ಚುನಾವಣಾ ಆಯೋಗ ಬಿಜೆಪಿ ತಾಳಕ್ಕೆ ಕುಣಿತಿದೆ ಎಂದು ಪಿ.ಚಿದಂಬಂರಂ ಸಿಟ್ಟಾಗಲು ಕಾರಣವೇನು?

ಡಿಜಿಟಲ್ ಕನ್ನಡ ಟೀಮ್:

ಗುಜರಾತ್ ಚುನಾವಣೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಅಣತಿಯಂತೆ ನಡೆಯುತ್ತಿದೆ ಎಂಬ ಆರೋಪ ಕಾಂಗ್ರೆಸ್ ಪಕ್ಷದಿಂದ ನಿರಂತರವಾಗಿ ಕೇಳಿಬರುತ್ತಿದೆ. ಚುನಾವಣೆ ದಿನಾಂಕ ಪ್ರಕಟವಾಗುವ ವಿಚಾರದಿಂದ ಆರಂಭವಾದ ಈ ಆರೋಪ ಮತದಾನ ಮುಕ್ತಾಯದ ಹಂತಕ್ಕೆ ಬಂದಿರುವ ಹೊತ್ತಲು ಇದೇ ಆರೋಪ ಕೇಳಿಬರುತ್ತಿದೆ.

ಕಾಂಗ್ರೆಸ್ ನಾಯಕರು ಈಗ ಚುನಾವಣಾ ಆಯೋಗದ ಮೇಲೆ ಸಿಟ್ಟಾಗಲು ಕಾರಣ ತಮ್ಮ ಪಕ್ಷದ ನೂತನ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನೋಟೀಸ್ ನೀಡಿರುವುದು. ಹೌದು, ಚುನಾವಣಾ ಪ್ರಚಾರ ಅಂತಿಮವಾದ ನಂತರವೂ ರಾಹುಲ್ ಗಾಂಧಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ ನೀತಿ ಸಂಹಿಂತೆ ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಚುನಾವಣಾ ಆಯೋಗ ನೋಟೀಸ್ ನೀಡಿದೆ. ಇದನ್ನು ಪ್ರಶ್ನಿಸಿರುವ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಚುನಾವಣಾ ಆಯೋಗ ಪಕ್ಷಪಾತ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಸರಣಿ ಟ್ವೀಟ್ ಮೂಲಕ ಚುನಾವಣಾ ಆಯೋಗದ ಮೇಲೆ ಆಕ್ರೋಶ ವ್ಯಕ್ತಪಡಿಸಿರೋ ಚಿದಂಬರಂ ಹೇಳಿರುವುದಿಷ್ಟು…

‘ನಿನ್ನೆ ಕೇವಲ ರಾಹುಲ್ ಗಾಂಧಿ ಮಾತ್ರ ಮಾಧ್ಯಮಕ್ಕೆ ಸಂದರ್ಶನ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣವನ್ನೇ ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಕೂಡ ಸಂದರ್ಶನ ನೀಡಿದ್ದಾರೆ. ರೈಲ್ವೇ ಸಚಿವರೂ ಸಂದರ್ಶನ ನೀಡಿದ್ದಾರೆ. ಆದರೆ ಚುನಾವಣಾ ಆಯೋಗದ ಕಣ್ಣಿಗೆ ಬಿದ್ದದ್ದು ಮಾತ್ರ ರಾಹುಲ್ ಗಾಂಧಿ. ಚುನಾವಣಾ ಆಯೋಗ ಕೇವಲ ರಾಹುಲ್ ಗಾಂಧಿ ಅವರ ಮೇಲೆ ನಿಗಾ ಇಟ್ಟು ಇನ್ನುಳಿದವರ ಮೇಲೆ ಏಕೆ ಗಮನಹರಿಸುತ್ತಿಲ್ಲ.

ಮತದಾನದ ದಿನ ಪ್ರಧಾನ ಮಂತ್ರಿ ರೋಡ್ ಶೋ ನಡೆಸುವುದು ದೊಡ್ಡ ಮಟ್ಟದ ನೀತಿ ಸಂಹಿತೆ ಉಲ್ಲಂಘನೆ. ಅದೊಂದು ಚುನಾವಣಾ ಪ್ರಚಾರವಾಗಿತ್ತು. ಆಗ ಚುನಾವಣಾ ಆಯೋಗ ಏನು ಮಾಡುತ್ತಿತ್ತು? ಬಿಜೆಪಿ ಅವರು ನೀತಿ ಸಂಹಿತೆ ಉಲ್ಲಂಘನೆ ಮಾಡಿದಾಗ ನಿದ್ದೆ ಚುನಾವಣಾ ಆಯೋಗ ನಿದ್ದೆ ಮಾಡುತ್ತಿತ್ತೇ? ಚುನಾವಣಾ ಆಯೋಗ ಈ ವಿಚಾರದಲ್ಲಿ ಮೌನ ವಹಿಸಿದೆ. ಹೀಗಾಗಿ ಮಾಧ್ಯಮಗಳು ನೀತಿ ಸಂಹಿತೆ ಉಲ್ಲಂಘನೆ ವಿರುದ್ಧ ಎದ್ದು ನಿಲ್ಲಬೇಕು. ಮಾಧ್ಯಮಗಳು ತಮ್ಮ ಟಿವಿ ಪರದೆಯನ್ನು ನೋಡಿ ಯಾರು ಯಾವ ರೀತಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬುದನ್ನು ನಿರ್ಧರಿಸಲಿ.

ಗುಜರಾತಿನ ಜನ ಇಂತಹ ಹೀನ ತಂತ್ರಗಳಿಗೆ ಸಿಲುಕಬಾರದು. ನಿಮ್ಮ ಒಂದೊಂದು ಮತವೂ 22 ವರ್ಷಗಳ ನಂತರ ಒಂದು ಸರ್ಕಾರವನ್ನೇ ಬದಲಾಯಿಸಲಿದೆ. ನಿಮ್ಮ ಮತದ ಸಾಮರ್ಥ್ಯವನ್ನು ಕಡೆಗಣಿಸಬೇಡಿ. ಪ್ರತಿ ಮತ ಹೊಸ ಬದಲಾವಣೆ ತರುವ ಶಕ್ತಿ ಹೊಂದಿದೆ. ಹೀಗಾಗಿ ಪ್ರತಿಯೊಬ್ಬರು ಮತಗಟ್ಟೆಗಳಿಗೆ ಹೋಗಿ ಮತ ಹಾಕಿ.’

ಇಷ್ಟೇ ಅಲ್ಲ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ದೂರು ದಾಖಲಿಸಿಕೊಳ್ಳುವಂತೆ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಆಯೋಗದ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

Leave a Reply