ನಿರೀಕ್ಷೆಯಂತೆ ಪಾಕಿಸ್ತಾನ ರಾಜಕೀಯಕ್ಕೆ ಹಫೀಜ್ ಸಯೀದ್, ಉಗ್ರವಾದಕ್ಕೆ ಕಾಶ್ಮೀರ ಹೋರಾಟದ ಪಟ್ಟಿ

ಡಿಜಿಟಲ್ ಕನ್ನಡ ಟೀಮ್:

ನಿರೀಕ್ಷೆಯಂತೆ ಗೃಹ ಬಂಧನದಿಂದ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಉಗ್ರ ಹಫೀಜ್ ಸಯೀದ್ ಪಾಕಿಸ್ತಾನ ರಾಜಕೀಯದತ್ತ ಮುಖಮಾಡಿದ್ದಾನೆ. ಈತನ ಜಮಾತ್ ಉದ್ ದವಾ ಸಂಘಟನೆಗೆ ಸೇರಿರುವ ಮಿಲ್ಲಿ ಮುಸ್ಲಿಂ ಲೀಗ್ ಪಕ್ಷ 2018ರಲ್ಲಿ ನಡೆಯಲಿರುವ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲಿದೆ.

ಹೌದು, ಈ ಕುರಿತಾಗಿ ಸ್ವತಃ ಹಫೀಜ್ ಸಯೀದ್ ಲಾಹೋರಿನಲ್ಲಿರುವ ಸಂಘಟನೆಯ ಕೇಂದ್ರ ಕಚೇರಿಯಲ್ಲಿ ಅಂಕಣಕಾರರೊಂದಿಗೆ ಚರ್ಚೆ ನಡೆಸಿದ್ದು, ಈ ವಿಚಾರವಾಗಿ ಮಾಹಿತಿ ನೀಡಿದ್ದಾನೆ. ‘ದ ಮಿಲ್ಲಿ ಮುಸ್ಲಿಂ ಲೀಗ್ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದೆ. ನಾನು ಮುಂದಿನ ವರ್ಷವನ್ನು ಕಾಶ್ಮೀರದ ಹೋರಾಟಕ್ಕಾಗಿ ಮುಡಿಪಾಗಿಡಲು ನಿರ್ಧರಿಸಿದ್ದೇನೆ. ಸ್ವತಂತ್ರಕ್ಕಾಗಿ ಪರದಾಡುತ್ತಿರುವ ಕಾಶ್ಮೀರಿಗರ ಪರವಾಗಿ ನಿಲ್ಲುತ್ತೇನೆ.

ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ನಾನು ಕಾಶ್ಮೀರಿಗರ ಪರವಾಗಿ ನಿಲ್ಲಲು ಸಿದ್ಧನಿದ್ದೇನೆ ಎಂದು ಭಾರತಕ್ಕೆ ಹೇಳಲು ಬಯಸುತ್ತೇನೆ. ನಾವು ಕಾಶ್ಮೀರದ ಪರವಾಗಿ ಧ್ವನಿ ಎತ್ತುವುದನ್ನು ನಿಲ್ಲಿಸಲು ಭಾರತ ಪ್ರಯತ್ನಿಸುತ್ತಿದೆ. ಇದೇ ಕಾರಣಕ್ಕೆ ಪಾಕಿಸ್ತಾನ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ’ ಎಂದು ಹೇಳಿದ್ದಾನೆ.

ಕಳೆದ ವಾರವಷ್ಟೇ ಕಾನೂನು ಸಂಸ್ಥೆಯ ನೆರವಿನೊಂದಿಗೆ ವಿಶ್ವಸಂಸ್ಥೆ ಅರ್ಜಿ ಹಾಕಿರುವ ಸಯೀದ್, ತನ್ನ ಹೆಸರನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಯಿಂದ ಕೈಬಿಡುವಂತೆ ಮನವಿ ಮಾಡಿದ್ದಾನೆ. ಆದರೆ ಈತನ ಈ ಪ್ರಯತ್ನಕ್ಕೆ ಭಾರತ ಹಾಗೂ ಅಮೆರಿಕ ಒಪ್ಪುವುದಿಲ್ಲ. ಹೀಗಾಗಿ ಈತ ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಸದ್ಯಕ್ಕೆ ಕಷ್ಟವಾಗಿದೆ. ಆದರೂ ಪರೋಕ್ಷವಾಗಿ ತನ್ನ ಪಕ್ಷದಿಂದ ಪಾಕಿಸ್ತಾನದ ಆಡಳಿತ ನಡೆಸಲು ಹಫೀಜ್ ಸಯೀದ್ ಮುಂದಾಗಿದ್ದಾನೆ.

ತನ್ನ ಭಯೋತ್ಪಾದನೆಯನ್ನು ಮರೆ ಮಾಚುವ ಸಲುವಾಗಿ ಕಾಶ್ಮೀರದ ಹೋರಾಟ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುವ ಪ್ರಯತ್ನ ನಡೆಸುತ್ತಿರುವುದು ಸ್ಪಷ್ಟವಾಗಿದೆ.

Leave a Reply