ರಾಮ ಮಂದಿರ ವಿಚಾರದಲ್ಲಿ ರಾಜಕೀಯ: ಕಪಿಲ್ ಸಿಬಲ್ ವಿರುದ್ಧ ಮೋದಿ- ಸ್ವಾಮಿ ಕಿಡಿ

ಡಿಜಿಟಲ್ ಕನ್ನಡ ಟೀಮ್:

ರಾಮ ಮಂದಿರ ಹಾಗೂ ಬಾಬರಿ ಮಸೀದಿ ವಿಚಾರವಾಗಿ ನಿನ್ನೆ ಆರಂಭವಾದ ವಿಚಾರಣೆ ವೇಳೆ ಮಾಜಿ ಕೇಂದ್ರ ಸಚಿವ ಹಾಗೂ ವಕೀಲ ಕಪಿಲ್ ಸಿಬಲ್ ಅವರು ರಾಜಕೀಯ ದೃಷ್ಟಿಕೋನದಲ್ಲಿ ವಾದ ಮಂಡಿಸಿದರು. ಪರಿಣಾಮ ಈಗ ಪ್ರಧಾನಿ ಮೋದಿಯಿಂದ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿವರೆಗೂ ಟೀಕೆಗಳು ವ್ಯಕ್ತವಾಗುತ್ತಿವೆ.

ಈ ಪ್ರಕರಣದ ವಿಚಾರಣೆಯ ತೀರ್ಪನ್ನು ಸುಪ್ರೀಂ ಕೋರ್ಟ್ 2019ರ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರವಷ್ಟೇ ಪ್ರಕಟಿಸಬೇಕು ಎಂದು ವಾದಿಸಿದ್ದರು. ಅವರ ಈ ವಾದ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಗುಜರಾತಿನ ಪ್ರಚಾರದಲ್ಲಿರುವ ಪ್ರಧಾನಿ ಮೇದಿ ಇಂದು ಇದೇ ವಿಷಯವಾಗಿ ಸಿಬಲ್ ಹಾಗೂ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಮೋದಿ ಈ ವಿಚಾರವಾಗಿ ಹೇಳಿದಿಷ್ಟು…

‘ನಿನ್ನೆ ಸುಪ್ರೀಂ ಕೋರ್ಟಿನಲ್ಲಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಬಾಬ್ರಿ ಮಸೀದಿ ಅವರ ಹಕ್ಕು ಎಂಬಂತೆ ವಾದ ಮಾಡುತ್ತಿದ್ದರು. ಈ ಪ್ರಕರಣದ ವಿಚಾರಣೆಯನ್ನೇ 2019ರ ನಂತರ ನಡೆಸುವಂತೆ ಕೇಳಲು ಅವರಿಗೆ ಹಕ್ಕು ಇದೆಯೇ? ಚುನಾವಣೆಗೂ ಹಾಗೂ ರಾಮ ಮಂದಿರಕ್ಕೂ ಸಂಬಂಧ ಕಲ್ಪಿಸುತ್ತಿರುವುದೇಕೆ? ಈ ರೀತಿಯ ಯೋಚನೆಗಳು ಸರಿಯೇ? ದೇಶದ ಬಗ್ಗೆ ಯೋಚಿಸದ ಕಾಂಗ್ರೆಸಿಗರು ಈಗ ರಾಮ ಮಂದಿರಕ್ಕೂ ಹಾಗೂ ಚುನಾವಣೆಗೂ ಸಂಬಂಧ ಕಲ್ಪಿಸುತ್ತಿದ್ದಾರೆ.’

ಇನ್ನು ರಾಜ್ಯ ಸಭಾ ಸಚಿವ ಸುಬ್ರಮಣಿಯನ್ ಸ್ವಾಮಿ ಸಹ ಸಿಬಲ್ ವಿರುದ್ಧ ಕಿಡಿಕಾರಿದ್ದು, ಅದು ಹೀಗಿದೆ…

‘ಕಪಿಲ್ ಸಿಬಲ್ ಅವರು ಅವರ ರಾಜಕೀಯ ಮಟ್ಟಕ್ಕೆ ತಕ್ಕಂತೆ ತನ್ನ ವಾದ ಮಂಡಿಸಿದ್ದಾರೆ. ಈ ಪ್ರಕರಣದಲ್ಲಿ ಸೋತರೆ ಮುಂದಿನ ಚುನಾವಣೆಯನ್ನೇ ಸೋಲುತ್ತೇವೆ ಎಂಬ ಭಯ ಅವರಲ್ಲಿ ಮನೆ ಮಾಡಿದೆ. ಈ ತೀರ್ಪು 2019ರ ಚುನಾವಣೆ ಮೇಲೆ ಪ್ರಭಾವ ಬೀರುತ್ತದೆ ಎಂಬುದು ಅವರ ಅಭಿಪ್ರಾಯ. ಅದಕ್ಕೆ ಈ ಪ್ರಕರಣದ ತೀರ್ಪನ್ನು ತಡ ಮಾಡುವ ಅಗತ್ಯವೇನು ಇಲ್ಲ. ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿದು ವಿಚಾರಣೆಯನ್ನು ತಡ ಮಾಡಲು ಪ್ರಯತ್ನಿಸುತ್ತಿದ್ದಾರೆ. ನ್ಯಾಯಾಲಯ ಫೆಬ್ರವರಿ 8ರಿಂದ ದಾಖಲೆಗಳ ಆಧಆರದ ಮೇಲೆ ವಿಚಾರಣೆ ನಡೆಸಲು ನಿರ್ಧರಿಸಿದೆ. ಹೀಗಾಗಿ ದಾಖಲೆಗಳು ನಮ್ಮ ಪರವಾಗಿದ್ದು, ನಾವು ಆರಾಮಾಗಿ ಗೆಲ್ಲುತ್ತೇವೆ.’

Leave a Reply