ಎರಡು ವರ್ಷದ ಮೊಮ್ಮಗನ ಮುಂದೆ ಬಡವಾದ ಚಂದ್ರಬಾಬು ನಾಯ್ಡು! ಆಂಧ್ರ ಮುಖ್ಯಮಂತ್ರಿಯ ಆಸ್ತಿಗಿಂತ ಸಾಲವೇ ಹೆಚ್ಚಂತೆ!

ಡಿಜಿಟಲ್ ಕನ್ನಡ ಟೀಮ್:

ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರ ಬಾಬು ನಾಯ್ಡು ಅವರ ಕುಟುಂಬ ತಮ್ಮ ಆಸ್ತಿಪಾಸ್ತಿಯನ್ನು ಬಹಿರಂಗ ಪಡಿಸಿದ್ದು, ಈ ಮಾಹಿತಿ ಪ್ರಕಾರ ಚಂದ್ರಬಾಬು ನಾಯ್ಡು ಅವರ ಹೆಸರಿನಲ್ಲಿ ₹ 2.53 ಕೋಟಿಯಷ್ಟು ಆಸ್ತಿ ಇದ್ದರೆ, ಅವರ ಎರಡು ವರ್ಷದ ಮೊಮ್ಮಗ ನಾರಾ ದೇವಂಶ್ ಹೆಸರಿನಲ್ಲಿ ಒಟ್ಟು ₹ 11.54 ಕೋಟಿಯಷ್ಟು ಆಸ್ತಿ ಇದೆ.

ಚಂದ್ರಬಾಬು ನಾಯ್ಡು ಕುಟುಂಬ ಸದಸ್ಯರ ಆಸ್ತಿ ಮೌಲ್ಯ ಬಹಿರಂಗಗೊಳ್ಳುತ್ತಿರೋದು ಇದೇ ಮೊದಲಲ್ಲ. ಕಳೆದ ಏಳು ವರ್ಷಗಳಿಂದ ಈ ಕುಟುಂಬ ತಮ್ಮ ಸದಸ್ಯರ ಆಸ್ತಿ ಮೌಲ್ಯವನ್ನು ಬಹಿರಂಗ ಪಡಿಸುತ್ತಲೇ ಬಂದಿದೆ. ಶುಕ್ರವಾರ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ ಚಂದ್ರಬಾಬು ನಾಯ್ಡು ಪುತ್ರ, ಆಂಧ್ರ ಪ್ರದೇಶ ಮಾಹಿತಿ ತಂತ್ರಜ್ಞಾನ ಸಚಿವ ಹಾಗೂ ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್, ತಮ್ಮ ಕುಟುಂಬ ಸದಸ್ಯರ ಆಸ್ತಿ ವಿವರ ಬಹಿರಂಗಗೊಳಿಸಿದ್ದಾರೆ.

ಲೋಕೇಶ್ ಬಿಡುಗಡೆ ಮಾಡಿರುವ ಆಸ್ತಿ ವಿವರದ ಪ್ರಕಾರ ಚಂದ್ರ ಬಾಬು ನಾಯ್ಡು ಹೆಸರಿನಲ್ಲಿ ₹ 2.53 ಕೋಟಿ ಆಸ್ತಿ ಇದ್ದರೆ, ಅವರ ಪತ್ನಿ ನಾರಾ ಭುವನೇಶ್ವರಿ ಹೆಸರಿನಲ್ಲಿ ₹ 25.41 ಕೋಟಿ ಆಸ್ತಿ ಇದೆ. ನಾರಾ ಲೋಕೇಶ್ ಅವರ ಹೆಸರಿನಲ್ಲಿ ₹ 15.21 ಕೋಟಿ ಆಸ್ತಿ ಇದ್ದರೆ, ಇವರ ಪತ್ನಿ ನಾರಾ ಬ್ರಾಹ್ಮಣಿ ಅವರ ಹೆಸರಿನಲ್ಲಿ ₹ 15.01 ಕೋಟಿ ಆಸ್ತಿ ಇದೆ. ಇನ್ನು ಲೋಕೇಶ್ ಹಾಗೂ ಬ್ರಾಹ್ಮಣಿ ದಂಪತಿಯ ಎರಡು ವರ್ಷದ ಪುತ್ರ ದೇವಂಶ್ ಹೆಸರಿನಲ್ಲಿ ₹ 11.54 ಕೋಟಿ ಆಸ್ತಿ ಇದೆ.

ಈ ಮಾಹಿತಿಯ ಪ್ರಕಾರ ಚಂದ್ರ ಬಾಬು ನಾಯ್ಡು ಅವರ ಆಸ್ತಿಯ ಮೊತ್ತಕ್ಕಿಂತ ಅವರ ಮೇಲಿರುವ ಸಾಲದ ಪ್ರಮಾಣವೇ ಹೆಚ್ಚಾಗಿದೆ. ಚಂದ್ರಬಾಬು ನಾಯ್ಡು ಅವರ ಸಾಲದ ಮೊತ್ತ ₹ 3.58 ಕೋಟಿಯಷ್ಟಿದೆ. ಆ ಮೂಲಕ ಇವರ ಆಸ್ತಿಯ ಮೊತ್ತಕ್ಕಿಂತ ₹ 1.05 ಕೋಟಿಯಷ್ಟು ಹೆಚ್ಚು ಸಾಲ ಇದೆ. ಇನ್ನು ಕಳೆದ ವರ್ಷ ಬಿಡುಗಡೆ ಮಾಡಲಾಗಿದ್ದ ಆಸ್ತಿಯ ವಿವರಕ್ಕೆ ಹೋಲಿಸಿದರೆ, ಈ ವರ್ಷ ಆಸ್ತಿ ಮೊತ್ತದಲ್ಲಿ ಇಳಿಕೆಯಾಗಿದೆ. ಕಳೆದ ವರ್ಷ ನಾಯ್ಡು ಅವರ ಹೆರಿನಲ್ಲಿ ₹ 3.73 ಕೋಟಿ ಆಸ್ತಿ ಇದ್ದರೆ, ₹ 3.06 ಕೋಟಿ ಸಾಲ ಇತ್ತು. ಅದರೊಂದಿಗೆ ಕಳೆದ ವರ್ಷ ಆಸ್ತಿಯ ಮೊತ್ತಕ್ಕಿಂತ ಸಾಲದ ಮೊತ್ತ ಕಡಿಮೆ ಇತ್ತು. ಆದರೆ ಈ ವರ್ಷ ಸಾಲದ ಅಂತರ ಹೆಚ್ಚಾಗಿದೆ.

ನಾಯ್ಡು ಕುಟುಂಬದವರ ಆಸ್ತಿಯ ಆದಾಯದ ಬಹುದೊಡ್ಡ ಮೂಲ ಹೆರಿಟೇಜ್ ಗ್ರೂಪ್ ಆಗಿದೆ ಎಂದು ಲೋಕೇಶ್ ಮಾಹಿತಿ ನೀಡಿದ್ದಾರೆ. ಈ ಕಂಪನಿಯ ಶೇ.50.60 ರಷ್ಟು ಷೇರುಗಳನ್ನು ಇವರ ಕುಟುಂಬ ಸದಸ್ಯರೇ ಹೊಂದಿದ್ದಾರೆ. ಹೀಗೆ ಕುಟುಂಬಸ್ತರ ಆಸ್ತಿ ವಿವರವನ್ನು ಬಹಿರಂಗಗೊಳಿಸುವ ಮೂಲಕ ಟಿಡಿಪಿ ರಾಜಕೀಯ ವಿರೋಧಿಗಳ ವಿರುದ್ಧ ಸೆಡ್ಡು ಹೊಡೆದು ನಿಲ್ಲುವ ಪ್ರಯತ್ನವನ್ನು ಮಾಡಿದೆ.

Leave a Reply