ಚೀನಾ-ಪಾಕ್ ಆರ್ಥಿಕ ಕಾರಿಡಾರ್ ಯೋಜನೆ ವಿಫಲ? ತಾತ್ಕಾಲಿಕವಾಗಿ ಯೋಜನೆ ಸ್ಥಗಿತಗೊಳಿಸಲು ಚೀನಾ ನಿರ್ಧಾರ- ಪಾಕ್ ಕಂಗಾಲು!

ಡಿಜಿಟಲ್ ಕನ್ನಡ ಟೀಮ್:

ಭಾರತದ ತೀವ್ರ ವಿರೋಧದ ನಡುವೆಯೂ ಪಾಕಿಸ್ತಾನ ಹಾಗೂ ಚೀನಾ ದೇಶಗಳು ಆರ್ಥಿಕ ಕಾರಿಡಾರ್ ಯೋಜನೆಗೆ ಮುಂದಾಗಿದ್ದು, ಗೊತ್ತಿರುವ ಸಂಗತಿ. ಆದರೆ ಈಗ ಈ ಯೋಜನೆ ಅರ್ಧಕ್ಕೆ ನಿಲ್ಲುವ ಸಾಧ್ಯತೆ ದಟ್ಟವಾಗುತ್ತಿವೆ. ಅದರೊಂದಿಗೆ ಭಾರತಕ್ಕೆ ಸಡೆಡು ಹೊಡೆಯಲು ಮುಂದಾಗಿದ್ದ ಚೀನಾ ಹಾಗೂ ಪಾಕಿಸ್ತಾನದ ಪ್ಲಾನ್ ಫ್ಲಾಪ್ ಆಗುವಂತಿದೆ.

ಹೌದು, ಚೀನಾ ಹಾಗೂ ಪಾಕಿಸ್ತಾನಗಳು ವ್ಯಾಪಾರದ ಉದ್ದೇಶಕ್ಕಾಗಿ ಎರಡು ದೇಶಗಳ ನಡುವೆ ಅತ್ಯುನ್ನತ ರಸ್ತೆ ನಿರ್ಮಾಣ ಮಾಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಯೋಜನೆ ಪ್ರಕಾರ ಪಾಕಿಸ್ತಾನದಲ್ಲಿ ಮೂರು ಪ್ರಮುಖ ಹೆದ್ದಾರಿಗಳು ನಿರ್ಮಾಣವಾಗಲಿದ್ದವು. ಚೀನಾದಿಂದ ಪಾಕಿಸ್ತಾನದ ಗದ್ವಾರ್ ಬಂದರಿಗೆ ಸಂಪರ್ಕ ಸಾಧಿಸಲು ನೆರವಾಗುವ ಯೋಜನೆಯಾಗಿತ್ತು. ಇದು ಚೀನಾದ ಕನಸಿನ ಯೋಜನೆ ಒನ್ ಬೆಲ್ಟ್ ಒನ್ ರೋಡ್ ಯೋಜನೆಯ ಮತ್ತೊಂದು ಭಾಗ ಎಂದೇ ಪರಿಗಣಿತವಾಗಿತ್ತು. ಈ ಯೋಜನೆಗೆ ಭಾರತ ವಿರೋಧ ವ್ಯಕ್ತಪಡಿಸಲು ಕಾರಣ ಎಂದರೆ, ಈ ಯೋಜನೆಯಲ್ಲಿ ಎರಡೂ ದೇಶಗಳ ನಡುವೆ ನಿರ್ಮಾಣವಾಗುವ ರಸ್ತೆ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕವಾಗಿ ಹಾದು ಹೋಗುತ್ತಿತ್ತು. ಒಂದು ವೇಳೆ ಇದಕ್ಕೆ ಅವಕಾಶ ಮಾಡಿಕೊಟ್ಟಿದ್ದರೆ, ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಪಾಕಿಸ್ತಾನ ಮತ್ತಷ್ಟು ನಿಯಂತ್ರಣ ಸಾಧಿಸಿದಂತಾಗುತ್ತಿತ್ತು. ಹೀಗಾಗಿ ಭಾರತ ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

ಈಗ ಈ ಯೋಜನೆ ಅರ್ಧಕ್ಕೆ ನಿಲ್ಲುತ್ತಿರೋದೇಕೆ? ಈ ಬಗ್ಗೆ ಪಾಕಿಸ್ತಾನ ಮಾಧ್ಯಮಗಳು ಏನು ಹೇಳುತ್ತಿವೆ ಎಂಬುದನ್ನು ನೋಡುವುದಾದರೆ, ಈ ಯೋಜನೆಯಿಂದ ಚೀನಾ ಹಿಂದಕ್ಕೆ ಉಳಿಯಲು ನಿರ್ಧರಿಸಿರುದು ಈ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕಾರಣದಿಂದ. ಚೀನಾ ತಾತ್ಕಾಲಿಕವಾಗಿ ಈ ಯೋಜನೆಗೆ ಆರ್ಥಿಕ ನೆರವು ನೀಡದಿರಲು ನಿರ್ರಿಸಿದೆ. ಚೀನಾದ ಈ ನಿರ್ಧಾರ ಪಾಕಿಸ್ತಾನಕ್ಕೆ ದೊಡ್ಡ ಆಘಾತವಾಗಿದೆ. ಈ ಯೋಜನೆ ತಾತ್ಕಾಲಿಕ ಸ್ಥಗಿತದಿಂದ 210 ಕಿ.ಮೀ ಉದ್ದದ ದೆರಾ ಇಸ್ಮಾಯಿಲ್ ಖಾನ್- ಜೋಬ್ ರಸ್ತೆ ನಿರ್ಮಾಣ ಅರ್ಧಕ್ಕೆ ನಿಂತಿದೆ. ಈ ರಸ್ತೆ ನಿರ್ಮಾಣಕ್ಕಾಗಿ ಒಟ್ಟು 8100 ಕೋಟಿ ಹಾಗೂ 1500 ಕೋಟಿ ರುಪಾಯಿ ರಸ್ತೆಗೆ ಬೇಕಾಗಿರುವ ಭೂಮಿ ಪಡೆಯಲು ವೆಚ್ಚದ ಅಂದಾಜು ಮಾಡಲಾಗಿತ್ತು.

ಇನ್ನು 1900 ಕೋಟಿ ವೆಚ್ಚದಲ್ಲಿ 110 ಕಿ.ಮೀ ಉದ್ದದ ಖುಜ್ದಾರ್-ಬಸಿಮಾ ರಸ್ತೆಯ ನಿರ್ಮಾಣ ಕಾಮಗಾರಿಯೂ ಅರ್ಧಕ್ಕೆ ನಿಲ್ಲಲಿದೆ. ಇನ್ನು 850 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಬೇಕಿದ್ದ 136 ಕಿ.ಮೀ ಉದ್ದದ ರಾಯ್ಕೋಟ್ ಮತ್ತು ಥಾಕೋಟ್ ನಡುವಣ ಕರಕೋರಮ್ ಹೆದ್ದಾರಿ ಸಹ ಈಗ ಅರ್ಧಕ್ಕೆ ನಿಂತಿದೆ.

ಪಾಕಿಸ್ತಾನದಲ್ಲಿನ ಈ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಇದಕ್ಕಾಗಿ ಚೀನಾ ಹೊಸ ಮಾರ್ಗಸೂಚಿ ಹಾಗೂ ಷರತ್ತುಗಳನ್ನು ವಿಧಿಸಿದೆ. ಇವುಗಳಿಗೆ ಒಪ್ಪಿದರೆ ಮಾತ್ರ ಯೋಜನೆ ಮುಂದುವರಿಸಲು ಚೀನಾ ನಿರ್ಧರಿಸಲಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.

Leave a Reply