ದೆಹಲಿ ವಾಯು ಮಾಲಿನ್ಯ: ಪ್ರತಿ ಏಳು ಟ್ರಾಫಿಕ್ ಪೊಲೀಸರ ಪೈಕಿ ಒಬ್ಬರಿಗೆ ಶ್ವಾಸಕೋಶ ಸಮಸ್ಯೆ

ಡಿಜಿಟಲ್ ಕನ್ನಡ ಟೀಮ್:

ಕಳೆದ ಮೂರ್ನಾಲ್ಕು ದಿನಗಳಿಂದ ದೆಹಲಿಯ ಫಿರೋಜ್ ಶಾ ಕ್ರೀಡಾಂಗಣದಲ್ಲಿ ಶ್ರೀಲಂಕಾ ಆಟಗಾರರು ಮುಖಗವಸು ಧರಿಸಿ ಆಡುತ್ತಿರುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರಾಲ್ ಗಳು ವ್ಯಕ್ತವಾಗುತ್ತಿವೆ. ದೆಹಲಿಯ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ಲಂಕಾ ಆಟಗಾರರು ಈ ಮುಖಗವಸು ಧರಿಸಿದ್ದಾರೆ. ಲಂಕಾ ಆಟಗಾರರ ಈ ವರ್ತನೆ ಕೆಲವರ ಟೀಕೆಗೆ ಕಾರಣವಾಗಿದೆ. ಈ ಸಂದರ್ಭದಲ್ಲಿ ದಹೆಲಿಯ ವಾಯು ಮಾಲಿನ್ಯ ಎಷ್ಟು ಮಾರಕ ಎಂದರೆ ಇಲ್ಲಿನ ಪ್ರತಿ ಏಳು ಟ್ರಾಫಿಕ್ ಪೊಲೀಸರ ಪೈಕಿ ಒಬ್ಬರಿಗೆ ಶ್ವಾಸಕೋಶ ಸಮಸ್ಯೆ ಇದೆ ಎಂಬ ವರದಿಗಳು ಬಂದಿವೆ.

ವೈದ್ಯಕೀಯ ಚಿಕಿತ್ಸಾ ಅಂಕಿಅಂಶಗಳು ಈ ಆಂತಕಕಾರಿ ಮಾಹಿತಿಯನ್ನು ಬಿಚ್ಚಿಟ್ಟಿವೆ. ಟ್ರಾಫಿಕ್ ಪೊಲೀಸರು ಪ್ರತಿನಿತ್ಯ ಕನಿಷ್ಠ ಪಕ್ಷ 12-14 ಗಂಟೆಗಳ ಕಾಲ ಸಾಕಷ್ಟು ದಟ್ಟಣೆ ಇರುವ ರಸ್ತೆಯಲ್ಲಿ ಟ್ರಾಫಿಕ್ ನಿಯಂತ್ರಣದಲ್ಲಿರುತ್ತಾರೆ. ಇಲ್ಲಿ ಸಹಜವಾಗಿಯೇ ವಾಯು ಮಾಲಿನ್ಯ ಅಧಿಕ ಪ್ರಮಾಣದಲ್ಲಿರುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಇಲ್ಲಿನ ವಾಯು ಮಾಲಿನ್ಯ ಪ್ರಮಾಣ ನಾಲ್ಕೈದು ಪಟ್ಟು ಹೆಚ್ಚಾಗಿದೆ.

ಇತ್ತೀಚೆಗೆ ದೆಹಲಿಯ ಟ್ರಾಫಿಕ್ ಪೊಲೀಸರಿಗಾಗಿ ಪುಲ್ಮನರಿ ಫಂಕ್ಷನ್ ಟೆಸ್ಟ್ (ಪಿಎಫ್ ಟಿ) ಮಾಡಿಸಲಾಯಿತು. ಈ ಪರೀಕ್ಷೆಯಲ್ಲಿ ಒಟ್ಟು 516 ಟ್ರಾಫಿಕ್ ಪೊಲೀಸರು ಭಾಗಿಯಾಗಿದ್ದರು. ಆ ಪೈಕಿ 80 ಮಂದಿ ಪೊಲೀಸರು ಉಸಿರಾಟದ ತೊಂದರೆ ಇರುವುದು ಬೆಳಕಿಗೆ ಬಂದಿದೆ. ಗಂಟಲಿನ ಸಮಸ್ಯೆಯಿಂದ ಹಿಡಿದು ಶ್ವಾಸಕೋಶದ ಸಮಸ್ಯೆಯನ್ನು ಈ ಪೊಲೀಸರು ಎದುರಿಸುತ್ತಿದ್ದಾರೆ. ಇದೇ ರೀತಿ ಮುಂದಿನ ಕೆಲವು ದಿನಗಳಲ್ಲಿ ಎಲ್ಲಾ 5700 ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಈ ಪರೀಕ್ಷೆಗೆ ಒಳಪಡಲಿದ್ದು, ಇದರ ಫಲಿತಾಂಶ ಯಾವ ರೀತಿ ಬರಲಿದೆ ಎಂಬ ಆತಂಕ ಹೆಚ್ಚಿದೆ.

Leave a Reply