ಗುಜರಾತಿನಲ್ಲಿ ವಿಕಾಸ ಯಾತ್ರೆ, ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಪ್ರಶ್ನಿಸಿದ ಮೋದಿ

ಡಿಜಿಟಲ್ ಕನ್ನಡ ಟೀಮ್:

ಗುಜರಾತ್ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧದ ಟೀಕಾಪ್ರಹಾರ ಮುಂದುವರಿಸಿದ್ದಾರೆ. ಎರಡು ದಿನಗಳ ವಿಕಾಸ ಸಮಾವೇಶ ಹಮ್ಮಿಕೊಂಡಿರುವ ಮೋದಿ, ನಿನ್ನೆ ಭರುಚ್, ಸುರೇಂದ್ರನಗರ್ ಮತ್ತು ರಾಜ್ಕೋಟ್ ನಲ್ಲಿ ಭಾನುವಾರ ಸಮಾವೇಶ ನಡೆಸಿದ್ದರು. ಇಂದು ವಲ್ಸಾದ್ ನ ಙರಮ್ ಪುರ, ಭಾವನಗರ್, ಜನಾಗದ್ ಹಾಗೂ ಸೌರಾಷ್ಟ್ರದ ಜಮ್ ನಗರ್ ಗಳಲ್ಲಿ ನಡೆಯಲಿರುವ ಸಮಾವೇಶಗಳಲ್ಲಿ ಭಾಗವಹಿಸಿದ್ದಾರೆ.

ಈ ಸಮಾವೇಶದಲ್ಲಿ ಮೋದಿ ಕಾಂಗ್ರೆಸ್ ವಿರುದ್ಧ ನಡೆಸಿದ ವಾಗ್ದಾಳಿ ಹೇಗಿತ್ತು ನೋಡೋಣ ಬನ್ನಿ…

‘ಶೆಹಜಾದ್ ಪೂನವಾಲಾ ಎಂಬ ಯುವಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ ಪೂರ್ವನಿರ್ಧಾರಿತ. ಈ ಚುನಾವಣೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಡೆಗಣಿಸಲಾಗಿದೆ ಎಂದಿದ್ದಾನೆ. ಇದಕ್ಕೆ ಕಾಂಗ್ರೆಸ್ ಪಕ್ಷ ಈತನನ್ನು ಎಲ್ಲಾ ವಾಟ್ಸಪ್ ಗುಂಪಿನಿಂದ ತೆಗೆದು ಹಾಕುವಂತೆ ಆದೇಶ ಹೊರಡಿಸಿದೆ. ಸಹಿಷ್ಣುತೆ, ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಪಕ್ಷವೇ ಈ ರೀತಿಯಾಗಿ ನಡೆದುಕೊಳ್ಳುತ್ತಿದೆ. ಅವರ ಕುಟುಂಬದಲ್ಲೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲದಿರುವಾಗ ದೇಶದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಳ್ಳುವರೇ?

ಕಾಂಗ್ರೆಸ್ ನವರು ಎಂದಿಗೂ ಭಾರತ್ ಮಾತಾಕಿ ಜೈ ಎನ್ನುವುದಿಲ್ಲ. ಆದರೆ ಅವರು ಭಾರತದಲ್ಲಿದ್ದು ಪಾಕಿಸ್ತಾನದ ಪರವಾಗಿ ಮಾತನಾಡುತ್ತಾರೆ. ಕಾಂಗ್ರೆಸ್ ಬುಡಕಟ್ಟು ಪ್ರದೇಶಗಳಲ್ಲಿ ಅತ್ಯುತ್ತಮ ಆರೋಗ್ಯ ಕೇಂದ್ರಗಳ ಸ್ಥಾಪನೆಯಲ್ಲಿ ವಿಪಲವಾಗಿತ್ತು. ನಾವು ಅದನ್ನು ಮಾಡಿದ್ದು, ಎಲ್ಲೆಡೆ ಉತ್ತು ಆರೋಗ್ಯ ಕೇಂದ್ರ ಹಾಗೂ 108 ಆ್ಯಂಬುಲೆನ್ಸ್ ಸೇವೆ ಸಿಗುವಂತೆ ಮಾಡಿದ್ದೇವೆ. ನಾನು ನನ್ನ ಜೀವನದ ಅನೇಕ ಸಮಯವನ್ನು ಗುಜರಾತಿನ ಬುಡಕಟ್ಟು ಜನರ ಜತೆ ಕೆಲಸ ಮಾಡುವುದರಲ್ಲಿ ಕಳೆದಿದ್ದೇನೆ. ಬಡವರ ಹಣವನ್ನು ಲೂಟಿ ಮಾಡಿರುವವರನ್ನು ನೋಡಿ ನಾನು ಹೆದರುವುದಿಲ್ಲ. ಬಡವರಿಗೆ ಸೇರಬೇಕಾಗಿರುವುದು ಸೇರುವಂತೆ ಮಾಡುತ್ತೇನೆ. ಕಾಂಗ್ರೆಸ್ ನವರು ಯಾವ ಕಾರಣಕ್ಕಾಗಿ ಒಬಿಸಿ ಸಮಿತಿಗೆ ಸಂವಿಧಾನಾತ್ಕ ಸ್ಥಾನಮಾನ ನೀಡಲಿಲ್ಲ? ನಾವು ಆ ಕೆಲಸ ಮಾಡಲು ಹೋದರೆ ರಾಜ್ಯ ಸಭೆಯಲ್ಲಿ ಅದಕ್ಕೆ ಅಡ್ಡಿ ಪಡಿಸುತ್ತಾರೆ. ಈ ರೀತಿ ಒಬಿಸಿ ವಿರೋಧಿ ನೀತಿ ಹೊಂದಿರುವ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲೇಬೇಕು.

ಕಾಂಗ್ರೆಸ್ ಎಂದಿಗೂ ಗುಜರಾತ್ ಕುರಿತಂತೆ ಉತ್ತಮವಾಗಿ ಮಾತನಾಡಿಲ್ಲ. ಗುಜರಾತನ್ನು ಟೀಕಿಸುತ್ತಾ ಅವಹೇಲನಕಾರಿಯಾಗಿ ಕಾಂಗ್ರೆಸ್ ಮಾತನಾಡುತ್ತಲೇ ಬಂದಿದೆ. ಈಗ ಅದೇ ಪಕ್ಷ ಇಲ್ಲಿನ ಜನರ ಬಳಿ ಮತ ಕೇಳುತ್ತಿದೆ.

ಮಣಿಶಂಕರ್ ಐಯರ್ ಅವರು ಒಂದು ಕುಟುಂಬಕ್ಕೆ ತಾವು ತೋರುವ ಪ್ರಾಮಾಣಿಕತೆಯನ್ನು ತೋರಲು ಹಿಂಜರಿಯುವುದಿಲ್ಲ. ಜಹಂಗೀರ್ ನಂತರ ಶಹಜಹಾನ್ ಆಡಳಿತ ನಡೆಸಿದಂತೆ ಶಹಜಹಾನ್ ನಂತರ ಔರಂಗಬೇಬ ಆಡಳಿತ ನಡೆಸಿದ. ಆಗ ಯಾವುದೇ ಚುನಾವಣೆಗಳು ನಡೆದಿರಲಿಲ್ಲ. ಈಗಲೂ ಕಾಂಗ್ರೆಸ್ ಪಕ್ಷದಲ್ಲಿ ಅದೇ ನಡೆಯುತ್ತಿದೆ. ಆ ಪಕ್ಷದಲ್ಲಿ ಆಳುವವರು ಯಾರು ಎಂದು ಎಲ್ಲರಿಗೂ ಗೊತ್ತಿದೆ. ಅವರ ಸ್ವಂತ ಮಗನೇ ಸಿಂಹಾಸನ ಅಲಂಕರಿಸಲಿದ್ದಾನೆ.’

Leave a Reply