ಭಾರತದ ಎನ್ಎಸ್ಜಿ ಸದಸತ್ವಕ್ಕೆ ರಷ್ಯಾ ಬೆಂಬಲ- ಒತ್ತಡದಲ್ಲಿ ಚೀನಾ! ಪರೋಕ್ಷವಾಗಿ ಅಮೆರಿಕಕ್ಕೆ ಟಾಂಗ್!

  ಡಿಜಿಟಲ್ ಕನ್ನಡ ಟೀಮ್:

  ಭಾರತ ಹಾಗೂ ರಷ್ಯಾ ನಡುವಣ ಸ್ನೇಹ ಸಂಬಂಧ ಏನು ಎಂಬುದು ಮತ್ತೆ ಸಾಬೀತಾಗುತ್ತಿದೆ. ಅನೇಕ ವರ್ಷಗಳಿಂದ ಅಣ್ವಸ್ತ್ರ ಪೂರೈಕೆ ಸಮೂಹ (ಎನ್ಎಸ್ಜಿ) ಸದಸ್ಯತ್ವ ಪಡೆಯುವ ಭಾರತದ ಪ್ರಯತ್ನ ಸತತವಾಗಿ ವಿಫಲವಾಗುತ್ತಲೇ ಬಂದಿದೆ. ಆದರೆ ಈಗ ಭಾರತಕ್ಕೆ ಸದಸ್ಯತ್ವ ದೊರಕಿಸಿಕೊಡಲೇ ಬೇಕು ಎಂಬ ನಿರ್ಧಾರ ಮಾಡಿರುವ ರಷ್ಯಾ ಈ ವಿಚಾರದಲ್ಲಿ ಪ್ರತಿರೋಧ ಮಾಡದಂತೆ ಚೀನಾ ಮೇಲೆ ಎಲ್ಲಾ ಹಂತದಲ್ಲೂ ಒತ್ತಡ ಹೇರಲು ಮುಂದಾಗಿದೆ. ಈ ಎಲ್ಲ ಬೆಳವಣಿಗೆಗಳಿಂದ ಭಾರತಕ್ಕೆ ಎನ್ಎಸ್ಜಿ ಸದಸ್ಯತ್ವ ಸಿಗುವ ಸಾಧ್ಯತೆಗಳು ದಟ್ಟವಾಗಿದೆ.

  ಭಾರತ ಎನ್ಎಸ್ಜಿ ಸದಸ್ಯತ್ವದ ಜತೆಗೆ ಅಣು ತಂತ್ರಜ್ಞಾನ ಸಂಬಂಧಿತ ಒಪ್ಪಂದವಾದ ವಸ್ಸೆನಾರ್ ಸಮೂಹಕ್ಕೂ ಸೇರಲು ಅರ್ಜಿ ಹಾಕಿತ್ತು. ಈ ಅರ್ಜಿಯ ಕುರಿತ ಅಂತಿಮ ತೀರ್ಮಾನ ಇಂದು ಪ್ರಕಟವಾಗಲಿದ್ದು, ಭಾರತಕ್ಕೆ ಸಿಹಿ ಸುದ್ದಿ ಬರುವುದು ಬಹುತೇಕ ಖಚಿತವಾಗಿದೆ. ಈ ಒಪ್ಪಂದಲ್ಲಿ ಒಟ್ಟು 41 ದೇಶಗಳು ಭಾಗಿಯಾಗಿದ್ದು, ಇದರ ಸದಸ್ಯತ್ವ ಪಡೆದರೆ ಅಣು ತಂತ್ರಜ್ಞಾನ ಹಾಗೂ ಅಣ್ವಸ್ತ್ರ ರಫ್ತಿನ ಮೇಲೆ ಭಾರತ ನಿಯಂತ್ರಣ ಸಾಧಿಸಿದಂತಾಗಲಿದೆ. ಭಾರತ ಈ ಸಮೂಹಕ್ಕೆ ಸೇರಿದರೆ ಎನ್ಎಸ್ಜಿ ಸದಸ್ಯತ್ವ ಪಡೆಯುವ ಹಾದಿ ಮತ್ತಷ್ಟು ಸುಗಮವಾಗಲಿದೆ. ಹೀಗಾಗಿ ರಷ್ಯಾ ಭಾರತದ ಪರವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಅದರೊಂದಿಗೆ ತಾನು ಭಾರತದ ನಿಜವಾದ ಸ್ನೇಹಿತ ಎಂಬುದನ್ನು ರಷ್ಯಾ ಸಾಬೀತುಪಡಿಸುತ್ತಿದೆ.

  ನಿನ್ನೆ ಈ ಸಮಿತಿಯ ಸಭೆ ನಡೆದಿದ್ದು, ಭಾರತಕ್ಕೆ ಸದಸ್ಯತ್ವ ನೀಡುವ ಬಗ್ಗೆ ದೊಡ್ಡ ಮಟ್ಟದ ಚರ್ಚೆಯಾಗಿದೆ. ಅಲ್ಲದೆ ಭಾರತಕ್ಕೆ ಈ ಸದಸ್ಯತ್ವ ಸಿಗುವುಗು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ರಷ್ಯಾ ಅಧಿಕಾರಿ ರಾಬ್ಕೋವ್ ಭಾರತಕ್ಕೆ ರಷ್ಯಾದ ಬೆಂಬಲವನ್ನು ವಿವರಿಸುತ್ತಲೇ ಅಮೆರಿಕಕ್ಕೆ ಟಾಂಗ್ ನೀಡಿದ್ದಾರೆ. ಅದು ಹೇಗೆ ನೋಡೋಣ ಬನ್ನಿ…

  ವಸ್ಸೆನಾರ್ ಸಮೂಹದಲ್ಲಿ ಭಾರತಕ್ಕೆ ಸದಸ್ಯತ್ವ ನೀಡಲು ರಷ್ಯಾ ನಿರ್ಧರಿಸಿದೆ. ಆ ಮೂಲಕ ಭಾರತ ಎನ್ಎಸ್ಜಿಯಲ್ಲೂ ಸದಸ್ಯತ್ವ ಪಡೆಯಲು ರಷ್ಯಾ ಹೇಗೆ ಪ್ರಾಮಾಣಿಕ ಪ್ರಯತ್ನ ಪಡುತ್ತಿದೆ ಎಂಬುದು ಸಾಬೀತಾಗಿದೆ. ಬೇರೆ ರಾಷ್ಟ್ರಗಳು ಭಾರತದ ಎನ್ಎಸ್ಜಿ ಸದಸ್ಯತ್ವಕ್ಕೆ ಕೇವಲ ಬಾಯಿ ಮಾತಿನಲ್ಲಿ ಮಾತ್ರ ಬೆಂಬಲ ನೀಡುತ್ತಿವೆ. ಆದರೆ ಆ ಕುರಿತಾಗಿ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಚೀನಾ ಮೇಲೆ ಅಗತ್ಯ ರೀತಿಯಲ್ಲಿ ಒತ್ತಡ ಹೇರುತ್ತಿಲ್ಲ. ಆದರೆ ರಷ್ಯಾ ಭಾರತದ ಎನ್ಎಸ್ಜಿ ಸದಸ್ಯತ್ವಕ್ಕಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಿದೆ. ಅದರ ಪರಿಣಾಮವೇ ಭಾರತವನ್ನು ವಸ್ಸೆನಾರ್ ಸಮೂಹಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿರುವುದು. ಭಾರತ ಈ ಸಮೂಹಕ್ಕೆ ಸೇರಿದರೆ ಎನ್ಎಸ್ಜಿ ಸದಸ್ಯತ್ವ ಪಡೆಯುವ ಹಾದಿ ಸುಗಮವಾಗುತ್ತದೆ. ಅಷ್ಟೇ ಅಲ್ಲ, ವಿವಿಧ ಹಂತಗಳಲ್ಲಿ ಚೀನಾ ಜತೆ ಮಾತುಕತೆಯನ್ನು ನಡೆಸಿದೆ. ಈ ವಿಚಾರದಲ್ಲಿ ಭಾರತ ರಷ್ಯಾದ ಮೇಲೆ ಸಂಪೂರ್ಣವಾಗಿ ನಂಬಿಕೆ ಇಡಬಹುದು.

  Leave a Reply