ದಿನೇ ದಿನೇ ಬಿಜೆಪಿ ಮೇಲೆ ನಂಬಿಕೆ ಕಳೆದುಕೊಳ್ತಿದ್ದಾರಾ ಗುಜರಾತ್ ಜನ? ನೂತನ ಸಮೀಕ್ಷೆಯಲ್ಲಿ ಹೆಚ್ಚಿದ ಕಾಂಗ್ರೆಸ್ ಸ್ಥಾನಗಳು

ಡಿಜಿಟಲ್ ಕನ್ನಡ ಟೀಮ್:

ಈ ಬಾರಿಯ ಗುಜರಾತ್ ಚುನಾವಣೆ ಬಿಜೆಪಿ ಪಾಲಿಗೆ ನಿಜಕ್ಕೂ ದೊಡ್ಡ ಸವಾಲಾಗಿರುವಂತೆ ಕಾಣುತ್ತಿದೆ. ಗುಜರಾತಿನ ರಾಜಕೀಯದಿಂದ ಮೋದಿ ಹಾಗೂ ಅಮಿತ್ ಶಾ ರಾಷ್ಟ್ರ ರಾಜಕಾರಣಕ್ಕೆ ಬಂದ ಮೇಲೆ ಗುಜರಾತ್ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಇತ್ತೀಚಿನ ಬೆಳವಣಿಗೆಗಳು ಸಾಕ್ಷಿಯಾಗಿವೆ. ಈ ಹೊತ್ತಲ್ಲಿ ಚುನಾವಣಾ ಪೂರ್ವದ ಮೂರನೇ ಸಮೀಕ್ಷೆ ಹೊರಬಂದಿದ್ದು, ಇದರಲ್ಲಿ ಬಿಜೆಪಿ ಭಾರಿ ಅಂತರದ ಕುಸಿತ ಕಂಡಿದೆ.

ಲೋಕನೀತಿ ಹಾಗೂ ಸಿಎಸ್ ಡಿಎಸ್ ನಡೆಸಿರುವ ಸಮೀಕ್ಷೆ ಪ್ರಕಾರ 182 ಶಾಸಕರ ಬಲ ಹೊಂದಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 91- 99 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 78-86 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ. ಇದೇ ಸಂಸ್ಥೆ ಕಳೆದ ಆಗಸ್ಟ್ ತಿಂಗಳಲ್ಲಿ ನಡೆದ ಸಮೀಕ್ಷೆ ವೇಳೆ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ಸಾಧಿಸಲಿದೆ ಎಂದು ಹೇಳಲಾಗಿತ್ತು. ಆದರೆ ಈದ ಬಿಜೆಪಿ 100 ಸ್ಥಾನ ಗೆಲ್ಲುವುದೇ ದೊಡ್ಡ ವಿಚಾರವಾಗಿರುವುದು ಅಚ್ಚರಿ ಮೂಡಿಸಿದೆ.

ಈ ಸಂಸ್ಥೆ ಆಗಸ್ಟ್ ತಿಂಗಳಲ್ಲಿ ನಡೆಸಿದ ಸಮೀಕ್ಷೆ ಫಲಿತಾಂಶದ ಪ್ರಕಾರ ಬಿಜೆಪಿ 144ರಿಂದ 152, ಕಾಂಗ್ರೆಸ್ 26 ರಿಂದ 32, ಇತರೆ 3ರಿಂದ 7 ಸ್ಥಾನಗಳಲ್ಲು ಗೆಲ್ಲಲಿದೆ ಎಂದು ತಿಳಿಸಿತ್ತು. ನಂತರ ಅಕ್ಟೋಬರ್ ನಲ್ಲಿ ನಡೆದ ಸಮೀಕ್ಷೆ ವೇಳೆಗೆ ಸ್ವಲ್ಪ ಮಟ್ಟಿನ ಕುಸಿತ ಕಂಡಿದ್ದ ಬಿಜೆಪಿ 113-121 ಸ್ಥಾನ, ಕಾಂಗ್ರೆಸ್ 58-64 ಸ್ಥಾನ ಹಾಗೂ ಇತರೆ 1-7 ಸ್ಥಾನ ಗೆಲ್ಲುವುದಾಗಿ ಪ್ರಕಟಿಸಿತ್ತು. ಈಗ ನವೆಂಬರ್ ತಿಂಗಳಲ್ಲಿ ನಡೆದಿರುವ ಸಮೀಕಷೆಯ ಫಲಿತಾಂಶದ ಬಿಜೆಪಿ 100 ಸ್ಥಾನವನ್ನು ಗೆಲ್ಲುವುದಿಲ್ಲ ಎನ್ನುತ್ತಿದೆ.

ಈ ಸಮೀಕ್ಷೆಯ ವರದಿಗಳು ಗುಜರಾತ್ ಜನರು ಕಳೆದ ಮೂರ್ನಾಲ್ಕು ತಿಂಗಳಲ್ಲೇ ಬಿಜೆಪಿ ಮೇಲೆ ಇಷ್ಟು ದೊಡ್ಡ ಪ್ರಮಾಣ ಬಿಜೆಪಿ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಎಂಬ ಪ್ರಶ್ನೆ ಹುಟ್ಟುಹಾಕಿವೆ.

ಈ ಸಮೀಕ್ಷೆಯಲ್ಲಿ 18-29 ವಯೋಮಾನದ ಜನರು ಬಿಜೆಪಿಯ ಪರವಾಗಿದ್ದರೆ, 30-39 ಹಾಗೂ 40-59 ವಯೋಮಾನದವರು ಕಾಂಗ್ರೆಸ್ ಪರ ಒಲವು ಹೊಂದಿದ್ದಾರೆ ಎಂಬುದು ತಿಳಿದು ಬಂದಿದೆ. ಇನ್ನು ಶೇಕಡಾವಾರು ಮತ ಗಳಿಕೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ ಶೇ.43 ರಷ್ಟು ಮತ ಪಡೆಯಲಿವೆ ಎಂದು ಊಹಿಸಲಾಗಿದೆ. ಈ ಮೂರು ಸಮೀಕ್ಷೆಗಳಲ್ಲಿ ಬಿಜೆಪಿ ಹಂತ ಹಂತವಾಗಿ ಕುಸಿತ ಕಂಡುಬಂದಿದ್ದರೂ ಬಿಜೆಪಿ ಬಹುಮತ ಗಳಿಸಿ ಅಧಿಕಾರಕ್ಕೆ ಬರಲಿದೆ ಎಂಬ ಫಲಿತಾಂಶ ಬಂದಿರೋದು ಆಡಳಿತ ಪಕ್ಷಕ್ಕೆ ಸ್ವಲ್ಪ ನೆಮ್ಮದಿ ತಂದಿದೆ. ಆದರೆ ಬಾಕಿ ಇರುವ ಕೆಲವೇ ದಿನಗಳಲ್ಲಿ ಜನರ ಮನ ಗೆಲ್ಲದಿದ್ದರೆ ಈ ಬಾರಿ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಬಿಜೆಪಿ ಈ ಚುನಾವಣೆಯ ಅಂತಿಮ ಘಟ್ಟದಲ್ಲಿ ಹೇಗೆ ಕಾರ್ಯತಂತ್ರ ರೂಪಿಸಲಿದೆ ಎಂಬ ಕುತೂಹಲ ಮೂಡಿದೆ.

Leave a Reply