ಡಬಲ್ ಸೆಂಚುರಿ ಸರದಾರ ರೋಹಿತ್ ಶರ್ಮಾ, ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ದ್ವಿಶತಕದ ಉಡುಗೊರೆ!

ಡಿಜಿಟಲ್ ಕನ್ನಡ ಟೀಮ್:

ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಬಾರಿಸುವುದನ್ನೇ ಹವ್ಯಾಸ ಮಾಡಿಕೊಂಡಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ವೃತ್ತಿ ಜೀವನದ ಮೂರನೇ ದ್ವಿಶತಕ ದಾಖಲಿಸಿದ್ದಾರೆ. ಶ್ರೀಲಂಕಾ ವಿರುದ್ಧವೇ ಎರಡನೇ ದ್ವಿಶತಕ ಬಂದಿದ್ದು, ಲಂಕಾ ಬೌಲರ್ ಪಾಡು ಹೀನಾಯವಾಗಿತ್ತು.

ಮೊಹಾಲಿಯ ಪಿಸಿಎ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಪ್ರವಾಸಿಗರು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಂತರ ನಡೆದಿದ್ದೆಲ್ಲಾ ರೋಹಿತ್ ಶರ್ಮಾ  ಅಬ್ಬರ. ರೋಹಿತ್ (ಅಜೇಯ 208) ದ್ವಿಶತಕ ನೆರವಿನಿಂದ ಟೀಂ ಇಂಡಿಯಾ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 392 ರನ್ ಸಂಪಾದಿಸಿದೆ. ಆ ಮೂಲಕ ಪ್ರವಾಸಿಗರಿಗೆ ಕಠಿಣ ಸವಾಲು ನೀಡಿದೆ.

ಕಳೆದ ಪಂದ್ಯದಲ್ಲಿ ಕೇವಲ 112 ರನ್ ಗಳಿಗೆ ಇಡೀ ತಂಡ ಆಲೌಟ್ ಆಗಿತ್ತು. ಹೀಗಾಗಿ ಮೂರು ಪಂದ್ಯಗಳ ಸರಣಿಯಲ್ಲಿ ಈ ಪಂದ್ಯ ಭಾರತ ಪಾಲಿಗೆ ಮಹತ್ವದ್ದಾಗಿತ್ತು. ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ಒತ್ತಡದ ನಡುವೆಯೇ ಅದ್ಧೂರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ತಂಡವನ್ನು ಅತ್ಯುತ್ತಮ ರೀತಿಯಲ್ಲಿ ಮುನ್ನಡೆಸಿದ್ದಾರೆ.

ರೋಹಿತ್ ಶರ್ಮಾ ಈ ಪಂದ್ಯದಲ್ಲೂ ಇನಿಂಗ್ಸ್ ಕಟ್ಟಿದ ಪರಿ ನಿಜಕ್ಕೂ ಅತ್ಯದ್ಭುತವಾಗಿತ್ತು. 115 ಎಸೆತಗಳಲ್ಲಿ 100 ರನ್ ಗಡಿ ಮುಟ್ಟಿದ ರೋಹಿತ್ ಶರ್ಮಾ ನಂತರದ 38 ಎಸೆತಗಳಲ್ಲಿ 108 ರನ್ ಗಳಿಸಿದರು. ರೋಹಿತ್ ಈ ಇನಿಂಗ್ಸ್ ನಲ್ಲಿ 13 ಬೌಂಡರಿ ಹಾಗೂ 12 ಸಿಕ್ಸರ್ ಬಾರಿಸಿದ್ದು, ಆ ಪೈಕಿ 11 ಸಿಕ್ಸ್ ಗಳು 100 ರನ್ ಗಡಿ ದಾಟಿದ ಮೇಲೆ ಬಂದಿವೆ. ಇದು ರೋಹಿತ್ ಶರ್ಮಾ ಹೇಗೆ ತಮ್ಮ ಇನಿಂಗ್ಸ್ ಆನ್ನು ಆರಂಭದಲ್ಲಿ ಮಂದಗತಿ ಪಡೆದರೂ ನಂತರ ಅದರ ವೇಗವನ್ನು ಹೇಗೆ ಹೆಚ್ಚಿಸುವರು ಎಂಬುದಕ್ಕೆ ಸಾಕ್ಷಿಯಾಗಿದೆ. ಉಳಿದಂತೆ ಭಾರತದ ಪರ ಶಿಖರ್ ಧವನ್ 68, ಶ್ರೇಯಸ್ ಅಯ್ಯರ್ 88, ಧೋನಿ 7 ಹಾಗೂ ಪಾಂಡ್ಯ 8 ರನ್ ಗಳಿಸಿದರು.

ಇಂದು ರೋಹಿತ್ ಶರ್ಮಾ ಹಾಗೂ ಪತ್ನಿ ರಿತಿಕಾ ಎರಡನೇ ವಿವಾಹ ವಾರ್ಷಿಕೋತ್ಸವ ಆಚರಿಸುತ್ತಿದ್ದು, ರೋಹಿತ್ ಶರ್ಮಾ ದ್ವಿಶತಕದ ಉಡುಗೊರೆ ನೀಡಿದ್ದಾರೆ. ರೋಹಿತ್ ದ್ವಿಶತಕ ದಾಖಲಿಸುತ್ತಿದ್ದಂತೆ ತಮ್ಮ ಉಂಗುರದ ಬೆರಳಿಗೆ ಮುತ್ತಿಕ್ಕುತ್ತಾ ಗ್ಯಾಲರಿಯಲ್ಲಿ ಕುಳಿತಿದ್ದ ತಮ್ಮ ಪತ್ನಿ ರಿತಿಕಾ ಅವರಿಗೆ ಇನಿಂಗ್ಸ್ ಅರ್ಪಿಸಿದರು. ಅತ್ತ ಗ್ಯಾಲರಿಯಲ್ಲಿ ರೋಹಿತ್ ಶರ್ಮಾ ದ್ವಿಶತಕ ದಾಖಲಿಸುವುದನ್ನು ತುದಿಗಾಲಲ್ಲಿ ನಿಂತು ಕಾಯುತ್ತಿದ್ದ ರಿತಿಕಾ ರೋಹಿತ್ ದ್ವಿಶತಕ ದಾಖಲಿಸುತ್ತಿದ್ದಂತೆ ಆನಂದಬಾಷ್ಪ ಸುರಿಸಿದರು.

ಟ್ವಿಟರ್ ಚಿತ್ರ

ರೋಹಿತ್ ಶರ್ಮಾ ಈ ಇನಿಂಗ್ಸ್ ಮೂಲಕ ರೋಹಿತ್ ಶರ್ಮಾ ಅನೇಕ ದಾಖಲೆಗಳನ್ನು ಬರೆದಿದ್ದು, ಅವುಗಳಲ್ಲಿ ಪ್ರಮುಖವಾದವು ಹೀಗಿವೆ…

  • ವಿಶ್ವ ಏಕದಿನ ಕ್ರಿಕೆಟ್ ನಲ್ಲಿ ಮೂರನೇ ದ್ವಿಶತಕ ದಾಖಲಿಸಿದ ಏಕೈಕ ಬ್ಯಾಟ್ಸ್ ಮನ್.
  • ತಂಡದ ನಾಯಕನಾಗಿ ಇನಿಂಗ್ಸ್ ಒಂದರಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆ ಮುರಿದರು. ಈ ಹಿಂದೆ ವೆಸ್ಟ್ ಇಂಡೀಸ್ ಮಾಜಿ ನಾಯಕ ವಿವಿಯನ್ ರಿಚರ್ಡ್ಸ್ 181 ರನ್ ಗಳಿಸಿದ್ದು ದಾಖಲೆಯಾಗಿತ್ತು.
  • ತಂಡದ ನಾಯಕನಾಗಿ ದ್ವಿಶತಕ ದಾಖಲಿಸಿದ ವಿಶ್ವದ ಮೊದಲ ಆಟಗಾರ.

Leave a Reply