ರಾಹುಲ್ ಗಾಂಧಿ ನಿಜಕ್ಕೂ ಹಿಂದೂ ಧರ್ಮೀಯರೇ?!

ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಯಾವ ಧರ್ಮಕ್ಕೆ ಸೇರಿದವರು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ಗುಜರಾತ್ ಸೌರಾಷ್ಟ್ರದ ಸೋಮನಾಥ ದೇಗುಲಕ್ಕೆ ಕಳೆದ ವಾರ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್ ಗಾಂಧಿ ಹೆಸರನ್ನು ಹಿಂದೂಯೇತರ ನೋಂದಣಿ ಪುಸ್ತಕದಲ್ಲಿ ನಮೂದು ಮಾಡಿದ್ದು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸೋನಿಯಾ ಗಾಂಧಿ ಕುಟುಂಬದ ಪರಮಾಪ್ತ ಅಹಮದ್ ಪಟೇಲ್ ಜತೆಗೆ ರಾಹುಲ್ ಹೆಸರು ಈ ನೋಂದಣಿ ಪುಸ್ತಕದಲ್ಲಿ ದಾಖಲಾದದ್ದು ಗುಜರಾತ್ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ‘ಧರ್ಮಸಂಘರ್ಷ’ ಕ್ಕೆ ಕಾರಣವಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಈ ವಿಷಯವನ್ನು ಮತಬೇಟೆಗೆ ಅಸ್ತ್ರ ಮಾಡಿಕೊಂಡಿವೆ.

ರಾಹುಲ್ ಗಾಂಧಿ ಕ್ರಿಶ್ಚಿಯನ್, ಹೀಗಾಗಿಯೇ ಹಿಂದೂಯೇತರ ನೋಂದಣಿ ಪುಸ್ತಕದಲ್ಲಿ ಅವರ ಹೆಸರು ನಮೂದಾಗಿದೆ. ಸೋಮನಾಥ ದೇಗುಲ ನಿರ್ಮಾಣಕ್ಕೆ ರಾಹುಲ್ ಮುತ್ತಜ್ಜ ಜವಾಹರಲಾಲ್ ನೆಹರು ವಿರೋಧ ವ್ಯಕ್ತಪಡಿಸಿದ್ದರು. ಈಗ ಅದೇ ದೇಗುಲಕ್ಕೆ ರಾಹುಲ್ ಭೇಟಿ ನೀಡಿರುವುದರ ಹಿಂದೆ ಚುನಾವಣೆ ಗಿಮಿಕ್ ಆಡಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಬಿಜೆಪಿ ಮುಖಂಡರು ವ್ಯಂಗ್ಯವಾಡುತ್ತಿದ್ದರೆ, ರಾಹುಲ್ ಗಾಂಧಿ ಬರೀ ಹಿಂದೂ ಅಷ್ಟೇ ಅಲ್ಲ, ಜನಿವಾರಧಾರಿ ಹಿಂದೂ. ಅವರೊಬ್ಬ ಶಿವಭಕ್ತ. ಮೊದಲಿಂದಲೂ ಶಿವನನ್ನೇ ಆರಾಧಿಸುತ್ತಾ ಬಂದವರು, ಹೀಗಾಗಿಯೇ ಸೋಮನಾಥ ದೇಗುಲಕ್ಕೆ ಭೇಟಿ ನೀಡಿದ್ದಾರೆ ಎಂದು ಕಾಂಗ್ರೆಸ್‌ ನವರು ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನೋಂದಣಿ ಪುಸ್ತಕ ಎಂಬುದು ಬಿಜೆಪಿಯ ನಕಲಿ ಸೃಷ್ಟಿ . ವಿವಾದ ಸೃಷ್ಟಿಸಲೆಂದೇ ಈ ನಕಲಿ ದಾಖಲೆ ತಯಾರು ಮಾಡಲಾಗಿದೆ. ಬಿಜೆಪಿ ಈ ಮಟ್ಟಕ್ಕೆ ರಾಜಕೀಯವನ್ನು ಕೆಳಗೆ ಇಳಿಸಬಾರದಿತ್ತು ಎಂದೂ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ದೇವಾಲಯದ ಆಡಳಿತ ಮಂಡಳಿ ದೇಗುಲದಲ್ಲಿ ಹಿಂದೂ ಹಾಗೂ ಹಿಂದೂಯೇತರ ಸಂದರ್ಶಕರಿಗಾಗಿ ಪ್ರತ್ಯೇಕ ನೋಂದಣಿ ಪುಸ್ತಕಗಳಿದ್ದು, ಹಿಂದೂಯೇತರ ಪುಸ್ತಕದಲ್ಲಿ ರಾಹುಲ್ ಗಾಂಧಿ ಅವರ ಹೆಸರು ದಾಖಲಾಗಿದೆ. ರಾಹುಲ್ ಗಾಂಧಿ ಅವರ ಮಾಧ್ಯಮ ಸಂಯೋಜಕರೇ ಇಲ್ಲಿ ಹೆಸರು ದಾಖಲಿಸಿದ್ದಾರೆ ಎಂದು ಖಚಿತಪಡಿಸಿದೆ. ಅಲ್ಲಿಗೆ ವಿವಾದ ಸೃಷ್ಟಿ ನಕಲಿ ಅಲ್ಲ, ದಾಖಲೆಗಳ ಆಧಾರದ ಮೇಲೆ ಸ್ಫೋಟಗೊಂಡದ್ದು ಎಂಬುದು ಸತ್ಯ. ಅದು ಬೇಕಿತ್ತೋ ಬೇಡವಿತ್ತೋ ಎಂಬುದು ಬೇರೆ ಪ್ರಶ್ನೆ. ಆದರೆ ಚುನಾವಣೆ ಸಂದರ್ಭದಲ್ಲಿ ಸೂಜಿ ಮೊನೆಯಷ್ಟು ವಿಷಯ ಸಿಕ್ಕರೂ ಈ ರಾಜಕಾರಣಿಗಳು ಬಳಕೆ ಮಾಡಿಕೊಳ್ಳದೆ ಬಿಡುವುದಿಲ್ಲ. ಅದು ಸದ್ಬಳಕೆಯೋ, ದುರ್ಬಳಕೆಯೋ, ಒಟ್ಟಿನಲ್ಲಿ ಪ್ರಚಾರಕ್ಕೊಂದು ಅಸ್ತ್ರವಾಗುತ್ತದೆ. ಈಗ ರಾಹುಲ್ ಧರ್ಮದ ವಿಚಾರದಲ್ಲಿ ಆಗುತ್ತಿರುವುದೂ ಅದೇ.

ಒಳ್ಳೆಯದು, ಕೆಟ್ಟದ್ದು ಎಂದು ವಿಂಗಡಿಸುತ್ತಾ ಹೋದರೆ ರಾಜಕೀಯ ಮಾಡಲು ಆಗುವುದಿಲ್ಲ ಎಂಬುದೇನೋ ಸರಿ. ಏಕೆಂದರೆ ರಾಜಕೀಯದ ಗುಣಧರ್ಮವೇ ಅಂತದ್ದು. ತಂತ್ರ, ಪ್ರತಿತಂತ್ರ, ಕುತಂತ್ರವೇ ಅದರ ರಕ್ತಗುಣ. ಹೀಗಾಗಿ ಸಿಕ್ಕ, ಸಿಕ್ಕ ವಿಷಯಗಳೆಲ್ಲ ಚುನಾವಣೆ ಪ್ರಚಾರಕ್ಕೆ ಬಳಕೆ ಆಗುತ್ತವೆ. ಇದರಲ್ಲಿ ಯಾವುದೇ ಪಕ್ಷ ಕೂಡ ಹಿಂದೆ ಬಿದ್ದಿಲ್ಲ. ಶೈಲಿ ಮತ್ತು ಸ್ವರೂಪ ಬೇರೆ-ಬೇರೆ ಇರಬಹುದು. ಆದರೆ ಅದರ ಅಂತಿಮ ಗುರಿ ಮತರಾಜಕೀಯವೇ ಆಗಿರುತ್ತದೆ.

ಹಾಗೆ ನೋಡಿದರೆ ಗುಜರಾತ್ ಚುನಾವಣೆ ಘೋಷಣೆ ನಂತರ ರಾಹುಲ್ ಗಾಂಧಿ ಅವರು ಧಾರ್ಮಿಕ ಕೇಂದ್ರಗಳಿಗೆ ಅದರಲ್ಲೂ ಹೆಚ್ಚಾಗಿ ಹಿಂದೂ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ. ಇದು ಪ್ರಚಾರ ತಂತ್ರವೂ ಹೌದು. ಮತದಾರರ ಧಾರ್ಮಿಕ ಭಾವನೆಗಳನ್ನು ತಟ್ಟಲು ಚುನಾವಣೆ ಸಂದರ್ಭದಲ್ಲಿ ಇಂಥದ್ದೆಲ್ಲ ನಡೆಯುತ್ತದೆ. ರಾಹುಲ್ ಗಾಂಧಿ ಅವರೂ ಇದಕ್ಕೆ ಹೊರತೇನಲ್ಲ. ಸೋಮನಾಥ ದೇಗುಲಕ್ಕೆ ಭೇಟಿ ನೀಡಿರುವುದೂ ಅದೇ ಕಾರಣಕ್ಕೆ. ಆದರೆ ಅದೊಂದು ವಿವಾದ ಆಗುತ್ತದೆ ಎಂದು ಅವರಿಗಾಗಲಿ, ಕಾಂಗ್ರೆಸ್ ಮುಖಂಡರಿಗಾಗಲಿ ಅನ್ನಿಸಿರಲಿಲ್ಲ. ಈಗ ವಿವಾದಿತ ವಸ್ತುವಿನ ಚುಂಗು ಹಿಡಿದು ನೋಡಿದಾಗ ಈ ರಾಜಕೀಯ ನಾಯಕರು ಅದೆಂಥ ಐನಾತಿ ಫಟಿಂಗರು ಎಂದೆನಿಸದಿರದು.

ನಿಜ ಹೇಳಬೇಕೆಂದರೆ ರಾಹುಲ್ ಗಾಂಧಿ ಅವರ ಕುಟುಂಬ ಹಿಂದೂ, ಹಿಂದೂಯೇತರ ಅನ್ನುವುದಕ್ಕಿಂತ ಅದೊಂದು ಜಾತ್ಯತೀತ ಕುಟುಂಬ ಎಂದೇ ಹೇಳಬೇಕಾಗುತ್ತದೆ. ಈ ನೆಲದ ರೂಢಿಗತ ನಂಬಿಕೆ ಮತ್ತು ಪ್ರಚಲಿತ ಪದ್ಧತಿ ಪ್ರಕಾರ ತಂದೆ-ತಾಯಿ ಬೇರೆ-ಬೇರೆ ಧರ್ಮ, ಜಾತಿಗೆ ಸೇರಿದ್ದರೂ ಅವರಿಗೆ ಹುಟ್ಟುವ ಮಗು ತಂದೆಯ ಧರ್ಮ, ಜಾತಿಗೆ ಸೇರುತ್ತದೆ. ಹೆಂಡತಿ ಕೂಡ ಗಂಡನ ಧರ್ಮ, ಜಾತಿಯನ್ನೇ ಅನುಸರಿಸುತ್ತಾಳೆ. ಆದರೆ ಕಾನೂನಿನ ಪ್ರಕಾರ ತಂದೆ ಮತ್ತು ತಾಯಿ ಅನ್ಯ ಧರ್ಮ, ಜಾತಿಗೆ ಸೇರಿದ್ದರೂ ಮಗುವಿನ ಹೆಸರಿನ ಮುಂದೆ ಇಬ್ಬರಲ್ಲಿ ಯಾರ ಜಾತಿ ನಮೂದಾಗಿರುತ್ತದೋ ಅದಕ್ಕೆ ಆ ಮಗು ಸೇರುತ್ತದೆ. ಅದು ತಂದೆಯದಾದ್ದರೂ ಆಗಬಹುದು, ತಾಯಿಯದ್ದಾದರೂ ಆಗಬಹುದು. ಇಲ್ಲಿ ದಾಖಲೆ ಅಷ್ಟೇ ಮುಖ್ಯವಾಗುತ್ತದೆ.

ಹಾಗೆ ನೋಡಿದರೆ ಜವಾಹರಲಾಲ್ ನೆಹರೂ ಕಾಶ್ಮೀರಿ ಪಂಡಿತ ಬ್ರಾಹ್ಮಣರು. ಆದರೆ ಅವರ ಪುತ್ರಿ ಇಂದಿರಾ ಅವರು ಪಾರ್ಶಿ ಫಿರೋಜ್ ಗಾಂಧಿ ಅವರನ್ನು ವಿವಾಹವಾದ ನಂತರ ಮುಸ್ಲಿಮರಾದರು. ಇಂದಿರಾ ಪ್ರಿಯದರ್ಶಿನಿ ಹೆಸರು ಹೋಗಿ ಫಿರೋಜ್ ಹೆಸರಿನ ಮುಂದಿರುವ ಗಾಂಧಿ ಸೇರಿಕೊಂಡು ಇಂದಿರಾ ಗಾಂಧಿಯಾದರು. ಅಲ್ಲಿಂದಾಚೆಗೆ ಈ ಕುಟುಂಬದ ಸದಸ್ಯರ ಹೆಸರಿನ ಮುಂದೆ ‘ಗಾಂಧಿ’ ಹೆಸರು ಸೇರ್ಪಡೆ ಆಗುತ್ತಾ ಹೋಯಿತು. ಫಿರೋಜ್ ಗಾಂಧಿ, ಇಂದಿರಾ ಗಾಂಧಿ, ಈ ದಂಪತಿಗೆ ಜನಿಸಿದ ರಾಜೀವ್ ಗಾಂಧಿ, ಸಂಜಯ ಗಾಂಧಿ ಹೀಗೆ ಮುಂದುವರಿಯುತ್ತಾ ಹೋಯಿತು. ರಾಜೀವ್ ಗಾಂಧಿ ಕೈ ಹಿಡಿದ ಇಟಲಿ ಮೂಲದ ಕ್ರೈಸ್ತ ಧರ್ಮದ ಸೋನಿಯಾ ಅವರು ಸೋನಿಯಾ ಗಾಂಧಿ ಆದರು. ಇನ್ನೊಂದೆಡೆ ಸಂಜಯ ಗಾಂಧಿ ಕೈಹಿಡಿದ ಪಂಜಾಬಿ ಮನೇಕಾ ಅವರು ಮನೇಕಾ ಗಾಂಧಿ ಆದರು. ಈ ದಂಪತಿಗೆ ಜನಿಸಿದವರು ವರುಣ್ ಗಾಂಧಿ. ಅದೇ ರೀತಿ ರಾಜೀವ್ ಗಾಂಧಿ, ಸೋನಿಯಾ ಗಾಂಧಿಗೆ ಜನಿಸಿದವರು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ. ಈ ಎಲ್ಲರ ಹೆಸರಿನ ಮುಂದೆ ಫಿರೋಜ್ ಗಾಂಧಿ ಹೆಸರಿನ ಅಂತ್ಯದ ಗಾಂಧಿ ಸೇರಿಕೊಂಡು ಅವರೆಲ್ಲರೂ ಫಿರೋಜ್ ವಂಶಸ್ಥರೇ, ಅಂದರೆ ಮುಸ್ಲಿಮರೇ ಆದರು. ಪರಿಸ್ಥಿತಿ ಹೀಗಿರುವಾಗ ರಾಹುಲ್ ಗಾಂಧಿ ಅವರು ಹಿಂದೂ ಎಂದು, ಅದರಲ್ಲೂ ಜನಿವಾರಧಾರಿ ಹಿಂದೂ ಎಂದು ಹೇಗೆ ಹೇಳಿಕೊಂಡಾರು? ಅಪ್ಪ ರಾಜೀವ್ ಗಾಂಧಿ ಲೆಕ್ಕಕ್ಕೆ ಹೋದರೆ ಮುಸ್ಲಿಂ, ಅಮ್ಮ ಸೋನಿಯಾ ಗಾಂಧಿ ಧರ್ಮಕ್ಕೆ ಜಮೆ ಆದರೆ ಕ್ರಿಶ್ಚಿಯನ್ ಆಗುತ್ತಾರೆ. ಎರಡೂ ಅನ್ಯ ಧರ್ಮವೇ. ಇದಕ್ಕೆ ಮತ್ತೊಂದು ಉತ್ತಮ ನಿದರ್ಶನ ಪ್ರಿಯಾಂಕ ಗಾಂಧಿ ಅವರು ಕ್ರಿಶ್ಚಿಯನ್ ಸಮುದಾಯದ ರಾಬರ್ಟ್ ವಾದ್ರಾ ಅವರ ಕೈ ಹಿಡಿದ ನಂತರ ಪ್ರಿಯಾಂಕಾ ವಾದ್ರಾ ಅದರು. ಅಂದರೆ ಅವರ ಹೆಸರಿನ ಮುಂದಿದ್ದ ತಂದೆ-ತಾಯಿಯ ‘ಗಾಂಧಿ’ ಬಳುವಳಿ ಕಿತ್ತುಕೊಂಡು ಹೋಗಿ ಗಂಡನ ಹೆಸರಿನ ಕೊನೆಯಲ್ಲಿರುವ ‘ವಾದ್ರಾ’ ಸೇರಿಕೊಂಡಿತು. ಅಂದರೆ ಈ ನೆಲದ ರೂಢಿಗತ ಪದ್ಧತಿ ಅಂದರೆ ಗಂಡನ ಧರ್ಮಕ್ಕೆ ಅವರು ಒಗ್ಗಿಕೊಂಡರು. ಈಗವರು ಅಪ್ಪ-ಅಮ್ಮನ ಕೋನದಲ್ಲಾಗಲಿ, ಗಂಡನ ಲೆಕ್ಕದಲ್ಲಾಗಲಿ ಹಿಂದೂ ಅಲ್ಲ. ಬದಲಿಗೆ ಕ್ರಿಶ್ಚಿಯನ್. ರಾಹುಲ್ ಗಾಂಧಿ ಕುಟುಂಬ ಪರಂಪರೆಯಲ್ಲಿ ಮೊದಲಿಂದಲೂ ಮಿಶ್ರ ಸಂಸ್ಕೃತಿ ಬೆರೆತು ಹೋಗಿರುವುದರಿಂದ ನೆಹರೂ ಧರ್ಮ, ಜಾತಿಗೆ ಇವರ್ಯಾರನ್ನೂ ತಳಕು ಹಾಕಿ ನೋಡಲು ಸಾಧ್ಯವಿಲ್ಲ. ಇಂದಿರಾ ಅವರು ಫಿರೋಜ್ ಗಾಂಧಿಯವರನ್ನು ಕಟ್ಟಿಕೊಂಡು, ಅವರ ಧರ್ಮವನ್ನು ಅಪ್ಪಿಕೊಂಡ ನಂತರ ಈ ಕುಟುಂಬ ಪರಂಪರೆಯಲ್ಲಿ ಹಿಂದೂ ಎಂಬ ಪದ ಸವಕಲಾಗಿ ಹೋಯಿತು. ಹೀಗಾಗಿ ರಾಹುಲ್ ಗಾಂಧಿ ಅವರು ಹಿಂದೂವಾಗಲಿ, ಪುರೋಹಿತ ಸಂಸ್ಕೃತಿಯ ಜನಿವಾರಧಾರಿ ಹಿಂದೂವಾಗಲಿ ಆಗಲು ಸಾಧ್ಯವಿಲ್ಲ.

ನಂಬಿಕೆ, ಆಚಾರ, ವಿಚಾರದಲ್ಲಿ ಯಾರು ಬೇಕಾದರೂ ಯಾವ ಧರ್ಮವನ್ನಾಗಲಿ, ಜಾತಿಯನ್ನಾಗಲಿ ಅನುಸರಿಸಬಹುದು. ಅದರ ನೀತಿ-ನಿಯಮಗಳನ್ನು ಪಾಲಿಸಬಹುದು. ಹಾಗೆ ನೋಡಿದಾಗ ರಾಹುಲ್ ಗಾಂಧಿ ಅವರು ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟಿದ್ದರೆ, ಆ ಸಂಸ್ಕೃತಿಯನ್ನು ಪಾಲಿಸಿಕೊಂಡು ಬಂದಿದ್ದರೆ ಅದನ್ನು ಯಾರೂ ತಡೆಯಲಾಗುವುದಿಲ್ಲ. ಈ ದೇಶದಲ್ಲಿ ಯಾರು ಬೇಕಾದರೂ ಯಾವ ಧರ್ಮವನ್ನಾದರೂ ಒಪ್ಪಿಕೊಳ್ಳಲು, ಅಪ್ಪಿಕೊಳ್ಳಲು ಸ್ವಾತಂತ್ರ್ಯ ಇದೆ. ಆ ಧರ್ಮ ಸ್ವಾತಂತ್ರ್ಯವನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಆದರೆ ನೀವು ಅನ್ಯ ಧರ್ಮದಲ್ಲಿ ನಂಬಿಕೆ ಇಟ್ಟು, ಆಚಾರ-ವಿಚಾರದಲ್ಲಿ ಅದನ್ನೇ ತುಂಬಿಕೊಂಡು ಹಿಂದೂ ಎಂದು ಹೇಳಿಕೊಂಡರೆ ಅದಕ್ಕೆ ಮಾನ್ಯತೆ ಸಿಗುವುದಿಲ್ಲ. ಅದನ್ನು ರಾಜಕೀಯ ದೃಷ್ಟಿಕೋನದಿಂದ ಮಾತ್ರ ನೋಡಲಷ್ಟೇ ಸಾಧ್ಯವಾಗುತ್ತದೆ. ಸೋಮನಾಥ ದೇಗುಲದ ಪುಸ್ತಕದಲ್ಲಿ ಹಿಂದೂಯೇತರ ಎಂದು ನಮೂದಿಸಿ ತಾವೊಬ್ಬ ಹಿಂದೂ ಎಂದರೆ ಯಾರು ತಾನೇ ಒಪ್ಪುತ್ತಾರೆ? ಯಾರು ತಾನೇ ನಂಬುತ್ತಾರೆ? ಅವರು ಈ ನೆಲದ ಪ್ರಚಲಿತ ಪದ್ಧತಿ, ಪರಂಪರೆ ಪ್ರಕಾರವಾಗಲಿ ಅಥವಾ ದಾಖಲೆ ಆಧಾರದಲ್ಲಾಗಲಿ ಹಿಂದೂ ಆಗದಿರುವುದರಿಂದ ಬರೀ ಬಾಯಿ ಮಾತಲ್ಲಿ ಸಾರಿಕೊಂಡರೆ ಧರ್ಮ, ಜಾತಿ ಬದಲಾಗಿ ಹೋಗುವುದಿಲ್ಲ. ಎಲ್ಲವೂ ಸಾಕ್ಷ್ಯ ಮತ್ತು ದಾಖಲೆ ಆಧಾರದಲ್ಲೇ ನಿರ್ಣಯವಾಗುತ್ತದೆ. ಹೀಗಾಗಿ ರಾಹುಲ್ ಗಾಂಧಿ ಸೋಮನಾಥ ದೇಗುಲಕ್ಕೆ ಎಂಟ್ರಿ ಕೊಟ್ಟಾಕ್ಷಣ ಹಿಂದೂವಾಗುವುದಿಲ್ಲ. ಅವರು ಎಂಟ್ರಿ ಪುಸ್ತಕದಲ್ಲಿ ನಮೂದಿಸಿರುವುದೇ ಅವರ ಧರ್ಮವನ್ನು ಸಾರುತ್ತದೆ!

ಸೇರಿಗೆ ಸವ್ವಾಸೇರು ಎಂಬುದು ಈ ರಾಜಕೀಯ ನೀತಿ. ಬಿಜೆಪಿಯವರು ರಾಹುಲ್ ಗಾಂಧಿ ಹಿಂದೂವಲ್ಲ ಎಂಬುದನ್ನು ವಿವಾದ ಮಾಡುತ್ತಿದ್ದರೆ ಇನ್ನೊಂದೆಡೆ ಕಾಂಗ್ರೆಸ್ ಕೂಡ ತಿರುಗುಬಾಣ ಹೂಡಿದೆ. ಜೈನ ಧರ್ಮಕ್ಕೆ ಸೇರಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಹೇಗೆ ತಮ್ಮನ್ನು ಹಿಂದೂ ಎಂದು ಕರೆದುಕೊಳ್ಳುತ್ತಾರೆ. ಜೈನ ಧರ್ಮಕ್ಕೆ ಸೇರಿದ ಅವರು ತಮ್ಮನ್ನು ಹಿಂದೂ ಎಂದು ಕರೆದುಕೊಳ್ಳುವುದಾದರೆ ರಾಹುಲ್ ಗಾಂಧಿ ತಮ್ಮನ್ನು ಹಿಂದೂ ಕರೆದುಕೊಳ್ಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆ ಸರಿಯಾಗಿಯೇ ಇದೆ. ಆದರೆ ಈ ಪ್ರಶ್ನೆ ಕೇಳುವ ಭರದಲ್ಲಿ ಅವರು ಪರೋಕ್ಷವಾಗಿ ರಾಹುಲ್ ಗಾಂಧಿ ಅವರೂ ಹಿಂದೂವಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಅಮಿತ್ ಶಾ ಅನ್ಯ ಧರ್ಮಕ್ಕೆ ಸೇರಿದವರು ಎಂದು ಹೇಳುತ್ತಲೇ ಅವರೊಂದಿಗೆ ಹೋಲಿಸಿದ ರಾಹುಲ್ ಗಾಂಧಿ ಅವರನ್ನೂ ಕಾಂಗ್ರೆಸ್ಸಿಗರು ಹಿಂದೂ ಧರ್ಮದ ಆಚೆಗೆ ನಿಲ್ಲಿಸಿದ್ದಾರೆ. ಅಮಿತ್ ಶಾ ಅವರಂತೆ ರಾಹುಲ್ ಗಾಂಧಿ ಕೂಡ ತಮ್ಮನ್ನು ಹಿಂದೂ ಎಂದು ಕರೆದುಕೊಂಡಿದ್ದಾರೆ ಎಂದಿದ್ದಾರೆ. ಅಲ್ಲಿಗೆ ಇಬ್ಬರೂ ಹಿಂದೂವಲ್ಲ ಎಂಬಂತಾಯಿತು.

ನಿಜ, ಬೌದ್ಧ, ಜೈನ, ಸಿಖ್ ಇವೆಲ್ಲವೂ ಪ್ರತ್ಯೇಕ ಧರ್ಮಗಳೇ. ಹಿಂದೂ ಧರ್ಮದಿಂದ ಪ್ರತ್ಯೇಕಗೊಂಡು ತಮ್ಮದೇ ಆದ ಸ್ವತಂತ್ರ್ಯ ಧರ್ಮ ಸ್ಥಾಪನೆ ಮಾಡಿಕೊಂಡಂಥವು. ಈ ನಿಜಾರ್ಥದಲ್ಲಿ ಅಮಿತ್ ಶಾ ಕೂಡ ಹಿಂದೂ ಧರ್ಮದಿಂದ ಹೊರಗಿನವರೇ. ಆದರೆ ಅವರು ಪ್ರತಿನಿಧಿಸುವ ಜೈನ ಧರ್ಮದ ಮೂಲಾಧಾರ ಮತ್ತು ಸಾರ ಹಿಂದೂ ಧರ್ಮದ್ದೇ ಆಗಿದೆ. ಅವರ ಆಚಾರ-ವಿಚಾರಗಳಿಗೆ ಹಿಂದೂ ಧರ್ಮವೇ ಪ್ರೇರಣೆ. ಅದರಲ್ಲಿರುವುದು ಹಿಂದೂ ಧರ್ಮದ್ದೇ ತಿರುಳು. ಜೈನರು ಲಕ್ಷ್ಮಿ ಪೂಜೆ ಮಾಡುತ್ತಾರೆ. ಹಿಂದೂಗಳೂ ಮಾಡುತ್ತಾರೆ. ಜೈನರು ವಿಜೃಂಭಣೆಯಿಂದ ದೀಪಾವಳಿ ಆಚರಿಸುತ್ತಾರೆ. ಹಿಂದೂಗಳೂ ಅಷ್ಟೇ ಸಂಭ್ರಮದಿಂದ ಆಚರಿಸುತ್ತಾರೆ. ಇಲ್ಲಿನ ನಂಬಿಕೆಗಳಲ್ಲಿ ಹೋಲಿಕೆಗಳಿವೆ. ಆಚಾರ-ವಿಚಾರದಲ್ಲಿ ಸಾಮ್ಯತೆ ಇದೆ. ಆದರೆ ಈ ಹೋಲಿಕೆ, ಸಾಮ್ಯತೆಯನ್ನು ಮುಸ್ಲಿಂ ಅಥವಾ ಕ್ರಿಶ್ಚಿಯನ್ ಧರ್ಮದಲ್ಲಿ ಕಾಣಲು ಸಾಧ್ಯವಿಲ್ಲ. ಹೀಗಾಗಿ ಅಮಿತ್ ಶಾ ಘೋಷಣೆಗೆ ರಿಯಾಯಿತಿ ಇದೆ. ಆದರೆ ಈ ರಿಯಾಯಿತಿಯನ್ನು ಯಾವುದೇ ಮುಸ್ಲಿಮರಾಗಲಿ, ಕ್ರಿಶ್ಚಿಯನ್ನಾಗಲಿ ಬಯಸುವುದೂ ಇಲ್ಲ, ಕೇಳುವುದೂ ಇಲ್ಲ. ಹೀಗಾಗಿ ನೋಂದಣಿ ಪುಸ್ತಕದಲ್ಲಿ ಹಿಂದೂಯೇತರ ಎಂದು ದಾಖಲಾದ ರಾಹುಲ್ ಗಾಂಧಿ ಅವರಿಗಂತೂ ಯಾವ ದೃಷ್ಟಿಕೋನದಲ್ಲೂ ಇದು ಸಿಗುವುದಿಲ್ಲ.

ಕಾಂಗ್ರೆಸ್ ಮೊದಲಿಂದಲೂ ಹಿಂದುತ್ವ, ಹಿಂದೂವಿರೋಧಿ ನಂಬಿಕೆ ಆಧಾರದ ಮೇಲೆ ರಾಜಕೀಯ ಮಾಡುತ್ತಾ ಬಂದಿದೆ. ಜಾತ್ಯತೀತತೆ ಅದರ ರಾಜಕೀಯ ನೀತಿ. ಕಾಂಗ್ರೆಸ್ ಚುಕ್ಕಾಣಿ ಹಿಡಿದಿರುವ ಸೋನಿಯಾ ಗಾಂಧಿ ಅವರಾಗಲಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಾಗಲಿ ಎಂದಿಗೂ ಹಿಂದೂವಾದದ ಮೇಲೆ ರಾಜಕೀಯ ಮಾಡಿದವರಲ್ಲ. ಅದನ್ನು ವಿರೋಧಿಸಿಕೊಂಡೇ ರಾಜಕೀಯ ಭವಿಷ್ಯ ಅರಸಿದವರು. ಈಗ ಗುಜರಾತ್ ಚುನಾವಣೆ ಸಂದರ್ಭದಲ್ಲಿ ಮಾತು ಬದಲಿಸಿದಾಕ್ಷಣ ನಂಬಿಕೆಗಳು ಬದಲಾಗುವುದಿಲ್ಲ. ಬದಲಿಗೆ  ಚುನಾವಣೆಯಲ್ಲಿ ವೋಟು ಬೀಳಬೇಕು ಎನ್ನುವ ಕಾರಣಕ್ಕೆ ಈ ರಾಜಕಾರಣಿಗಳು ತಮ್ಮ ನಾಲಿಗೆಯನ್ನು ಹೇಗೆ ಬೇಕಾದರೂ ತಿರುಗಿಸಬಲ್ಲರು, ಅನುಕೂಲಸಿಂಧು, ಮತ ರಾಜಕಾರಣಕ್ಕಾಗಿ ಜಾತಿ, ಮತ, ಧರ್ಮವನ್ನು ಹೇಗೆ ಬೇಕಾದರೂ ತಿರುಚಬಲ್ಲರು ಎಂಬುದನ್ನು ಮಾತ್ರ ಸಾಬೀತು ಪಡಿಸುತ್ತದೆ. ರಾಹುಲ್ ಗಾಂಧಿ ಧರ್ಮ ವಿವಾದ ಇದಕ್ಕೆ ಮತ್ತೊಂದು ನಿದರ್ಶನವಾಗಿದೆ ಅಷ್ಟೇ!

ಲಗೋರಿ : ನೀವಾಡುವ ಸುಳ್ಳು ನಿಮ್ಮ ಸತ್ಯವನ್ನೇ ನುಂಗುತ್ತದೆ!

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply