ಮುಂದುವರಿದ ವಿರಾಟ ಫಾರ್ಮ್, ಕೊಹ್ಲಿ ಮಾಡಿದ ದಾಖಲೆಗಳೇನು ಗೊತ್ತೆ?

ಡಿಜಿಟಲ್ ಕನ್ನಡ ಟೀಮ್:

ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೊಹ್ಲಿ ಆಡಿದ ಪ್ರತಿ ಪಂದ್ಯಗಳಲ್ಲೂ ಒಂದೊಂದು ದಾಖಲೆ ನಿರ್ಮಾಣವಾಗುತ್ತಿರೋದು ಸಾಮಾನ್ಯವಾಗಿ ಬಿಟ್ಟಿದೆ. ಶ್ರೀಲಂಕಾ ವಿರುದ್ಧ ದೆಹಲಿಯ ಫಿರೋಜ್ ಶಾ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲೂ ಕೊಹ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದರ ಪರಿಣಾಮ ಮತ್ತಷ್ಟು ದಾಖಲೆಗಳು ಕೊಹ್ಲಿಯ ಪಾದಕ್ಕೆ ಬಂದು ಬಿದ್ದಿವೆ.

ಈ ಪಂದ್ಯದಲ್ಲಿ 287 ಎಸೆತಗಳನ್ನಾಡಿರುವ ಕೊಹ್ಲಿ 25 ಬೌಂಡರಿಗಳ ನೆರವಿನೊಂದಿಗೆ 243 ರನ್ ದಾಖಲಿಸಿದರು. ಕಳೆದ ಭಾನುವಾರವೂ ಎರಡನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದ ಕೊಹ್ಲಿ ಈ ಪಂದ್ದಲ್ಲೂ ದ್ವಿಶತಕ ಬಾರಿಸಿದ್ದಾರೆ. ಈ ದ್ವಿಶತಕದೊಂದಿಗೆ ಕೊಹ್ಲಿ ಬರೆದಿರುವ ದಾಖಲೆಗಳು ಹೀಗಿವೆ…

  • ನಾಯಕನಾಗಿ ಅತಿ ಹೆಚ್ಚು ದ್ವಿಶತಕ ಗಳಿಸಿದ ಆಟಗಾರ ಎಂಬ ದಾಖಲೆ ಕೊಹ್ಲಿ ಪಾಲಾಗಿದೆ. ಕೊಹ್ಲಿ ನಾಯಕನಾದ ನಂತರ 6 ದ್ವಿಶತಕ ಸಿಡಿಸಿದ್ದು, ಈ ಹಿಂದೆ ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರಾ ಅವರ ಐದು ದ್ವಿಶತಕದ ದಾಖಲೆಯನ್ನು ಹಿಂದಿಕ್ಕಿದ್ದಾರೆ. ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ಬ್ರಾಡ್ಮನ್, ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್, ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ ತಲಾ 4 ದ್ವಿಶತಕ ದಾಖಲಿಸಿದ್ದಾರೆ. ಇನ್ನು ಭಾರತದ ನಾಯಕರನ್ನು ನೋಡುವುದಾದರೆ, ದಂತಕತೆಗಳಾದ ಪಟೌಡಿ, ಸುನೀಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಮತ್ತು ಮಹೇಂದ್ರ ಸಿಂಗ್ ಧೋನಿ ನಾಯಕರಾಗಿದ್ದಾಗ ಕೇವಲ ಒಂದು ದ್ವಿಶತಕ ಬಾರಿಸಿದ್ದು, ಉಳಿದ ನಾಯಕರು ಒಂದೇ ಒಂದು ದ್ವಿಶತಕವನ್ನು ಬಾರಿಸಿಲ್ಲ.
  • ಅತಿ ಹೆಚ್ಚು ದ್ವಿಶತಕ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಜಂಟಿ ಅಗ್ರ ಸ್ಥಾನದಲ್ಲಿದ್ದಾರೆ. ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್, ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರೊಂದಿಗೆ 6 ದ್ವಿಶತಕ ದಾಖಲಿಸಿದ ಸಾಧನೆ ಮಾಡಿದ್ದಾರೆ.
  • ಇನ್ನು ಒಂದೇ ವರ್ಷದಲ್ಲಿ 3 ದ್ವಿಶತಕ ಮಾಡಿದ ಬ್ಯಾಟ್ಸ್ ಮನ್ ಗಳು ಹಲವಾರು ಇದ್ದಾರೆ. ಆದರೆ ಬೇರೆ ಬೇರೆ ವರ್ಷಗಳಲ್ಲಿ ಪ್ರತ್ಯೇಕವಾಗಿ 3 ಬಾರಿ ದ್ವಿಶತಕ ಬಾರಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಕೀರ್ತಿ ಕೊಹ್ಲಿ ಮುಡಿಗೇರಿದೆ. ಕೊಹ್ಲಿ ಕಳೆದ ವರ್ಷ ಮೂರು ದ್ವಿಶತಕ ದಾಖಲಿಸಿದ್ದರು. ಈಗ ಈ ವರ್ಷವೂ ಮೂರು ದ್ವಿಶತಕ ದಾಖಲಿಸಿದ್ದಾರೆ.
  • ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ದ್ವಿಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ 6ನೇ ಸ್ಥಾನದಲ್ಲಿದ್ದು, ಬ್ರಾಡ್ಮನ್ (12), ಸಂಗಕ್ಕಾರ (11), ಲಾರಾ (09), ಹಮ್ಮೊಂಡ್ (07), ಮಹೆಲಾ ಜಯವರ್ದನೆ (07) ಅಗ್ರ ಐದು ಸ್ಥಾನಗಳಲ್ಲಿದ್ದಾರೆ.
  • ಇನ್ನು ಸತತ ಎರಡು ಪಂದ್ಯಗಳಲ್ಲಿ ದ್ವಿಶತಕ ಬಾರಿಸಿದ ವಿಶ್ವದ 6ನೇ ಬ್ಯಾಟ್ಸ್ ಮನ್ ಆಗಿದ್ದಾರೆ. ಈ ಹಿಂದೆ ಇಂಗ್ಲೆಂಡ್ ಆಟಗಾರ ಹಮ್ಮೊಂಡ್, ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್, ಭಾರತದ ವಿನೋದ್ ಕಾಂಬ್ಳಿ, ಶ್ರೀಲಂಕಾದ ಕುಮಾರ ಸಂಗಕ್ಕಾರ, ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ ನಂತರ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.
  • ಕೊಹ್ಲಿ 2011ರಿಂದ ಟೆಸ್ಟ್ ಕ್ರಿಕೆಟ್ ಆರಂಭಿಸಿದ್ದು, ಅಲ್ಲಿಂದ 2015ರವರೆಗಿನ ಆಟಕ್ಕೂ, ನಾಯಕತ್ವ ವಹಿಸಿಕೊಂಡ ನಂತರ 2016 ಮತ್ತು 17ನೇ ಸಾಲಿನಲ್ಲಿ ಕೊಹ್ಲಿ ಆಟಕ್ಕೂ ಸಾಕಷ್ಟು ಬದಲಾಗಿದೆ. 2011ರಿಂದ 2015ರ ಅವಧಿಯಲ್ಲಿ 41 ಪಂದ್ಯಗಳಿಂದ 72 ಇನಿಂಗ್ಸ್ ಆಡಿದ್ದ ಕೊಹ್ಲಿ 11 ಶತಕ ಮಾತ್ರ ಬಾರಿಸಿದ್ದರು. ಆದರೆ ಕಳೆದ ಎರಡು ವರ್ಷಗಳಲ್ಲಿ ಕೊಹ್ಲಿ 22 ಪಂದ್ಯಗಳಿಂದ ಕೇವಲ 33 ಇನಿಂಗ್ಸ್ ಆಡಿದ್ದು, 9 ಶತಕ ಹಾಗೂ ಬರೋಬ್ಬರಿ 6 ದ್ವಿಶತಕ ಬಾರಿಸಿದ್ದಾರೆ.
  • ಇನ್ನು ಒಂದೇ ಸರಣಿಯಲ್ಲಿ ಎರಡು ಬಾರಿ ದ್ವಿಶತಕ ಬಾರಿಸಿದ 2ನೇ ಭಾರತೀಯ ಆಟಗಾರ ಹಾಗೂ 5ನೇ ವಿಶ್ವದ ಆಟಗಾರನಾಗಿದ್ದಾರೆ. ಈ ಹಿಂದೆ ವಿನೋದ್ ಮಂಕದ್  1955-56ನೇ ಸಾಲಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಎರಡು ದ್ವಿಶತಕ ದಾಖಲಿಸಿದ್ದರು. ಇನ್ನು ಈ ಸಾಧನೆ ಮಾಡಿದ ವಿಶ್ವದ ಇತರೆ ಆಟಗಾರರೆಂದರೆ ಅದು ಬ್ರಾಡ್ಮನ್, ಗ್ರೇಮ್ ಸ್ಮಿತ್, ಬ್ರೆಂಡನ್ ಮೆಕಲಂ ಮತ್ತು ಮೈಕಲ್ ಕ್ಲಾರ್ಕ್.

Leave a Reply