ಗುಜರಾತ್ ಮುಗೀತು, ಮೋದಿಯ ಮುಂದಿನ ಟಾರ್ಗೆಟ್ ಮೆಘಾಲಯ- ಮಿಜೋರಾಂ

ಡಿಜಿಟಲ್ ಕನ್ನಡ ಟೀಮ್:

ದೇಶದ ಗಮನವನ್ನೇ ಸೆಳೆದಿದ್ದ ಗುಜರಾತ್ ಚುನಾವಣೆ ಮತದಾನ ಮುಗಿದಿದ್ದು, ಫಲಿತಾಂಶ ಹೊರ ಬೀಳಲು ಕೇವಲ 2 ದಿನ ಮಾತ್ರ ಬಾಕಿ ಉಳಿದಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಚಿತ್ತ ಬೇರೆ ರಾಜ್ಯಗಳ ಚುನಾವಣೆ ಮೇಲೆ ನೆಟ್ಟಿದೆ. ಹೌದು ಪ್ರಧಾನಿ ನರೇಂದ್ರ ಮೋದಿ ಅವರು ಈಗ ಈಶಾನ್ಯ ರಾಜ್ಯಗಳಾದ ಮಿಜೊರಾಂ ಹಾಗೂ ಮೆಘಾಲಯಗಳ ಮೇಲೆ ಕಣ್ಣಿಟ್ಟಿದ್ದಾರೆ.

ಮೆಘಾಲಯ ಹಾಗೂ ಮಿಜೋರಾಂ ರಾಜ್ಯಗಳ ಚುನಾವಣೆ ಅಷ್ಟು ಪ್ರತಿಷ್ಠೆಯ ಕಣವಲ್ಲದ್ದಿದ್ದರೂ ಬಿಜೆಪಿ ಮಾತ್ರ ಈ ರಾಜ್ಯಗಳ ಚುನಾವಣೆಯನ್ನು ಗಂಭೀರವಾಗಿಯೇ ಪರಿಗಣಿಸಿದೆ. ಈಗಾಗಲೇ ಈಶಾನ್ಯ ಭಾಗದ ರಾಜ್ಯಗಳಾದ ಅಸ್ಸಾಂ, ಮಣಿಪುರ ಹಾಗೂ ಅರುಣಾಚಲ ಪ್ರದೇಶಗಳಲ್ಲಿ ಕೇಸರಿ ಧ್ವಜ ಹಾರಿಸಿರುವ ಬಿಜೆಪಿ ಈ ಎರಡೂ ರಾಜ್ಯಗಳನ್ನೂ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಎದುರು ನೋಡುತ್ತಿದೆ. ಹೀಗಾಗಿ ಇಂದು ಈ ಎರಡು ರಾಜ್ಯಗಳ ಪ್ರವಾಸ ಕೈಗೊಂಡಿರುವ ನರೇಂದ್ರ ಮೋದಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಕೇವಲ ಮಿಜೋರಾಂ, ಮೆಘಾಲಯ ಮಾತ್ರವಲ್ಲದೇ ನಾಗಾಲ್ಯಾಂಡ್ ಹಾಗೂ ತ್ರಿಪುರಾ ಗಳಲ್ಲೂ ಚುನಾವಣೆ ನಡೆಯಲಿದೆ. ತ್ರಿಕಪುರಾ ಹೊರತುಪಡಿಸಿ ಉಳಿದ ಮೂರು ರಾಜ್ಯಗಳಲ್ಲಿ ಕ್ರೈಸ್ತ ಮತದಾರರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಈ ರಾಜ್ಯಗಳಲ್ಲಿ ಕೇಸರಿ ಬಾವುಟ ಹಾರಿಸುವುದು ಸುಲಭವಾಗಿಲ್ಲ. ಹೀಗಾಗಿ ಬಿಜೆಪಿ ಈ ರಾಜ್ಯಗಳನ್ನು ಗಂಭೀರವಾಗಿ ಪರಿಗಣಿಸಿವೆ. ಕೇಂದ್ರದ ಗೋಮಾಂಸ ನಿಷೇಧದ ನಿರ್ಧಾರದ ವಿಚಾರವಾಗಿ ಈ ರಾಜ್ಯಗಳಲ್ಲಿ ವಿರೋಧ ಪಕ್ಷಗಳು ತೀವ್ರವಾದ ಪ್ರತಿಭಟನೆ ವ್ಯಕ್ತವಾಗುವಂತೆಯೂ ಮಾಡಿತ್ತು.

ಆದರೆ ಇತ್ತೀಚೆಗೆ ಮೆಘಾಲಯದಲ್ಲಿ ಕಾಂಗ್ರೆಸ್ ನ ಹಿರಿಯ ಮುಖಂಡರು ಪಕ್ಷ ತೊರೆದಿರುವ ಹಿನ್ನೆಲೆಯಲ್ಲಿ 60 ಕ್ಷೇತ್ರಗಳ ವಿಧಾನಸಭೆಯಲ್ಲಿ ಬಹುಮತ ಪಡೆಯುವ ಭರವಸೆ ಇದೆ. ಒಂದು ವೇಳೆ ಬಹುಮತ ಬರದಿದ್ದರೂ ಮೈತ್ರ ಸರ್ಕಾರದ ಮೂಲಕವಾದರೂ ಅಧಿಕಾರ ಪಡೆಯಬೇಕು ಎಂಬುದು ಬಿಜೆಪಿ ಗುರಿಯಾಗಿದೆ. ಈ ರಾಜ್ಯದಲ್ಲಿ ಸ್ಥಳೀಯ ಪಕ್ಷಗಳಾದ ನ್ಯಾಷನಲ್ ಪೀಪಲ್ಸ್ ಪಾರ್ಟಿ ಹಾಗೂ ಯುನೈಟೆಡ್ ಡೆಮಾಕ್ರಾಟಿಕ್ ಪಾರ್ಟಿ ಇದ್ದರೂ ಈವರೆಗೂ ಬಿಜೆಪಿ ಯಾವುದೇ ಚುನಾವಣಾ ಪೂರ್ವ ಮೈತ್ರಿಗೆ ಮುಂದಾಗಿಲ್ಲ. ಸದ್ಯ ಅಲ್ಲಿನ ರಾಜಕೀಯ ಬೆಳವಣಿಗೆಗಳನ್ನು ನೋಡುತ್ತಿದ್ದರೆ, ಮೋದಿ ಅವರ ಭೇಟಿ ನಂತರ ಇಬ್ಬರು ಪಕ್ಷೇತರರು ಹಾಗೂ ಕಾಂಗ್ರೆಸ್ ಮತ್ತು ಎನ್ ಸಿಪಿ ಪಕ್ಷದಿಂದ ತಲಾ ಒಬ್ಬರು ಹಾಲಿ ಶಾಸಕರು ಬಿಜೆಪಿ ಸೇರುವ ಸಾಧ್ಯತೆ ಇದೆ. ಈ ರೀತಿ ಬಿಜೆಪಿ ಈಶಾನ್ಯ ರಾಜ್ಯಗಳಲ್ಲಿ ಚುನಾವಣ ತಂತ್ರಗಾರಿಕೆ ಆರಂಭಿಸಿದ್ದು, ಈಶಾನ್ಯ ಭಾಗವನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವತ್ತ ಗಮನ ಹರಿಸಿದೆ.

ಇಂದು ಮಿಜೋರಾಂಗೆ ಭೇಟಿ ನೀಡಿರುವ ಮೋದಿ ಈಶಾನ್ಯ ರಾಜ್ಯಗಳಿಗಾಗಿ ನೀರು ಸರಬರಾಜು, ವಿದ್ಯುತ್, ರಸ್ತೆ ಸಂಪರ್ಕ, ಪ್ರವಾಸೋದ್ಯಮ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗಾಗಿ ವಿಶೇಷ ಕೇಂದ್ರ ಯೋಜನೆ ನೀಡಲಾಗುವುದು. ಈ ಯೋಜನೆ 2022ರ ವೇಳೆಗೆ ಪೂರ್ಣಗೊಳ್ಳಲಾಗುವುದು ಎಂಬ ಭರವಸೆಯನ್ನು ನೀಡಿದ್ದಾರೆ. ಇದರೊಂದಿಗೆ ಭರವಸೆ, ರಾಜಕೀಯ ರಣತಂತ್ರ ಹಾಗೂ ಇತರೆ ಎಲ್ಲಾ ಆಯಾಮಗಳಿಂದಲೂ ಬಿಜೆಪಿ ಈ ರಾಜ್ಯಗಳ ಚುನಾವಣೆಗೆ ತಂತ್ರಗಾರಿಕೆ ನಡೆಸುತ್ತಿರುವುದು ಸ್ಪಷ್ಟವಾಗಿದೆ.

Leave a Reply