ಇರಾನಿನಲ್ಲಿ ಭಾರತ ಅಭಿವೃದ್ಧಿ ಮಾಡಿದ ಚಬಹರ್ ಬಂದರು ಉದ್ಘಾಟನೆ, ಚೀನಾ-ಪಾಕ್ ವಿರುದ್ಧ ಭಾರತದ ಜಯವಿದು

ಡಿಜಿಟಲ್ ಕನ್ನಡ ಟೀಮ್:

ಅಫ್ಘಾನಿಸ್ತಾನ ಹಾಗೂ ಮಧ್ಯ ಏಷ್ಯಾ ಭಾಗದ ರಾಷ್ಟ್ರಗಳೊಂದಿಗೆ ಭಾರತದ ವ್ಯಾಪಾರಕ್ಕೆ ಬ್ರೇಕ್ ಹಾಕಬೇಕು ಹಾಗೂ ಸಮುದ್ರ ಮಾರ್ಗದಲ್ಲೂ ಭಾರತಕ್ಕೆ ಅಡ್ಡಿಪಡಿಸಲು ಚೀನಾ ಹಾಗೂ ಪಾಕಿಸ್ತಾನ ನಡೆಸಿದ್ದ ಕುತಂತ್ರಕ್ಕೆ ಭಾರತ ತಕ್ಕ ಉತ್ತರ ನೀಡಿದೆ. ಅದು ಇರಾನಿನಲ್ಲಿರುವ ಚಬಹರ್ ಬಂದರು ಅಭಿವೃದ್ಧಿ ಮೂಲಕ. ಹೀಗೆ ಭಾರತ ಅಭಿವೃದ್ಧಿಗೊಳಿಸಿದ ಚಬಹರ್ ಬಂದರು ಇಂದು ಉದ್ಘಾಟನೆಯಾಗಿದೆ.

ರಷ್ಯಾದಿಂದ ಭಾರತಕ್ಕೆ ವಾಪಸ್ಸಾಗುವ ಮಾರ್ಗದಲ್ಲಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತೆಹ್ರಾನ್ ನಲ್ಲಿ ಶನಿವಾರ ಇಳಿದುಕೊಂಡು ಇರಾನ್ ವಿದೇಶಾಂಗ ಸಚಿವರ ಜತೆ ಬಂದರು ಯೋಜನೆ ಕುರಿತಂತೆ ಚರ್ಚೆಯನ್ನು ನಡೆಸಿದರು. ಇಂದು ಇರಾನ್ ಅಧ್ಯಕ್ಷ ಹಸನ್ ರೌಹಾನ್ ಚಬಹರ್ ಬಂದರು ಉದ್ಘಾಟನೆ ಮಾಡಿದ್ದು, ಭಾರತ ಅಫ್ಘಾನಿಸ್ತಾನ ಹಾಗೂ ಇತರೆ ದೇಶಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಭಾರತ ಮಧ್ಯ ಏಷ್ಯಾ ರಾಷ್ಟ್ರಗಳೊಂದಿಗೆ ವ್ಯಾಪಾರ ನಡೆಸಲು ಇದ್ದ ರಸ್ತೆ ಮಾರ್ಗವನ್ನು ಪಾಕಿಸ್ತಾನ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಬಂದ್ ಮಾಡಿತು. ಇದರ ಜತೆಗೆ ಚೀನಾದ ಸಮುದ್ರ ಮಾರ್ಗ ಬಲವರ್ದನೆಗಾಗಿ ಪಾಕಿಸ್ತಾನ ತನ್ನ ಗದ್ವಾರ ಪ್ರದೇಶದಲ್ಲಿರುವ ಬಂದರು ಅಭಿವೃದ್ಧಿಗೊಳಿಸಿಕೊಂಡು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿತ್ತು. ಸಮುದ್ರ ಮಾರ್ಗದಲ್ಲಿ ಹಿಡಿತ ಸಾಧಿಸಿದ ಚೀನಾ ಒಂದು ಕಡೆ ರಸ್ತೆ ಮಾರ್ಗ ತಡೆದ ಪಾಕಿಸ್ತಾನ ಮತ್ತೊಂದು ಕಡೆ ಭಾರತಕ್ಕೆ ಸವಾಲೆಸೆದಿತ್ತು.

ಈ ಹಂತದಲ್ಲಿ ಭಾರತ ತನ್ನು ರಾಜತಾಂತ್ರಿಕತೆಯ ಮೂಲಕ ಇರಾನ್ ಹಾಗೂ ಅಫ್ಘಾನಿಸ್ತಾನದ ಜತೆಗೆ ಒಪ್ಪಂದ ಮಾಡಿಕೊಂಡ ಭಾರತ ಇರಾನಿನ ಗದ್ವಾರ್ ಬಂದರು ಅಭಿವೃದ್ಧಿ ಮಾಡಿ ಅದರ ನಿಯಂತ್ರಣ ಪಡೆದುಕೊಂಡಿತು. ನಂತರ ಇರಾನ್ ರಸ್ತೆ ಮಾರ್ಗವಾಗಿ ಅಫ್ಘಾನಿಸ್ತಾನ ಹಾಗೂ ಮಧ್ಯ ಏಷ್ಯಾ ರಾಷ್ಟ್ರಗಳಿಗೆ ಸಂಪರ್ಕ ಸಾಧಿಸಿತು. ಇಲ್ಲಿ ಗಮನಿಸಬೇಕಿರುವ ಅಂಶ ಎಂದರೆ ಚೀನಾ ಅಭಿವೃದ್ಧಿ ಪಡಿಸಿರೋ ಪಾಕಿಸ್ತಾನದ ಗದ್ವಾರ್ ಬಂದರಿನಿಂದ ಚಬಹರ್ ಬಂದರಿನ ಅಂತರ 100 ಕಿ,ಮೀ ಗೂ ಕಡಿಮೆ ಇದೆ. ಅದರೊಂದಿಗೆ ಭಾರತದ ವ್ಯಾಪಾರ ಮಾರ್ಗ ಬಂದ್ ಮಾಡಿದೆ ಎಂದು ಬೀಗುತ್ತಿದ್ದ ಪಾಕಿಸ್ತಾನ ಭಾರತದ ತಂತ್ರಕ್ಕೆ ಕೈ ಹಿಸುಕಿಕೊಳ್ಳಲಾರಂಭಿಸಿದೆ.

ಅಕ್ಟೋಬರ್ ನಲ್ಲಿ ಭಾರತದಿಂದ ಅಫ್ಘನಿಸ್ತಾನಕ್ಕೆ ಹಡಗಿನ ಮೂಲಕ ಲಕ್ಷಾಂತರ ಟನ್ ಗೋಧಿಯನ್ನು ರವಾನಿಸಲಾಗಿತ್ತು. ಇದಾದ ಬಳಿಕ ವ್ಯಾಪಾರ ಮಾರ್ಗಕ್ಕೆ ಪಾಕಿಸ್ತಾನವನ್ನೇ ಅವಲಂಬಿಸಿದ್ದ ಅಫ್ಘಾನಿಸ್ತಾನ ಬಹಿರಂಗವಾಗಿ ಇನ್ನು ಮುಂದೆ ನಾವು ಪಾಕಿಸ್ತಾನದ ಮೇಲೆ ಅವಲಂಬಿತವಾಗುವ ಯಾವುದೇ ಅಗತ್ಯ ಇಲ್ಲ ಎಂದು ಹೇಳಿತ್ತು. ಇದು ಸಹಜವಾಗಿಯೇ ಪಾಕಿಸ್ತಾನ ಮುಖವನ್ನು ಚಿಕ್ಕದಾಗಿಸಿತ್ತು.

Leave a Reply