ಬಾಲಿವುಡ್ ಹಿರಿಯ ನಟ ಶಶಿ ಕಪೂರ್ ವಿಧಿವಶ

ಡಿಜಿಟಲ್ ಕನ್ನಡ ಟೀಮ್:

ಬಾಲಿವುಡ್ ಹಿರಿಯ ನಟ ಶಶಿಕಪೂರ್ ಇಂದು ವಿಧಿವಶರಾಗಿದ್ದಾರೆ. 79 ವರ್ಷದವರಾಗಿದ್ದ ಶಶಿಕಪೂರ್ ಇಂದು ಸಂಜೆ ಮುಂಬೈನಲ್ಲಿ ನಿಧನರಾಗಿದ್ದಾರೆ. ಸುದೀರ್ಘ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶಶಿಕಪೂರ್ ಇಂದು ಕೊನೆಯುಸಿರೆಳೆದಿದ್ದಾರೆ.

1941 ರಿಂದ 1999 ರವರೆಗೂ ನಟನೆ ಮಾಡಿದ್ದ ಶಶಿಕಪೂರ್ ಅಗಲಿಕೆಗೆ ಬಾಲಿವುಡ್ ಸಂತಾಪ ಸೂಚಿಸಿದೆ. ಸುದೀರ್ಘ 58 ವರ್ಷಗಳ ಕಾಲ ನಟನೆ ಮಾಡಿದ್ದ ಶಶಿಕಪೂರ್ 40ರ ದಶಕದಲ್ಲಿ ಬಾಲ ನಟನಾಗಿ ಅಭಿನಯ ಆರಂಭಿಸಿದರು. ತಮ್ಮ ತಂದೆಯ ನಾಟಕ ಕಂಪನಿ ಪೃಥ್ವಿ ಥಿಯೇಟರ್ ನಲ್ಲೇ ಭಾಗಿಯಾಗಿ ರಂಗಭೂಮಿಯಲ್ಲೂ ಸೇವೆ ಸಲ್ಲಿಸಿದ್ದರು. ಕೇವಲ ಅಭಿನಯ ಮಾತ್ರವಲ್ಲದೆ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿರುವ ಶಶಿಕಪೂರ್ ಪೋಸ್ಟ್ ಬಾಕ್ಸ್ 999 ಹಾಗೂ ಗೆಸ್ಟ್ ಹೌಸ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಖ್ಯಾತ ಅಭಿನಯತ್ರಿಗಳಾದ ರಾಖೀ, ಶರ್ಮಿಳಾ ಠಾಗೋರ್, ಜೀನತ್ ಅಮಾನ್ ಜತೆಯಲ್ಲಿ ಅಭಿನಯಿಸಿರುವ ಶಶಿಕಪೂರ್ 1960ರ ದಶಕದಿಂದ 1980ರ ದಶಕದ ವರೆಗೂ ಅನೇಕ ಯಶಸ್ವಿ ಚಿತ್ರಗಳನ್ನು ಕೊಟ್ಟರು. ಆ ಪೈಕಿ ಜಾನ್ವಾರ್ ಔರ್ ಇನ್ಸಾನ್, ಕಬಿ ಕಭಿ, ಬಸೇರಾ, ತ್ರಿಷ್ನಾ, ಜಮೀನ್ ಆಸ್ಮಾನ್, ವಕ್ತ್, ಆಮ್ನೆ ಸಾಮ್ನೆ, ಸುಹಾನಾ ಸಫರ್, ಪಾಪ್ ಔರ್ ಪುಣ್ಯ, ಸ್ವಾತಿ, ಮೈ ಲವ್, ಅನಾರಿ ಸೇರಿದಂತೆ 148 ಚಿತ್ರಗಳಲ್ಲಿ ಅಭಿನಯಿಸಿದ ಕೀರ್ತಿ ಶಶಿಕಪೂರ್ ಅವರದು. ಇನ್ನು ಜುನೂನ್, ಕಲ್ಯೂಗ್, 36 ಚೌರಿಂಘೀ ಲೇನ್, ವಿಜೇತ, ಉತ್ಸವ್, ಅಜೂಬ ಚಿತ್ರಗಳ ನಿರ್ಮಾಣವನ್ನು ಮಾಡಿದ್ದಾರೆ. ಅದರೊಂದಿಗೆ ಶಶಿಕಪೂರ್ ಚಿತ್ರರಂಗಕ್ಕೆ ಕೇವಲ ತೆರೆ ಮೇಲಷ್ಟೇ ಅಲ್ಲದೆ ತೆರೆಯ ಹಿಂದೆಯೂ ಅಪಾರ ಸೇವೆ ಸಲ್ಲಿಸಿದ್ದಾರೆ.

ಸುದೀರ್ಘ ವರ್ಷಗಳ ಅಭಿನಯಕ್ಕಾಗಿ ಶಶಿಕಪೂರ್ ಅವರಿಗೆ ಅನೇಕ ಪ್ರಶಸ್ತಿಗಳು ಲಭಿಸಿದ್ದು, 2011 ರಲ್ಲಿ ಪದ್ಮ ಭೂಷಣ, 2015ರಲ್ಲಿ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ. 1994 (ಮುಹಾಫಿಜ್) 1986 (ನ್ಯೂ ಡೆಲ್ಲಿ ಟೈಮ್ಸ್) (1979 ಜುನೂನ್) ಚಿತ್ರಗಳಿಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದರು.

Leave a Reply