ಮೂರೂ ಪಕ್ಷಗಳು ಸರಕಾರ ಮಾಡಲು ಹೇಗೆ ಸಾಧ್ಯ?!

ಇನ್ನಾರು ತಿಂಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಎಲ್ಲ ರಾಜಕೀಯ ಪಕ್ಷಗಳಲ್ಲೂ ರಾಕೆಟ್ ವೇಗದ ಸಂಚಲನ ಶಕ್ತಿ ತಂದಿದೆ. ಕಳೆದು ಹೋದ ನಾಲ್ಕೂವರೆ ವರ್ಷದ್ದೇ ಒಂದು ತೂಕವಾದರೆ, ಉಳಿದಿರುವ ಆರು ತಿಂಗಳ ತೂಕವೇ ಬೇರೆ. ಅಳಿದದ್ದಕ್ಕಿಂತ ಉಳಿದದ್ದೇ ಹೆಚ್ಚು ಭಾರ. ನಾನಾ ಪಕ್ಷಗಳ ನಾಯಕರು ಹಾಸಿಗೆ, ಹೊದಿಕೆ ಮಡಚಿಟ್ಟಿದ್ದು, ಕಾಲಿಗೆ ಸ್ಕೇಟಿಂಗ್ ಕಟ್ಟಿಕೊಂಡವರಂತೆ ರಾಜ್ಯದ ಉದ್ದಗಲಕ್ಕೂ ಸರಬರ ತಿರುಗುತ್ತಿದ್ದಾರೆ. ಮತದಾರರ ಮೊಗದಲ್ಲಿ ಮತ್ತೊಮ್ಮೆ ಅನುಕೂಲಸಿಂಧು ದೇವರನ್ನು ಅರಸುತ್ತಿದ್ದಾರೆ. ಅವರ ಹೆಗಲ ಮೇಲೆ ಕೈಹಾಕಿ ಸಾಂದರ್ಭಿಕ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದಾರೆ.

ಆ ವಿಷಯ ಪಕ್ಕಕ್ಕಿರಲಿ. ಈಗ ಎಲ್ಲ ಪಕ್ಷಗಳಲ್ಲೂ ಆಂತರಿಕ ಸಮೀಕ್ಷೆ ಪರ್ವ. ಮುಂದಿನ ಚುನಾವಣೆಯಲ್ಲಿ ತಮಗೆ ಬರಬಹುದಾದ ಸೀಟುಗಳು ಬಗ್ಗೆ ತಮ್ಮದೇ ಆದ ಮೂಲಗಳು, ಸಂಸ್ಥೆಗಳಿಂದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸಮೀಕ್ಷೆ ನಡೆಸಿವೆ, ನಡೆಸುತ್ತಿವೆ. ಪ್ರತಿ ಮೂರು ತಿಂಗಳಿಗೊಮ್ಮೆ ಈ ಆಂತರಿಕ ಸಮೀಕ್ಷೆ ಮೂಲಕ ತಮ್ಮ ಸ್ಥಿತಿಗತಿಗಳನ್ನು ತಿಳಿದುಕೊಂಡು, ಅದಕ್ಕನುಗುಣವಾಗಿ ಚುನಾವಣೆ ತಂತ್ರಗಳನ್ನು ಹೆಣೆಯುವುದು, ಆ ಮೂಲಕ ಅನ್ಯಪಕ್ಷಗಳನ್ನು ಹಣಿಯುವುದು ಈ ಸಮೀಕ್ಷೆ ಉದ್ದೇಶ. ಆದರೆ ಇದನ್ನು ತಮಾಷೆ ಎನ್ನಬೇಕೋ ಅಥವಾ ದುರಂತ ಎನ್ನಬೇಕೋ ಗೊತ್ತಿಲ್ಲ. ಮೂರೂ ಪಕ್ಷಗಳು ನಡೆಸಿರುವ ಆಂತರಿಕ ಸಮೀಕ್ಷೆ ಪ್ರಕಾರ ಮುಂದಿನ ಚುನಾವಣೆಯಲ್ಲಿ ಆಯಾ ಪಕ್ಷಗಳೇ ಅಧಿಕಾರಕ್ಕೆ ಬರುತ್ತವಂತೆ. ಇರೋದು ಒಂದೇ ಸರಕಾರ. ಸ್ಪಷ್ಟ ಬಹುಮತ ಬಂದರೆ ಯಾವುದಾದರೂ ಒಂದು ಪಕ್ಷ ಅಧಿಕಾರಕ್ಕೆ ಬರಬೇಕು. ಅತಂತ್ರ ವಿಧಾನಸಭೆಯಾದರೆ ಯಾವುದಾದರೂ ಎರಡು ಪಕ್ಷಗಳು ಕೂಡಿ ಸರಕಾರ ಮಾಡಬೇಕು. ಆದರೆ ಮೂರು ಪಕ್ಷಗಳೂ ಅಧಿಕಾರಕ್ಕೆ ಬರುವ ಸೋಜಿಗ ಅರಿಯದ ಮತದಾರ ಬೆರಗಾಗಿದ್ದಾನೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಕಾರ ಈ ಬಾರಿ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವುದಿಲ್ಲ. ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ಜತೆಗೆ ಅವರ ನೇತೃತ್ವದಲ್ಲೇ ಚುನಾವಣೆ ನಡೆಯುತ್ತದೆ. ಅವರೇ ಮುಂದಿನ ಬಾರಿಯೂ ಮುಖ್ಯಮಂತ್ರಿ ಆಗುತ್ತಾರೆ. ಅವರು ಪರಪಕ್ಷಗಳ ದೌರ್ಬಲ್ಯ ಕುರಿತು ನೀಡುವ ಅಂಕಿಅಂಶಗಳನ್ನು ಆಧರಿಸಿ ನೋಡುವುದಾದರೆ ಕಾಂಗ್ರೆಸ್ಸಿಗೆ 150 ಕ್ಕೂ ಹೆಚ್ಚು ಸೀಟುಗಳು ಬರಬೇಕು. ಯಡಿಯೂರಪ್ಪ ಘೋಷಿತ ಬಿಜೆಪಿ ಮಿಷನ್-150 ಬಗ್ಗೆ ಸಿದ್ದರಾಮಯ್ಯನವರ ಲೇವಡಿ ವಿಶ್ಲೇಷಿಸುವುದಾದರೆ ನಂಜನಗೂಡು ಮತ್ತು ಗುಂಡ್ಲುಪೇಟೆ ಮರುಚುನಾವಣೆ ನಂತರ ಬಿಜೆಪಿ ಮಿಷನ್ 150 ರಿಂದ 50 ಕ್ಕೆ ಕುಸಿದಿದೆಯಂತೆ. ಅಂದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ 50 ಸೀಟು ಗಳಿಸಿದರೆ ಅದೇ ಹೆಚ್ಚು. ಅದೇ ರೀತಿ ದೇವೇಗೌಡರು- ಕುಮಾರಸ್ವಾಮಿಯವರ ಜಾತ್ಯತೀತ ಜನತಾದಳ 25 ಸೀಟು ಗೆಲ್ಲೋದು ಡೌಟಂತೆ. ಸಿದ್ದರಾಮಯ್ಯನವರ ಪ್ರಕಾರ ಬಿಜೆಪಿಗೆ 50, ಜೆಡಿಎಸ್ಸಿಗೆ 25 ಸ್ಥಾನ ಬಂದರೆ ಉಳಿದೆಲ್ಲ ಸೀಟುಗಳು ಕಾಂಗ್ರೆಸ್ಸಿಗೇ ಬರಬೇಕಲ್ಲವೇ?. ಅಂದರೆ ಕಾಂಗ್ರೆಸ್ ಜೋಳಿಗೆಗೆ 149 ಸೀಟುಗಳು ಬೀಳಬೇಕು. ಇದರಲ್ಲಿ ಪಕ್ಷೇತರರ ಸ್ಥಾನಗಳನ್ನು ಮೈನಸ್ ಮಾಡಬಹುದು. ಆದರೆ ಸಿದ್ದರಾಮಯ್ಯನವರ ಲೆಕ್ಕಾಚಾರದಂತೆ ಬಿಜೆಪಿ, ಜೆಡಿಎಸ್‌ನಂಥ ಪ್ರಮುಖ ಪಕ್ಷಗಳೇ ಹಗ್ಗ ಜಗಿಯುವಾಗ ಪಕ್ಷೇತರರಿಗೆ ಶಾವಿಗೆ ಸಿಗಲು ಸಾಧ್ಯವೇ? ಅಲ್ಲಿಗೆ ಸಿದ್ದರಾಮಯ್ಯನವರ ಕಾಂಗ್ರೆಸ್ 149 ಸೀಟು ಪಡೆದು ಅಧಿಕಾರಕ್ಕೆ ಬರುತ್ತದೆ. ಅವರೇ ಮುಖ್ಯಮಂತ್ರಿಯೂ ಆಗುತ್ತಾರೆ. ಇದು ಅವರ ಥಿಯರಿ!

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಧ್ಯಕ್ಷ ಪರಮೇಶ್ವರ ಪ್ರಕಾರ ಕಾಂಗ್ರೆಸ್ಸಿಗೆ 136 ಸೀಟುಗಳು ಬರುತ್ತವಂತೆ. ಅವರ ಪ್ರಕಾರವೂ ಸ್ಪಷ್ಟ ಬಹುಮತ. ಸಿದ್ದರಾಮಯ್ಯ ಮತ್ತು ಅವರ ಅಂಕಿ-ಅಂಶಗಳ ನಡುವೆ ವ್ಯತ್ಯಾಸವಿದ್ದರೂ ಅಧಿಕಾರದ ವಿಚಾರದಲ್ಲಿ ಇಬ್ಬರದೂ ಸಮಾನಾಭಿಪ್ರಾಯ. ಹಿರಿಯ ನಾಯಕ ಜನಾರ್ಧನ ಪೂಜಾರಿ ಅವರ ಪ್ರಕಾರ ಕಾಂಗ್ರೆಸ್ ಗ್ರಹಚಾರ ನೆಟ್ಟಗಿಲ್ಲ. ಮೂಲ ಕಾಂಗ್ರೆಸ್ಸಿಗರನ್ನು ಪಕ್ಕಕ್ಕಿಟ್ಟ ಸಿದ್ದರಾಮಯ್ಯ ಆಳ್ವಿಕೆಯಲ್ಲಿ ಪಕ್ಷ ನಲುಗಿದೆ. ಅದರ ಪ್ರತಿಫಲ ಚುನಾವಣೆಯಲ್ಲಿ ಗೊತ್ತಾಗಲಿದೆ. ಅಭಿಪ್ರಾಯಬೇಧ ಪಕ್ಷ-ಪಕ್ಷಗಳ ನಡುವೆ ಇರೋದು ಸಾಮಾನ್ಯ. ಆದರೆ ಕಾಂಗ್ರೆಸ್ಸಿನೊಳಗೇ ಇದೆ. ಆದರೆ ಇಲ್ಲಿ ಸಿದ್ದರಾಮಯ್ಯ, ಪರಮೇಶ್ವರ ಹಾಗೂ ಜನಾರ್ದನ ಪೂಜಾರಿ ಅಭಿಪ್ರಾಯಗಳಿಗೆ ಆಂತರಿಕ ಸಮೀಕ್ಷೆ ಆಧಾರವಲ್ಲ. ಯಾಕೆಂದರೆ ಪ್ರಸ್ತುತ ಅಂತರಿಕ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆಯೇ ಹೊರತು ಸ್ಪಷ್ಟ ಬಹುಮತ ಪಡೆಯುವುದಿಲ್ಲ. ಅದು ಸರಕಾರ ರಚಿಸಲು ಮತ್ತೊಬ್ಬರ ನೆರವು ಬೇಕೇ ಬೇಕು. ಚುನಾವಣೆಗೆ ಇನ್ನೂ ಅರು ತಿಂಗಳು ಇರುವುದರಿಂದ ಈ ಅವಧಿಯಲ್ಲಿ ಅಂಕಿಅಂಶಗಳು ಏನು ಬೇಕಾದರೂ ಆಗಬಹುದು. ಹೆಚ್ಚಾಗಬಹುದು, ಕಡಿಮೆಯೂ ಆಗಬಹುದು. ಆದರೆ ಪ್ರಸ್ತುತ ಏಕಾಂಗಿಯಾಗಿ ಅಧಿಕಾರಕ್ಕೆ ಬರುವಷ್ಟು ಸಾಮರ್ಥ್ಯ ಇಲ್ಲ. ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿ ಹೊತ್ತಿರುವ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಕರಾವಳಿ ಸೇರಿದಂತೆ ನಾನಾ ಭಾಗಗಳ ನಾಯಕರನ್ನು ತರಾಟೆಗೆ ತೆಗೆದುಕೊಂಡು, ಪಕ್ಷವನ್ನು ಮತ್ತಷ್ಟು ಬಲಪಡಿಸುವಂತೆ ಖಡಕ್ ಸೂಚನೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಮತ್ತು ಪರಮೇಶ್ವರ ಹೇಳುವಂತೆ ಕಾಂಗ್ರೆಸ್ಸಿಗೆ 149, 136 ಸೀಟುಗಳು ಬರುವ ಸ್ಥಿತಿ ಇದ್ದರೆ ವೇಣುಗೋಪಾಲ್ ಅಷ್ಟೆಲ್ಲ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನಾಯಕರ ತಲೆಗೂ ಕೆಲಸ ಕೊಡುತ್ತಿರಲ್ಲಿಲ್ಲ.

ಎಲ್ಲಕ್ಕಿಂತ ಮಿಗಿಲಾಗಿ ಸಿದ್ದರಾಮಯ್ಯ ಮತ್ತು ಪರಮೇಶ್ವರ ನಡುವಣ ವಿರಸವೇ ಪಕ್ಷಕ್ಕೆ ದೊಡ್ಡ ತಲೆನೋವಾಗಿದೆ. ರಾಜ್ಯ ಸರಕಾರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಪರಮೇಶ್ವರ ನೇರವಾಗಿ ಹೇಳಿದ್ದರೆ, ಪರಮೇಶ್ವರ ಉಸ್ತುವಾರಿ ಕಾರ್ಯಕ್ರಮಗಳಿಂದ ಸಿಎಂ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಪಕ್ಷ ಮತ್ತು ಸರಕಾರದ ಪ್ರಚಾರ ಕಾರ್ಯಕ್ರಮಗಳನ್ನು ಅಡ್ಡಡ್ಡ ಉದ್ದುದ್ದ ಸೀಳಿ ಇಬ್ಬರೂ ಹಂಚಿಕೊಂಡಿದ್ದಾರೆ. ಇವರಿಬ್ಬರೂ ಸಿಎಂ ಗಾದಿಗಾಗಿ ನಡೆಸಿರುವ ಪೈಪೋಟಿ ಪಕ್ಷದ ಹಾದಿ ತಪ್ಪಿಸುತ್ತಿದೆ. ಹಾದಿ ತಪ್ಪಿದ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದು ಹೇಗೆ? ಆದರೂ ಸ್ಪಷ್ಟ ಬಹುಮತ ಬರುವುದಾಗಿ ಹೇಳಿಕೊಳ್ಳುತ್ತಿರುವುದು ಆಂತರಿಕ ಸಮೀಕ್ಷೆಯಾಚೆಗಿನ ಸುಳ್ಳು!

ಇನ್ನು ಬಿಜೆಪಿ ಕತೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಾಗ ಯಡಿಯೂರಪ್ಪನವರಿಗೆ ಹಿಡಿದಿರುವ ಮಿಷನ್-150 ಭ್ರಮೆ ಇನ್ನೂ ಕಳಚಿಲ್ಲ. ಪಾಪ, ಯಡಿಯೂರಪ್ಪನವರು ಬಾಯಿತಪ್ಪಿ ಹೇಳಿರುವ 150 ಸೀಟು ಗಳಿಕೆ ಮಾತು ನಿಜ ಮಾಡೋಣ ಎಂದು ಅಮಿತ್ ಶಾ ಸೇರಿದಂತೆ ಬಿಜೆಪಿ ರಾಷ್ಟ್ರೀಯ ನಾಯಕರು ನಡೆಸಿರುವ ಇನ್ನಿಲ್ಲದ ಕಸರತ್ತುಗಳು ಸ್ಥಳೀಯ ನಾಯಕರ ಆಂತರಿಕ ಕಲಹದ ಮುಂದೆ ಸೊರಗಿ ಸುಣ್ಣವಾಗಿ ಕೂತಿವೆ. ಅಮಿತ್ ಶಾ ಗಿಣಿಗೆ ಹೇಳಿದಂತೆ ಹೇಳಿದರು, ಗಿಡುಗನನ್ನು ಬೆದರಿಸಿದಂತೆ ಗದರಿ ಹೇಳಿದರು, ಎಚ್ಚರಿಕೆ ಕೊಟ್ಟರೂ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ನಾಯಕರ ಪೈಕಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಪರಸ್ಪರ ಕಾಲೆಳೆಯುವುದರಲ್ಲೇ ಅಸೀಮ ಆನಂದ. ಅದರಲ್ಲೇ ಕಾಲಹರಣ. ಆದರೂ ಅಧಿಕಾರಕ್ಕೆ ಬರಬೇಕೆನ್ನುವ ಆಸೆ. ಆಂತರಿಕ ಸಮೀಕ್ಷೆ 80 ರ ಗಡಿ ದಾಟಿಸದಿದ್ದರೂ ಮಿಷನ್-150 ಘೋಷಣೆಗೇನೂ ಕಡಿಮೆ ಇಲ್ಲ. ನಾಯಕರ ನಡುವಣ ಸಮಸ್ಯೆ ಬಗೆಹರಿಸುವ ಪ್ರಯತ್ನಗಳೇ ಸಮಸ್ಯೆಯಾಗಿ ಪುಟಿಯುತ್ತಿವೆ. ಇಲ್ಲಿನವರು ದಿಲ್ಲಿಗೋದರೂ ಇಲ್ಲ, ದಿಲ್ಲಿಯವರು ಇಲ್ಲಿಗೆ ಬಂದರೂ ಇಲ್ಲ, ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಬಾಯಲ್ಲೊಂದು ಮಾತು, ಮನಸಲ್ಲೊಂದು ಲೆಕ್ಕಾಚಾರ. ಊರೆಲ್ಲ ಸುತ್ತಿ ಬಂದ ಪರಿವರ್ತನೆ ಯಾತ್ರೆ ನಾಯಕರ ನಡೆಯಲ್ಲಿ ಪರಿವರ್ತನೆ ಮಾಡಲಿಲ್ಲ. ಬದಲಿಗೆ ನಾಯಕರ ಮುರುಕು ಮನಸುಗಳನ್ನು ಮತ್ತಷ್ಟು ಅನಾವರಣ ಮಾಡಿತು. ಯಾತ್ರೆಯಲ್ಲಿ ಯಶಸ್ಸು ಬದಲು ವೈಮನಸ್ಸು ಢಾಳಾಗಿ ವಿಜೃಂಭಿಸಿತು. ವೇದಿಕೆ ಮೇಲಿನ ಒಗ್ಗಟ್ಟು, ಮೆಟ್ಟಿಲು ಇಳಿದ ಮೇಲೆ ಮಾಯವಾಗುತ್ತಿದೆ. ಭಾರವಾದ ಹೃದಯ, ಬೇಡವಾದ ನಗು ನಾಯಕರ ಮನಸುಗಳು ಬೆರೆಯಲು ಬಿಡುತ್ತಿಲ್ಲ. ಒಂದು ಕಡೆ ತಮ್ಮಿಂದಲೇ ಪಕ್ಷ ಎನ್ನುವ ಯಡಿಯೂರಪ್ಪನವರ ಮನೋಭಾವ, ಬೇರೆ ನಾಯಕರು ಸಹಿಸದ ಶೋಭಾ ಕರಂದ್ಲಾಜೆ ಅವರಿಗೆ ನೀಡುತ್ತಿರುವ ಆದ್ಯತೆ, ತಮ್ಮ ಆಪ್ತರಿಗಷ್ಟೇ ಮಣೆ ಹಾಕುತ್ತಿರುವುದು, ಇನ್ನೊಂದೆಡೆ ಯಾರೋ ಮುಖ್ಯಮಂತ್ರಿ ಆಗಲು ನಾವೆಲ್ಲ ಏಕೆ ಕಷ್ಟಪಡಬೇಕು ಎಂಬ ಅನ್ಯ ನಾಯಕರ ಉಡಾಫೆಯಿಂದಾಗಿ ಪಕ್ಷ ಮುಂದೋಡುವ ಬದಲು ಇದ್ದಲ್ಲೇ ಬಸ್ಕಿ ಹೊಡೆಯುತ್ತಿದೆ. ಮಿಷನ್-150 ಭ್ರಮೆಯನ್ನು ಹೆಗಲ ಮೇಲೆ ಕೂರಿಸಿಕೊಂಡು!

ಇನ್ನು ಜೆಡಿಎಸ್ ವಿಚಾರ. ದೇವೇಗೌಡರು, ಜೆ.ಎಚ್. ಪಟೇಲರ ಅಧಿಕಾರದ ಅವಧಿ ನಂತರ ತೆಂಗಿನಕಾಯಿ ಚೂರಿನಂತಾದ ಜನತಾದಳ ಈಗ ಜೆಡಿಎಸ್ ಸ್ವರೂಪದಲ್ಲಿ ಪ್ರಾದೇಶಿಕ ಪಕ್ಷವಾಗಿ ಉಳಿದಿದೆ. ಪಟೇಲರ ಸರಕಾರ ಹೋದ ನಂತರ ಈವರೆಗೂ ಸ್ವಂತ ಬಲದಿಂದ  ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ರಾಜ್ಯ ರಾಜಕಾರಣದಲ್ಲಿ ಅದರದೇನಿದ್ದರೂ ಕಿಂಗ್ ಮೇಕರ್ ಪಾತ್ರ. ಅತಂತ್ರ ವಿಧಾನಸಭೆ ಏರ್ಪಟ್ಟಾಗ ಅಧಿಕಾರದಲ್ಲಿ ಪಾಲು ಪಡೆದುಕೊಳ್ಳಲಷ್ಟೇ ಸೀಮಿತ. ಅದೃಷ್ಟ ಚೆನ್ನಾಗಿದ್ದರೆ ಸಿಎಂ ಪದವಿ, ಇಲ್ಲದಿದ್ದರೆ ಡಿಸಿಎಂ ಗಿರಿಗೆ ಸಂತೃಪ್ತಿ. ಅದರಲ್ಲೂ ದೇವೇಗೌಡರ ಕುಟುಂಬದ ಮರ್ಜಿಗೆ ಅನುಗುಣವಾಗಿ. ಅದು ಆಂತರಿಕವೋ, ಬಾಹ್ಯವೋ ಯಾವುದೇ ಸಮೀಕ್ಷೆ ಪ್ರಕಾರ ಜೆಡಿಎಸ್ ಸ್ವಸಾಮರ್ಥ್ಯದಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಹಾಗಿದ್ದರೂ 113 ಸ್ಥಾನಗಳೊಂದಿಗೆ ತಾವೇ ಅಧಿಕಾರಕ್ಕೆ ಬರುವುದಾಗಿ ಕುಮಾರಸ್ವಾಮಿ ಹೇಳಿಕೊಳ್ಳುತ್ತಿದ್ದಾರೆ. ಹಾಗೆ ಹೇಳಿಕೊಳ್ಳಲು ಅವರು ಸ್ವತಂತ್ರರಿದ್ದಾರೆ. ಆದರೆ ವಸ್ತುಸ್ಥಿತಿ ಹಾಗಿಲ್ಲ. ಕಳೆದ ಬಾರಿಯೂ ಕುಮಾರಸ್ವಾಮಿ ಅವರು ಇಷ್ಟೇ ಸ್ಥಾನಗಳು ಬರುತ್ತವೆ ಎಂಬ ವಿಶ್ವಾಸ ಹೊಂದಿದ್ದರು. ಆದರೆ 45 ಸ್ಥಾನಗಳಿಗಷ್ಟೇ ತೃಪ್ತಿ ಪಡಬೇಕಾಗಿ ಬಂತು. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿರುವಂತೆ ಜೆಡಿಎಸ್‌ನಲ್ಲೂ ಆಂತರಿಕ ಕಲಹ ಇದೆ. ಒಂದು ಕಾಲದಲ್ಲಿ ಕುಮಾರಸ್ವಾಮಿಯವರ ಪರಮಾಪ್ತರಾಗಿದ್ದ ಏಳು ಶಾಸಕರು ಈಗಾಗಲೇ ಪಕ್ಷದಿಂದ ಅಮಾನತುಗೊಂಡು, ಅನ್ಯ ಪಕ್ಷಗಳಲ್ಲಿ ಅದೃಷ್ಟ ಅರಸುತ್ತಿದ್ದಾರೆ.

ಇವತ್ತಿನ ಪರಿಸ್ಥಿತಿಯಲ್ಲಿ ನಾನಾ ಪಕ್ಷಗಳ ಆಂತರಿಕ ಹಾಗೂ ಬಾಹ್ಯ ಸಮೀಕ್ಷೆಗಳ ಪ್ರಕಾರ ಕರ್ನಾಟಕದಲ್ಲಿ ಈ ಬಾರಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೆ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ. ಸರಕಾರ ರಚನೆ ಕೊರತೆ ನೀಗುವಷ್ಟು ಸಂಖ್ಯೆಯಲ್ಲಿ ಪಕ್ಷೇತರರು ಆರಿಸಿ ಬಾರದಿದ್ದರೆ ಯಥಾಪ್ರಕಾರ ಜೆಡಿಎಸ್ಸೇ ಕಿಂಗ್ ಮೇಕರ್. ಜೆಡಿಎಸ್ ಬೆಂಬಲವಿಲ್ಲದೆ ಯಾರೂ ಸರಕಾರ ಮಾಡಲು ಸಾಧ್ಯವಿಲ್ಲ. ಬಿಜೆಪಿ ಆಗಲಿ, ಕಾಂಗ್ರೆಸ್ ಆಗಲಿ ಸರಕಾರ ರಚಿಸಬೇಕಾದರೆ ಗೌಡರ ಮರ್ಜಿ ಬೇಕೇ ಬೇಕು. ಮುಖ್ಯಮಂತ್ರಿ ಸ್ಥಾನಕ್ಕೆ ಹಗ್ಗಜಗ್ಗಾಟ ಏರ್ಪಡುತ್ತದೆ. ಬೇರೆ ಪಕ್ಷಗಳಿಗೆ ಸರಕಾರ ಬೇಕೇನಿಸಿದರೆ ಜೆಡಿಎಸ್ಸಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಬಿಟ್ಟು ಕೊಡದಿದ್ದರೆ ಚುನಾವಣೆಗೆ ಹೋಗಬೇಕಾಗುತ್ತದೆ. ಮತ್ತೆ ಚುನಾವಣೆ ಎದುರಿಸುವ ಗೋಜು ಬೇಡವೆನಿಸಿದರೆ ಜೆಡಿಎಸ್ ತಾನು ಕೈ ಜೋಡಿಸುವ ಪಕ್ಷಕ್ಕೆ ಸಿಎಂ ಸ್ಥಾನ ಬಿಟ್ಟು ಕೊಡಬಹುದು. ಆದರೆ ಮೈತ್ರಿ ಸರಕಾರದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಹೇಳಿದವರೇ ಮುಖ್ಯಮಂತ್ರಿ ಆಗಬೇಕಾಗುತ್ತದೆ. 2004 ರಲ್ಲಿ ಎಸ್.ಎಂ ಕೃಷ್ಣ ಎರಡನೇ ಅವಧಿಗೆ ಮುಖ್ಯಮಂತ್ರಿ ಆಗಲು ಕಾಂಗ್ರೆಸ್ ಶಾಸಕಾಂಗ ನಿರ್ಣಯಿಸಿದ್ದರೂ ದೇವೇಗೌಡರು ಅದಕ್ಕೆ ಆಸ್ಪದ ಕೊಡಲಿಲ್ಲ. ಧರ್ಮಸಿಂಗ್ ಅವರನ್ನು ಸಿಎಂ ಮಾಡಿದರೆ ಮಾತ್ರ ಬೆಂಬಲ ನೀಡುವುದಾಗಿ ಪಟ್ಟು ಹಿಡಿದಿದ್ದರು. ಅದರಂತೆಯೇ ಹಠ ಸಾಧಿಸಿಕೊಂಡರು. ಜೆಡಿಎಸ್ ಮಣಿದರೆ ಆಗಬಹುದಾದ ಕೆಲಸ ಇದೊಂದೇ.

ಇದು ಮೂರು ಪಕ್ಷಗಳ ಪಾಳೆಯದಲ್ಲಿರುವ ವಸ್ತುಸ್ಥಿತಿ. ಆದರೂ ಎಲ್ಲ ಪಕ್ಷಗಳೂ ತಾವೇ ಅಧಿಕಾರಕ್ಕೆ ಬರುವುದಾಗಿ, ಸ್ವಂತ ಬಲದಿಂದ ಸರಕಾರ ರಚಿಸುವುದಾಗಿ ಹೇಳಿಕೊಳ್ಳುತ್ತಿವೆ. ಎಲ್ಲ ಪಕ್ಷಗಳಿಗೂ, ಆ ಪಕ್ಷಗಳ ನಾಯಕರಿಗೂ ಮತದಾರ ತಮ್ಮವನೇ ಎಂಬ ಕಕ್ಕುಲತೆ ತುಂಬಿ ತುಳುಕುತ್ತಿದೆ. ಅವ ತಮ್ಮ ಪರ ಇದ್ದಾನೆಂಬ ಭಾವನೆ ಅವರನ್ನು ಆಳುತ್ತಿದೆ. ಹೀಗಾಗಿ ಮುಂದಿನ ಬಾರಿ ತಾವೇ ಅಧಿಕಾರಕ್ಕೆ ಬರುತ್ತೇವೆಂಬ ಅದಮ್ಯ ವಿಶ್ವಾಸ. ಅದಕ್ಕೆ ಅವರದೇ ಆದ ಆಖ್ಯಾನ, ವ್ಯಾಖ್ಯಾನ. ಕೆಲವರು ತಮ್ಮ ಶಕ್ತಿ ನಂಬಿಕೊಂಡು ಮುನ್ನಡೆದರೆ, ಇನ್ನೂ ಕೆಲವರು ಅನ್ಯರ ದೌರ್ಬಲ್ಯವನ್ನೇ ತಮ್ಮ ಶಕ್ತಿ ಎಂದು ಭಾವಿಸಿದ್ದಾರೆ. ಈ ಶಕ್ತಿ, ದೌರ್ಬಲ್ಯದ ಮೇಲಿನ ಅವಲಂಬನೆ ಚುನಾವಣೆ ತಂತ್ರ, ಪ್ರತಿತಂತ್ರ, ಕುತಂತ್ರಗಳಿಗೆ ಪ್ರೇರಣೆ. ಎಲ್ಲರಿಗೂ ಅವರವರ ತಂತ್ರ, ನಂಬಿಕೆಯೇ ಶ್ರೇಷ್ಠ. ಚುನಾವಣೆ ಮುಗಿದು ಫಲಿತಾಂಶ ಬರುವವರೆಗೂ ಇದು ಇದ್ದದ್ದೇ. ಅಲ್ಲಿಯವರೆಗೂ ಇವರ ‘ಉದ್ಫೋಷಣೆ’ಗಳನ್ನು ಸಹಿಸಿಕೊಳ್ಳಬೇಕಾದ್ದು ಮತದಾರನ ಅನಿವಾರ್ಯ ಕರ್ಮ!

ಲಗೋರಿ : ಭ್ರಮೆಯ ಇತಿಮಿತಿಯನ್ನು ಹಣೆಬರಹ ನಿರ್ಧರಿಸುತ್ತದೆ.

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply