಚ್ಚದಲ್ಲಿ ಐಎನ್ಎಸ್ ಅರಿಧಾಮನ್ ಎಂಬ ಜಲಾಂತರ್ಗಾಮಿ ನಿರ್ಮಾಣ ಮಾಡಲಾಗುತ್ತಿದೆ. ಇನ್ನು ₹ 60 ಸಾವಿರ ಕೋಟಿ ವೆಚ್ಚದಲ್ಲಿ ಆರು ಸ್ವದೇಶಿ ನಿರ್ಮಿತ ಅಣ್ವಸ್ತ್ರ ಜಲಾಂತರ್ಗಾಮಿ ನಿರ್ಮಾಣ ಮಾಡಲು ತಯಾರಿ ನಡೆದಿದೆ. ಐಎನ್ಎಸ್ ಅರಿಧಾಮನ್ ಜಲಾಂತರ್ಗಾಮಿ ನಿರ್ಮಾಣ ಮುಂದಿನ ವರ್ಷ ಪೂರ್ಣಗೊಂಡು ನೌಕಾಸೇನೆ ಸೇರಿಕೊಳ್ಳುವ ನಿರೀಕ್ಷೆ ಇದೆ. ಇನ್ನು ಭಾರತದ ನೌಕಾ ಪಡೆಯ ಸಾಮರ್ಥ್ಯದ ಬಗ್ಗೆ ನೋಡುವುದಾದರೆ…

  • ಈಗಾಗಲೇ 138 ಯುದ್ಧನೌಕೆಗಳಿವೆ. (45 ಸಾವಿರ ಟನ್ ಯುದ್ಧ ವಿಮಾನವಿರುವ ಐಎನ್ಎಸ್ ವಿಕ್ರಮಾದಿತ್ಯ, 48 ಪ್ರಮುಖ ಯುದ್ಧ ಹಡಗು ಹಾಗೂ 15 ಜಲಾಂತರ್ಗಾಮಿಗಳು ಸೇರಿದಂತೆ)
  • ಇನ್ನು ನಿರ್ಮಾಣ ಹಂತದಲ್ಲಿ 28 ಯುದ್ಧ ನೌಕೆಗಳಿವೆ.  (40 ಸಾವಿರ ಟನ್ ಸಾಮರ್ಥ್ಯದ ಐಎನ್ಎಸ್ ವಿಕ್ರಾಂಕ್ ಸೇರಿದಂತೆ), 6 ಡೀಸೆಲ್-ಎಲೆಕ್ಟ್ರಿಕ್ ಸ್ಕಾರ್ಪಿಯನ್ ಜಲಾಂತರ್ಗಾಮಿ. ( 3.5 ಲಕ್ಷ ಕೋಟಿ ವೆಚ್ಚದಲ್ಲಿ ನಿರ್ಮಾಣ)
  • ಭವಿಷ್ಯದಲ್ಲಿ 212 ಯುದ್ಧ ನೌಕೆ ನಿರ್ಮಾಣಕ್ಕೆ ತಯಾರಿ. (ಇದರಲ್ಲಿ 198 ಯುದ್ಧ ಹಡಗು ಮತ್ತು 14 ಸಣ್ಣ ಹಡಗು) ಮತ್ತು 2017ರ ವೇಳೆಗೆ ನೌಕಾಪಡೆಯಲ್ಲಿ 458 ಯುದ್ಧ ವಿಮಾನ ಅಳವಡಿಕೆ.

ಇದು ಭಾರತದ ನೌಕ ಪಡೆಯ ಸಾಮರ್ಥ್ಯ ಹಾಗೂ ಭವಿಷ್ಯದಲ್ಲಿ ಇದರ ಬಲವರ್ದನೆಗೆ ತೆಗೆದುಕೊಳ್ಳಲಾಗಿರುವ ಯೋಜನೆಗಳು. ಸದ್ಯ ಏಷ್ಯಾದಲ್ಲಿ ಚೀನಾಗೆ ಪರ್ಯಾಯ ಶಕ್ತಿಯಾಗಿ ಬೆಳೆಯುತ್ತಿರುವ ಭಾರತ ಕೇವಲ ಬೌಗೋಳಿಕವಾಗಿ ಮಾತ್ರ ಚೀನಾಗೆ ಸಡ್ಡು ಹೊಡೆಯುತ್ತಿಲ್ಲ. ಸಾಗರ ಹಾಗೂ ಸಮುದ್ರ ಮಾರ್ಗ ಹಾಗೂ ಪ್ರದೇಶಗಳಲ್ಲೂ ಚೀನಾಗೆ ತೊಡೆ ತಟ್ಟುವ ರೀತಿಯಲ್ಲಿ ಬೆಳೆಯುತ್ತಿರುವುದು ಗಮನಾರ್ಹ.

Leave a Reply