ಗುಜರಾತ್ ಚುನಾವಣೆಯಲ್ಲಿ ಶಿಕ್ಷಣ ಕ್ಷೇತ್ರವನ್ನೇ ಟ್ರಂಪ್ ಕಾರ್ಡ್ ಆಗಿ ಬಳಸುತ್ತಿದ್ದಾರಾ ರಾಹುಲ್?

ಡಿಜಿಟಲ್ ಕನ್ನಡ ಟೀಮ್:

ಎರಡು ದಶಕಗಳಿಂದ ಗುಜರಾತಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ಸಕಲ ಪ್ರಯತ್ನ ಪಡುತ್ತಿದೆ. ಕೇಂದ್ರ ಸರ್ಕಾರದಿಂದ ಹಿಡಿದು ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಅವರ ಇತ್ತೀಚಿನ ಭಾಷಣಗಳನ್ನು ಗಮನಿಸಿದರೆ ಶಿಕ್ಷಣ ಕ್ಷೇತ್ರವನ್ನೇ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವಂತೆ ಕಾಣುತ್ತಿದೆ.

ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲಾ ಸರ್ಕಾರಿ ಕಾಲೇಜುಗಳಲ್ಲಿ ಉಚಿತ ಶಿಕ್ಷಣ ಹಾಗೂ ಇತರೆ ಕಾಲೇಜುಗಳಲ್ಲಿನ ಶುಲ್ಕವನ್ನು ಶೇ.80ರಷ್ಟು ಇಳಿಕೆ ಮಾಡುವ ಭರವಸೆ ನೀಡಿರುವ ರಾಹುಲ್ ಈಗ ಇಂದು ಮತ್ತೆ ಶಿಕ್ಷಣ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರದ ಸಾಧನೆಯನ್ನು ಪ್ರಶ್ನಿಸಿದ್ದಾರೆ. ಶನಿವಾರ ಟ್ವಿಟರ್ ನಲ್ಲಿ ಈ ಕುರಿತು ಟೀಕೆ ಮಾಡಿರುವ ರಾಹುಲ್ ಹೇಳಿರೋದಿಷ್ಟು…

‘ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರ ಏಕೆ ಸೂಕ್ತ ರೀತಿಯಲ್ಲಿ ಹಣ ಹೂಡಿಕೆ ಮಾಡುತ್ತಿಲ್ಲ? ಗುಜರಾತ್ ರಾಜ್ಯ ಈ ವಿಚಾರದಲ್ಲಿ ಏಕೆ 26ನೇ ಸ್ಥಾನದಲ್ಲಿದೆ? ಈ ರಾಜ್ಯದ ಯುವಕರು ಮಾಡಿರುವ ತಪ್ಪಾದರೂ ಏನು?’

ಇನ್ನು ಈ ಹಿಂದೆ ಚುನಾವಣಾ ಪ್ರಚಾರದ ವೇಳೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ದಾಳಿ ನಡೆಸಿದ್ದ ರಾಹುಲ್ ಗಾಂಧಿ, ‘ಶಿಕ್ಷಣ ಕ್ಷೇತ್ರವನ್ನು ವಾಣಿಜ್ಯ ಕ್ಷೇತ್ರವನ್ನಾಗಿ ಪರಿವರ್ತಿಸಲಾಗಿದೆ. ಪರಿಣಾಮ ಶಾಲೆ ಹಾಗೂ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಮೇಲೆ ದೊಡ್ಡ ಪ್ರಮಾಣದ ಶುಲ್ಕ ವಿಧಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ನವ ಭಾರತ ಕಟ್ಟಲು ಹೇಗೆ ಸಾಧ್ಯ. ಮೋದಿ ಅವರು ಗುಜರಾತಿನ ಹಳ್ಳಿಗಳನ್ನು ತಮ್ಮ ಸ್ನೇಹಿತ ಉದ್ಯಮಿಗಳಿಗೆ ಮಾರುತ್ತಿದ್ದಾರೆ’ ಎಂದು ಟೀಕೆ ಮಾಡುತ್ತಿದ್ದಾರೆ.

ರಾಹುಲ್ ಗಾಂಧಿ ಅವರ ಈ ಎಲ್ಲಾ ಮಾತುಗಳಿಂದ ಶಿಕ್ಷಣ ಕ್ಷೇತ್ರವನ್ನು ಬಿಜೆಪಿ ವಿರುದ್ಧದ ದಾಳಿಗೆ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿರುವುದು ಸ್ಪಷ್ಟವಾಗಿದೆ.

Leave a Reply