ಪಕ್ಷದ ಅಧ್ಯಕ್ಷ ಸ್ಥಾನ ಅಲಂಕರಿಸಲು ತುದಿಗಾಲಲ್ಲಿ ನಿಂತಿರೋ ರಾಹುಲ್ ಮುಂದಿವೆ ಬೆಟ್ಟದಂತಹ ಸವಾಲುಗಳು!

ಡಿಜಿಟಲ್ ಕನ್ನಡ ವಿಶೇಷ:

ಮುಂದಿನ ಲೋಕ ಸಭಾ ಚುನಾವಣೆಗೆ ಹೆಚ್ಚು ಕಡಿಮೆ ಒಂದೂವರೆ ವರ್ಷ ಮಾತ್ರ ಬಾಕಿ ಉಳಿದಿದೆ. ಇಂತಹ ಮಹತ್ವದ ಘಟ್ಟದಲ್ಲಿ ಕಾಂಗ್ರೆಸ್ ಪಕ್ಷ ಹೊಸ ಸಾರಥಿಯನ್ನು ಪಡೆಯುತ್ತಿದೆ. ಆ ಸಾರಥಿ ಮತ್ಯಾರೂ ಅಲ್ಲ ಗಾಂಧಿ ವಂಶಸ್ಥ ರಾಹುಲ್ ಗಾಂಧಿ.

ಸೋನಿಯಾ ಗಾಂಧಿ ಸುದೀರ್ಘ 19 ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲಂಕರಿಸಿ ಅಧಿನಾಯಕಿಯಾಗಿದ್ದರು. ಈಗ ಆ ಸ್ಥಾನವನ್ನು ಪುತ್ರ ರಾಹುಲ್ ಗಾಂಧಿ ತುಂಬುತ್ತಿದ್ದಾರೆ. ಔಪಚಾರಿಕವಾಗಿ ನಡೆಸಲಾಗುತ್ತಿರುವ ಅಧ್ಯಕ್ಷ ಸ್ಥಾನದ ಚುನಾವಣೆಗೆ ರಾಹುಲ್ ಗಾಂಧಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಇವರಿಗೆ ಪ್ರತಿಸ್ಪರ್ಧಿಯಾಗಿ ಮತ್ತೊಬ್ಬರು ನಿಲ್ಲುವುದು ಅನುಮಾನ. ನಿಂತರೂ ರಾಹುಲ್ ಸ್ಥಾನವನ್ನು ಕಸಿದುಕೊಳ್ಳುವ ತಾಕತ್ತು ಯಾರಿಗೂ ಇಲ್ಲ. ಗಾಂಧಿ ಕುಟುಂಬದ ಹೊರತಾಗಿ ಪಕ್ಷದ ಹಿಡಿತವನ್ನು ಬೇರೊಬ್ಬರಿಗೆ ವಹಿಸುವ ಮನಸ್ಥಿತಿ ಪಕ್ಷದ ನಾಯಕರಿಗೆ ಇದ್ದುದ್ದೇ ಆದರೆ ಸೋನಿಯಾ ಗಾಂಧಿ ಬಹುತೇಕ ಎರಡು ವರ್ಷಗಳ ಕಾಲ ಈ ಸ್ಥಾನಕ್ಕೆ ಅಂಟಿಕೊಡು ಕೂರುತ್ತಿರಲಿಲ್ಲ.

ರಾಹುಲ್ ಅಧ್ಯಕ್ಷ ಸ್ಥಾನ ಅಲಂಕರಿಸುವುದು ಪೂರ್ವನಿಯೋಜಿತ ಎಂಬುದು ಗೊತ್ತಿದೆ. ಆದರೂ ಈ ಕುರಿತ ಚರ್ಚೆ ತೀವ್ರವಾಗಿಯೇ ನಡೆಯುತ್ತಿದೆ. 1998ರಲ್ಲಿ ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷೆಯಾದಾಗ ಅವರಿಗೆ ರಾಜಕೀಯದಲ್ಲಿ ಯಾವುದೇ ಅನುಭವವಿರಲಿಲ್ಲ. ಆದರೆ ಈಗ ಅಧ್ಯಕ್ಷ ಸ್ಥಾನಕ್ಕೇರುತ್ತಿರುವ ರಾಹುಲ್ ಗಾಂಧಿಗೆ 13 ವರ್ಷಗಳ ಅನುಭವ ಸಿಕ್ಕಿದೆ. 2004ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ ರಾಹುಲ್ ಗಾಂಧಿ ಲೋಕಸಭೆಗೆ ಸತತವಾಗಿ ಆಯ್ಕೆಯಾಗಿದ್ದಾರೆ. 2013ರಲ್ಲಿ ಪಕ್ಷದ ಉಪಾಧ್ಯಕ್ಷರಾದ ರಾಹುಲ್ ಈ ಸ್ಥಾನದಲ್ಲಿ ನಾಲ್ಕು ವರ್ಷಗಳ ಅನುಭವ ಹೊಂದಿದ್ದಾರೆ. ಇನ್ನು ಸೋನಿಯಾ ಗಾಂಧಿ ಅನಾರೋಗ್ಯಕ್ಕೆ ಒಳಗಾದಾಗಲೆಲ್ಲಾ ರಾಹುಲ್ ತೀರ್ಮಾನವೇ ಅಂತಿಮವಾಗಿತ್ತು. ಹೀಗಾಗಿ ರಾಹುಲ್ ಗಾಂಧಿಗೆ ತಕ್ಕ ಮಟ್ಟಿಗೆ ರಾಜಕೀಯ ಅನುಭವವಂತೂ ಇದೆ. ಆದೆ ಕೆಲವೊಮ್ಮೆ ಅವರು ಮಾಡಿಕೊಳ್ಳುವ ಎಡವಟ್ಟುಗಳು ಅವರೊಬ್ಬ ಅಪ್ರಬುದ್ಧ ರಾಜಕಾರಣೆ ಎಂದು ಬಿಂಬಿತರಾಗುತ್ತಲೇ ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಹುಲ್ ಗಾಂಧಿ ಮುಂದಿರುವ ಪ್ರಮುಖ ಸವಾಲುಗಳು ಗಮನ ಸೆಳೆಯುತ್ತಿವೆ.

ಮುಂದಿನ ಲೋಕಸಭಾ ಚುನಾವಣೆಗೆ 18-20 ತಿಂಗಳು ಮಾತ್ರವೇ ಬಾಕಿ ಇದೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಮುಂದಿರುವ ಸವಾಲು, ದೇಶದಾದ್ಯಂತ ಬಹುತೇಕ ಕಡೆಗಳಲ್ಲಿ ಸಡಿಲಗೊಳ್ಳುತ್ತಿರುವ ಬೆರುಗಳನ್ನು ಮತ್ತೆ ಗಟ್ಟಿಗೊಳಿಸುವುದು. ಅಲ್ಲದೆ ಎನ್ ಡಿಎಗೆ ಪ್ರತಿಯಾಗಿ ಯುಪಿಎ ಮೈತ್ರಿಕೂಟವನ್ನು ಬಲಗೊಳಿಸುವುದು. ಇನ್ನು ಪಕ್ಷ ನೆಲೆ ಕಾಣದ ಕೆಲವು ರಾಜ್ಯಗಳಲ್ಲಿ ಸೂಕ್ತ ಹೊಂದಾಣಿಕೆ ಮಾಡಿಕೊಳ್ಳುವುದು. ಈ ಮೂರು ಸವಾಲುಗಳನ್ನು ಮೆಟ್ಟಿ ನಿಂತರಷ್ಟೇ ರಾಹುಲ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಮೇಲೆತ್ತಲು ಸಾಧ್ಯ. ಇಲ್ಲವಾದರೆ ಪಕ್ಷದ ಸ್ಥಿತಿ ಮತ್ತಷ್ಟು ಹೀನಾಯವಾದರೆ ಅಚ್ಚರಿಪಡುವಂತಿಲ್ಲ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರನ್ನು ಅವರದೇ ಕ್ಷೇತ್ರದಲ್ಲಿ ಮಣಿಸುವ ಮೂಲಕ ಕಾಂಗ್ರೆಸ್ ಬುಡ ಅಲ್ಲಾಡಿಸಲು ಬಿಜೆಪಿ ಎಲ್ಲ ಕಾರ್ಯತಂತ್ರ ರೂಪಿಸಿದೆ. ಪರಿಣಾಮ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಬರುವ 5 ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ಸಾಧಿಸಿದೆ. ಇನ್ನು ಕಳೆದವಾರವಷ್ಟೇ ಪ್ರಕಟವಾದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಅಮೇಥಿ ಬಿಜೆಪಿ ತೆಕ್ಕೆಗೆ ಬಿದ್ದಿದೆ. ಹೀಗಾಗಿ ರಾಹುಲ್ ಕಾಂಗ್ರೆಸ್ ಅನ್ನು ರಾಷ್ಟ್ರಮಟ್ಟದಲ್ಲಿ ಬಲಗೊಳಿಸುವುದರ ಜತೆಗೆ ತನ್ನ ಕ್ಷೇತ್ರದಲ್ಲೂ ಬುಡ ಭದ್ರಮಾಡಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ.

ಇನ್ನು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಪಶ್ಚಿಮ ಬಂಗಾಳ, ಒಡಿಶಾ ರಾಜ್ಯಗಳಲ್ಲಿ ಉತ್ತಮ ಮೈತ್ರಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ರಾಹುಲ್ ಗೆ ದೊಡ್ಡ ಸವಾಲಾಗಿದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಈಗಾಗಲೇ ಸಮಾಜವಾದಿ ಪಕ್ಷದ ಜತೆ ಕೈ ಮಿಲಾಯಿಸಿದ ರಾಹುಲ್ ಹೀನಾಯ ಹಿನ್ನಡೆ ಅನುಭವಿಸಬೇಕಾಯಿತು. ಅದೇ ರೀತಿ ಗುಜರಾತ್ ಚುನಾವಣೆಯಲ್ಲಿ ಹಾರ್ದಿಕ್ ಪಟೇಲ್ ಜತೆ ರಾಹುಲ್ ಕೈ ಜೋಡಿಸಿದ್ದು ಇದರ ಫಲಿತಾಂಶ ಮುಂದಿನ ಹದಿನೈದು ದಿನಗಳಲ್ಲಿ ತಿಳಿಯಲಿದೆ.

ಇದರ ಜತೆಗೆ ಮುಂದಿನ ವರ್ಷ ಕರ್ನಾಟಕ, ಮಧ್ಯ ಪ್ರದೇಶ, ಚತ್ತೀಸ್ ಘಡ ಮತ್ತು ರಾಜಸ್ಥಾನ ರಾಜ್ಯಗಳ ವಿಧಾನಭೆ ಚುನಾವಣೆ ನಡೆಯಲಿದ್ದು, ಇವು ಲೋಕ ಸಭಾ ಚುನಾವಣ ಸಮರಕ್ಕೆ ಪೂರ್ವಭಾವಿ ತಾಲೀಮು ಎಂದೇ ಪರಿಗಣಿತವಾಗಿವೆ. ಸದ್ಯ ಅಧಿಕಾರ ಸಾಧಿಸಿರುವ ಕರ್ನಾಟಕದಲ್ಲಿ ಮತ್ತೊಂದು ಅವಧಿಗೆ ಪಕ್ಷವನ್ನು ಅಧಿಕಾರಕ್ಕೆ ತರುವುದರ ಜತೆಗೆ ಬಿಜೆಪಿ ಅಧಿಕಾರದಲ್ಲಿರುವ ಮಧ್ಯಪ್ರದೇಶ ರಾಜಸ್ಥಾನಗಳಲ್ಲಿ ರಾಹುಲ್ ಹೇಗೆ ಪಕ್ಷ ಸಂಘಟಿಸಿ ಬಿಜೆಪಿಗೆ ಸವಾಲಾಗುತ್ತಾರೆ ಎಂಬುದನ್ನು ಕಾದು ನೋಡಬೇಕು.

Leave a Reply