ಕಾಂಗ್ರೆಸ್ ಸರ್ಕಾರದ ವೈಫಲ್ಯ, ಬಿಜೆಪಿಯ ಬೇಜವಾಬ್ದಾರಿ, ಸೆಕ್ಯುಲರ್ ವಾದಿಗಳ ಸ್ವಾರ್ಥ- ಸಮಾಜದ ಶಾಂತಿ ಹದಗೆಡೋದಿಕ್ಕೆ ಕಾರಣ ಈ ಅಂಶಗಳು

ಡಿಜಿಟಲ್ ಕನ್ನಡ ವಿಶೇಷ:

ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರದ ವೈಫಲ್ಯ, ಸರ್ಕಾರದ ವೈಫಲ್ಯವನ್ನು ಸರಿಯಾದ ಮಾರ್ಗದಲ್ಲಿ ವಿರೋಧಿಸದ ಬಿಜೆಪಿ ನಾಯಕರ ಬೇಜವಾಬ್ದಾರಿತನ ಹಾಗೂ ಸೆಕ್ಯುಲರ್ ವಾದದ ಮುಖವಾಡ ಧರಿಸಿರೋರ ಸ್ವಾರ್ಥ ಈ ಮೂರು ಅಂಶಗಳು ಸದ್ಯ ರಾಜ್ಯದ ನೆಮ್ಮದಿ ಹದಗೆಡಲು ಪ್ರಮುಖ ಕಾರಣ. ಇವರ ಸ್ವಾರ್ಥಕ್ಕೆ ಸಾಮಾನ್ಯ ಜನರ ಶಾಂತಿಗೆ ಭಂಗವಾಗುತ್ತಿರೋದು ನಿಜಕ್ಕೂ ಶೋಚನೀಯ.

ಹೌದು, ಕುಮಟಾದಲ್ಲಿ ಮರೇಶ್ ಮೆಸ್ತಾ ಎಂಬ ಯುವಕನ ಹತ್ಯೆ ಪ್ರಕರಣ ಈಗ ಇಡೀ ರಾಜ್ಯವೇ ಹೊತ್ತಿ ಉರಿಯುವಂತೆ ಮಾಡಿದೆ. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ಮುಂದುವರಿದಿದೆ ಎಂಬ ಆಕ್ರೋಶ ಹೆಚ್ಚಾಗುವಂತೆ ಮಾಡಿದ್ದು, ಶಿರಸಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿನ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಡಿಸಿದೆ. ಈ ಹಿಂದೆ ಆದ ಸಾವು ನೋವಿನಲ್ಲಿ ರಾಜಕೀಯ ಪಕ್ಷಗಳು ಹೇಗೆ ರಾಜಕೀಯ ಬೆಳೆ ಬೆಳೆದುಕೊಂಡವೋ ಅದೇ ರೀತಿ ಪರೇಶ್ ಸಾವಿನಲ್ಲೂ ಭರ್ಜರಿ ರಾಜಕೀಯ ಬೆಳೆ ಬೆಳೆಯಲು ನಮ್ಮ ನಾಯಕರು ಬೆವರು ಸುರಿಸುತ್ತಿದ್ದಾರೆ.

ಅತ್ತ ಬಿಜೆಪಿ ನಾಯಕರು ‘ರಾಜ್ಯದಲ್ಲಿ ಹಿಂದೂ ನಾಯಕರಿಗೆ ರಕ್ಷಣೆ ಇಲ್ಲ. ಪಿ.ಎಫ್.ಐ ನಂತಹ ಸಂಘಟನೆಗಳಿಗೆ ರಾಜ್ಯ ಸರ್ಕಾರದ ಶ್ರೀರಕ್ಷೆ ಇದೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಎಂದಿನಂತೆ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ‘ಬಿಜೆಪಿ ಅವರು ಕೋಮುವಾದಿಗಳು. ಮೃತದೇಹವನ್ನಿಟ್ಟುಕೊಂಡು ಅನಗತ್ಯವಾಗಿ ರಾಜಕೀಯ ಮಾಡುತ್ತಿದ್ದಾರೆ’ ಎಂಬ ಪ್ರತ್ಯಾರೋಪ ಮಾಡಿದ್ದಾರೆ. ರಾಜಕೀಯ ನಾಯಕರ ಈ ಕಿತ್ತಾಟ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮಾನ 3 ಕಾಸಿಗೆ ಹರಾಜಾಗುವಂತೆ ಮಾಡಿದೆ.

ಸದ್ಯ ಕುಮಾಟ, ಶಿರಸಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ ಪರಿಸ್ಥಿತಿ ಹದಗೆಡಲು ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ನೇರ ಹೊಣೆಯಾಗಿವೆ. ಈ ವಿಚಾರಗಳಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಪರೇಶ್ ಸಾವಿನ ವಿಚಾರ ವೇಗವಾಗಿ ಮತೀಯ ದ್ವೇಷದ ಹತ್ಯೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಇಂತಹ ಸುದ್ದಿ ಹರಿದಾಡುವಂತೆ ಮಾಡಿದ್ದು ಯಾರು? ಈ ಪರೇಶ್ ಮೃತದೇಹ ಪತ್ತೆಯಾಗಿ ಮೂರು ದಿನಗಳೇ ಕಳೆದಿವೆ. ಈ ಅವಧಿಯಲ್ಲಿ ಸಮಾಜದ ನೆಮ್ಮದಿ ಕದಡುವ ಪ್ರಯತ್ನ ಮಾಡುತ್ತಿರುವವರು ಯಾರು ಎಂದು ಪತ್ತೆ ಹಚ್ಚಿ ಶಿಕ್ಷೆ ನೀಡಬಹುದಿತ್ತು. ಆದರೆ ಈ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳಲು ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಸಾಧ್ಯವಾಗಿಲ್ಲ.

ಬಿಜೆಪಿ ಅವರು ಆರೋಪಿಸುವಂತೆ ರಾಜ್ಯದಲ್ಲಿ ನಡೆದ 20ನೇ ಹಿಂದೂ ಕಾರ್ಯಕರ್ತನ ಹತ್ಯೆ ಇದಾಗಿದೆ. ಈ ಹಿಂದೆ ನಡೆದ 19 ಹತ್ಯೆಗಳ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಮಾಡಿರುವ ಕೆಲಸವೇನು? ಆ ಕೊಲೆ ಪ್ರಕರಣಗಳ ತನಿಖೆ ಎಲ್ಲಿಯವರೆಗೆ ಬಂದಿವೆ? ಇವುಗಳಿಗೆ ಸರ್ಕಾರವೇ ಉತ್ತರಿಸಬೇಕು. ರಾಜ್ಯ ಸರ್ಕಾರ ಕೇವಲ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣಗಳಲ್ಲಷ್ಟೇ ವಿಫಲವಾಗಿಲ್ಲ. ಎಡಪಂಥೀಯ ಚಿಂತಕರಾದ ಎಂ.ಎಂ. ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಹತ್ಯೆ ವಿಚಾರದಲ್ಲೂ ಸರ್ಕಾರದ ವೈಫಲ್ಯ ಢಾಳಾಗಿ ಕಾಣಿಸುತ್ತಿದೆ. ಸರ್ಕಾರ ತನ್ನ ವೈಫಲ್ಯಗಳನ್ನು ಒಪ್ಪಿಕೊಂಡು ಸರಿಯಾಗಿ ಕಾರ್ಯ ನಿರ್ವಹಿಸಬೇಕೆ ಹೊರತು ವಿನಾ ಕಾರಣ ವಿರೋಧ ಪಕ್ಷದವರ ಮೇಲೆ ಆರೋಪ ಮಾಡಲಷ್ಟೇ ಸಮಯ ಮೀಸಲಿಡಬಾರದು. ಬದಲಿಗೆ ತನ್ನ ವೈಫಲ್ಯಗಳನ್ನು ಸರಿಪಡಿಸಿಕೊಳ್ಳಬೇಕು.

ಇನ್ನು ಬಿಜೆಪಿ ನಾಯಕರೂ ಸಹ ತಮ್ಮ ಜವಾಬ್ದಾರಿಯನ್ನು ಮರೆಯುತ್ತಿದ್ದಾರೆ. ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿಯಬೇಕು. ಅದರ ವಿರುದ್ಧ ಪ್ರತಿಭಟನೆ ಮಾಡಬೇಕೇ ಹೊರತು ಸಮಾಜದ ನೆಮ್ಮದಿ ಹದಗೆಡುವಂತೆ ಮಾಡಲು ಪ್ರೇರಣೆಯಾಗಬಾರದು. ಸರ್ಕಾರದ ವಿರುದ್ಧ ಹೋರಾಟಕ್ಕೆ ನಮ್ಮ ಪ್ರಜಾಪ್ರಭುತ್ವದಲ್ಲಿ ಅನೇಕ ದಾರಿಗಳಿವೆ. ಶಾಂತಿಯುತ ಪ್ರತಿಭಟನೆಗೆ ನಮ್ಮಲ್ಲಿ ಅವಕಾಶವಿದೆ. ಅದೆಲ್ಲವನ್ನು ಬಿಟ್ಟು, ದ್ವೇಷದ ರಾಜಕಾರಣ ಮಾಡುತ್ತಾ, ಜಸಾಮಾನ್ಯರಲ್ಲೂ ದ್ವೇಷ ಹೆಚ್ಚಿ, ಸಮಾಜದ ಶಾಂತಿ ಕದಡುವಂತೆ ಮಾಡುವುದು ಸರಿಯಲ್ಲ. ದ್ವೇಷ ಹೆಚ್ಚಿಸುವ ಹೇಳಿಕೆಗಳನ್ನು ನೀಡುವ ಬದಲಿಗೆ ಕಾನೂನಿನ ಚೌಕಟ್ಟಿನಲ್ಲೇ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಆಗ ಮಾತ್ರ ಸಮಾಜದ ಸ್ವಾಸ್ಥ್ಯ ಉತ್ತಮವಾಗಿರುತ್ತದೆ.

ಇನ್ನು ಬುದ್ದಿಜೀವಿಗಳು ಹಾಗೂ ಸೋ ಕಾಲ್ಡ್ ಸೆಕ್ಯುಲರ್ ವಾದಿಗಳು ಜ್ಯಾತ್ಯಾತೀತದ ಮುಖವಾಡ ಧರಿಸಿಕೊಂಡಿದ್ದಾರೆ. ಎಂ.ಎಂ ಕಲಬುರಗಿ ಹಾಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಗಂಟಲು ಕಿತ್ತುಹೋಗೋ ಹಾಗೆ ಬೊಬ್ಬೆ ಹಾಕಿದ್ದವರು ಈ ಹಿಂದೂ ಕಾರ್ಯಕರ್ತರ ಸಾವಿನ ಬಗ್ಗೆ ತುಟಿ ಬಿಚ್ಚಿಲ್ಲ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಹಂತಕರನ್ನು ಪತ್ತೆ ಹಚ್ಚಲು ಪೊಲೀಸರು ಹಾಗೂ ರಾಜ್ಯ ಸರ್ಕಾರ ವಿಫಲವಾದರೂ ಪ್ರತಿಭಟನೆ ವೇಳೆ ಇವರ ದಿಕ್ಕಾರ ಮಾತ್ರ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ. ಗೌರಿ ಹತ್ಯೆ ಹಾಗೂ ಎಡಪಂಥೀಯ ನಾಯಕರ ಸಾವಿಗೆ ಸ್ಪಂಧಿಸುವ ರೀತಿಯಲ್ಲೇ ಈ ಹಿಂದೂ ಕಾರ್ಯಕರ್ತರ ಹತ್ಯೆಗೂ ಸ್ಪಂಧಿಸಿದರೆ ಮಾತ್ರ ಈ ಸೆಕ್ಯುಲರ್ ವಾದಿಗಳು ನಿಜವಾದ ಜಾತ್ಯತೀತರಾಗುತ್ತಾರೆ. ಆದರೆ ಕೇವಲ ಜಾತ್ಯಾತೀತದ ಮುಖವಾಡ ಹಾಕಿಕೊಂಡಿರುವ ಬುದ್ಧಿಜೀವಿಗಳು ತಮ್ಮ ಹಿತಾಸಕ್ತಿಗೆ ಅನುಕೂಲವಾಗುತ್ತದೆ ಎಂದರೆ ಮಾತ್ರ ಧ್ವನಿ ಎತ್ತುತ್ತಾರೆ. ಇದು ಅದೆಂತಹ ಜಾತ್ಯಾತೀತವಾದ ಎಂದು ಅವರೇ ವಿವರಿಸಬೇಕು.

ಒಟ್ಟಿನಲ್ಲಿ ಎಲ್ಲರೂ ಅವರವರ ಸ್ವಾರ್ಥಕ್ಕೆ ಸಾಮಾನ್ಯ ಜನರ ಕಣ್ಣಿಗೆ ಮಂಕು ಬೂದಿ ಎರಚುತ್ತಿದ್ದು, ಇದಕ್ಕೆ ಜನಸಾಮಾನ್ಯರೂ ಬಲಿಯಾಗುತ್ತಿರುವುದು ದುರಾದೃಷ್ಟಕರ ಸಂಗತಿ.

Leave a Reply