ಕಲ್ಲಿದ್ದಲು ಹಗರಣದಲ್ಲಿ ಅಪರಾಧಿಯಾದ್ರು ಜಾರ್ಖಂಡ್ ಮಾಜಿ ಸಿಎಂ ಕೋಡ, ನಾಳೆ ಶಿಕ್ಷೆ ಪ್ರಮಾಣ ಪ್ರಕಟ

ಡಿಜಿಟಲ್ ಕನ್ನಡ ಟೀಮ್:

ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ ದಲ್ಲಿ ಜಾರ್ಖಂಡಿನ ಮಾಜಿ ಮುಖ್ಯಮಂತ್ರಿ ಮಧು ಕೋಡ ಹಾಗೂ ಸರ್ಕಾರಿ ಅಧಿಕಾರಿಗಳಾದ ಎಚ್.ಸಿ ಗುಪ್ತಾ ಹಾಗೂ ಅಶೋಕ್ ಕುಮಾರ್ ಬಸು ಅಪರಾಧಿಗಳೆಂದು ಸಾಬೀತಾಗಿದೆ. ಸಿಬಿಐ ವಿಶೇಷ ನ್ಯಾಯಾಲಯ ಈ ಮೂವರನ್ನು ಅಪರಾಧಿಗಳು ಎಂದು ತೀರ್ಮಾನಿಸಿದ್ದು, ಇವರ ವಿರುದ್ಧ ಶಿಕ್ಷೆ ಪ್ರಮಾಣವನ್ನು ಗುರುವಾರ ಪ್ರಕಟಿಸಲಿದೆ.

ಜಾರ್ಖಂಡ್ ರಾಜ್ಯದ ಉತ್ತರ ರಾಜಹರ ಕಲ್ಲಿದ್ದಲು ನಿಕ್ಷೇಪವನ್ನು ಕೋಲ್ಕತಾ ಮೂಲದ ವಿನಿ ಅಯರ್ನ್ ಅಂಡ್ ಸ್ಟೀಲ್ ಲಿಮಿಟೆಡ್ ಕಂಪನಿಗೆ ನೀಡಿತ್ತು. ಈ ನಿಕ್ಷೇಪ ಹಂಚಿಕೆ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಪ್ರಕರಣ ದಾಖಲಾಗಿ ವಿಚಾರಣೆ ನಡೆದಿತ್ತು. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ₹2500 ಕೋಟಿ ಅವ್ಯವಹಾರದ ಆರೋಪ ಹೊರಿಸಿತ್ತು. ಅಲ್ಲದೆ ₹ 3400 ಕೋಟಿ ಅಕ್ರಮವನ್ನು ಬಯಲಿಗೆಳೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಸಿಬಿಐ ದೇಶದ 70 ಕಡೆಗಳಲ್ಲಿ ದಾಲಿ ನಡೆಸಿತ್ತು. ಈ ವೇಳೆ ಮಧು ಕೋಡಾ ಅವರ ಸ್ಥಿರ ಹಾಗೂ ಚರಾಸ್ಥಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿತ್ತು.

ಈ ವಿಚಾರಣೆಯಲ್ಲಿ ಕೋಡ ಅವರ ಜತೆಗೆ ಇಬ್ಬರು ಅಧಿಕಾರಿಗಳು ತಪ್ಪಿತಸ್ಥರು ಎಂಬುದು ಸಾಬೀತಾಗಿದೆ. ಎಚ್.ಸಿ ಗುಪ್ತಾ ಅವರು ಮಾಜಿ ಕಲ್ಲಿದ್ದಲು ಕಾರ್ಯದರ್ಶಿಯಾಗಿದ್ದು, ಅಶೋಕ್ ಕುಮಾರ್ ಜಾರ್ಖಂಡ್ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ. ಈ ಮೂವರ ಜತೆಗೆ ವಸಂತ್ ಭಟ್ಟಾಚಾರ್ಯ, ಬಿಪಿನ್ ಬಿಹಾರಿ ಸಿಂಗ್, ವೈಭವ್ ತುಳಸಿಯಾನ್, ವಿಜಯ್ ಜೋಷಿ, ನವೀನ್ ಕುಮಾರ್ ತುಳಸಿಯಾನ್ ಅವರೂ ಕೂಡ ಆರೋಪಿಗಳಾಗಿದ್ದರು.

Leave a Reply