ಫಲಿಸುವುದೇ ಅಯ್ಯರ್ ಅಮಾನತಿನ ಕಾಂಗ್ರೆಸ್ ರಣತಂತ್ರ? ಚುನಾವಣೆ ಹೊತ್ತಲ್ಲಿ ಸಂಸ್ಕೃತಿಯ ಸಮರದಲ್ಲಿ ಗೆಲ್ಲೊರ್ಯಾರು?

ಡಿಜಿಟಲ್ ಕನ್ನಡ ವಿಶೇಷ:

ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ನೀಚ’ ಎಂದು ನಿಂದಿಸಿದ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ವಿರುದ್ಧ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿ ಶಿಕ್ಷೆ ವಿಧಿಸಿದೆ. ಆ ಮೂಲಕ ತಮ್ಮ ಪಕ್ಷದ ಸಂಸ್ಕೃತಿ ಬಿಜೆಪಿಯ ಸಂಸ್ಕೃತಿಗಿಂತ ಅತ್ಯುತ್ತಮವಾದದ್ದು ಎಂದು ಸಾರುವ ಪ್ರಯತ್ನ ಕಾಂಗ್ರೆಸ್ ನಿಂದ ನಡೆಯುತ್ತಿದೆ.ಗುಜರಾತ್ ಚುನಾವಣೆಯ ಈ ಹೊತ್ತಲ್ಲಿ ನಡೆಯುತ್ತಿರುವ ಸಂಸ್ಕೃತಿಯ ಸಮರದಲ್ಲಿ ಐಯ್ಯರ್ ವಿರುದ್ಧದ ಅಮಾನತಿನ ಕಾಂಗ್ರೆಸ್ ರಣತಂತ್ರ ಫಲ ನೀಡುವುದೇ ಎಂಬ ಕುತೂಹಲ ಮೂಡಿದೆ.

ಚುನಾವಣೆಯ ಹೊತ್ತಲ್ಲಿ ರಾಜಕೀಯ ನಾಯಕರ ಒಂದೊಂದು ಹೆಜ್ಜೆಯ ಹಿಂದೆಯೂ ಲಾಭ ನಷ್ಟದ ಲೆಕ್ಕಾಚಾರವಿರುತ್ತದೆ. ಹೀಗಿರುವಾಗ ಪದೇ ಪದೇ ಕಾಂಗ್ರೆಸ್ ಇಂತಹ ವಿವಾದಕ್ಕೆ ಸಿಲುಕುತ್ತಿರುವುದು. ನಂತರ ತಮ್ಮ ಪಕ್ಷ ಅತ್ಯುನ್ನತ ಸಂಸ್ಕೃತಿ ಇರುವ ಪಕ್ಷ ಎಂದು ತೋರ್ಪಡಿಸಿಕೊಳ್ಳುತ್ತಿರುವುದರ ಹಿಂದೆಯೂ ಇಂತಹುದೇ ಲೆಕ್ಕಾಚಾರ ಅಡಗಿದೆಯೇ ಎಂಬ ಅನುಮಾನ ಮೂಡುತ್ತಿದೆ.

ಕೇವಲ ಮಣಿಶಂಕರ್ ಅವರ ವಿವಾದ ಒಂದೇ ಆಗಿದ್ದರೆ ಈ ಅನುಮಾನ ಉದ್ಭವಿಸುತ್ತಿರಲಿಲ್ಲವೇನೋ. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಚುನಾವಣೆ ಸಂದರ್ಭದಲ್ಲಿ ಇಂತಹ ವಿವಾದಗಳು ಮರುಕಳಿಸುತ್ತಿರೋದು ಈ ಅನುಮಾನಕ್ಕೆ ಅವಕಾಶ ಮಾಡಿಕೊಟ್ಟಿದೆ.

ಕಳೆದ ತಿಂಗಳು ಯುವ ಕಾಂಗ್ರೆಸ್ ಘಟಕದ ವಾರ ಪತ್ರಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಹಾ ಮಾರುತ್ತಿದದ್ದನ್ನು ಲೇವಡಿ ಮಾಡಲಾಗಿತ್ತು. ಆಗ ಯುವ ಕಾಂಗ್ರೆಸ್ ಬಹಿರಂಗವಾಗಿ ಮೋದಿ ಕ್ಷಮೆಯಾಚಿಸಿತು. ನಂತರ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಸಂಸ್ಕೃತಿ ಬಿಜೆಪಿಗಿಂತಲೂ ಭಿನ್ನವಾದದ್ದು ಹಾಗೂ ಅತ್ಯುತ್ತಮವಾದದ್ದು ಎಂದು ತಮಟೆ ಬಾರಿಸಿಕೊಂಡು ಬಂದಿದ್ದರು. ಈಗ ಮಣಿ ಶಂಕರ್ ಐಯ್ಯರ್ ವಿವಾದದಲ್ಲೂ ಮಾಡುತ್ತಿರುವುದು ಅದನ್ನೆ. ನಿನ್ನೆ ಮಣಿಶಂಕರ್ ಅಯ್ಯರ್ ಅವರು ಮೋದಿ ವಿರುದ್ಧ ‘ನೀಚ’ ಎಂಬ ಪದ ಬಳಕೆ ಮಾಡಿದ್ದನ್ನು ಸ್ವತಃ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರೋಧಿಸಿ ಕ್ಷಮೆ ನೀಡುವಂತೆ ಟ್ವೀಟರ್ ಮೂಲಕ ಆಗ್ರಹಿಸಿದ್ದರು. ರಾಹುಲ್ ಗಾಂಧಿ ಅಥವಾ ಪಕ್ಷದ ಇತರೆ ನಾಯಕರು ಮಣಿಶಂಕರ್ ಅವರಿಗೆ ವೈಯಕ್ತಿಕವಾಗಿ ಸಂಪರ್ಕಿಸಿ ಎಚ್ಚರಿಕೆ ನೀಡಿ ಕ್ಷಮೆ ಕೋರುವಂತೆ ಸೂಚನೆ ನೀಡಬಹುದಿತ್ತು. ಆದರೆ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಗೆ ಆಗ್ರಹಿಸಿದ್ದು, ಅವರ ಈ ನಿರ್ಧಾರದ ಹಿಂದಿರುವ ಪ್ರಚಾರದ ಉದ್ದೇಶವನ್ನು ಸಾರುತ್ತಿದೆ. ಇದ್ದು ಅಷ್ಟಕ್ಕೆ ನಿಲ್ಲಲಿಲ್ಲ, ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯೆ ನೀಡುತ್ತಾ ನಾವು ಅನಗತ್ಯವಾಗಿ ಲೇವಡಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ. ನೀವು ಇದೇ ರೀತಿಯ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೇ ಎಂಬ ಸವಾಲನ್ನು ಹಾಕಿದ್ದಾರೆ. ಇದರೊಂದಿಗೆ ಪಕ್ಷತ ಸಂಸ್ಕೃತಿ ಹೆಸರಿನಲ್ಲಿ ಎದುರಾಳಿಗಳ ವಿರುದ್ಧ ರಣತಂತ್ರ ಹೆಣೆಯುತ್ತಿರುವುದು ಸ್ಪಷ್ಟವಾಗಿದೆ.

ಇನ್ನು ರಾಮ ಮಂದಿರ ಹಾಗೂ ಬಾಬ್ರಿ ಮಸೀದಿ ವಿಚಾರವಾಗಿ ಸುಪ್ರೀಂ ಕೋರ್ಟಿನಲ್ಲಿ ಇತ್ತೀಚೆಗೆ ನಡೆದ ವಿಚಾರಣೆ ವೇಳೆ ಕಾಂಗ್ರೆಸ್ ನಾಯಕ ಹಾಗೂ ಈ ಪ್ರಕರಣದಲ್ಲಿ ವಕ್ಫ್ ಮಂಡಳಿ ಪರ ವಕಾಲತ್ತು ವಹಿಸಿರುವ ಕಪಿಲ್ ಸಿಬಲ್ ಅವರು ಚುನಾವಣೆಗೂ ಹಾಗೂ ಅಯೋಧ್ಯೆ ವಿವಾದ ತೀರ್ಪಿಗೂ ಸಂಪರ್ಕ ಕಲ್ಪಿಸಿದ್ದನ್ನು ಬಿಜೆಪಿ ನಾಯಕರು ಚುನಾವಣಾ ಅಸ್ತ್ರವಾಗಿ ಬಳಸಿದ್ದರು. ಅದೇರೀತಿ ಚಾಯ್ ವಾಲಾ ಹಾಗೂ ನೀಚ ಎಂಬ ಲೇವಡಿಯನ್ನು ಕಾಂಗ್ರೆಸ್ ವಿರುದ್ಧದ ಅಸ್ತ್ರವಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆ.

ಮಣಿಶಂಕರ್ ಐಯ್ಯರ್ ಅವರ ಮಾತುಗಳು ಗುಜರಾತಿಗೆ ಮಾಡಿದ ಅಪಮಾನ ಎಂದು ಮೋದಿ ಅವರು ಟೀಕಿಸಿದ್ದಾರೆ. ‘ಇದು ಗುಜರಾತಿನ ಹೆಮ್ಮೆಗೆ ಆದ ಅಪಮಾನವಲ್ಲವೇ? ಅವರು ನನ್ನನ್ನು ನೀಚ ಜಾತಿಯವನ್ನು ಎಂದು ಕರೆಯಬಹುದು. ಕಾರಣ ನಾನು ಬಡ ವರ್ಗದಿಂದ ಬಂದವನು. ನನ್ನ ಜೀವನದ ಪ್ರತಿಯೊಂದು ಕ್ಷಣವನ್ನು ಬಡವರು, ದಲಿತರು, ಬುಡಕಟ್ಟು, ಹಿಂದುಳಿದವರಿಗಾಗಿ ದುಡಿಯಲು ಮೀಸಲಿಡುತ್ತೇನೆ. ಅವರು ಅವರ ಮಾತುಗಲನ್ನಾಡುತ್ತಿರಲಿ ನಾನು ನನ್ನ ಕೆಲಸ ಮಾಡುತ್ತಿರುತ್ತೇನೆ’ ಎಂದು ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯುತ್ತಲೇ ಜನರ ಮನವೊಲಿಸುವ ಪ್ರಯತ್ನ ಮಾಡಿದರು.

ಹೀಗೆ ಒಂದಾದ ಮೇಲೆ ಒಂದರಂತೆ ವಿವಾದಗಳನ್ನು ಸೃಷ್ಟಿಸಿಕೊಳ್ಳುತ್ತಾ, ತನ್ನನ್ನು ತಾನು ಅತ್ಯುತ್ತಮ ಎಂದು ಬಿಂಬಿಸಿಕೊಳ್ಳುತ್ತಿರುವ ಪ್ರಯತ್ನ ಪಡುತ್ತಲೇ ಇದೆ. ಇದು ಕಾಂಗ್ರೆಸ್ ನ ತಂತ್ರಗಾರಿಕೆಯ ಭಾಗ ಎಂದು ಬಿಂಬಿತವಾಗುತ್ತಿದ್ದು, ಇದು ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದು ಸ್ವಲ್ಪ ದಿನಗಳಲ್ಲೇ ತಿಳಿಯಲಿದೆ.

Leave a Reply