ಪುತ್ರನಿಗೆ ಕಾಂಗ್ರೆಸ್ ಪಕ್ಷದ ಅಧಿಕಾರ ಹಸ್ತಾಂತರಿಸಿದ ಸೋನಿಯಾ! ಮೋದಿಯ ಕಾಂಗ್ರೆಸ್ ಮುಕ್ತ ಭಾರತ ಹೋರಾಟ ತಡೆಯುವರೆ ರಾಹುಲ್?

ಡಿಜಿಟಲ್ ಕನ್ನಡ ಟೀಮ್:

ಸುದೀರ್ಘ 19 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಅದಿನಾಯಕಿಯಾಗಿ ಅಧಿಕಾರ ನಡೆಸಿದ್ದ ಸೋನಿಯಾ ಗಾಂಧಿ ಇಂದು ತಮ್ಮ ಅಧಿಕಾರವನ್ನು ಪುತ್ರ ರಾಹುಲ್ ಗಾಂಧಿ ಅವರಿಗೆ ವಹಿಸಿದ್ದಾರೆ. ಅದರೊಂದಿಗೆ 132 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ನ 87 ಅಧ್ಯಕ್ಷರಾಗಿ, ಸ್ವಾತಂತ್ರ್ಯದ ನಂತ 16ನೇ ಹಾೂ ಗಾಂಧಿ-ನೆಹರೂ ಕುಟುಂಬದ 6ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

2004ರಲ್ಲಿ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ ರಾಹುಲ್ ಗಾಂಧಿ ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. 2013ರಲ್ಲಿ ಪಕ್ಷದ ಉಪಾಧ್ಯಕ್ಷರಾಗಿ ಆಯ್ಕೆಯಾದ ರಾಹುಲ್ ನಾಲ್ಕು ವರ್ಷದ ಅನುಭವದ ನಂತರ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಆರೋಗ್ಯ ಸಮಸ್ಯೆ ಒಂದದುಕಡೆಯಾದರೆ, ಮುಂದಿನ ಲೋಕಸಭಾ ಚುನಾವಣೆಗೆ ಒಂದೂವರೆ ವರ್ಷ ಮಾತ್ರ ಬಾಕಿ ಉಳಿದಿದೆ. ಹೀಗಾಗಿ ಪಕ್ಷದ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅಧಿಕಾರ ಸ್ವೀಕರಿಸಲು ಇದೇ ಉತ್ತಮ ಸಮಯ ಎಂಬುದು ವಿಶ್ಲೇಷಕರ ಅಭಿಪ್ರಾಯ.

ದೇಶದಲ್ಲಿ ಪಕ್ಷ ಸತತವಾಗಿ ಕುಸಿಯುತ್ತಿರುವ ಹೊತ್ತಲ್ಲಿ ರಾಹುಲ್ ಗಾಂಧಿ ಈ ಮಹತ್ತರ ಜವಾಬ್ದಾರಿಯನ್ನು ಹೊತ್ತುಕೊಂಡಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಅತ್ತ ದೇಶದ ಅನೇಕ ರಾಜ್ಯಗಳಲ್ಲಿ ಭರ್ಜರಿ ಜಯಭೇರಿ ಬಾರಿಸುತ್ತಿರುವ ಬಿಜೆಪಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಕಾಂಗ್ರೆಸ್ ಮುಕ್ತ ಭಾರತದ ಹೋರಾಟದಲ್ಲಿ ನಿರತವಾಗಿದೆ. ಈ ಹಂತದಲ್ಲಿ ರಾಹುಲ್ ಮೋದಿಗೆ ಪರ್ಯಾಯ ನಾಯಕನಾಗಿ ಬೆಳೆಯುತ್ತಾರೆಯೇ, ರಾಜಕೀಯದಲ್ಲಿ ಅಪ್ರಬುದ್ಧ ಎಂಬ ಹಣೆಪಟ್ಟಿ ಕಳಚಿ ಕಾಂಗ್ರೆಸ್ ಅನ್ನು ಕುಸಿತದಿಂದ ಪಾರು ಮಾಡವರೆ ಎಂಬ ದೊಡ್ಡ ಪ್ರಶ್ನೆ ಈಗ ನಮ್ಮ ಮುಂದಿದೆ.

ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆ ಹಾಗೂ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಕ್ಷೇತ್ರವಾದ ಅಮೇಥಿಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಮುಂದಾಳತ್ವದಲ್ಲಿ ಸುದೀರ್ಘ ಏಳು ದಶಕಗಳಿಂದ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಅಮೇಥಿಯನ್ನು ಈಗ ಬಿಜೆಪಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ. ತಮ್ಮ ಸ್ವಂತ ಕ್ಷೇತ್ರದಲ್ಲೇ ರಾಹುಲ್ ನಿಯಂತ್ರಣ ಕಳೆದುಕೊಳ್ಳುತ್ತಿರುವ ಹಂತದಲ್ಲಿ ಇಡೀ ದೇಶದಾದ್ಯಂತ ಕಾಂಗ್ರೆಸ್ ಪಕ್ಷವನ್ನು ಹೇಗೆ ಉಳಿಸಿಕೊಳ್ಳುತ್ತಾರೆ ಎಂದು ಕೇಸರಿ ಪಾಳಯದವರು ಆಡಿಕೊಳ್ಳಲು ಆರಂಭಿಸಿದ್ದಾರೆ.

ಗಾಂಧಿ ಕುಟುಂಬಸ್ಥನಾಗಿರುವ ರಾಹುಲ್ ಕಾಂಗ್ರೆಸ್ ನಲ್ಲಿ ಹಿಂಡಿತ ಸಾಧಿಸುವುದು ದೊಡ್ಡ ವಿಷಯವೇನಲ್ಲ. ಇದೊಂದೇ ಕಾರಣದಿಂದ ಕಾಂಗ್ರೆಸ್ ನಾಯಕರೆಲ್ಲರೂ ರಾಹುಲ್ ಅವರನ್ನು ತಮ್ಮ ನಾಯಕ ಎಂದು ಕಣ್ಣುಮುಚ್ಚಿಕೊಂಡು ಒಪ್ಪಿಕೊಳ್ಳುತ್ತಾರೆ. ಆದರೆ ಬೇರೆಯವರು ಒಪ್ಪಿಕೊಳ್ಳಬೇಕಲ್ಲ. ಈಗ ರಾಹುಲ್ ಮುಂದಿರುವ ಸವಾಲು ಅದೇ. ರಾಷ್ಟ್ರದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಹಾಗೂ ಅದರ ಎನ್ಡಿಎ ಮೈತ್ರಿಕೂಟದ ಪಕ್ಷಗಳು ಅಧಿಕಾರದಲ್ಲಿರುವಾಗ ಕಾಂಗ್ರೆಸ್ ತನ್ನ ಯುಪಿಎ ಮೈತ್ರಿಕೂಟದ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. ಈ ಪಕ್ಷಗಳು ಸೋನಿಯಾರ ಸಾರಥ್ಯವನ್ನು ಒಪ್ಪಿಕೊಂಡಷ್ಟು ಸುಲಭವಾಗಿ ರಾಹುಲ್ ನಾಯಕತ್ವವನ್ನು ಒಪ್ಪಿಕೊಳ್ಳುವುದಿಲ್ಲ. ಹೀಗೆ ಬೆಟ್ಟದಂತಹ ಜವಾಬ್ದಾರಿಗಳು ರಾಹುಲ್ ಹೆಗಲ ಮೇಲೆ ಬಿದ್ದಿದೆ.

ಸೋನಿಯಾ ಗಾಂಧಿ ಕೂಡ ಪಕ್ಷದ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದಾಗ ರಾಜಕೀದಲ್ಲಿ ಅನನುಭವಿಯಾಗಿದ್ದರು. ಆದರೂ ಸುದೀರ್ಘ ಅವಧಿಯಲ್ಲಿ ಪಕ್ಷದ ಮೇಲೆ ಉತ್ತಮವಾಗಿ ನಿಯಂತ್ರಣ ಸಾಧಿಸಿ ಮುನ್ನಡೆಸಿದ್ದರು. ಈಗ ಅಂತಹುದೇ ಅನೇಕ ಕಠಿಣ ಸವಾಲುಗಳು ರಾಹುಲ್ ಮುಂದಿವೆ. ಇವುಗಳನ್ನು ರಾಹುಲ್ ಹೇಗೆ ನಿಭಾಯಿಸುವರು ಎಂಬುದನ್ನು ಕರ್ನಾಟಕ ಸೇರಿದಂತೆ ಮುಂದಿನ ದಿನಗಳಲ್ಲಿ ನಡೆಯಲಿರುವ ಹಲವು ರಾಜ್ಯಗಳ ವಿಧಾನ ಸಭೆ ಚುನಾವಣೆ ಹಾಗೂ 2019ರ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ತಿಳಿಯಲಿದೆ.

Leave a Reply