ದಾವೂದ್- ಛೋಟಾ ಶಕೀಲ್ ಮಧ್ಯೆ ಬಿರುಕು! ಕಾರಣನಾದನೇ ಅನೀಸ್ ಇಬ್ರಾಹಿಂ?

  ಡಿಜಿಟಲ್ ಕನ್ನಡ ಟೀಮ್:

  ಭೂಗತ ಸಾಮ್ರಾಜ್ಯದಲ್ಲಿ ಕುಚಿಕುಗಳಾಗಿದ್ದ ಮೇರೆಯುತ್ತಿರುವ ದಾವುದ್ ಇಬ್ರಾಹಿಂ ಹಾಗೂ ಛೋಟಾ ಶಕೀಲ್ ನಡುವೆ ಈಗ ಬಿರುಕು ಬಿಟ್ಟಿದೆ ಎಂಬ ಅಚ್ಚರಿಯ ಸಂಗತಿ ಗುಪ್ತಚರ ಮೂಲಗಳಿಂದ ಹೊರಬಂದಿದೆ.

  ಕಳೆದ ಮೂರು ದಶಕಗಳಿಂದಲೂ ದಾವುದ್ ನ ಬಲಗೈಭಂಟನಿಗಿಂತಲೂ ಹೆಚ್ಚಾಗಿದ್ದವನು ಛೋಟಾ ಶಕೀಲ್. ಈಗ ಇವರಿಬ್ಬರ ಮಧ್ಯೆ ಬಿರುಕು ಬರಲು ಕಾರಣ ಏನು? ಎಂಬ ಪ್ರಶ್ನೆ ಮೂಡುವುದು ಸಹಜ. ಇವರಿಬ್ಬರ ನಡುವಣ ಬಿರುಕಿಗೆ ಕಾರಣವಾಗಿರೋದು ಬೇರಾರು ಅಲ್ಲ, ದಾವುದ್ ಸಹೋದರ ಅನೀಸ್ ಇಬ್ರಾಹಿಂ. ಹೌದು, ಭೂಗತ ಲೋಕದಲ್ಲಿ ತಮ್ಮ ಗ್ಯಾಂಗಿನ ಕಾರ್ಯಾಚರಣೆಗಳಲ್ಲಿ ಅನೀಸ್ ಹಸ್ತಕ್ಷೇಪ ಮಾಡುತ್ತಿದ್ದ. ದಾವೂದ್ ಜತೆಗೆ ಪಾಕಿಸ್ತಾನದಲ್ಲೇ ನೆಲೆಸಿರುವ ಅನೀಸ್ ಗ್ಯಾಂಗಿನ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ನಡೆಸುತ್ತಿದ್ದ. ಈ ವಿಚಾರವಾಗಿ ಬೇಸತ್ತ ಶಕೀಲ್ ದುಬೈನಲ್ಲಿ ತನ್ನ ಸಹಚರರ ಜತೆ ಮಾತುಕತೆ ನಡೆಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

  ದಾವೂದ್ ಹಾಗೂ ಶಕೀಲ್ ಅನೇಕ ವರ್ಷಗಳಿಂದ ಕರಾಚಿಯ ಕ್ಲಿಪ್ಟನ್ ಪ್ರದೇಶದಲ್ಲಿ ನೆಲೆಸಿದ್ದರು. ಆದರೆ ಈಗ ಇವರಿಬ್ಬರೂ ಬೇರೆಯಾಗಿರುವುದು ಖಚಿತವಾಗಿದೆ. ಇವರಿಬ್ಬರ ನಡುವಣ ಬಿಕ್ಕಟ್ಟಿನಿಂದ ಭಾರತಕ್ಕೆ ಸ್ವಲ್ಪ ಅನುಕೂಲವಾಗಲಿದೆ. ಕಾರಣ ಇಷ್ಟು ದಿನಗಳ ಕಾಲ ಈ ಇಬ್ಬರೂ ಜತೆಯಾಗಿ ಭಾರತ ವಿರೋಧಿ ಹಾಗೂ ಬಯೋತ್ಪಾದನಾ ಕೃತ್ಯಗಳನ್ನು ನಡೆಸುತ್ತಿದ್ದರು. ಆದರೆ ಈಗ ಈ ಇಬ್ಬರು ಒಟ್ಟಿಗೆ ಇಲ್ಲದ ಕಾರಣ ಭಾರತದ ವಿರೋಧಿ ಕೃತ್ಯಗಳನ್ನು ನಡೆಸುವುದು ಕಷ್ಟವಾಗಲಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.

  ಅತ್ತ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಇವರಿಬ್ಬರ ನಡುವಣ ರಾಜಿಗೆ ಪ್ರಯತ್ನಿಸುತ್ತಿದೆ. ಇವರಿಬ್ಬರು ಬೇರೆಯಾಗಿರುವುದರಿಂದ ಗುಂಪು ಇಬ್ಬಾಗವಾಗಿದ್ದು ಡ್ರಗ್ ಡೀಲಿಂಗ್, ಸುಪಾರಿ ಕೊಲೆ, ಹವಾಲಾ ವಹಿವಾಟಿಗೆ ದೊಡ್ಡ ಮಟ್ಟದಲ್ಲಿ ಪೆಟ್ಟು ಬೀಳಲಿದೆ. ಈ ಹಿಂದೆ ದಾವೂದ್ ಜತೆಯಲ್ಲಿದ್ದ ಅಬು ಸಲೇಮ್, ಛೋಟಾ ರಾಜನ್, ಪಾಹಿಮ್ ಮಚ್ ಮಚ್ ಇದೇ ರೀತಿಯ ಮನಸ್ಥಾಪದಿಂದ ದೂರವಾಗಿ ತಮ್ಮದೇ ಆದ ಗ್ಯಾಂಗ್ ಕಟ್ಟಿಕೊಂಡಿದ್ದರು. ಅದರಲ್ಲೂ ಛೋಟಾ ರಾಜನ್ ದಾವೂದ್ ನ ಪರಮ ವೈರಿಯಾಗಿಬಿಟ್ಟಿದ್ದ. ಆತನ ಹತ್ಯೆಗೂ ದಾವೂದ್ ಸಂಚು ರೂಪಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.

  Leave a Reply