ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಅನುಮತಿ ರದ್ದು! ಈ ನಿರ್ಧಾರ ಸಂಸ್ಕೃತಿಗಾಗಿಯೋ ಅಥವಾ ಚುನಾವಣೆಗಾಗಿಯೋ?

ಡಿಜಿಟಲ್ ಕನ್ನಡ ವಿಶೇಷ:

ಹೊಸ ವರ್ಷಾಚರಣೆಗಾಗಿ ಮಾನ್ಯತಾ ಟೆಕ್ ಪಾರ್ಕಿನಲ್ಲಿ ಆಯೋಜಿಸಲಾಗಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನಿ ಅವರ ‘ಸನ್ನಿ ಲಿಯೋನ್ ನೈಟ್’ ಕಾರ್ಯಕ್ರಮಕ್ಕೆ ಕೆಲವು ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದ ಅನುಮತಿಯನ್ನು ರದ್ದು ಮಾಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ ಗೃಹ ಸಚಿವ ರಾಮಲಿಂಗಾ ರೆಡ್ಡಿ.

ತಮ್ಮ ಈ ನಿರ್ಧಾರಕ್ಕೆ ಸಮರ್ಥನೆ ನೀಡಿರುವ ಸಚಿವರು ಹೇಳಿರುವುದಿಷ್ಟು… ‘ಸನ್ನಿ ನೈಟ್ ಕಾರ್ಯಕ್ರಮ ನಮ್ಮ ಸಂಸ್ಕೃತಿಗೆ ಸೂಕ್ತವಾದುದಲ್ಲ. ಹೀಗಾಗಿ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದರೆ ಅದನ್ನು ರದ್ದುಗೊಳಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡುತ್ತೇನೆ.’

ಸಚಿವರ ಈ ಹೇಳಿಕೆ ಹೊಸ ವರ್ಷಾಚರಣೆಗೆ ಸನ್ನಿ ಲಿಯೋನ್ ಬರುತ್ತಾರೆ ಎಂದು ಕಾಯುತ್ತಿದ್ದ ಬೆಂಗಳೂರು ಅಭಿಮಾನಿಗಳಿಗೆ ನಿರಾಸೆಯಾಗಿದೆ. ಈಗಾಗಲೇ ಸನ್ನಿ ಲಿಯೋನ್ ಕಾರ್ಯಕ್ರಮ ವಿರೋಧಿಸಿ ನಡೆಯಲಾದ ಪ್ರತಿಭಟನೆಗಳ ಸುದ್ದಿಯನ್ನು ರಾಷ್ಟ್ರೀಯ ವಾಹಿನಿಗಳಲ್ಲಿ ಪ್ರಸಾರ ಮಾಡಲಾಗಿದ್ದು, ‘ಇಲ್ಲಿನ ರಾಜ್ಯ ಸರ್ಕಾರ ಏನು ಮಾಡುತ್ತಿದೆ. ಒಂದು ಕಾರ್ಯಕ್ರಮಕ್ಕೆ ಭದ್ರತೆ ನೀಡಲು ಸಾಮರ್ಥ್ಯ ಸರ್ಕಾರಕ್ಕಿಲ್ಲವೇ?’ ಎಂದು ಟೀಕೆ ಮಾಡಿವೆ.

ಇಲ್ಲಿ ಒಂದು ವಿಷಯವನ್ನು ಪ್ರತಿಯೊಬ್ಬರು ಆಲೋಚಿಸಬೇಕು. ಅದೇನೆಂದರೆ ಗೃಹ ಸಚಿವರು ಈ ಕಾರ್ಯಕ್ರಮದಲ್ಲಿ ಕಾನೂನು ಬಾಹೀರ ಚಟುವಟಿಕೆ ನಡೆಯುತ್ತದೆ ಎಂಬ ಕಾರಣ ನೀಡಿಲ್ಲ. ಬದಲಾಗಿ ನಮ್ಮ ಸಂಸ್ಕೃತಿಗೆ ಸೂಕ್ತವಾದುದಲ್ಲ ಎಂಬ ಸಮರ್ಥನೆ ನೀಡಿದ್ದಾರೆ. ಇಲ್ಲಿ ಪ್ರಮುಖವಾಗಿ ಕಾಡುತ್ತಿರುವ ಪ್ರಶ್ನೆ ಈ ಕಾರ್ಯಕ್ರಮ ನಮ್ಮ ಸಂಸ್ಕೃತಿಗೆ ಹೇಗೆ ಸೂಕ್ತವಲ್ಲ ಎಂಬುದು. ಹೊಸ ವರ್ಷ ಆಚರಣೆ ನಮ್ಮಲ್ಲಿ ಅದರಲ್ಲೂ ಬೆಂಗಳೂರಿನಂತಹ ನಗರಗಳಲ್ಲಿ ಸಾಮಾನ್ಯವಾಗಿದೆ. ಅದರಲ್ಲೂ ಎಂ.ಜಿ ರಸ್ತೆ, ಬ್ರಿಗೆಡ್ ರಸ್ತೆ, ಪಬ್ ಗಳಲ್ಲಿ ಹೊಸ ವರ್ಷಾಚರಣೆ ಸಂಭ್ರಮ ಜೋರಾಗಿಯೇ ಇರುತ್ತದೆ. ಕೆಲವು ನಟ ನಟಿಯರು ಕೆಲವು ನಗರಗಳಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಅದೇ ರೀತಿ ಸನ್ನಿ ಕಾರ್ಯಕ್ರಮವೂ ಒಂದು.

ನಿಜ, ಸನ್ನಿ ಲಿಯೋನ್ ಒಂದು ಕಾಲದ ನೀಲಿ ಚಿತ್ರಗಳ ತಾರೆ. ಆಕೆ ನೀಲಿ ಚಿತ್ರಗಳಲ್ಲಿ ಅಭಿನಯಿಸಿದ್ದಾಳೆ ಎಂಬ ಕಾರಣದಿಂದ ಆಕೆ ಕಾರ್ಯಕ್ರಮ ನಮ್ಮ ಸಂಸ್ಕೃತಿಗೆ ಸೇರಿದ್ದಲ್ಲ ಎನ್ನುವುದು ಎಷ್ಟರ ಮಟ್ಟಿಗೆ ಸರಿ? ಆಕೆ ಈಗ ನೀಲಿ ಚಿತ್ರಗಳ ನಟಿ ಅಲ್ಲ. ಆ ಚಿತ್ರರಂಗದಿಂತ ಹೊರಬಂದು ಈಗ ಬಾಲಿವುಡ್ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾಳೆ. ಕೇವಲ ಬಾಲಿವುಡ್ ಏಕೆ, ಕನ್ನಡ ಸೇರಿದಂತೆ ಅನೇಕ ಸ್ಥಳೀಯ ಭಾಷೆಗಳ ಸಿನಿಮಾಗಳಲ್ಲೂ ಅಭಿನಯಿಸಿದ್ದಾಳೆ. ಆಗ ಇಲ್ಲದ ಸಂಸ್ಕೃತಿ ಈಗ ಎಲ್ಲಿಂದ ಬಂದಿದೆ?.

ಈ ಪ್ರಕರಣದಲ್ಲಿ ಸಂಸ್ಕೃತಿ ಎಂಬುದು ಕೇವಲ ನೆಪ ಮಾತ್ರ, ಸರ್ಕಾರದ ಈ ನಿರ್ಧಾರದ ಹಿಂದೆ ಅಡಗಿರೋದು ಚುನಾವಣಾ ಭಯ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದುವೇಳೆ ಕಾರ್ಯಕ್ರಮ ನಡೆದು ವಿವಿಧ ಸಂಘಟನೆಗಳ ಪ್ರತಿಭಟನೆ ತೀವ್ರವಾಗಿ ಕಾನೂನು ಸುವ್ಯವಸ್ಥೆ ಉಲ್ಲಂಘನೆಯಾದರೆ ಸರ್ಕಾರಕ್ಕೆ ಕೆಟ್ಟ ಹೆಸರು. ಅದರಲ್ಲೂ ಚುನಾವಣೆ ಸಂದರ್ಭದಲ್ಲಿ ಇಂತಹ ರಿಸ್ಕ್ ಬೇಡವೇ ಬೇಡ ಎಂಬುದು ಸರ್ಕಾರದ ಆತಂಕವೇ ಹೊರತು, ಸಂಸ್ಕೃತಿಯ ವಿಷಯವಲ್ಲ. ಅಲ್ಲದೆ ಚುನಾವಣೆ ಹೊತ್ತಲ್ಲಿ ಸಂಸ್ಕೃತಿ ಹೆಸರಲ್ಲಿ ಜನರ ಮನ ಗೆಲ್ಲುವ ಪ್ರಯತ್ನ ಅಂತಲೂ ಹೇಳಲಾಗುತ್ತಿದೆ.

ಸನ್ನಿ ಲಿಯೋನ್ ಬೆಂಗಳೂರಿನಲ್ಲಿ ಕಾರ್ಯಕ್ರಮ ಮಾಡಿದರೆ ಅದು ಸಂಸ್ಕೃತಿಗೆ ವಿರೋಧ ಹೇಗಾಗುತ್ತದೆ. ಬೇರೆ ನಟ ನಟಿಯರು ಹೇಗೆ ಹೊಸ ವರ್ಷಾಚರಣೆ ಕಾರ್ಯಕ್ರಮ ಮಾಡುತ್ತಾರೋ ಅದೇ ರೀತಿ ಈಕೆಯೂ ಮಾಡುತ್ತಾಳೆ. ಸನ್ನಿ ಈಗ ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸುತ್ತಾ ತಾನೊಬ್ಬ ನೀಲಿ ಚಿತ್ರತಾರೆ ಎಂಬ ಹಣೆಪಟ್ಟಿಯಿಂದ ಹೊರ ಬರುವ ಪ್ರಯತ್ನದಲ್ಲಿರುವುದಾಗಿಯೂ ತಿಳಿಸಿದ್ದಾಳೆ. ಇಲ್ಲಿ ಒಂದು ಅಂಶವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅದೇನೆಂದರೆ, ಸನ್ನಿ ಲಿಯೋನ್ ನೀಲಿ ಚಿತ್ರರಂಗವನ್ನು ಬಿಟ್ಟರೂ, ನಾವುಗಳು ಮಾತ್ರ ಆಕೆಯನ್ನು ನೋಡುವ ದೃಷ್ಟಿಕೋನ ಬದಲಾಯಿಸಿಕೊಳ್ಳುತ್ತಿಲ್ಲ.

Leave a Reply