ಸಹೋದ್ಯೋಗಿ ಸುನೀಲ್ ಹತ್ಯೆಗೆ ಸುಪಾರಿ: ಪತ್ರಕರ್ತ ರವಿ ಬೆಳಗೆರೆ ಬಂಧನ

  ಡಿಜಿಟಲ್ ಕನ್ನಡ ಟೀಮ್:

  ಅಪರಾಧ ವರದಿಗಾರಿಕೆ ಮೂಲಕ ಎರಡು ದಶಕಗಳಿಂದ ಕನ್ನಡ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರು ವೈಯಕ್ತಿಕ ಕಾರಣಗಳಿಂದ ತಮ್ಮ ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟ ಆರೋಪದ ಮೇಲೆ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ.

  ಇತ್ತೀಚೆಗೆ ವಿಧಾನಸಭೆ ಹಕ್ಕು ಬಾಧ್ಯತೆ ಸಮಿತಿ ವಿಧಿಸಿದ್ದ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ರವಿ ಬೆಳಗೆರೆ ಅವರು ಕಳೆದ ಬುಧವಾರವಷ್ಟೇ ಹೈಕೋರ್ಟ್ ಮಧ್ಯಂತರ ತಡೆಯಿಂದ ನಂತರ ಸ್ವಲ್ಪ ನಿರಾಳರಾಗಿದ್ದರು. ಆದರೆ ಈಗ ಕೊಲೆಗೆ ಸುಪಾರಿ ನೀಡಿರುವ ಆರೋಪದಲ್ಲಿ ಸಿಲುಕಿದ್ದಾರೆ. ‘ಸುನೀಲ್ ಹೆಗ್ಗರವಳ್ಳಿ ಅವರನ್ನು ಹತ್ಯೆ ಮಾಡಲು ರವಿ ಬೆಳಗೆರೆ ಸುಪಾರಿ ನೀಡಿದ್ದರು’ ಎಂದು ಸುಪಾರಿ ಕಿಲ್ಲರ್ ಶಶಿಧರ್ ಮುಂಡೇವಾಡಿ ಹಾಗೂ ಸಹಚರ ವಿಶೇಷ ತನಿಖಾ ತಂಡದ ಅಧಿಕಾರಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ವಿಚಾರಣೆ ನಡೆಸುತ್ತಿರುವ ಪೊಲೀಸರು ರವಿ ಬೆಳಗೆರೆ ಅವರನ್ನು ಬಂಧಿಸಿದ್ದು, ಸಿಸಿಬಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಇನ್ನು ಶಶಿಧರ್ ಹಾಗೂ ಆತನ ಸಹಚರನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ ನಂತರ ಡಿ.18ರ ವರೆಗೂ ಈ ಇಬ್ಬರನ್ನು ಸಿಸಿಬಿ ವಶಕ್ಕೆ ನೀಡಲಾಗಿದೆ.

  ಇದೇ ವೇಳೆ ರವಿ ಬೆಳಗೆರೆ ಅವರ ಹಾಯ್ ಬೆಂಗಳೂರು ಪತ್ರಿಕೆಯ ಕಚೇರಿಯಲ್ಲಿ ತಪಾಸಣೆ ನಡೆಸಿದ ಪೊಲೀಸ್ ಅಧಿಕಾರಿಗಳಿಗೆ ಬಂದೂಕು, ಜಿಂಕೆ ಚರ್ಮ ಹಾಗೂ ಆಮೆ ಚಿಪ್ಪು ಸಿಕ್ಕಿದೆ.

  ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

  ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಎಸ್ಐಟಿ ಅಧಿಕಾರಿಗಳಿಗೆ ವಿಜಯಪುರ ಮೂಲದಿಂದ ಬೆಂಗಳೂರಿಗೆ ದೇಶಿ ಪಿಸ್ತೂಲ್ ಗಳು ರವಾನೆಯಾಗಿವೆ ಎಂಬ ಮಾಹಿತಿ ಸಿಗುತ್ತದೆ. ಈ ಮಾಹಿತಿಯ ಬೆನ್ನತ್ತಿದ ಅಧಿಕಾರಿಗಳು ಭಿಮಾತೀರದ ಹಂತಕರು ಸೇರಿದಂತೆ ಇತರರನ್ನು ವಿಚಾರಣೆ ಒಳಪಡಿಸುತ್ತಾರೆ. ಈ ಹಂತದಲ್ಲಿ ಶಶಿಧರ್ ಮುಂಡಾಧರ್ ಎಂಬಾತನ ವಿಚಾರಣೆ ನಡೆಸಿದ ಎಸ್ಐಟಿ ಅಧಿಕಾರಿಗಳು, ಗೌರಿ ಹತ್ಯೆಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿದರು. ಆಗ ಶಶಿಧರ್ ಎಸ್ಐಟಿ ಅಧಿಕಾರಿಗಳ ಮುಂದೆ ‘ರವಿ ಬೆಳಗೆರೆ ಅವರು ಸುನೀಲ್ ಅವರನ್ನು ಹತ್ಯೆ ಮಾಡಲು ಸುಪಾರಿ ಕೊಟ್ಟಿದ್ದರು. ಹೀಗಾಗಿ ನಾವು ಸುನೀಲ್ ಅವರನ್ನು ಹತ್ಯೆ ಮಾಡಲು ತಯಾರಿ ನಡೆಸಿದ್ದೆವು’ ಎಂಬ ಮಾಹಿತಿ ಬಾಯ್ಬಿಟ್ಟಿದ್ದಾನೆ. ತಕ್ಷಣವೇ ಎಚ್ಚೆತ್ತ ಪೊಲೀಸರು ರವಿ ಬೆಳಗೆರೆ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.

  ಆಗಸ್ಟ್ ನಲ್ಲಿ ಹತ್ಯೆಗೆ ನಡೆದಿತ್ತು ಸಂಚು…

  ಪೊಲೀಸರ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ‘ಆಗಸ್ಟ್ ತಿಂಗಳಲ್ಲೇ ಸುನೀಲ್ ಅವರ ಹತ್ಯೆಗೆ ಶಶಿಧರ್ ತಯಾರಿ ನಡೆಸಿದ್ದ. ಅನೇಕ ಬಾರಿ ಸುನೀಲ್ ಅವರ ಮನೆ ಬಳಿ ಓಡಾಡಿಕೊಂಡು ಸುನೀಲ್ ಅವರ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಆಗಸ್ಟ್ 28ರಂದು ಹತ್ಯೆ ಮಾಡುವ ಉದ್ದೇಶದೊಂದಿಗೆ ಶಶಿಧರ್ ಸುನೀಲ್ ಅವರ ಮನೆ ಬಳಿ ಬರುತ್ತಾನೆ. ಈ ಸಂದರ್ಭದಲ್ಲಿ ಮನೆಯ ಬಳಿ ಇದ್ದ ಸಿಸಿಟಿವಿ ಕ್ಯಾಮೆರಾ ನೋಡಿದ ಶಶಿಧರ್ ತಾನು ಈ ಹಿಂದೆ ಬಂದಿದ್ದು ಇದರಲ್ಲಿ ದಾಖಲಾಗಿರುತ್ತವೆ ಎಂಬ ಆತಂಕದಿಂದ ಹತ್ಯೆಯ ಯೋಜನೆಯನ್ನು ಒಂದು ತಿಂಗಳ ಕಾಲ ಮುಂದೂಡಲು ನಿರ್ಧರಿಸಿ ವಾಪಸ್ ಹೋಗಿರುತ್ತಾನೆ. ಒಂದು ವಾರದಲ್ಲಿ ಗೌರಿ ಲಂಕೇಶ್ ಅವರ ಹತ್ಯೆ ನಡೆದಿದ್ದು, ಹೀಗಾಗಿ ಈ ಹತ್ಯೆ ಯೋಜನೆಯನ್ನು ಕೈಬಿಡಲಾಗಿತ್ತು.’

  ಈ ಬಗ್ಗೆ ಸುನೀಲ್ ನೀಡಿರುವ ಪ್ರತಿಕ್ರಿಯೆ ಏನು?

  ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಸುಮಾರು 14 ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದ್ದ ಸುನೀಲ್ ಅವರು ಇತ್ತೀಚೆಗೆ ರವಿ ಬೆಳಗೆರೆ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಹಾಯ್ ಬೆಂಗಳೂರು ತೊರೆದಿದ್ದರು. ಈ ಪ್ರಕರಣದ ಕುರಿತಾಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಸುನೀಲ್ ಹೇಳಿದಿಷ್ಟು… ‘ರವಿ ಬೆಳಗೆರೆ ಅವರು ಹಾಗೂ ನಾನು ಸಾಕಷ್ಟು ಆಪ್ತರಾಗಿದ್ದೇವೆ. ಅವರಿಗೆ ಇಂತಹ ಭಾವನೆ ಏಕೆ ಬಂದಿದೆ ಎಂದು ನನಗೆ ತಿಳಿಯುತ್ತಿಲ್ಲ. ನಿನ್ನೆ ಸಂಜೆ ಸಹ ಕರೆ ಮಾಡಿದ್ದ ಬೆಳಗೆರೆ ಅವರು ಆಪ್ತವಾಗಿಯೇ ಮಾತನಾಡಿದರು. ಆದರೆ ಇಂದು ಬೆಳಗ್ಗೆ ಪೊಲೀಸ್ ಅಧಿಕಾರಿಗಳು ನನ್ನನ್ನು ಕರೆಸಿ ಈ ವಿಚಾರ ವಿವರಿಸಿದಾಗ ನನಗೂ ಶಾಕ್ ಆಯಿತು. ಪೊಲೀಸರು ಕೆಲವು ಮಾಹಿತಿಗಳನ್ನು ಹೇಳಿದಾಗ ಕೆಲವು ತಿಂಗಳ ಹಿಂದೆ ನಡೆದ ಕೆಲವು ಘಟನೆಗಳು ನೆನಪಾಗಿ ಇದು ಸತ್ಯ ಎನಿಸುತ್ತಿದೆ. ತಮ್ಮ ವಿಳಾಸ ಖಚಿತ ಪಡಿಸಿಕೊಳ್ಳುವ ನೆಪಕ್ಕೆ ಪುಸ್ತಕಗಳನ್ನು ಕೊರಿಯರ್ ಕಳುಹಿಸಿದ್ದು, ಕಳೆದ ವರ್ಷ ಡಿಸೆಂಬರ್ ನಲ್ಲಿ ಟಿವಿ ವಾಹಿನಿಗೆ ಸಂಬಂಧಿಸಿದಂತೆ ಇನ್ವೆಸ್ಟರ್ ಜತೆ ಮಾತನಾಡಲು ಕರೆದುಕೊಂಡು ಹೋಗಿದ್ದಾಗ ಅಲ್ಲಿ ಅನುಮಾನಾಸ್ಪದ ವ್ಯಕ್ತಿಗಳನ್ನು ಕಂಡಿದ್ದು ನೆನಪಾಯಿತು. ಆದರೆ ರವಿ ಬೆಳಗೆರೆ ಅವರು ಯಾವ ಕಾರಣಕ್ಕಾರಿ ತಮ್ಮ ಹತ್ಯೆಗೆ ಸುಪಾರಿ ನೀಡಿದ್ದರು ಎಂದು ತಿಳಿದಿಲ್ಲ. ರವಿ ಬೆಳಗೆರೆ ಅವರೇ ತನಿಖಾ ಅಧಿಕಾರಿಗಳ ಮುಂದೆ ಈ ಬಗ್ಗೆ ತಿಳಿಸಬೇಕು.

  ಆರಂಭದಿಂದಲೂ ರವಿ ಬೆಳಗೆರೆ ಅವರು ನನ್ನ ಹಾಗೂ ನನ್ನ ಕೆಲಸದ ಮೇಲೆ ನಂಬಿಕೆ ಇಟ್ಟಿದ್ದರು. ಅದಕ್ಕೆ ತಕ್ಕಂತೆ ಪ್ರಾಮಾಣಿಕವಾಗಿ ನಾನು ಕೆಲಸ ಮಾಡಿದ್ದೆ. ಆದರೆ ಇದ್ದಕ್ಕಿದ್ದಂತೆ ನನ್ನ ಮೇಲೆ ಅನುಮಾನಿಸುತ್ತಿದ್ದಾರೆ ಎನಿಸಿತು. ಹೀಗಾಗಿ ನಾನು ಅವರೊಂದಿಗೆ ಕೆಲಸ ಮಾಡುವುದು ಸರಿಯಲ್ಲ ಎಂದು ನಿರ್ಧರಿಸಿ ಹಾಯ್ ಬೆಂಗಳೂರು ತೊರೆದೆ. ಗೌರಿ ಲಂಕೇಶ್ ಹತ್ಯೆಯಾದ ಮರುದಿನ ಸ್ವತಃ ರವಿ ಬೆಳಗೆರೆ ಅವರೇ ಕರೆ ಮಾಡಿ ಗೌರಿ ಹತ್ಯೆಯ ಕುರಿತು ನಾನೇ ವರದಿ ಬರಿಯಬೇಕು ಎಂದು ಕೇಳಿದರು. ನಂತರ ಅನೇಕ ಬಾರಿ ಕರೆ ಮಾಡಿ ಮತ್ತೆ ಹಾಯ್ ಬೆಂಗಳೂರು ಪತ್ರಿಕೆ ಸೇರುವಂತೆ ಒತ್ತಡ ಹಾಕಿದ್ದರು. ಪತ್ರಿಕೆ ನಡೆಸಲು ಆಗುತ್ತಿಲ್ಲ. ನಿನ್ನಂತಹ ಬರಹಗಾರರು ಬೇಕು. ನೀನೆ ಈ ಪತ್ರಿಕೆ ನಡೆಸಿಕೊಂಡು ಹೋಗು ಎಂದು ಹೇಳಿದ್ದರು. ನಂತರ ಆಪ್ತರೊಂದಿಗೆ ಚರ್ಚಿಸಿ ಮತ್ತೆ ಹಾಯ್ ಬೆಂಗಳೂರು ಸೇರಿಕೊಂಡೆ. ನಾನು ಮತ್ತೆ ಹಾಯ್ ಬೆಂಗಳೂರು ಸೇರಿದ ನಂತರ ನನ್ನ ಕೆಲಸಗಳಿಗೆ ಸಂಬಂಧಿಸಿದಂತೆ ಯಾವುದೇ ಅಸಮಾಧಾನ ಹೊಂದಿರಲಿಲ್ಲ.

  ಇಂದು ಬೆಳಗ್ಗೆ ಪೊಲೀಸ್ ಅಧಿಕಾರಿಗಳು ಈ ವಿಚಾರವನ್ನು ನನಗೆ ವಿವರಿಸಿದಾಗ ಹಲವು ತಿಂಗಳುಗಳ ಹಿಂದೆಯೇ ನನ್ನ ಕೊಲೆಗೆ ಸಂಚು ನಡೆದಿತ್ತು ಎಂಬುದು ಖಚಿತವಾಯಿತು. ಕೆಲ ತಿಂಗಳ ಹಿಂದೆ ನನ್ನ ವಿಳಾಸ ಖಚಿತಪಡಿಸಿಕೊಳ್ಳಲು ಸುಳ್ಳು ಕೊರಿಯರ್ ಕಳುಹಿಸಲಾಗಿತ್ತು. ಇಂತಹ ಅನೇಕ ಅನುಮಾನಾಸ್ಪದ ಘಟನೆಗಳು ಈಗ ನನಗೆ ಅರಿವಾಗುತ್ತಿವೆ.’

   

  Leave a Reply