ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಆಯ್ಕೆ, ಡಿ.16ರಂದು ಅಧಿಕಾರ ಸ್ವೀಕಾರ

ಡಿಜಿಟಲ್ ಕನ್ನಡ ಟೀಮ್:

ನಿರೀಕ್ಷೆಯಂತೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕಾಗಿ ಆಯೋಜಿಸಲಾಗಿದ್ದ ಚುನಾವಣಾ ಪ್ರಕ್ರಿಯೆಯಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧವಾಗಿ ಪಕ್ಷದ ಇತರೆ ನಾಯಕರು ಸ್ಪರ್ಧಿಸದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರನ್ನು ಅವಿರೋಧವಾಗಿ ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಪಕ್ಷ ಮಾಹಿತಿ ಕೊಟ್ಟಿದೆ.

ಡಿ.4ರಂದು ಚುನಾವಣೆಗೆ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದ್ದರು. ಆದರೆ ಇತರೆ ಯಾವುದೇ ನಾಯಕರು ಈ ಸ್ಥಾನಕ್ಕೆ ಸ್ಪರ್ಧಿಸಲಿಲ್ಲ. ಇದರೊಂದಿಗೆ ನೆಹರು- ಗಾಂಧಿ ಕುಟುಂಬದ ಪೈಕಿ ಪಕ್ಷದ ಅಧ್ಯಕ್ಷ ಸ್ಥಾನ ಅಲಂಕರಿಸಿದ 6ನೇ ವ್ಯಕ್ತಿಯಾಗಿದ್ದಾರೆ ರಾಹುಲ್. ಅಲ್ಲದೆ ಅಧ್ಯಕ್ಷ ಸ್ಥಾನ ಅಲಂಕರಿಸಿದ ಅತಿ ಕಿರಿಯ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ.

ಚುನಾವಣಾ ಆಯೋಗ ಯಾವುದೇ ಪಕ್ಷದ ಅಧ್ಯಕ್ಷರನ್ನು ನೇರವಾಗಿ ಆಯ್ಕೆ ಮಾಡುವಂತಿಲ್ಲ. ಬದಲಿಗೆ ಚುನಾವಣೆ ಮೂಲಕವೇ ಆಯ್ಕೆ ಮಾಡಬೇಕು ಎಂದು ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ಚುನಾವಣೆ ನಡೆಸಲೇಬೇಕಾದ ಅನಿವಾರ್ಯತೆ ಇತ್ತು. ರಾಹುಲ್ ಪಕ್ಷದ ಅಧ್ಯಕ್ಷರಾಗುತ್ತಾರೆ ಎಂದು ಗೊತ್ತಿದ್ದರೂ ಹೆಸರಿಗೆ ಮಾತ್ರ ಚುನಾವಣೆ ನಡೆಸುವ ಪ್ರಹಸನ ನಡೆಸಲಾತು. ಈ ಚುನಾವಣಾ ಸಮಿತಿಯ ಉಸ್ತುವಾರಿಯಾಗಿದ್ದ ಎಂ.ರಾಮಚಂದ್ರನ್ ರಾಹುಲ್ ಗಾಂಧಿ ಅವರಿಗೆ ಪಕ್ಷದ ಅಧ್ಯಕ್ಷರಾಗಿ ಆಯ್ಕೆ ಬಗ್ಗೆ ಪ್ರಮಾಣಪತ್ರವನ್ನು ವಿತರಿಸಿದರು.

ರಾಹುಲ್ ಡಿ.16ರಂದು ಅಧಿಕೃತವಾಗಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಗುಜರಾತ್ ಚುನಾವಣೆ ಫಲಿತಾಂಶ ಪ್ರಕಟವಾಗುವ ಮುನ್ನವೇ ಪಕ್ಷದ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದ್ದಾರೆ. ರಾಹುಲ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗೋದು ಯಾವಾಗ? ಎಂದು ಸಾಕಷ್ಟು ವರ್ಷಗಳಿಂದ ಇದ್ದ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇನ್ನು ಗುಜರಾತ್ ಫಲಿತಾಂಶದ ಜತೆಗೆ ಮುಂದಿನ ವರ್ಷ ಎದುರಾಗಲಿರುವ ಕರ್ನಾಟಕ ಹಾಗೂ ಇತರೆ ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ 2019ರ ಲೋಕಸಭೆ ಚುನಾವಣೆ ರಾಹುಲ್ ಪಾಲಿಗೆ ನಿರಂತರ ಪರೀಕ್ಷೆಯಾಗಲಿದೆ.

Leave a Reply