ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಡುತ್ತಿರೋ ಬಿಜೆಪಿ ನಾಯಕರಿಗೆ ಸವಾಲಾಗಿದ್ದಾರೆ ಬಂಡಾಯ ನಾಯಕರು!

ಡಿಜಿಟಲ್ ಕನ್ನಡ ಟೀಮ್:

ಈ ಬಾರಿಯ ಗುಜರಾತ್ ವಿಧಾನ ಸಭೆ ಚುನಾವಣೆ ಬಿಜೆಪಿ ಕಾಂಗ್ರೆಸ್ ವಿರುದ್ಧ ಮಾಡು ಇಲ್ಲವೆ ಮಡಿ ಎಂಬ ಪರಿಸ್ಥಿತಿಯಲ್ಲಿ ಸಿಲುಕಿದೆ. ಈ ಚುನಾವಣೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ನಿಂದ ಪೈಪೋಟಿ ಎದುರಾಗುತ್ತಿರುವ ಬೆನ್ನಲ್ಲೇ ಪಕ್ಷದಲ್ಲಿ ಟಿಕೆಟ್ ಸಿಗದೇ ಬಂಡಾಯ ದ್ದಿರುವ ನಾಯಕರಿಂದಲೂ ದೊಡ್ಡ ಪ್ರತಿರೋಧ ಎದುರಿಸುತ್ತಿದೆ.

ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ನಾಯಕರು ಈಗ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕೆಲವರು ಬಂಡಾಯವಾಗಿ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದರೆ, ಮತ್ತೆ ಕೆಲವರು ಕಾಂಗ್ರೆಸ್ ಸೇರಿದಂತೆ ಅನ್ಯ ಪಕ್ಷಗಳಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ಬಿಜೆಪಿ ತನ್ನ 24 ಸದಸ್ಯರನ್ನು ಅಮಾನತುಗೊಳಿಸಿತು. ಉತ್ತರ ಪ್ರದೇಶದ ಸ್ಥಳೀಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಮರುದಿನವೇ ಗುಜರಾತ್ ಬಿಜೆಪಿಯಲ್ಲಿ ಇಂತಹ ಬೆಳವಣಿಗೆ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಬಿಜೆಪಿಯ ಬಂಡಾಯ ನಾಯಕರ ಪೈಕಿ ಅಜಯ್ ಚೌಧರಿ ಪ್ರಮುಖರಾಗಿದ್ದು, ಇವರು ಸೂರತ್ ನ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಟಿಕಟ್ ಸಿಗದ ಹಿನ್ನೆಲೆಯಲ್ಲಿ ಚೌಧರಿ ದಕ್ಷಿಣ ಗುಜರಾತಿನ ಚೊರ್ಯಾಸಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಲುವುದಾಗಿ ಘೋಷಣೆ ಮಾಡಿದರು. ಈ ಹಿನ್ನೆಲೆಯಲ್ಲಿ ಪಕ್ಷ ಈತನನ್ನು ಅಮಾನತುಗೊಳಿಸಿತ್ತು.

ಮೋದಿ ಪ್ರಧಾನಿಯಾದ ಬಳಿಕ ಗುಜರಾತ್ ಬಿಜೆಪಿಯಲ್ಲಿ ಗಟ್ಟಿ ನಾಯಕತ್ವ ಇಲ್ಲದಂತಾಗಿಯತು. 2001ರಿಂದ 2004ರವರೆಗೂ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ಬಿಜೆಪಿಯಲ್ಲಿ ಒಂದು ನಿಯಂತ್ರಣವಿತ್ತು. ಈಗ ಅಮಿತ್ ಶಾ ಸಹ ರಾಜ್ಯಸಭೆಗೆ ಆಯ್ಕೆಯಾದ ಮೇಲೆ ಗುಜರಾತ್ ಬಿಜೆಪಿಯಲ್ಲಿ ನಾಯಕತ್ವದ ಅನುಪಸ್ಥಿತಿ ಉದ್ಭವಿಸಿದೆ. ಇದೇ ಕಾರಣಕ್ಕಾಗಿ ಪಕ್ಷದ ಬಂಡಾಯದ ಕೂಗು ಹೆಚ್ಚಾಗಿ ಕೇಳಿಬರುತ್ತಿದೆ. ಮಾಜಿ ಶಾಸಕರು, ಪಕ್ಷದ ಕಾರ್ಯಕಾರಿ ಸದಸ್ಯರು ಹೀಗೆ ಪಕ್ಷದಲ್ಲಿ ಪ್ರಮುಖ ಸ್ಥಾನ ಹೊಂದಿದ್ದವರೇ ಈಗ ಬಂಡಾಯದ ಬಾವುಟ ಹಾರಿಸಿರುವುದು ಬಿಜೆಪಿಗೆ ದೊಡ್ಡ ಸವಾಲಾಗಿದೆ. ಬಿಜೆಪಿ ವಿರುದ್ಧದ ಈ ಬಂಡಾಯದ ಸಮರ ಸಹಜವಾಗಿಯೇ ಕಾಂಗ್ರೆಸ್ ಗೆ ಲಾಭವಾಗಿ ಪರಿಣಮಿಸಲಿದೆ.

ಈ ಎಲ್ಲ ಬೆಳವಣಿಗೆಗಳಿಂದ ಗುಜರಾತಿನ ಬಿಜೆಪಿ ನಾಯಕರು ಈ ಚುನಾವಣೆಯಲ್ಲಿ ಕೇವಲ ಕಾಂಗ್ರೆಸ್ ವಿರುದ್ಧ ಸೆಣಸುತ್ತಿಲ್ಲ. ತಮ್ಮ ಪಕ್ಷದ ಬಂಡಾಯ ನಾಯಕರ ವಿರುದ್ಧವೂ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Leave a Reply