ಐಪಿಎಲ್ ಆಟಗಾರರ ಉಳಿಕೆ ನಿಯಮ ಅಂತಿಮ, ಈ ಬಾರಿಯ ಹೊಸ ನಿಯಮಗಳೇನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಸಾಕಷ್ಟು ಗೊಂದಲ ಸೃಷ್ಟಿಸಿದ್ದ ಐಪಿಎಲ್ ಫ್ರಾಂಚೈಸಿಗಳ ಆಟಗಾರರ ಉಳಿಕೆ ವಿಷಯಕ್ಕೆ ಸಂಬಂಧಿಸಿದಂತೆ ಐಪಿಎಲ್ ಆಡಳಿತ ಮಂಡಳಿ ಕೊನೆಗೂ ನಿರ್ಧಾರ ಕೈಗೊಳ್ಳುವಲ್ಲಿ ಯಶಸ್ವಿಯಾಗಿದೆ. ನಿನ್ನೆ ನಡೆದ ಐಪಿಎಲ್ ಆಡಳಿತ ಮಂಡಳಿಯ ಆಡಳಿತ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದರ ಪ್ರಕಾರ ಮುಂದಿನ ಆವೃತ್ತಿಗೆ ಎಲ್ಲಾ ಪ್ರಾಂಚೈಸಿಗಳು ಗರಿಷ್ಠ ಐದು ಆಟಗಾರರನ್ನು ತಮ್ಮ ತಂಡದಲ್ಲೇ ಉಳಿಸಿಕೊಳ್ಳುವ ಅವಕಾಶ ಮಾಡಿಕೊಟ್ಟಿದೆ.

ಹೊಸ ನಿಯಮದ ಪ್ರಕಾರ ಒಂದು ತಂಡ ಹರಾಜು ಪೂರ್ವ ಉಳಿಕೆ ಹಾಗೂ ರೈಟ್ ಟು ಮ್ಯಾಚ್ ಕಾರ್ಡ್ ಬಳಕೆಯಿಂದ ಗರಿಷ್ಠ ಐದು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದಾಗಿದೆ. ಇನ್ನು ಹರಾಜು ಪ್ರಕ್ರಿಯೆಗೂ ಮುನ್ನ ಯಾವುದೇ ಆಟಗಾರರನ್ನು ಉಲಿಸಿಕೊಳ್ಳದ ಫ್ರಾಂಚೈಸಿಗಳು ಹರಾಜು ಪ್ರಕ್ರಿಯೆ ವೇಳೆ ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ಮೂರು ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಆದರೆ ಮುದಿನ ಆವೃತ್ತಿಗೆ ನಡೆಯಲಿರುವ ಆಟಗಾರರ ಹರಾಜು ಪ್ರಕ್ರಿಯೆ ದಿನಾಂಕ ಹಾಗೂ ಸ್ಥಳವನ್ನು ಇನ್ನಷ್ಟೇ ನಿರ್ಧರಿಸಬೇಕಿದೆ.

ಹರಾಜು ಪೂರ್ವ ಉಳಿಕೆ ಎಂದರೆ ಏನು?: ಈ ಅವಕಾಶದಲ್ಲಿ ಒಂದು ಫ್ರಾಂಚೈಸಿ ಹರಾಜು ಪ್ರಕ್ರಿಯೆಗೂ ಮುನ್ನವೆ ತನ್ನ ತಂಡದ ಮೂವರು ಆಟಗಾರರನ್ನು ಉಳಿಸಿಕೊಳ್ಳಬಹುದು. ಹೀಗೆ ಉಳಿಸಿಕೊಳ್ಳಲಾದ ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ. ಇಲ್ಲಿ ಒಂದು ಫ್ರಾಂಚೈಸಿ ಎಷ್ಟು ಆಟಗಾರರನ್ನು ಉಳಿಸಿಕೊಳ್ಳಲಿದೆ ಎಂಬುದರ ಮೇಲೆ ಆ ತಂಡದಲ್ಲೇ ಉಳಿದುಕೊಂಡ ಆಟಗಾರರ ವೇತನ ನಿಗದಿಯಾಗಲಿದೆ. ಹೇಗೆ ಎಂದರೆ…

  • ಒಂದು ಫ್ರಾಂಚೈಸಿ ಮೂರು ಆಟಗಾರರನ್ನು ಉಳಿಸಿಕೊಂಡರೆ ಆ ಮೂರು ಆಟಗಾರರಿಗೆ ಕ್ರಮವಾಗಿ ₹ 15 ಕೋಟಿ, ₹ 11 ಕೋಟಿ ಹಾಗೂ ₹ 7 ಕೋಟಿ. ಇದರಿಂದ ಆ ಫ್ರಾಂಚೈಸಿ ತನ್ನ ಜೇಬಿನಿಂದ ₹ 33 ಕೋಟಿ ಮೊತ್ತ ಕಡಿಮೆಯಾಗಲಿದೆ. ಉದಾಹರಣೆಗೆ: ಆರ್ ಸಿಬಿ ತಂಡ ವಿರಾಟ್ ಕೊಹ್ಲಿಯನ್ನು ಮೊದಲ ಆಟಗಾರನಾಗಿ ಡಿವಿಲಿಯರ್ಸ್ ಅನ್ನು ಎರಡನೇ ಆಟಗಾರನಾಗಿ ಹಾಗೂ ಗೇಲ್ ಅವರನ್ನು ಮೂರನೇ ಆಟಗಾರನಾಗಿ ಉಳಿಸಿಕೊಂಡರೆ ಕೊಹ್ಲಿಗೆ 15 ಕೋಟಿ, ಡಿವಿಲಿಯರ್ಸ್ ಗೆ 11 ಕೋಟಿ ಹಾಗೂ ಗೇಲ್ ಗೆ 7 ಕೋಟಿ ಸಿಗಲಿದೆ.
  • ಒಂದು ಫ್ರಾಂಚೈಸಿ ಇಬ್ಬರು ಆಟಗಾರರನ್ನು ಉಳಿಸಿಕೊಂಡರೆ ಮೊದಲ ಆಟಗಾರನಿಗೆ ₹ 12.5 ಕೋಟಿ ಹಾಗೂ ಎರಡನೇ ಆಟಗಾರನಿಗೆ ₹ 8.5 ಕೋಟಿ ನಿಗದಿಯಾಗಲಿದೆ. ಉದಾ: ಆರ್ ಸಿಬಿ ಕೇವಲ ಕೊಹ್ಲಿ ಹಾಗೂ ಡಿವಿಲಿಯರ್ಸ್ ಅನ್ನು ಉಳಿಸಿಕೊಂಡರೆ ಕೊಹ್ಲಿಗೆ 12.5 ಕೋಟಿ ಹಾಗೂ ಎಬಿಡಿಗೆ 8.5 ಕೋಟಿ ಸಿಗಲಿದೆ. ಈ ತಂಡದ ಆಟಗಾರರ ಖರೀದಿಯ ಜೇಬಿನಲ್ಲಿ ಒಟ್ಟು ₹ 21 ಕೋಟಿ ಹಣ ಕಡಿಮೆಯಾಗಲಿದೆ.
  • ಇನ್ನು ಫ್ರಾಂಚೈಸಿ ಕೇವಲ ಒಬ್ಬ ಆಟಗಾರನನ್ನು ಉಳಿಸಿಕೊಳ್ಳಲು ಮುಂದಾದರೆ ಆತನಿಗೆ ₹ 12.5 ಕೋಟಿ ಹಣ ನಿಗದಿಯಾಗಲಿದೆ.
  • ಒಂದು ವೇಳೆ ಫ್ರಾಂಚೈಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡದೇ ಇರುವ ಆಟಗಾರರನ್ನು ಉಳಿಸಿಕೊಂಡರೆ ಒಬ್ಬೊಬ್ಬ ಆಟಗಾರನಿಗೆ ತಲಾ ₹ 3 ಕೋಟಿ ನಿಗದಿಯಾಗಲಿದೆ. ಒಂದು ತಂಡ ಎಷ್ಟು ಅಂತಾರಾಷ್ಟ್ರೀಯ ಕ್ರಿಕೆಟ್ ಆಡದ ಆಟಗಾರರನ್ನು ಉಳಿಸಿಕೊಳ್ಳುತ್ತದೋ ಅದರ ಮೇಲೆ ಆ ತಂಡದ ಮೊತ್ತ ಕಡಿಮೆಯಾಗಲಿದೆ.

ರೈಟ್ ಟು ಮ್ಯಾಚ್ ಕಾರ್ಡ್ ಎಂದರೆ ಏನು?: ಇದು ಹರಾಜು ಪ್ರಕ್ರಿಯೆಯಲ್ಲಿ ಫ್ರಾಂಚೈಸಿಗಳು ತಮ್ಮ ತಂಡದಲ್ಲಿದ್ದ ಆಟಗಾರರನ್ನು ಉಳಿಸಿಕೊಳ್ಳಲು ಇರುವ ಮತ್ತೊಂದು ಅವಕಾಶ. ಇಲ್ಲಿ ಒಂದು ಫ್ರಾಂಚೈಸಿಯಲ್ಲಿದ್ದ ಆಟಗಾರ ಹರಾಜು ಪ್ರಕ್ರಿಯೆಯಲ್ಲಿ ಮತ್ತೊಂದು ತಂಡಕ್ಕೆ ಬಿಕರಿಯಾದಾಗ ಆ ಫ್ರಾಂಚೈಸಿ ರೈಟ್ ಟು ಮ್ಯಾಚ್ ಕಾರ್ಡ್ ಬಳಸಿಕೊಂಡು ಆ ಆಟಗಾರನಿಗೆ ಮತ್ತೊಂದು ತಂಡ ಬಿಡ್ ಮಾಡಿದ್ದ ಮೊತ್ತವನ್ನು ನೀಡಿ ಮತ್ತೆ ತನ್ನ ತಂಡಕ್ಕೆ ಎಳೆದುಕೊಳ್ಳುವ ಪ್ರಕ್ರಿಯೆಯಾಗಿದೆ.

ಉದಾಹರಣೆಗೆ: ಆರ್ ಸಿಬಿ ತಂಡ ಕೆ.ಎಲ್ ರಾಹುಲ್ ನನ್ನು ಹರಾಜಿಗೆ ಕಳುಹಿಸಿದ್ದರೆ. ಆತನನ್ನು ಬೇರೆಗಳು ಖರೀದಿ ಮಾಡಿಕೊಳ್ಳುತ್ತವೆ. ಆಗ ಆರ್ ಸಿಬಿ ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ಬೇರೆ ತಂಡ ರಾಹುಲ್ ಗೆ ಎಷ್ಟು ಮೊತ್ತವನ್ನು ಬಿಡ್ ಮಾಡಿರುತ್ತದೆಯೋ ಅಷ್ಟು ಮೊತ್ತವನ್ನು ನೀಡಿ ತನ್ನ ತಂಡಕ್ಕೆ ಸೆಳೆದುಕೊಳ್ಳಬಹುದು.

ಈ ಮೇಲೆ ಹೇಳಿದ ಹಾಗೆ ಹರಾಜು ಪೂರ್ವ ಉಳಿಕೆಯಲ್ಲಿ ಯಾವುದೇ ಆಟಗಾರನನ್ನು ಉಳಿಸಿಕೊಳ್ಳದ ಫ್ರಾಂಚೈಸಿಗಳು ಮಾತ್ರ ಹರಾಜು ಪ್ರಕ್ರಿಯೆಯಲ್ಲಿ ಮೂರು ರೈಟ್ ಟು ಮ್ಯಾಚ್ ಕಾರ್ಡ್ ಬಳಸಬಹುದು. ಇತರೆ ತಂಡಗಳು ಕೇವಲ ಎರಡು ರೈಟ್ ಟು ಮ್ಯಾಚ್ ಕಾರ್ಡ್ ಮಾತ್ರ ಬಳಸಬಹುದಾಗಿದೆ.

ಪುಣೆ ಹಾಗೂ ಗುಜರಾತ್ ಆಟಗಾರರ ಕಥೆ ಏನು?

ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳಲ್ಲಿದ್ದ ಆಟಗಾರರನ್ನೇ ರೈಸಿಂಗ್ ಪುಣೆ ಹಾಗೂ ಗುಜರಾತ್ ಲಯನ್ಸ್ ತಂಡಗಳು ಖರೀದಿ ಮಾಡಿದ್ದವು. ಈಗ ಸಿಎಸ್ ಕೆ ಹಾಗೂ ರಾಜಸ್ಥಾನ ತಂಡಗಳು ವಾಪಸ್ಸಾಗಿದ್ದು, ಪುಣೆ ಹಾಗೂ ಗುಜರಾತ್ ತಂಡ ಭಾಗವಹಿಸುತ್ತಿಲ್ಲ. ಹೀಗಾಗಿ ಎರಡು ವರ್ಷಗಳ ಹಿಂದೆ ತಮ್ಮ ತಂಡದಲ್ಲಿ ಇದ್ದ ಆಟಗಾರರ ಪೈಕಿ ಮೂವರು ಆಟಗಾರರನ್ನು ಹರಾಜು ಪೂರ್ವ ಉಲಿಕೆ ಹಾಗೂ ಇಬ್ಬರನ್ನು ರೈಟ್ ಟು ಮ್ಯಾಚ್ ಕಾರ್ಡ್ ಮೂಲಕ ಎರಡೂ ತಂಡಗಳು ಉಳಿಸಿಕೊಳ್ಳಬಹುದು. ಉದಾಹರಣೆಗೆ ಸಿಎಸ್ ಕೆ ಮಹೇಂದ್ರ ಸಿಂಗ್ ಧೋನಿ, ರೈನಾ ಹಾಗೂ ಅಶ್ವಿನ್ ಅವರನ್ನು ಉಳಿಸಿಕೊಂಡರೆ ರಾಜಸ್ಥಾನ ತಂಡ ಅಜಿಂಕ್ಯ ರಹಾನೆ, ಸ್ಟೀವನ್ ಸ್ಮಿತ್ ಹಾಗೂ ಫಾಲ್ಕನರ್ ಅವರನ್ನು ಉಳಿಸಿಕೊಳ್ಳಬಹುದು. ಉಳಿದಂತೆ ಇತರೆ ಇಬ್ಬರು ಆಟಗಾರರನ್ನು ರೈಟ್ ಟು ಮ್ಯಾಚ್ ಕಾರ್ಡ್ ಮೂಲಕ ಬಳಸಬಹುದು.

ಸಿಎಸ್ ಕೆ ಉಳಿಸಿಕೊಳ್ಳಬಹುದಾದ ಸಂಭಾವ್ಯರ ಪಟ್ಟಿ: ಧೋನಿ, ಅಶ್ವಿನ್, ರೈನಾ, ಡುಪ್ಲೆಸಿಸ್, ಬಾಬಾ ಅಪರಾಜಿತ್, ಅಂಕುಶ್ ಬೈನ್ಸ್, ರವೀಂದ್ರ ಜಡೇಜಾ, ಡ್ವೈನ್ ಬ್ರಾವೊ, ಮೆಕಲಂ, ಡ್ವೈನ್ ಸ್ಮಿತ್, ಆ್ಯಂಡ್ರೂ ಥೈ, ಇರ್ಫಾನ್ ಪಠಾಣ್ ಮತ್ತು ಈಶ್ವರ್ ಪಾಂಡೆ.

ರಾಜಸ್ಥಾನ ಉಳಿಸಿಕೊಳ್ಳಬಹುದಾದ ಸಂಭಾವ್ಯರ ಪಟ್ಟಿ: ಅಜಿಂಕ್ಯ ರಹಾನೆ, ಸ್ಟೀವನ್ ಸ್ಮಿತ್, ಅಂಕಿತ್ ಶರ್ಮಾ, ರಜತ್ ಭಾಟಿಯಾ, ಜೇಮ್ಸ್ ಫಾಲ್ಕನರ್, ಧವಳ್ ಕುಲಕರ್ಣಿ.

ಇನ್ನು ಈ ಬಾರಿಯ ಸಭೆಯಲ್ಲಿ ಕೈಗೊಳ್ಳಲಾದ ಇತರೆ ನಿರ್ಧಾರಗಳು ಹೀಗಿವೆ…

  • ಈ ಬಾರಿಯಿಂದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಫ್ರಾಂಚೈಸಿಗಳು ವೆಚ್ಚ ಮಾಡಬಹುದಾದ ಮೊತ್ತದ ಮಿತಿಯನ್ನು ಹೆಚ್ಚಿಸಲಾಗಿದೆ. ಈ ಹಿಂದೆ ಇದ್ದ ₹ 66 ಕೋಟಿ ಹಣದ ಮಿತಿಯನ್ನು ₹ 80 ಕೋಟಿಗೆ ಹೆಚ್ಚಿಸಲಾಗಿದೆ. ಒಂದು ತಂಡ ಇಷ್ಟು ಮೊತ್ತದೊಳಗೆ ಸಂಪೂರ್ಣ ತಂಡವನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಮೇಲೆ ಹೇಳಿದಂತೆ ತಂಡದಲ್ಲಿ ಆಟಗಾರರನ್ನು ಉಳಿಸಿಕೊಂಡರೆ ಅದಕ್ಕೆ ತಕ್ಕಂತೆ ಈ 80 ಕೋಟಿಯಲ್ಲಿ ಕಡಿಮೆಯಾಗಲಿದೆ. ಇನ್ನು 2019ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಇದರ ಮೊತ್ತವನ್ನು ₹ 82 ಕೋಟಿಗೆ ಹಾಗೂ 2020ಕ್ಕೆ ₹ 85 ಕೋಟಿ ಹೆಚ್ಚು ಮಾಡಲು ನಿರ್ಧರಿಸಲಾಗಿದೆ. ಪ್ರತಿ ಫ್ರಾಂಚೈಸಿಗಳು ಪ್ರತಿ ಆವೃತ್ತಿಯಲ್ಲೂ ನಿಗದಿ ಮಾಡಲಾಗಿರುವ ಮೊತ್ತದಲ್ಲಿ ಶೇ.75 ರಷ್ಟು ಹಣವನ್ನು ಖರ್ಚು ಮಾಡಲೇಬೇಕು.
  • ಇನ್ನು ಅಂತಾರಾಷ್ಟ್ರೀಯ ಪಂದ್ಯ ಆಡಿರುವ ಹಾಗೂ ಆಡಿರದ ಆಟಗಾರರ ಮೂಲ ಬೆಲೆಯನ್ನು ಬದಲಾಯಿಸಲಾಗಿದೆ. ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿರದ ಭಾರತೀಯ ಆಟಗಾರರನ್ನು ಮೂರು ವರ್ಗಗಳಲ್ಲಿ ಮೂಲ ಬೆಲೆ ನಿಗದಿ ಮಾಡಲಾಗಿದೆ. ಅದರಲ್ಲಿ ತಲಾ ₹ 10 ಲಕ್ಷ, ₹ 20 ಲಕ್ಷ ಹಾಗೂ ₹ 30 ಲಕ್ಷ ನಿಗದಿ ಮಾಡಲಾಗಿದೆ. ಇನ್ನು ಅಂತಾರಾಷ್ಟ್ರೀಯ ಪಂದ್ಯವನ್ನಾಡಿರುವ ಇತರೆ ಭಾರತೀಯ ಆಟಗಾರರ ಮೂಲಬೆಲೆಯನ್ನು ₹ 30 ಲಕ್ಷದಿಂದ ₹ 50 ಲಕ್ಷಕ್ಕೆ ಹೆಚ್ಚಿಸಲಾಗಿದೆ.
  • ಈ ಹಿಂದೆ ಒಂದು ತಂಡದಲ್ಲಿ ಗರಿಷ್ಟ 27 ಆಟಗಾರರನ್ನು ಹೊಂದಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ ಈಗ ಅದನ್ನು 25ಕ್ಕೆ ಇಲಿಸಲಾಗಿದೆ. ಇನ್ನು ಕಳೆದ ಆವೃತ್ತಿಯವರೆಗೂ ಒಂದು ತಂಡದಲ್ಲಿ ಗರಿಷ್ಠ 9 ವಿದೇಶಿ ಆಟಗಾರರನ್ನು ಹೊಂದಬಹುದಿತ್ತು. ಆದರೆ ಈ ಬಾರಿಯಿಂದ ಗರಿಷ್ಠ 8 ಆಟಗಾರರು ಮಾತ್ರ ಇರಬೇಕು.

1 COMMENT

Leave a Reply