ರಣಜಿ ಸೆಮೀಸ್ ನಲ್ಲಿ ಸ್ಟಾರ್ ಆಟಗಾರರು ಆಡಲು ಬಿಸಿಸಿಐ ಅನುಮತಿ, ಹರಿಣಗಳ ಬೇಟೆಗೆ ಇದೇ ತಯಾರಿ!

ಡಿಜಿಟಲ್ ಕನ್ನಡ ಟೀಮ್:

ಇದೇ 177ರಿಂದ ನಡೆಯಲಿರುವ ಪ್ರತಿಷ್ಠಿತ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಸ್ಟಾರ್ ಆಟಗಾರರು ಆಯಾ ರಾಜ್ಯಗಳ ತಂಡಗಳನ್ನು ಪ್ರತಿನಿಧಿಸಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿದೆ. ಇದರಿಂದ ವೇಗಿಗಳಾದ ಇಶಾಂತ್ ಶರ್ಮಾ, ಉಮೇಶ್ ಯಾವ್, ಮೊಹಮದ್ ಶಮಿ, ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಹಾಗೂ ಕೆ.ಎಲ್ ರಾಹುಲ್ ತಮ್ಮ ರಾಜ್ಯ ತಂಡದಲ್ಲಿ ಆಡಬಹುದಾಗಿದೆ.

ಶ್ರೀಲಂಕಾ ವಿರುದ್ಧದ ಏಕದಿನ ಹಾಗೂ ಟಿ.20 ಸರಣಿ ನಡೆಯುತ್ತಿರುವ ಹೊತ್ತಲ್ಲಿ ಈ ಆಟಗಾರರು ರಣಜಿಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿರುವುದು ಆಶ್ಚರ್ಯ ಮೂಡಿಸಿದೆಯಾದರೂ ಇದರ ಹಿಂದೆ ಬಲವಾದ ಕಾರಣವೂ ಇದೆ. ಅದೇನೆಂದರೆ ಜನವರಿ ಮೊದಲವಾರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ ತನ್ನ ಅಭಿಯಾನ ಆರಂಭಿಸಲಿದೆ. ಈ ಸರಣಿಗೂ ಮುನ್ನ ಭಾರತ ತಂಡ ಯಾವುದೇ ಅಭ್ಯಾಸ ಪಂದ್ಯವನ್ನಾಡುತ್ತಿಲ್ಲ. ಹೀಗಾಗಿ ಈ ಆಟಗಾರರಿಗೆ ರಣಜಿ ಸೆಮಿಫೈನಲ್ ಪಂದ್ಯ ಅಭ್ಯಾಸ ವೇದಿಕೆಯಾಗಲಿದೆ.

ಸೆಮಿಫೈನಲ್ ಪಂದ್ಯದಲ್ಲಿ ದೆಹಲಿ ಹಾಗೂ ಬಂಗಾಳ ತಂಡಗಳು ಸೆಣೆಸಲಿದ್ದು, ಮತ್ತೊಂದು ಪಂದ್ಯದಲ್ಲಿ ವಿದರ್ಭ ಹಾಗೂ ಕರ್ನಾಟಕ ಮುಖಾಮುಖಿಯಾಗುತ್ತಿದೆ. ಲೀಗ್ ಹಂತದಲ್ಲಿ ಇಶಾಂತ್ ಶರ್ಮಾ ದೆಹಲಿ ತಂಡವನ್ನು ಮುನ್ನಡೆಸಿದ್ದರು. ಇನ್ನು ಮೊಹಮದ್ ಶಮಿ ಹಾಗೂ ಸಾಹ ಬಂಗಾಳ ತಂಡದ ಪರ ಆಡಲಿದ್ದಾರೆ. ಇನ್ನು ಉಮೇಶ್ ಯಾದವ್ ವಿದರ್ಭ ಪರ ಆಡಿದರೆ, ಕೆ.ಎಲ್ ರಾಹುಲ್ ಕರ್ನಾಟಕ ಪರ ಆಡುವ ಸಾಧ್ಯತೆ ಇದೆ. ಬಿಸಿಸಿಐ ಈ ಆಟಗಾರರಿಗೆ ರಣಜಿಯಲ್ಲಿ ತಮ್ಮ ರಾಜ್ಯ ಪರ ಆಡಲು ಅವಕಾಶ ನೀಡಿದ್ದರು, ಯಾವ ಯಾವ ಆಟಗಾರರು ಕಣಕ್ಕಿಳಿಯಲಿದ್ದಾರೆ ಎಂಬುದು ಇನ್ನು ಅಂತಿಮವಾಗಿಲ್ಲ.

ಶ್ರೀಲಂಕಾ ವಿರುದ್ಧದ ಟಿ20 ಸರಣಿ ಮುಕ್ತಾಯವಾದ ಕೆಲವೇ ದಿನಗಳಲ್ಲೇ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಲಿದ್ದಾರೆ. ವಿದೇಶಿ ಪ್ರವಾಸಕ್ಕೂ ಮುನ್ನ ಆಟಗಾರರ ತಯಾರಿ ಬಗ್ಗೆ ಯೋಚಿಸದೇ ಬಿಸಿಸಿಐ ಸರಣಿ ವೇಳಾಪಟ್ಟಿ ನಿರ್ಧರಿಸಿರುವುದು ಸಾಕಷ್ಟು ಟೀಕೆಗೂ ಕಾರಣವಾಗಿದೆ. ಈಗಾಗಲೇ ನಾಯಕ ಕೊಹ್ಲಿ ಲಂಕಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದು, ಆಲ್ರೌಂಡರ್ ಪಾಂಡ್ಯ ಟೆಸ್ಟ್ ಸರಣಿ ವೇಳೆ ವಿಶ್ರಾಂತಿ ಪಡೆದಿದ್ದರು. ಉಳಿದಂತೆ ಶಿಖರ್ ಧವನ್ ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ಭುವನೇಶ್ವರ್ ನಿರಂತರವಾಗಿ ಪಂದ್ಯಗಳನ್ನಾಡುತ್ತಿದ್ದು, ಇವರಿಗೆ ಯಾವುದೇ ವಿಶ್ರಾಂತಿ ಇಲ್ಲವಾಗಲಿದೆ.

ಇಲ್ಲಿ ಪ್ರಮುಖವಾಗಿ ಗಮನಿಸಬೇಕಿರೋದು ಭಾರತದ ಪಿಚ್ ಗಳಲ್ಲಿ ಟಿ20 ಕ್ರಿಕೆಟ್ ಆಡಿ ಕೆಲವೇ ದಿನಗಳಲ್ಲಿ ಯಾವುದೇ ತಾಲೀಮು ಇಲ್ಲದೆ ದಕ್ಷಿಣ ಆಫ್ರಿಕಾದ ವೇಗ ಹಾಗೂ ಪುಟಿತದ ಪಿಚ್ ನಲ್ಲಿ ಹರಿಣಗಳ ಬೌಲರ್ ಗಳನ್ನು ಎದುರಿಸಬೇಕಿದೆ. ಇದು ಭಾರತೀಯ ಆಟಗಾರರಿಗೆ ಅಗ್ನಿ ಪರೀಕ್ಷೆ ಎಂದೇ ಪರಿಗಣಿಸಲಾಗಿದೆ. ತವರಿನಲ್ಲಿ ಅಬ್ಬರಿಸುತ್ತಿರುವ ಟೀಂ ಇಂಡಿಯಾ ಹರಿಣಗಳ ನಾಡಲ್ಲಿ ಹೇಗೆ ಪ್ರದರ್ಶನ ನೀಡಲಿದೆ ಎಂಬುದು ಸದ್ಯದ ಕುತೂಹಲ.

Leave a Reply