ಅಯೋಧ್ಯೆ ವಿವಾದ: ಫೆ.8ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

ಡಿಜಿಟಲ್ ಕನ್ನಡ ಟೀಮ್:

ಅಯೋಧ್ಯೆಯ ರಾಮ ಮಂದಿರ ಹಾಗೂ ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿರುವ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದಿನ ವರ್ಷ ಫೆಬ್ರವರಿ 8ಕ್ಕೆ ಮುಂದೂಡಿದೆ.

ವಕ್ಫ್ ಮಂಡಳಿ ಹಾಗೂ ಬಾಬ್ರಿ ಕಾರ್ಯಸೂಚಿ ಸಮಿತಿ ಈ ವಿವಾದದ ವಿಚಾರಣೆಯನ್ನು ಇಂದು ಆರಂಭಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದವು. ಅಲ್ಲದೆ ಈ ವಿಚಾರಣೆಯನ್ನು ಅತ್ಯುನ್ನತ ಸಂವಿಧಾನಿಕ ಪೀಠ ನಡೆಸಬೇಕು ಎಂದು ಬೇಡಿಕೆ ಇಡಲಾಯಿತು. ಪರಿಣಾಮ ಸುಪ್ರೀಂ ಕೋರ್ಟ್ ರೀಠ ಈ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಯಿತು.

ಈ ವಿವಾದದ ಕುರಿತಂತೆ 2010ರಲ್ಲಿ ಅಲಹಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಒಟ್ಟು 13 ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಹೀಗಾಗಿ ಸುಪ್ರೀಂ ಕೋರ್ಟ್ ಇಂದು ಈ ಪ್ರಕರಣದ ವಿಚಾರಣೆ ನಡೆಸಲು ತೀರ್ಮಾನಿಸಿತ್ತು.

ಸುನ್ನಿ ವಕ್ಫ್ ಮಂಡಳಿ ಪರವಾಗಿ ವಾದ ಮಂಡಿಸಿದ ಮಾಜಿ ಕೇಂದ್ರ ಸಚಿವ ಹಾಗೂ ವಕೀಲರಾದ ಕಪಿಲ್ ಸಿಬಲ್, ಈ ವಿಚಾರವಾಗಿ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತದೆ ಎಂದರೆ ಹೊರಗಡೆ ಸಾಕಷ್ಟು ಚರ್ಚೆಗೆ ಕಾರಣವಾಗುತ್ತದೆ. ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಈ ವಿಚಾರಣೆಯ ತೀರ್ಪನ್ನು 2019ರ ಸಾರ್ವತ್ರಿಕ ಚುನಾವಣೆ ಫಲಿತಾಂಶ ಬಂದ ಬಳಿಕ ಪ್ರಕಟಿಸಬೇಕು ಎಂದು ಮನವಿ ಮಾಡಿಕೊಂಡರು. ಮನವಿಯ ಮೂಲಕ ಈ ವಿಚಾರದಲ್ಲಿ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರವನ್ನು ಹಾಕಿದ್ದರು.

ಆದರೆ ಈ ಮನವಿಯನ್ನು ಸುಪ್ರೀಂ ಕೋರ್ಟ್ ಪೀಠ ತಿರಸ್ಕರಿಸಿತು. ಈ ವಿಚಾರಣೆಯನ್ನು ಮುಂದೂಡಿರುವುದು ಮಾತ್ರವಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಎಲ್ಲಾ ಅರ್ಜಿದಾರರ ಪರ ವಕೀಲರಿಗೆ ಸೂಚನೆಯನ್ನೂ ನೀಡಿದ್ದಾರೆ.

Leave a Reply