ರವಿ ಬೆಳಗೆರೆಗೆ ಜೈಲು! 12 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ ನ್ಯಾಯಾಲಯ

ಡಿಜಿಟಲ್ ಕನ್ನಡ ಟೀಮ್:

ಸಹೋದ್ಯೋಗಿ ಸುನೀಲ್ ಅವರನ್ನು ಹತ್ಯೆ ಮಾಡಲು ಸುಪಾರಿ ಕೊಟ್ಟ ಪ್ರಕರಣದಲ್ಲಿ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರಿಗೆ ಜಾಮೀನು ಸಿಗುತ್ತಾ ಅಥವಾ ಜೈಲು ಆಗುತ್ತಾ? ಎಂಬ ಕುತೂಹಲ ಮೂಡಿತ್ತು. ಇಂದು ಈ ಕುರಿತ ವಿಚಾರಣೆ ನಡೆಸಿದ 1ನೇ ಎಸಿಎಂಎಂ ನ್ಯಾಯಾಲಯ ರವಿ ಬೆಳಗೆರೆ ಅವರನ್ನು ಡಿ.22ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಕಳೆದ ನಾಲ್ಕು ದಿನಗಳಿಂದ ಪೊಲೀಸರ ವಶದಲ್ಲಿದ್ದ ರವಿ ಬೆಳಗೆರೆ ಅವರು ವಿಚಾರಣೆಗೆ ಸರಿಯಾಗಿ ಸಹಕಾರ ನೀಡದೇ ಇದ್ದದ್ದು, ಪೊಲೀಸರ ವಶದಲ್ಲಿರುವಾಗಲೇ ಸಿಗರೇಟ್ ಸೇವನೆ ಹಾಗೂ ಸುನೀಲ್ ಹೆಗ್ಗರವಳ್ಳಿ ಅವರಿಗೆ ದೂರವಾಣಿ ಕರೆ ಮಾಡಿದ್ದ ಅಂಶಗಳು ರವಿ ಬೆಳಗೆರೆ ಅವರಿಗೆ ಜಾಮೀನು ಸಿಗದಿರಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಸಿಸಿಬಿ ಪೊಲೀಸರ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ರವಿ ಬೆಳಗೆರೆ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.

ರವಿ ಬೆಳಗೆರೆ ಅವರಿಗೆ ಆರೋಗ್ಯದ ಕಾರಣ ಕೊಟ್ಟು ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿ ಮನವಿ ಮಾಡಲಾಗಿತ್ತು. ಆದರೆ ಸಿಸಿಬಿ ಪೊಲೀಸರ ವಶದಲ್ಲಿದ್ದ ಸಂಬಂಧದಲ್ಲಿ ರವಿ ಬೆಳಗೆರೆ ಅವರು ತಮ್ಮ ಆಪ್ತ ಮಧು ಎಂಬುವವರ ಮೂಲಕವಾಗಿ ಸುನೀಲ್ ಹೆಗ್ಗರವಳ್ಳಿ ಅವರಿಗೆ ಕರೆ ಮಾಡಿ ಮಾತನಾಡಿರುವುದು ಸಾಕಷ್ಟು ಸುದ್ದಿಯಾಗಿತ್ತು. ಪೊಲೀಸರ ವಶದಲ್ಲಿರುವಾಗಲೇ ಈ ರೀತಿಯ ನಡವಳಿಕೆ ತೋರಿರುವ ರವಿ ಬೆಳಗೆರೆ ನಂತರ ಒಂದು ವೇಳೆ ಜಾಮೀನು ಸಿಕ್ಕರೆ ಸಾಕ್ಷ್ಯ ನಾಸ ಮಾಡುವ ಸಾಧ್ಯತೆ ಇದೆ ಎಂಬ ಅನುಮಾನದಿಂದ ಜಾಮೀನು ನಿರಾಕರಿಸಲಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರವಿ ಬೆಳಗೆರೆ ಪರ ವಕೀಲರಾದ ದಿವಾಕರ್, ‘ಸಿಆರ್ ಪಿಸಿ ನಿಯಮದ ಪ್ರಕಾರ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಇದು ಕಾನೂನು ಪ್ರಕ್ರಿಯೆಯ ಒಂದು ಭಾಗ. ಸೆಷನ್ ಕೋರ್ಟ್ ನಲ್ಲಿ ಜಾಮೀನು ಪಡೆಯಬೇಕು ಎಂದು ನಿರ್ಧರಿಸಿರಲಿಲ್ಲ. ರವಿ ಬೆಳಗೆರೆ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಸ್ಪತ್ರೆಗಳಲ್ಲಿ ಎಲ್ಲ ಭದ್ರತೆಗಳೊಂದಿಗೆ ಚಿಕಿತ್ಸೆ ನೀಡಬೇಕು ಎಂದು ದಾಖಲೆ ಸಮೇತ ಅರ್ಜಿ ಸಲ್ಲಿಸಿದ್ದೆವು. ಅದನ್ನು ಪುರಸ್ಕರಿಸಿರುವ ನ್ಯಾಯಾಲಯ ರವಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದೆ. ನಾವು ಜಾಮೀನಿಗಾಗಿ ಅರ್ಜಿ ಸಲ್ಲಿಸಿರಲಿಲ್ಲ. ಮುಂದಿನ ಎರಡು ದಿನಗಳಲ್ಲಿ ಉನ್ನತ ಮಟ್ಟದ ನ್ಯಾಯಾಲಯದಲ್ಲಿ ಜಾಮೀನು ಪಡೆಯುವ ಅರ್ಜಿ ಹಾಕಿ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದಿದ್ದಾರೆ.

Leave a Reply